_____ಆವೇಶಕ್ಕೆ ಬಲಿಯಾದ ಕಂದ_______
ಆಕೆ ತನ್ನ ಮಗನನ್ನೇ ಕೊಂದಿದ್ದಾಳೆ ಎಂಬುದನ್ನು ಕೇಳಿ ಒಂದು ಕ್ಷಣ ಆಶ್ಚರ್ಯಚಕಿತನಾದೆ. ಆಕೆ ತನ್ನ ಮಗನನ್ನು ಕೊಂದಿದ್ದಾಳೆ ಎಂದು ಆರೋಪಿಸಿ ಪೊಲೀಸ ಠಾಣೆಯಲ್ಲಿ ದೂರು ನೀಡಿರುವುದು ಆಕೆಯ ಪತಿಯೇ. ಈಗ ಆರೋಪಿತಳನ್ನು ಬೇರೆಯವರ ಮೂಲಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿರುವುದು ಕೂಡ ಆಕೆಯ ಪತಿಯೇ.
ಮಾದಣ್ಣ ಹಾಗು ಗೌರಮ್ಮನವರದು ಇಬ್ಬರು ಮಕ್ಕಳೊಂದಿಗಿನ ಮಧ್ಯಮ ವರ್ಗದ ಸಂತೃಪ್ತಿ ಸಂಸಾರ. ಮಗ ರಮೇಶನಿಗೆ 5 ವರ್ಷ. ಮಗಳು ಲಕ್ಷ್ಮಿಗೆ 7 ವರ್ಷ. ಇಬ್ಬರ ಮುಖ್ಯ ಕಸುಬು ವ್ಯವಸಾಯ.
ನಾಳೆಯ ಲಕ್ಷ್ಮಿ ಪೂಜೆಗೆ ಮನೆಯಲ್ಲವನ್ನು ಶುಚಿಗೊಳಿಸಿ, ಗೌರಮ್ಮ ಗಂಡನ ದಾರಿ ಕಾಯುತಿದ್ದಳು. ಮಾದಣ್ಣ ಮನೆಗೆ ಬಂದ ತಕ್ಷಣವೇ, ನಾಳೆ ಹಬ್ಬಕ್ಕೆ ನನಗೆ ಸೀರೆ, ಮಕ್ಕಳಿಗೆ ಹೊಸ ಬಟ್ಟೆ ಜೊತೆಗೆ ಗಿರವಿ ಅಂಗಡಿಯಲ್ಲಿಟ್ಟಿರುವ, ನನ್ನ ಓಲೆ ಜುಮುಕಿ, ಮಾಂಗಲ್ಯ ಸರವನ್ನು ನಾಳೆ ಬೆಳಿಗ್ಗೆ ಬಿಡಿಸಿಕೊಂಡು ತರಲೇ ಬೇಕು ಎಂದು ತಾಕೀತು ಮಾಡಿದಳು. ಮಾದಣ್ಣ ಸರಿ ಎಂದು ತಲೆಯಲ್ಲಾಡಿಸಿ ಊಟ ಮಾಡಿ ಮಲಗಿದ.
