ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Friday, May 10, 2013

                                             ====   ಮೋಡದ ಮರೆಯಲ್ಲಿ ==

          ತನಗಿಂತ ಇನ್ನೊಂದು ವರ್ಷ ಮೇಲ್ಪಟ್ಟ ಮಗುವಿನೊಂದಿಗೆ ಜೂಟ್ ಆಟವಾಡಿಕೊಂಡು ಆಯತಪ್ಪಿ ಮೋರಿಯೊಳಗೆ ಬಿದ್ದು ಹೊರಬರಲಾರದೆ ಆ ಮಗು ಅಳುತ್ತಿತ್ತು.   ಜೊತೆಯಲ್ಲಿದ್ದ  ಮತ್ತೊಂದು ಮಗು ಗಾಬರಿಯಿಂದ   ಈ ಸುದ್ದಿಯನ್ನು ತಿಳಿಸಲು ದೂರದಲ್ಲಿದ್ದ ಮನೆಯ ಕಡೆಗೆ ಅಳುತ್ತಾ ಓಡತೊಡಗಿತು. 

             ಆತನ ಕೆದರಿದ ಕೂದಲು ಎಣ್ಣೆ ನೀರು ಕಂಡು ತುಂಬಾ ದಿನಗಳಾಗಿದೆ ಎಂದು ಸಾರಿ ಹೇಳುತ್ತಿತ್ತು.  ಮೈಮೇಲಿನ ಬಟ್ಟೆಯದು ಅದೇ ಕಥೆ.  ಆತನ ಹೆಗಲಿನ ಮೇಲೆ ಜಿಡ್ಡು ಕಟ್ಟಿದ ಚೀಲವೊಂದು ನೇತಾಡುತ್ತಿತ್ತು.  ಈ ಅವತಾರವೇ ಸಾಕು.   ಅವನು ಚಿಂದಿ ಆಯುವ   ಹುಡುಗನೆಂದು  ಕರೆಯಲು.  ಹೀಗೆ ಪೇಪರ್, ಪ್ಲಾಸ್ಟಿಕ್ ಅರಸುತ್ತಾ ಮೋರಿಯ ಸಮೀಪ ಹೋಗುತಿದ್ದವನಿಗೆ ಮಗು ಅಳುತಿದ್ದ ಶಬ್ದ ಕೇಳಿಸಿತು.  ಅಳುವಿನ ಶಬ್ದವನ್ನು ಅನುಸರಿಸಿ ಹೊರಟವನಿಗೆ ಕಂಡದ್ದು ಸುಮಾರು ಮೂರು ವರ್ಷದ ಮಗು.  ಆ ಮಗುವನ್ನು ಮೋರಿಯಿಂದ  ಮೇಲಕ್ಕೆತ್ತಿ  ಅದರ ಕೈ ಕಾಲುಗಳಿಗೆ ಮೆತ್ತಿಕೊಂಡಿದ್ದ ಮೋರಿಯ ಕೊಳಕನ್ನು ತನ್ನ ಬಳಿಯಿದ್ದ ಕೊಳಕು ಬಟ್ಟೆಯಿಂದಲೇ  ಒರೆಸಿದನು.    ಅಳು ನಿಲ್ಲಿಸಲೆಂದು ತನ್ನ ಕೊಳಕು ಜೇಬಿನಲ್ಲಿದ್ದ ಒಂದು ಚಾಕೊಲೇಟ್ ನೀಡಿದರು ಮೋರಿಯೊಳಗೆ ಬಿದ್ದ ಗಾಬರಿಗೋ ಇಲ್ಲ ಇವನ ಅವತಾರವನ್ನು ನೋಡಿಯೋ ಆ ಮಗು ಮತ್ತಷ್ಟು ಅಳಲು ಶುರುಮಾಡಿತು.  ತಕ್ಷಣ ಮಗುವನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಸಂತೈಸತೊಡಗಿದರು ಸಹ    ಆ ಮಗುವಿನ ಅಳು ಕಡಿಮೆಯಾಗಲೇ ಇಲ್ಲ.   ಆ ಮಗುವಿನ ಬಗ್ಗೆ ಯಾರಲ್ಲಿ ವಿಚಾರಿಸುವುದು ಎಂದು ತೋಚದೆ  ಗೊಂದಲದಿಂದ ನಿಂತಿದ್ದನು.  ಎದಿರಾಗಿ ಬರುತ್ತಿದ್ದ ಕೆಲವರು  ಅಳುತಿದ್ದ ಮಗು ಹಾಗು ಅದನ್ನು ಸಂತೈಸಲು ಒದ್ದಾಡುತಿದ್ದ  ಚಿಂದಿ  ಆಯುವ ಹುಡುಗನನ್ನು  ಅನುಮಾನದಿಂದ ನೋಡತೊಡಗಿದರು.  ಅವರಳೋಗೊಬ್ಬ ''ಇವನು ಮಕ್ಕಳ ಕಳ್ಳನ ಹಾಗೆ ಕಾಣ್ತಾನೆ.  ಮಗುನ ಎಲ್ಲೋ ಕದ್ದುಕೊಂಡು ಬಂದಿರಬೇಕು'' ಎಂದನು.  ಅವನ ಮಾತಿನಿಂದ ಉತ್ತೇಜಿತರಾದವರಂತೆ ಎಲ್ಲರು ಹಿಡ್ಕೊಳ್ಳಿ ಮಕ್ಕಳ ಕಳ್ಳ ಎಂದು ಕೂಗತೊಡಗಿದರು.     ಅವರ ಕೂಗಿಗೆ ಮತ್ತೆಲ್ಲೋ  ಇದ್ದ ಮತ್ತಷ್ಟು ಜನರು ಒಮ್ಮೆಲೇ  ಪ್ರತ್ಯಕ್ಷರಾದರು.  ಅವನಿಗೆ ಮಾತನಾಡಲು ಅವಕಾಶಕೊಡದಂತೆ ಎಲ್ಲಂದರಲ್ಲಿ ಹೊಡೆಯತೊಡಗಿದರು.  ಅವನು ನಿಜ ವಿಷಯವನ್ನು  ಹೇಳುತಿದ್ದರು ಯಾರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.  ಮತ್ತೊಂದು ಮಗುವಿನ ಕೈ ಹಿಡಿದುಕೊಂಡು ಓಡಿ ಬಂದ  ಮಗುವಿನ ತಾಯಿ  ತನ್ನು ಮಗು ಮೋರಿಗೆ ಬಿದ್ದಿದ್ದ ವಿಷಯವನ್ನು ಹೇಳುವ ತನಕ ಚಿಂದಿ  ಆಯುವ ಹುಡುಗ  ಅಲ್ಲಿದ್ದವರಿಗೆಲ್ಲರಿಗೂ  ಅಕ್ಷರ ಸಹ ಫುಟ್ಬಾಲಾಗಿ   ಹೋಗಿದ್ದ.   ನಾ ಮುಂದು ತಾ ಮುಂದು ಎಂದು ಒದೆಯುತಿದ್ದವರೆಲ್ಲರು,  ಒಹ್  ಹಾಗ..,  ಈ ನನ್ನ ಮಗ ಮೊದಲೇ ಹೇಳಿದ್ದರೆ ಏಟಾದರು   ತಪ್ಪಿರೋದು ಎಂದು ನಗುತ್ತಾ ಹೇಳಿ ಹೊರಟುಹೋದರು.  ತಾಯಿ ಮಗುವನ್ನು ಎದೆಗವುಚಿಕೊಂಡು ಸಂತೈಸುತ್ತಾ ಮನೆಯ ಕಡೆಗೆ ಹೊರಟಳು.

