ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Friday, November 25, 2011

ನೀ ಬರೋ ದಾರಿಯಲಿ....
ಕಂಗಳು ಕಾದಿರಲು
ಕನಸಿನ ದಾರಿಯಲಿ...,

ಮಲ್ಲಿಗೆ ಚಲ್ಲಿದೆ
ಸಂಪಿಗೆ ಕಂಪಿದೆ
ಜಾಜಿಯ ಸೊಬಗಿದೆ 

ನಿನ್ನ ಬರುವಿಕೆ ಕಾಯುತಲಿ...!

ಕನಿಕರ ಬಾರದೆ
ಕಂಬನಿ ಕಾಣದೆ
ಹೃದೆಯದ ಬೇಗೆಯು
ನಿನ್ನನು ತಾಕದೆ....!

ನನ್ನ ಹೃದೆಯಕ್ಕೆ
ಭಾವವೊಂದೇ
ಭಾವಕ್ಕೆ ಭಾಷೆಯೊಂದೇ 

ಆ ಭಾಷೆಗೆ ಭಾಷ್ಯ ನೀನೆ ನೀನೆ...!

ಮನಸದು ಮಿಡಿಯುತಿದೆ
ಒಲವಿದು ಬಯಸುತಿದೆ
ಸೊಗಸಿನ ಸೊಗಡಿನಲ್ಲಿ
ಸವೆದಿಹ ನಿರೀಕ್ಷೆಯಲಿ...!

ಆಶಯ ಗೀತೆ
ಅಭಿಜ್ಞಾನದಂತೆ
ನಿನಗೀಗ ಕೇಳಿಸದೆ
ನಿನ್ನೊಲವು ಕಾಯುತಿದೆ...

ಪ್ರಥಮದಿ ಅಂಕುರ
ಪ್ರೇಮವು ನಿರಂತರ
ಪ್ರೀತಿಯ ಅಂತರ
ಕಾಲವು ಮಾಗಲು
ಸಾವಲಿ ಕೊನೆಯದು..
ನನ್ನ ಸಾವಲಿ ಕೊನೆಯಿದು.