ಮಾದಣ್ಣ, ಬೆಳಿಗ್ಗೆ ತನ್ನ ಬಳಿಯಲ್ಲಿದ್ದ ಚೂರು ಪಾರು ಹಣವನ್ನೆಲ್ಲ ಒಟ್ಟುಗೂಡಿಸಿ, ಆ ಹಣದಲ್ಲಿ ಮಕ್ಕಳಿಗೆ ಬಟ್ಟೆ ಹಾಗು ಹೆಂಡತಿಗೆ ಸೀರೆಯನ್ನು ತರಲಷ್ಟೇ ಸಾಧ್ಯವಾಯಿತು. ತನ್ನ ಗಂಡ ವಡವೆಗಳನ್ನು ಬಿಡಿಸಿಕೊಂಡು ತರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಗೌರಮ್ಮ ನಿಗೆ ಬಟ್ಟೆಗಳನ್ನಷ್ಟೇ ನೋಡಿ ನಿರಾಶೆಯಾಯಿತು. ವಡವೆಗಳಿಲ್ಲದೆ ಲಕ್ಷ್ಮಿ ಪೂಜೆ ಹೇಗೆ ಮಾಡುವುದೆಂಬ ಚಿಂತಯಿಂದ ಮೌನವಾದಳು. ಅಕ್ಕ ಪಕ್ಕದ ಮನೆಯ ಹೆಂಗಸರನ್ನು ಸಂಜೆ ಮನೆಗೆ ಲಕ್ಷ್ಮಿ ಪೂಜೆಗೆ ಬರಲೇಬೇಕೆಂದು ಅದಾಗಲೇ ಹೇಳಿ ಬಂದಿದ್ದಳು. ಸಂಜೆ ಅವರುಗಳು ಮನೆಗೆ ಬಂದರೆ, ಯಾವ ಮುಖವನ್ನು ಹೊತ್ತುಕೊಂಡು ಪೂಜೆ ಮಾಡುತ್ತಿಲ್ಲ ಎಂದು ಹೇಳುವುದು ಎಂಬ ಪ್ರಶ್ನೆ ಅವಳನ್ನು ಕಾಡತೊಡಗಿತು.
ಮಾದಣ್ಣ, ತನ್ನ ಹಣದ ಬಿಕ್ಕಟ್ಟು, ಈಗ ತಾನಿರುವ ಪರಿಸ್ಥಿತಿಯನ್ನು ಪರಿ ಪರಿಯಾಗಿ ಹೇಳಿದರು ಗೌರಮ್ಮ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಮಾದಣ್ಣ ತನ್ನ ಹೆಂಡತಿಯನ್ನು ಆ ಸ್ಥಿತಿಯಲ್ಲಿ ಯಾವತ್ತು ನೋಡಿದವನಲ್ಲ. ಇದುವರೆವಿಗೂ ತನ್ನ ಹೆಂಡತಿಯನ್ನು ಯಾವೊಂದು ವಿಷಯದಲ್ಲೂ ನೋಯಿಸಿದವನು ಅಲ್ಲ.
ಬೇರೆಯವರ ಬಳಿ ಸಾಲ ಮಾಡಿದರು ಸರಿಯೇ... ವಡವೆಗಳನ್ನು ಬಿಡಿಸಿಕೊಂಡು ಬಂದು, ಹೆಂಡತಿಯ ಮುಖದಲ್ಲಿ ನಗುವನ್ನು ತರಿಸಬೇಕೆಂದು ನಿರ್ಧರಿಸಿದ ಮಾದಣ್ಣ, ಏನೊಂದು ಮಾತನಾಡದೆ ಹೊರಗಡೆ ಹೋದನು.
ಅಮ್ಮ ಹಸಿವಾಗುತ್ತಿದೆ ಏನಾದರು ಕೊಡು ಎಂದು ಗೌರಮ್ಮಳನ್ನು ಮಕ್ಕಳು ಅಲ್ಲಾಡಿಸಿದಾಗಲೇ, ಆಕೆ ವಾಸ್ತವಕ್ಕೆ ಬಂದದ್ದು. ತನ್ನ ಮಕ್ಕಳನ್ನು ನೋಡುತಿದ್ದ ಹಾಗೆ ಅವರನ್ನು ತಬ್ಬಿಕೊಂಡು ಆಳುವುದಕ್ಕೆ ಪ್ರಾರಂಭಿಸಿದಳು ಗೌರಮ್ಮ. ಏನು ತಿಳಿಯದೆ ಕಕ್ಕಾಬಿಕ್ಕಿಯಾದ ಮಕ್ಕಳು ತಾಯಿಯೊಡನೆ ತಾವು ಆಳುವುದಕ್ಕೆ ಪ್ರಾರಂಬಿಸಿದವು. ಸ್ವಲ್ಪ ಹೊತ್ತಿನ ನಂತರ ಸಮಾಧಾನವಾದ ಗೌರಮ್ಮ ಒಂದು ನಿಶ್ಚಯಕ್ಕೆ ಬಂದಳು.