        ಮೂಗು ಬಾಯಿಯಲ್ಲಿ ಹರಿಯುತಿದ್ದ ರಕ್ತವನ್ನು ಒರೆಸಿಕೊಳ್ಳುವ ಶಕ್ತಿಯು ಇಲ್ಲದವನಂತೆ ಆ ಚಿಂದಿ  ಆಯುವ ಹುಡುಗ ರಸ್ತೆಯ ಬದಿಯಲ್ಲಿ ನರಳುತ್ತಾ ಬಿದ್ದಿದ್ದನು.  ಈ ಘಟನೆಗೆ ಸಾಕ್ಷಿಯಾಗಿದ್ದ ಸೂರ್ಯ ಮೋಡದೊಳಗೆ ಮರೆಯಾಗಿಹೋದ!!
                                      ===========

Wednesday, April 10, 2013

ಮೊದಲು ನೀ ಬದಲಾಗು.!
---------------------------
ಬಿಸಿರಕ್ತದಲಿ
ಮಿಂದೆದ್ದ ಬೆರಣಿಗಳು
ನಿಗಿ ನಿಗಿ
ಬೇಯ್ದಾಕ್ಷಣಕೆ
ನೀರಲ್ಲಿ
ಪರಿವರ್ತನೆ,
ಬದಲಾವಣೆ
ಬರಬೇಕೆನ್ನುವ ಸಹಜತೆಗೆ
ಶಾಖಕಿಲ್ಲವೇ ವ್ಯವಧಾನ.!
ಮಾನಗೆಟ್ಟ ಬಿಸಿಗೆ
ಅರಿವಾಗಲಿಲ್ಲವೆ ಹೊಸಗೆ.!
ಎದೆಗೆ ಗುಂಡಿಕ್ಕಿ
ಮೀಟಿದಾಗಲೇ ತಿಳಿಯಲಿಲ್ಲವೆ
ಹುಲಿಯ ಚಿತ್ತಾರವಿದು
ಗಮನಿಸಿದರೆ; ಕಾಗದದಮೇಲೆಂದು.
ನಡೆಯಲ್ಲಿ ನುಡಿಯಿರಲಿ
ನಡುಕ ಬಂದರೆ
ಛತ್ರಿಯ ಕೆಳಗಿನ ನೆರಳಿಗೆ
ಜಾಲಿಯ ಮರ
ಗಾಳೀಯ ಬೀಸಿದಂತೆ.!
ಇನ್ನಾದರು ತಿಳಿದೀತೆ
ಹೊಂಗೆಯ  ಮರ ತಂಪೆಂದು.!!!





