ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Tuesday, August 13, 2013

ಬೈರಾಗಿ ದೇಶಿಯರು
-----------------
ಕೌಣಪನನ್ನು ಕಂಡು ಕೌತುಕ ತೋರಿ
ಶಾಂತಿಮಂತ್ರ ಬೋಧಿಸುವ ಬೈರಾಗಿ
ನನ್ನ ದೇಶ. ಸಾವಿನ ಮನೆಯ ಇಟ್ಟಿಗೆ
ನನ್ನ ಯೋಧ!. ಧರ್ಮಗಳೇ ಆಯುಧ!
ಪಾಖಂಡಿ ಮನಸುಗಳ ಸೋಗಿಗೆ
ಭ್ರಾತೃತ್ವ ಬೆಸೆಯುವ ಭ್ರಾಂತಿಗೀಗ
ಅರವತ್ತೇಳನೆ   ಸಂವತ್ಸರ!!

ಹೊಂದಾಣಿಕೆ ಎಂಬುದಿಲ್ಲಿ ನಮಗೆಲ್ಲ
ಹಾಸುಹೊಕ್ಕಾಗಿ ಹೆಣೆದ ಚಾಪೆಯಾದರೆ
ಬಾಯಿತುಂಬಿ ಉಗುಳುವಷ್ಟು
ವಿಶಾಲತೆ ತುಂಬಿ ತುಳುಕಿ
ಕಿಚ್ಚು ಕೀವು ತುಂಬಿ ರೋಗಿಷ್ಟವಾಗಿದೆ

ವಿರೋಧಕ್ಕೂ ಬರ ಬಂದು
ವಿಪರೀತ ಬುದ್ದಿ ತಲೆ ತುಂಬಿದೆ
ಆಲಸ್ಯವೋ ಕುಚೋದ್ಯವೋ
ಉಚ್ಚ್ವಾಸ ನಿಶ್ವಾಸವೂ ಕೃತಕ
ಕೌಲಿಕನೆಂದರೆ ಅಡ್ಡಿಯಿಲ್ಲ
ಭಿನ್ನತೆ ಎಂಬ ಭಗ್ನ ಕಣ್ಣಾಗಿ
ವಾಸ್ತವವ ಕುರುಡಾಗಿಸಿದೆ.

Monday, August 5, 2013

ಮೈಲಿಗೆ
------------
ನನ್ನ ಅಷ್ಟೂ ಕನಸುಗಳನ್ನು
ಮೂಟೆ ಕಟ್ಟಿ ಅಟ್ಟದ ಮೇಲೆಸೆದಿದ್ದೆ.
ಈಗ ಒ೦ದೊ೦ದಾಗಿ ತೆರೆಯುತಿದ್ದೇನೆ
ಚಿತ್ರವಿಲ್ಲ ಬರಹವಿಲ್ಲ ಖಾಲಿ ಖಾಲಿ
ಆಶ್ಚರ್ಯ, ಕನಸಿಗೆ ಮೈಲಿಗೆ ಮೆತ್ತಿದೆ!

ಅಡಿಪಾಯವಿಲ್ಲದ ನೆಲದ ಮೇಲಿನ
ಸೂರಿನ ಕೇಳಗಿನ ಉಸಿರು, ಬೆನ್ನುತೋರಿಸಿ ಚಿತೆಗೆ
ಇದ್ದಷ್ಟು ದಿನ ಜೀವ೦ತ ಶವ.
ನನ್ನ ದೇಹದ ಸ್ವಾಧೀನ ಪರಾವಲ೦ಬಿ
ಈಗ ಉಸಿರಿಗೂ ಮೈಲಿಗೆ ಮೆತ್ತಿದೆ!

ದನಿಯೆತ್ತುವ ನಾಲಿಗೆಯ ನರಕು೦ದಿದೆ!
ಊಳಿಡುವ ನರಿಗಳ ಕೂಗು ಕಿವಿ ತು೦ಬಿದೆ!
ಸತ್ಯ ತಿಳಿವ ಕಣ್ಣಲ್ಲಿ ತು೦ಬಿ ಬರುತಿದೆ ಹಳದಿ
ವ್ರಣ ಕೆರೆದಷ್ಟು ನಚ್ಚಗೆ, ಮತ್ತಷ್ಟು ದೊಡ್ಡ ಗಾಯ
ಕ್ರಮೇಣ ಮೈ ಮನಸ್ಸೆಲ್ಲ ಮೈಲಿಗೆ!