ಬೇಗ ಬೇಗ ಅಕ್ಕಿತೊಳೆದು ಅನ್ನಕ್ಕೆ ಇಟ್ಟಳು. ರಾತ್ರಿ ಮಾಡಿದ ಸಾರು ಆ ಹೊತ್ತಿಗೆ ಸಾಕಾಗುತ್ತಿತ್ತು. ಅನ್ನ ಬೇಯುತಿದ್ದಂತೆ ಗೌರಮ್ಮನ ಎದೆಯು ಸಹ ನಿರಾಶೆಯಿಂದ ಬೇಯುತಿತ್ತು. ಅಕ್ಕಪಕ್ಕದವರಿಗೆ ಸಂಜೆ ಹೇಗೆ ಮುಖ ತೋರಿಸುವುದೆಂಬ ಆಲೋಚನೆಯು ಅವಳನ್ನು ಮತ್ತಷ್ಟು ದುಃಖಕ್ಕೆ ಈಡುಮಾಡಿತ್ತು. ಅದೇ ಚಿಂತೆಯಲ್ಲಿಯೇ ಮೂರೂ ತಟ್ಟೆಗಳಿಗೆ ಅನ್ನ ಸಾರಿನ ಜೊತೆ, ಭತ್ತಕ್ಕೆ ಸಿಂಪಡಿಸಲು ತಂದಿದ್ದ ಔಷಧಿಯನ್ನು ಸಹ ಕಲಸಿಕೊಂಡು ಬಂದು ಮಕ್ಕಳಿಗೆ ಕೊಟ್ಟಳು. ತುಂಬಾ ಹಸಿದಿದ್ದ ಮಕ್ಕಳು ಏನೊಂದು ಮಾತನಾಡದೆ, ಸ್ವಲ್ಪವೂ ಬಿಡದಂತೆ ತಿಂದುಕೊಂಡರು. ಗೌರಮ್ಮ ತನ್ನ ತಟ್ಟೆಯಲ್ಲಿದ್ದ ಅನ್ನವನ್ನು ತಿಂದವಳೇ ಮಕ್ಕಳನ್ನು ಹೊರಗಡೆ ಕಳುಹಿಸದೆ, ನನ್ನ ಜೊತೆ ಸ್ವಲ್ಪ ಹೊತ್ತು ಮಲಗಿಕೊಳ್ಳಿ ಎಂದು ಚಾಪೆ ಹಾಸಿ ಮಕ್ಕಳಿಗೆ ಮಲಗಲು ಹೇಳಿ ತಾನು ಮಲಗಿಕೊಂಡಳು.