Monday, January 14, 2013

ಸಿಹಿಮುತ್ತು

ನೀ ನೀಡುವ
ಒಂದೊಂದು ಮುತ್ತಿನಲು
ಅದೆಷ್ಟೊಂದು ಸಿಹಿಯಡಗಿದೆ
ಕಾರಣವೇನೆಂದು
ಮತ್ತಿನಿಂದುಲಿದಳವಳು!
ವೈದ್ಯರೇಳಿದ ಮಾತನ್ನು
ನಂಬಿರಲಿಲ್ಲ ನಾನು,
ದೃಢವಾಯಿತೀಗ
'ಸಕ್ಕರೆಖಾಯಿಲೆ'ಇದೆ ನನಗೆ
ಅದಕ್ಕಷ್ಟೊಂದು ಸಿಹಿಯೆಂದನವನು!!  


ವಿಪರ್ಯಾಸ
-------------
ಅವನು..,
ನಾ
ಬರೆದು
ಕಳುಹಿಸಿಕೊಟ್ಟ
ಪ್ರೇಮಪತ್ರಗಳೆಲ್ಲವನ್ನೂ
ಓದಿದೆಯ-ಇಷ್ಟವಾಯಿತೆ.?

ಅವಳು...,
ನಿನ್ನ ಮಿತ್ರ
ಅವುಗಳನ್ನು
ಕೊಡುತ್ತಿರಲಿಲ್ಲ
ನನ್ನ
ಮುಂದೆ
ಓದುತಿದ್ದ.!

ಇಷ್ಟವಾಯಿತೆ.?

ಹೌದು
ಓದುತಿದ್ದ ರೀತಿ
ಹಾಗು
ಅವನು ಎರಡೂ
ಇಷ್ಟವಾಯಿತು.!!!


 ನೆನಪು
--------
ನಲ್ಲ
ನನ್ನ ತುಟಿಗೆ
ನೀ ಮುತ್ತನ್ನೀಯುವಾಗ
ಕಣ್ಣು ಮುಚ್ಚುವುದು ಏಕೆ ?

ಮತ್ತಾರಿಗೋ
ನೀಡಿದ
ಮುತ್ತಿನ ನೆನಪು
ಬಾರದಿರಲೆಂದು.!!


 ಅವನು-ಅವಳು
---------------
ಅವನು,
ನನ್ನ ಕಣ್ಣಲ್ಲಿ
ಕರಗಿ
ಕನಸಲ್ಲಿ ಕಾಡುವ
ನೀನು
ಹೃದಯದಲ್ಲಿ
ಕೂರುವುದು
ಯಾವಾಗ.?

ಅವಳು,
ನನ್ನ ಮನೆಗೆಂದು
ಬಂದು
ಎನ್ನ
ನಲ್ಲನ ಕೇಳು
ಅವರೊಪ್ಪಿದರಡ್ಡಿಯಿಲ್ಲ
ಯಾವಾಗ ಬರುವಿ
ಹೇಳು.?

Wednesday, January 9, 2013

ಭ್ರಾಂತಿ ಎಂಬ ಸ್ಖಲನ
---------------------------

ಹುಳಿ-ಉಪ್ಪು ಮುಂದಾಗಿ
ಸೊಕ್ಕಿ ಉಕ್ಕುವ ಗೇಹ
ಬಯಕೆಯ ಬಾಣಲಿಯಲಿ-
ಸಂಡಿಗೆ. ಉಪ್ಪುಕಾರ ಜೊತೆಯಲಿ.

ಕನಸುಮೇಲೋಗರ.!
ಹಳ್ಳ ದಿಣ್ಣೆ  ತೆವರಿ ತಿಟ್ಟಿನ
ಬದದಾಚೆಗೀಚಿನ ತೂಗಿ ಬಾಗೊ
ಚಲುವಿನಾ ಪ್ರಕೃತಿ.

ಸೆಳೆಯಲಷ್ಟೇ ಸಾಕು; ವಿಕೃತಿ
ಮುಂದಾಗುವುದೆಲ್ಲ ವಿಸ್ಮೃತಿ
ಮೃಗಕ್ಕಿಲ್ಲ ಬಂಧುತ್ವ
ಅನಾಗರೀಕತೆಗಿಲ್ಲ ಸಾಧುತ್ವ.

ನೆನಪುಗಳ ನೇವರಿಸುವಾಗ
ನೆಪಕ್ಕೆಂದಿಟ್ಟಿದ್ದ ವೀರ್ಯ.., ಸ್ಖಲನ,
ಮತ್ತೇಕೆ ಬೇಕು ವ್ಯವಕಲನ
ಗಂಡು ಹೆಣ್ಣು ಅಂದರೆ ಸಂಕಲನ. 

 
ಸುಡುಗಾಡು ಬೆಂಕಿಯಲಿ-
ಬೆಂದ ದೇಹದ ತಾಪ
ಹಸಿ ಹಸಿ ವಾಸನೆಗೆ

ಬೇಕಿತ್ತು ನೆಪ.

ವಿವೇಕಕ್ಕಿಲ್ಲ  ವಿಶ್ಲೇಷಣೆ
ಕಾಮಕ್ಕೆಲ್ಲಿಯದು ಕಣ್ಣು
ಮೈಭಾರ ತಗ್ಗಬೇಕು
ಬಿಸಿಯುಸಿರ ಬಸಿಯಬೇಕು.! 


ಕಾಮಾದಿ ಬಯಕೆಯಲಿ
ನಾಯಿ ಮುಟ್ಟಿದ ಮಡಿಕೆ;ಮನಸು
ತೊಗಲಾಚೆಗೀಚಿನ ವ್ಯಾಮೋಹ
ಜೀವಮಾನ ಹರಣಕ್ಕಾರಣ.

Thursday, November 8, 2012

--ಜ್ಯೋತಿಷ್ಯದ ತಮ್ಮಯ್ಯ--
-----------------------------

ನಾನು  ಹೈಸ್ಕೂಲಿನಲ್ಲಿ ಓದುತಿದ್ದಾಗ,   ಚಿತ್ರಕಲೆ ವಿಷಯದ
ಬಗ್ಗೆ ತಮ್ಮಯ್ಯ ಎಂಬುವರು ಬೋಧಕರಾಗಿದ್ದರು.  ಕೋತಿ ನಾಯಿ ಹಾವು ಕರಡಿ ಗುಲಾಬಿ ಗಣೇಶ ಹೀಗೆ ಎಲ್ಲಾ ರೀತಿಯ ಚಿತ್ರಗಳನ್ನು ಚನ್ನಾಗಿ ಬಿಡಿಸುತಿದ್ದರು.  ನಾವು ಸಹ ಅಷ್ಟೇ ಕಲಿತಿದ್ದು.   ಚಿತ್ರಕಲೆ ಪರೀಕ್ಷೆಗೆಂದು ಪಕ್ಕದ ಚನ್ನಪಟ್ಟಣಕ್ಕೆ ಹೋಗಿದ್ದೆವು.   ತಮ್ಮಯ್ಯನವರು ಹೇಳಿಕೊಟ್ಟಿದ ಯಾವೊಂದು  ಅಂಶವು ಪ್ರಶ್ನೆ ಪತ್ರಿಕೆಯಲ್ಲಿ ಕಾಣದೆ ಕಕ್ಕಾ- ಬಿಕ್ಕಿಯಾಗಿ,  ಅವರ ಮೇಲೆ ಕೋಪಗೊಂಡು ಅದೇ ಸಿಟ್ಟಿನಲ್ಲಿ ಪಕ್ಕದ ಚಲನ ಚಿತ್ರಮಂದಿರದಲ್ಲಿ ನಡೆಯುತಿದ್ದ ' ಅನುಭವ ' ಎಂಬ ಕುತೂಹಲಕಾರಿ ಸಿನೆಮಾ ನೋಡಿ ನಮ್ಮ ಕೋಪವನ್ನು ಸ್ವಲ್ಪ ಮಟ್ಟಿಗೆ ಶಮನ  ಮಾಡಿಕೊಂಡಿದ್ದು ಇನ್ನು ನೆನಪಿದೆ.     ತಮ್ಮಯ್ಯನವರ ಮತ್ತೊಂದು ಪಾರ್ಟ್ ಟೈಮ್ ಉದ್ಯೋಗವಿತ್ತು.  ಜ್ಯೋತಿಷ್ಯ ಹೇಳುವುದು.    ಅದನ್ನು ಕೇಳಿದವರಿಗೆ ಎಷ್ಟು ಲಾಭವಾಗಿತ್ತು ಎಂಬುದು ನನಗೆ ತಿಳಿಯದ ವಿಚಾರ.  ನಗರದಲ್ಲಿ ಯಾವುದಾದರು ಬಿಳಿ ಕಾಂಪೌಂಡ್  ಅವರ ಕಣ್ಣಿಗೆ ಬಿತ್ತೆಂದರೆ ಸಾಕು,  ಆ ರಾತ್ರಿಯೇ ಹೋಗಿ   ಆ ಗೋಡೆಯ ಮೇಲೆ,   '' ತಮ್ಮಯ್ಯನವರ  ಜ್ಯೋತಿಷ್ಯಾಲಯ'' ಮಾಟ-ಮಂತ್ರ, ವಶೀಕರಣ, ಧನಲಾಭ, ಆರೋಗ್ಯ ಇವುಗಳ ಬಗ್ಗೆ ಜ್ಯೋತಿಷ್ಯ ಹೇಳಲಾಗುವುದು.  ಒಮ್ಮೆ ಭೇಟಿ ಕೊಡಿ ಎಂದು ವಿಳಾಸ ಬರೆದಿರುತಿದ್ದರು.    ಮನೆಯ ಮಾಲೀಕರು ಬೆಳಿಗ್ಗೆ ಎದ್ದು ಗೋಡೆಯ ಮೇಲಿನ ಬರಹವನ್ನು ನೋಡಿ ಕೆಂಡಮಂಡಲವಾಗುತಿದ್ದರು.   ಮನೆಯ ಬಳಿ ಹೋಗಿ  ತಮ್ಮಯ್ಯನವರ ಕೊರಳ ಪಟ್ಟಿಯನ್ನು ಹಿಡಿದು ಕೇಳಬೇಕೆಂದುಕೊಳ್ಳುವಷ್ಟರಲ್ಲಿ  ತಕ್ಷಣ ಅಷ್ಟೇ ಬೇಗ ತಣ್ಣಾಗಾಗುತಿದ್ದರು.   ಕಾರಣ.., ಕೆಂಪು ಬಣ್ಣದಿಂದ  ಬರೆದಿರುತ್ತಿದ್ದ  ಮಾಟ-ಮಂತ್ರ, ವಶೀಕರಣ ಎಂಬ ಪದಗಳು.      ಕೇಳುವುದಕ್ಕೆ ಹೋದರೆ ತಮಗೂ ಮಾಟ ಮಂತ್ರ ಮಾಡಿ ಬಿಟ್ಟಾರೆಂಬ  ಹೆದರಿಕೆಗೆ ಸುಮ್ಮನಾಗುತಿದ್ದರು.      ತಮ್ಮಯ್ಯನವರು ಜ್ಯೋತಿಷ್ಯ ಹೇಳುವುದಕ್ಕೆಂದು  ಪ್ರತ್ಯೇಕ ಜಾಗವನ್ನೇನು ಮಾಡಿರಲಿಲ್ಲ.   ಮನೆಯ ಒಂದು ಕೋಣೆಯನ್ನು ಭವಿಷ್ಯ ಹೇಳಲು ಮೀಸಲಾಗಿಟ್ಟಿದ್ದರು. 