ಮಾದಣ್ಣ ಸ್ನೇಹಿತರಿಬ್ಬರ ಬಳಿ ಸಾಲ ಮಾಡಿ ವಡವೆಯನ್ನು ಬಿಡಿಸಿಕೊಂಡವನೇ, ಹೆಂಡತಿಗೆ ಈ ವಡವೆಗಳನ್ನು ನೀಡಿ ಅವಳು ಖುಷಿಯಾಗುವುದನ್ನು ನೋಡಬೇಕೆಂಬ ತವಕದಿಂದ ಓಡುವ ನಡಿಗೆಯಲ್ಲಿಯೇ ಮನೆಯ ಬಳಿಗೆ ಬಂದನು. ಬಾಗಿಲನ್ನು ನಿಧಾನಕ್ಕೆ ತಳ್ಳಿದನು. ಅಲ್ಲಿನ ದೃಶ್ಯವನ್ನು ಕಂಡು ಒಂದು ಕ್ಷಣ ಅವನಿಗೆ ಮಾತೇ ಹೊರಡದಂತಾಯಿತು. ಸಾವರಿಸಿಕೊಂಡು ಜೋರಾಗಿ ಕಿರುಚ ತೊಡಗಿದನು. ಅಕ್ಕ ಪಕ್ಕದ ಮನೆಯವರುಗಳು ಗಾಬರಿಯಿಂದ ಓಡಿ ಬಂದು ನೋಡಿದರೆ, ಮಾದಣ್ಣನ ಹೆಂಡತಿ ಮಕ್ಕಳು ಹೊಟ್ಟೆ ಹಿಡಿದುಕೊಂಡು ನರಳುತ್ತಾ ಒದ್ದಾಡುತಿದ್ದರು. ನೋಡ ನೋಡುತಿದ್ದಂತೆ ಮಾದಣ್ಣನ ಮಗ ಅಪ್ಪಾ ಎಂದು ಒಂದು ಬಾರಿ ಜೋರಾಗಿ ಕೂಗಿದವನೆ ನಿಶ್ಚಲನಾದನು.
ಎಲ್ಲರು ಸೇರಿ ಹತ್ತಿರದ ಆಸ್ಪತ್ರೆಗೆ ಸೇರಿಸಿದರು. ವೈದ್ಯರು ಸಾಹಸದಿಂದ ತಾಯಿ ಮಗಳನ್ನು ಸಾವಿನ ದವಡೆಯಿಂದ ಪಾರುಮಾಡಿದರು. ಗೌರಮ್ಮ ಸುಧಾರಿಸಕೊಂಡ ಮೇಲೆ, ಪೊಲೀಸರು ಆಕೆಯ ಗಂಡ ಮಾದಣ್ಣನಿಂದ ಹೇಳಿಕೆ ಪಡೆದು ಗೌರಮ್ಮಳ ವಿರುದ್ಧ ಭಾರತೀಯ ದಂಡ ಸಂಹಿತೆ ೩೦೨ ರಡಿಯಲ್ಲಿ ಮಗನನ್ನು ಕೊಲೆ ಮಾಡಿದ ಆರೋಪ ಹೊರಿಸಿ, ಪ್ರಕರಣವನ್ನು ದಾಖಲು ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದರು. ನ್ಯಾಯಾಲಯವು ಮುಂದಿನ ವಿಚಾರಣೆಗೆಂದು ಆಕೆಯನ್ನು ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಮಾದಣ್ಣ ಆಕೆಯನ್ನು ಜಾಮೀನಿನ ಮೇಲೆ ಹೊರತರಲು ವಕೀಲರ ಮೂಲಕ ತುಂಬಾ ಪ್ರಯತ್ನಿಸಿದ. ಆದರೆ ಸಾಧ್ಯವಾಗಲಿಲ್ಲ. ಆಕೆ ನ್ಯಾಯಾಂಗ ಬಂಧನದಲ್ಲಿರುವಂತೆಯೇ ವಿಚಾರಣೆ ನಡೆದು ಪ್ರತಿಕೂಲ ಸಾಕ್ಷಿಗಳ ನೆರವಿನಿಂದ ಆಕೆ ಜೈಲಿನಿಂದ ಹೊರಗಡೆ ಬರುವಂತಾಯ್ತು.
ಗಂಡ ಹೆಂಡತಿ ಈಗ ಒಂದಾಗಿ ಜೀವನ ನಡೆಸುತಿದ್ದಾರೆ. ಆದರೆ ಕಣ್ಣೆದಿರೇ ನರಳಿ ಹೊರಳಾಡುತ್ತಾ ಸತ್ತ ಮಗನ ನೆನೆದು ಈಗಲೂ ಕಣ್ಣೀರಿಡುತಿದ್ದಾರೆ.
[ ಸತೀಶ್ ರಾಮನಗರ]