ಹೀಗೆ ಜ್ಯೋತಿಷ್ಯ ಚಿತ್ರಕಲೆ ಎರಡರಲ್ಲೂ ತೊಡಗಿಸಿಕೊಂಡಿದ್ದ ತಮ್ಮಯ್ಯನವರು ಆ ಬೇಸಿಗೆ ರಜೆಯಲ್ಲಿ  ಪುಣ್ಯಕ್ಷೇತ್ರಗಳ ದರ್ಶನ ಮಾಡಿಕೊಂಡು ಬರಬೇಕೆಂದು ನಿರ್ಧರಿಸಿದವರೇ ಸಕುಟುಂಬ ಸಮೇತರಾಗಿ ಪ್ರವಾಸ ಹೊರಡಲು ದಿನಾಂಕವನ್ನು ನಿಗಧಿ ಮಾಡಿಕೊಂಡಿದ್ದರು.   ಅದೇ ಸಂದರ್ಭದಲ್ಲಿ ತಾನು ಪ್ರವಾಸ ಹೊರಟುಬಿಟ್ಟರೆ ಶಾಸ್ತ್ರ ಕೇಳಲು ಬರುವ ಜನರಿಗೆ ತೊಂದರೆಯಾಗುತ್ತದಲ್ಲ ಎಂಬ ಚಿಂತೆ ಸಹ ಕಾಡತೊಡಗಿತು.  ಆದರೆ ಹೆಂಡತಿ ಮಕ್ಕಳು ಪ್ರವಾಸ ಹೋಗಲೇ ಬೇಕೆಂದು ಹಠ ಹಿಡಿದ ಕಾರಣ  ಒಲ್ಲದ ಮನಸ್ಸಿನಿಂದ ಪ್ರವಾಸಕ್ಕೆ ಸಿದ್ಧರಾದರು.    ಪ್ರವಾಸ ಹೊರಡುವ ದಿನ ಮನೆಯ ಬಾಗಿಲಿಗೆ ಒಂದು ಬೋರ್ಡನ್ನು ಬೆರೆದು ತೂಗು ಹಾಕಿ ಹೊರಟರು.   ಅದರಲ್ಲಿ '' ಜ್ಯೋತಿಷ್ಯ ಶಾಸ್ತ್ರಜ್ಞ ತಮ್ಮಯ್ಯ ಹಾಗು ಕುಟುಂಬದವರು ಮೂರು ದಿನಗಳ ಕಾಲ ಪ್ರವಾಸ ಹೋಗಿರುವುದರಿಂದ, ಭಕ್ತರು ೩ ದಿನ ಬಿಟ್ಟು ಬರುವುದು.  ದಯವಿಟ್ಟು ಸಹಕರಿಸಿ '' ಎಂದು ಬರೆದಿತ್ತು...!

ತಮ್ಮಯ್ಯ ಮತ್ತು ಕುಟುಂಬದವರು ಧರ್ಮಸ್ಥಳ, ಹೊರನಾಡು, ಶೃಂಗೇರಿ, ಕೊಲ್ಲೂರು, ಕಳಶ, ಉಡುಪಿ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ ಹಾಗು ಹೊರನಾಡು ಈ ಎಲ್ಲಾ  ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಕೊಂಡು ಯಾವುದೇ ತೊಂದರೆಯಿಲ್ಲದಂತೆ ಗುರುವಾರ ಹಿಂದಿರುಗಿದರು.  ತಮ್ಮ
ಯ್ಯ ಟ್ಯಾಕ್ಸಿಯಿಂದ ಇಳಿದವರೇ ಕೀ ತೆಗೆದುಕೊಂಡು ಡೋರ್ ಲಾಕಿನ ಹೊಳಗೆ ಹಾಕಿದರು ಅಷ್ಟೇ.  ಕೀಯನ್ನು ತಿರುವಲೇ  ಇಲ್ಲ.  ಬಾಗಿಲು ತಾನೇ ತಾನಾಗಿ ಹಿಂದೆ ಹೋಯಿತು.   ಒಳಗಿನ ದೃಶ್ಯ ನೋಡಿ ತಮ್ಮಯ್ಯನವರಿಗೆ ತಲೆ ತಿರುಗಿದಂತಾಯ್ತು.   ಹಿಂದೆಯೇ ಒಳ ಬಂದ ಹೆಂಡತಿ ಮಕ್ಕಳು ಅವಕ್ಕಾಗಿ ನಿಂತುಬಿಟ್ಟರು.  ಒಂದು ಕ್ಷಣ ಅವರಿಗೆಲ್ಲ ಬೇರೆ ಮನೆಗೆ ಬಂದಿದ್ದೇವೆಯೇ ಎಂಬ ಅನುಮಾನ ಕಾಡತೊಡಗಿತು.   ಆದರೆ ಬಾಗಿಲಿಗೆ ನೇತು ಹಾಕಿದ್ದ ಬೋರ್ಡು ಇದೇ  ತಮ್ಮಯ್ಯನವರ  ಮನೆಯೆಂದು ಸಾರಿ ಹೇಳುತ್ತಿತ್ತು. 

ನಡೆದದ್ದಿಷ್ಟೇ...., ತಮ್ಮಯ್ಯನವರು ಪ್ರವಾಸ ಹೋಗಿದ್ದಾಗ ಬಾಗಿಲಿಗೆ ನೇತು ಹಾಕಿದ್ದ  ಬೋರ್ಡು ದಾರಿಹೋಕರ ಗಮನ ಸೆಳೆಯುತ್ತಿತ್ತು. ಅದರಲ್ಲೂ ವಿಶೇಷವಾಗಿ  ಕಳ್ಳರ ಗಮನವನ್ನು ಸೆಳೆಯಿತು.   ತೊಂದರೆಯಿಲ್ಲದ ಅವಕಾಶ,  ಅಕ್ಕ-ಪಕ್ಕ ಯಾವುದೇ ಮನೆ ಸಹ ಇರಲಿಲ್ಲ.   ಮನೆಯವರು ಬರುವುದು ಇನ್ನು ಮೂರು ದಿನವಾಗುತ್ತದೆ ಎಂದು ಬಾಗಿಲಿಗೆ ತೂಗು ಹಾಕಿದ್ದ ಬೋರ್ಡು ಸಾರಿ ಸಾರಿ ಹೇಳುತಿದೆ.   ಕಳ್ಳರಿಗೆ ಖುಷಿಯೋ ಖುಷಿ.   ಕಳ್ಳರು ಹಗಲಿನಲ್ಲಿಯೇ ಒಂದು ಲಾರಿಯನ್ನು  ತಂದವರೇ ಕೆಟ್ಟುಹೋಗಿದೆ ಎಂಬಂತೆ ತಮ್ಮಯ್ಯನವರ ಮನೆ ಮುಂದೆ ನಿಲ್ಲಿಸಿ,  ಆ ರಸ್ತೆಯಲ್ಲಿ ಬೇರೆ ವಾಹನಗಳು ಬಾರದಂತೆ  ಕಲ್ಲನ್ನು ಅಡ್ಡ ಇಟ್ಟಿದ್ದರು.   ಆ  ದಾರಿಯಲ್ಲಿ ತಿರುಗಾಡುವವರು  ಲಾರಿ ಕೆಟ್ಟು ನಿಂತಿರಬೇಕೆಂದು ಹೆಚ್ಚು ತಲೆ ಕೆಡಿಸಿಕೊಳ್ಳದೆ ಮುಂದೆ ಹೋಗುತಿದ್ದರು.    ಕಳ್ಳರು ಮಧ್ಯರಾತ್ರಿಯಲ್ಲಿ ಬಂದವರೇ, ಜ್ಯೋತಿಷ್ಯದ ಕೋಣೆಯಲ್ಲಿದ್ದ ಸಾಮಾನುಗಳನ್ನು ಬಿಟ್ಟು, ಕಸ ಗುಡಿಸುವ ಪೊರಕೆ ಸಮೇತ  ಸಾವಾಕಾಶವಾಗಿ ಮನೆಯಲ್ಲಿದ್ದ ಎಲ್ಲಾವಸ್ತುಗಳನ್ನು ಕದ್ದು ಲಾರಿಯಲ್ಲಿ ಸಾಗಿಸಿದ್ದರು..............................., 

Sunday, November 4, 2012



ಗೆದ್ದಲು ಹುಳಗಳು
------------------------


ಪವರನೆಂಬ ದುರಹಂಕಾರಿಯ  ನಿರ್ಧಾರ 
ಹಸಿದೊಟ್ಟೆಗಳ ಮೇಲಿನ ಪ್ರಹಾರವಾಯ್ತು.
ದವಸ ಧಾನ್ಯಗಳ ತಿಂದುಂಡ ಹೆಗ್ಗಣಗಳು ದುಂಡಗಾದವು,
ಲೆಕ್ಕಕ್ಕೆ ಸಿಗದ ದವಸ ಮಣ್ಣಾಯ್ತು.
ಪಶ್ಚಾತಾಪದ ಕುರುಹು ಇವನಿಗಿಲ್ಲವಾಯ್ತು.

ತರಂಗಾಂತರಂಗ ಹೊಕ್ಕ ಕೀರೀಟವಿಲ್ಲದ ರಾಜ
ಒಂದೇ ಕಿಕ್ಕಿಗೆ ಭೋಜನವುಂಡ ಕವಿಯತ್ರಿ
ದುರಾಸೆ ಮುಂದಾಗಿ ಜೈಲುಪಾಲಾದರು.

ಕ್ರೀಡೆಗೂ ಗ್ರಹಣ ಬಡಿಸುವ ಕಲೆಗಾರ ಕಲ್ಮಾಡಿ
ಅಂಡೊರೆಸುವ
ಕಾಗದಕ್ಕೂ
ಕೋಟಿ ಕೋಟಿ ಬಾಚಿದ್ದು ಇವನ ಜೀವಮಾನ ಸಾಧನೆ
ಬಿಡುಗಡೆಯಾದಮೇಲೆ ಕೊಂಡಾಡಿದ್ದು ಆ ಪಕ್ಷದ ಮಹತ್ಸಾದನೆ.

ಸಿಂಗ್ ಕಿಂಗ್ ಆದಿಯಾಗಿ ಕಲ್ಲಿದ್ದಲ ಕಪ್ಪಲ್ಲಿ ಮುಖತೊಳೆದು

ಏನು ಆಗಿಲ್ಲವೆಂದು ತಿಪ್ಪೆಸಾರಿಸಿ, ಕನ್ನಡಿ ಹಿಂದೆ ನಿಂತುಬಿಟ್ಟವರು
ಮೂರು ಬಿಟ್ಟದ್ದು ಎಲ್ಲರಿಗು ತಿಳಿದಿಲ್ಲವೆಂದು ಮುಸಿ ಮುಸಿ ನಕ್ಕಿದ್ದು
ಕಾಂಗ್ರೇಸ್ ಗಿಡದಷ್ಟೇ ಸತ್ಯ. 

ಗಡಾರಿ ಹಿಡಿದ ಗಡ್ಕರಿ
ಪ್ರಹಾರ ಮಾಡಿದ್ದು ಯಾವ ಪರಿ
ಆಳುವವನ ಹಿಡಿದು ಉಳುವವನ
ಹೆಡೆಮುರಿ ಕಟ್ಟಿ ಆದನು ಸಿರಿ-
ವಂತ.  ಇಂಗು ತಿಂದ ನಿ-ತಿನ್
ಮಂಗನಂತಾದವರು ಸ್ವಯಂ ಸೇವಕರು. 

ರಾಷ್ಟದಳಿಯ ಮನೆತೊಳಿಯ
ಅವನೊಬ್ಬ ವಾದ್ರಾ..,
ಕೆಲಸ  ಸೊನ್ನೆ.  ಅರ್ಹತೆ ಪ್ರಿಯಳ ಅಂಕ
ಅತ್ತೆಯ ನೆರಳು.  ಡಿ ಎಲ್ ಎಪ್ ಇವಗೆ ಮರುಳು.
ಬಹುಪರಾಕ್ ಮಂದಿ ತಾರಿಸುತಿಹರು ತಿಪ್ಪೆ  

ರಾಷ್ಟ್ರಸೇವಕರಿಗೆಂದಿದ್ದ ಸೂರ
ಸೂರೆಗೊಂಡರನೇಕರು. ಲಜ್ಜೆಯಿಲ್ಲದ ಮಂದಿ
ಮಂಡಿಯೂರಿ ನೆಕ್ಕಿಹರು ಇಟಾಲಿಯನ್ನಿನ ಚಪ್ಪಲಿ. 
ಅಭಯ ಹಸ್ತ ದೊರಕಿ, ನಗುತಿಹರು ಪ್ರೇತದಂತೆ. 

ನೈಸಾಗಲಿಲ್ಲ  ರಸ್ತೆ.  ವೈನಾದರು ತಿಂದುಂಡವರೆಲ್ಲ.

ಕಣಿ ಹೇಳುವಂತೆ ಕಾಣ್ವ ಖೇಣಿ .
ಹರಳೆಣ್ಣೆ ಕುಡಿದಂತ ಗೌಡ.
ಸಿಡುಕು ಮೊರೆ ಸುಬ್ಬನೆಂಬ ಅಡ್ಡಾದಿಡ್ಡಿ
ವಿಗ್ಗಿನಡಿಯಲ್ಲಿ ಕೆಲಸ ಮುಗಿಸಿದ ಚತು-
ರ.  ಕರೆದರಡ್ಡಿಯಿಲ್ಲ ಇವ ಕುಟಿಲ ಕೃಷ್ಣಯ್ಯ.

ಕರುನಾಡ ಮುಷ್ಠಿಯಲಿಡಿದು
ಪುರಜನರ ಕಾಲಡಿಯಿಕ್ಕಿ 
ಮಣ್ಣನ್ನೇ ಹೊನ್ನಾಗಿಸಿ ಮೆರೆದು
ಗಾಲಿಯನೇರಿದ ಜನಾರ್ಧನನೀಗ
ಕಂಬಿಯ ಹಿಂದೆ ಕಂಬಿನಿ ನುಂಗುತ
ಹುಸಿನಗೆ ಬೀರುತಿಹನು. 

ಹುದ್ದೆಯ ಜಿದ್ದಿಗೆ ಬಿದ್ದು
ಟೊಂಕಕಟ್ಟಿ ದುಡಿದು
ಅಧಿಕಾರಕ್ಕೇರಿ, ದೋಚಿ-ಬಾಚಿ
ಕೊನೆಗಾಯ್ತು  ಯಡ್ಡಿಯ ಅವಸಾನ. 

Thursday, August 23, 2012

'' ಖಾಲಿ ಪುಟದ ಕವನ '' --------


ಖಾಲಿ ತಲೆ ಖಾಲಿ

ಇತ್ತೀಚಿನ ಖಯಾಲಿ,
ಬೆರಳಿಗಂಟಿದ ಶಾಯಿ
ಮೂಡಿಸದೆ ಅಕ್ಷರ
ಹಾಳೆ ಖಾಲಿ ಹಾಳೆ.

ಧೃತಿಗೆಡಲಿಲ್ಲ, ಗೀಚಿದೆ  

ತೋಚದೆ ಸುಮ್ಮನೆ;
ಭೀಷಣ ಪಾಷಾಣ
ಮೆತ್ತಿದ ಪಾಖಂಡಿ
ಮನಸುಗಳಲಿ
ಮಂದಿರ ಮಸೀದಿ
ಚರ್ಚ್ ಎಂಬ-
ನಡುಮನೆಯ ಅಪೀಮು,
ನೆತ್ತಿಗಡರಿ
ನರನಾಡಿಗಳೆಲ್ಲ ನಂಜಾದವು
ಕಣ್ಣು  ಕೆಂಪಾಗಿ
ರಕ್ತ ಕಪ್ಪಾಯಿತು,

ಭಾವ ಬಂಜೆಯಂತಾಗಿ

ಭ್ರಾಮಕ ಉಸಿರಾಗಿ
ಬಸಿರಾಗಲಿಲ್ಲ ಭ್ರಾತೃತ್ವ.
ಇನ್ನೆಲ್ಲಿ ಹೆರಿಗೆ ಬೇನೆ...!!

ಛೇ..! ಈ
ಗೊಡ್ಡು ಭ್ರಾಂತು
ಪಥ್ಯವಿಲ್ಲದ ರೋಗ.
ಇದೆಲ್ಲ..,
ಕಸದ ತೊಟ್ಟಿಯಲ್ಲಿ
ಗೊಬ್ಬರವಾಗುವ ವಿಷಯ.
ಯಾರಿಗೂ ಬೇಡದ
ಕಾಡದ ಸಂಗತಿ
ನನಗೇಕೆ ಬೇಕು...?
ಅರ್ಬುದ ರೋಗ
ಕಾಲಿನ ಬುಡದ ಸತ್ಯ
ನಿರ್ಲಕ್ಷಿಸಿದರೆ
ಆಪತ್ತು ಬಂದು ಚಾಪೆಯಲ್ಲಿ
ಸುತ್ತೊಯ್ವುದು, ಕೇಳದೆ..!

ಇಲ್ಲಾ...,  ಕವನವಾಗಲಿಲ್ಲ

ಪದಗಳ ಬೆಸುಗೆ
ಸರಿಹೋಗಲಿಲ್ಲ..,
ಬರೆದದ್ದನ್ನೆಲ್ಲ ಹರಿದು
ಮೊದಲಿಗೆ ಬಂದೆ
ಮತ್ತದೇ ಶೂನ್ಯ ....

ಖಾಲಿ ತಲೆ

ದೆವ್ವದ ನೆಲೆ,
ಈ ಸತ್ಯದ ಉಕ್ತಿಗೆ 
ಹೊಸತೊಂದು ಪುಟ
ಸೇರ್ಪಡೆ..!
ಇದುವೇ ನನ್ನ
ಖಾಲಿ ಪುಟದ ಕವನ...!!