                ಪ್ರೀತಿಯಿಂದ ಸತೀಶ್, ರಾಮನಗರ 

Monday, November 14, 2011



-----ಕರಗಿ ಹೋದನವನು----- ಇದು ಕಲ್ಪನೆಯಲ್ಲ ನಿಜದ ಕಥೆ.  { ದಯಾ ಮರಣ ಬೇಕೇ ಬೇಡವೇ]
          ಆ ದಿನ ಕೆಲಸಕ್ಕೆ ಹೊರಡಲು ತಯಾರಾಗುತಿದ್ದೆ.  ನಮ್ಮ ಅಣ್ಣ ಸ್ವಲ್ಪ ಗಾಬರಿಯಿಂದ ಬಂದವನೇ '' ಶ್ರೀಧರನಿಗೆ ಮಂಡಿ ನೋವುಬರುತಿತ್ತು.  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಕ್ಸರೇ ತೆಗಿಸಿದೆ.  ಅದನ್ನು ನೋಡಿದ ಡಾಕ್ಟ್ರು, ಮಂಡಿಗೆ ಆಪರೇಶನ್  ಮಾಡಬೇಕು ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದರು'' ನಿನಗೆ ಆ ಡಾಕ್ಟ್ರು ಪರಿಚಯ ಇದ್ದರಲ್ವ.  ಅವರಿಗೆ ಒಂದೆರಡು ಸಾವಿರ ಕೊಟ್ಟರಾಯ್ತು.  ಇಲ್ಲೇ ಆಪರೇಶನ್ ಮಾಡೋಕೆ ಹೇಳೋ ಅಂದ.  ಸರಿ ಹೇಳಿ ನೋಡ್ತೀನಿ  ಎಂದು ಆಸ್ಪತ್ರೆಗೆ ಹೋಗಿ ಡಾಕ್ಟರನ್ನು ಭೇಟಿ ಮಾಡಿ ವಿಚಾರಿಸಿದೆ.  ನಿಮಗೆ ಆ ಹುಡುಗ ಏನಾಗಬೇಕು ಎಂದು ವಿಚಾರಿಸಿದರು.  ಅವನು ನಮ್ಮ ದೊಡ್ಡಪ್ಪನ ಮೊಮ್ಮಗ, ತಂದೆಗೆ ಒಬ್ಬನೇ ಮಗ.   ಮದುವೆಯಾದ ತುಂಬಾ ದಿನಗಳ ನಂತರ ಹುಟ್ಟಿದ.  ಹಿಂದಿನ ವರ್ಷ ಎಸ್ ಎಸ್ ಎಲ್ ಸಿ ಮುಗಿಸಿದ್ದಾನೆ ಎಂದೆ.  ನೀವು ಸ್ವಲ್ಪ ಹೊರಗಡೆ ನಿಂತಿರಿ ಎಂದು ನನ್ನ ಅಣ್ಣನಿಗೆ ಹೇಳಿ, ಎಕ್ಸರೇ ತೋರಿಸುತ್ತಾ ...ನಿಮ್ಮ ಅಣ್ಣನ  ಮಗನಿಗೆ ಬೋನ್ ಕ್ಯಾನ್ಸರ್ ಆಗಿದೆ.  ಯಾವುದಕ್ಕೂ ಕಿದ್ವಾಯ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚೆಕ್ ಮಾಡಿಸಿ ಎಂದರು.  ಒಂದು ಕ್ಷಣ ನನಗೆ ನಂಬಿಕೆ ಬರಲಿಲ್ಲ.  ಡಾಕ್ಟರ್ .....ಎಂದೆ.  ನನಗೆ ತಿಳಿದ ಮಟ್ಟಿಗೆ ಸತ್ಯವನ್ನೇ ಹೇಳಿದ್ದೇನೆ ಎಂದರು.  ದುಗುಡವನ್ನು ತೋರಗೊಡದೆ,  ಶ್ರೀಧರ ಹಾಗೂ ನನ್ನ ಅಣ್ಣನನ್ನು  ಮನೆಗೆ ಕರದುಕೊಂಡು ಬಂದೆ.  ಅಣ್ಣನ ಕೈಗೆ ಸ್ವಲ್ಪ ಹಣವನ್ನು ನೀಡಿ, ಅವನ ಮಂಡಿಗೆ ಇಲ್ಲಿ ಆಪರೇಶನ್ ಮಾಡೋಕೆ ಆಗಲ್ವಂತೆ.  ಅದಕ್ಕೆ ನೀನು ಬೆಳಿಗ್ಗೆ ಕಿದ್ವಾಯ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಬಾ ಎಂದು ನಿಜಾಂಶ ಮುಚ್ಚಿಟ್ಟು ಕಳುಹಿಸಿದೆ.  
           ಅಲ್ಲೂ ಕೂಡ ಆಪರೇಶನ್ ಮಾಡಲೇ ಬೇಕು ಅಂತ ಹೇಳಿದ್ದಾರೆ.   ಅಂಗೈ ಅಗಲ ಇದ್ದ ತುಂಡು ಭೂಮಿಯನ್ನು ಮಾರಿ,  ಸಾಲ ಸೋಲ ಮಾಡಿ ಆಪರೇಶನ್ ಮಾಡಿಸಿದ್ದಾಯ್ತು. ಒಂದು ವರ್ಷ ಚನ್ನಾಗಿಯೇ ಕಳೆಯಿತು.  ನನ್ನ ಅಣ್ಣ ಅತ್ತಿಗೆ ಕೂಡ ಅಷ್ಟೆಲ್ಲ ಸಾಲವಾದರು ಸಹ, ಮಗ... ಮತ್ತೆ ಮೊದಲಿಂತಾದನಲ್ಲ ಎಂದು ಖುಷಿಯಿಂದಿದ್ದರು.  ಒಂದು ದಿನ ಮನೆಯ ಬಳಿ ಶ್ರೀಧರ ಬಂದವನೇ, ಚಿಕ್ಕಪ್ಪ ನನಗೆ ಒಂದು ಆಟೋ ಕೊಂಡುಕೊಡು, ನನಗೆ ಕಾಲ ಕಳೆಯಲು ಬೇಜಾರು ಎಂದ.  ಆಯ್ತಪ್ಪ, ನೀನೆ ಯಾವುದಾದರು ಇದ್ದರೆ ಹುಡುಕು, ನಾನು ದುಡ್ಡು ಕೊಡುತ್ತೇನೆ ಎಂದು ಹೇಳಿ ಕಳುಹಿಸಿದೆ.  ಹುಡುಕಿಕೊಂಡು ಬರುತ್ತೇನೆ ಚಿಕ್ಕಪ್ಪ ಎಂದು ಹೇಳಿ ಹೋದವನನ್ನು ಮತ್ತೆ ಕಂಡದ್ದು ಆಸ್ಪತ್ರೆಯಲ್ಲಿಯೇ.  ಯಾಕೋ... ಆಟೋ ಹುಡುಕಿಕೊಂಡು ಬರುತ್ತೇನೆ ಎಂದು ಹೇಳಿದ್ದವನು ಹೀಗೆ ಆಸ್ಪತ್ರೆ ಸೇರಿದ್ದಿಯಲ್ಲಪ್ಪ ಅಂದೆ.  ಸೊಂಟದಿಂದ ಮೇಲ್ಬಾಗ ಎದೆಗೂಡು  ಎಲ್ಲಾ ತುಂಬಾ ನೋವು ಚಿಕ್ಕಪ್ಪ ಅದಕ್ಕೆ, ಅಪ್ಪಾ ಕರೆದುಕೊಂಡು ಬಂದು ಆಸ್ಪತ್ರೆಗೆ  ಸೇರಿಸಿದರು ಅಂದ.   ನಾನು ಆಗಾಗ ಹೋಗಿ ಬರುತಿದ್ದೆ.  ಆತನ ಆರೋಗ್ಯ ತೀರ ಹದಗೆಡುತ್ತಾ ಬರುತ್ತಿತ್ತು. ಅವನು ಅನುಭವಿಸುತಿದ್ದ ನೋವನ್ನು ನೋಡಲಾರದೆ ಆಸ್ಪತ್ರೆ ಬಳಿ ಹೋಗುವುದನ್ನೇ ಬಿಟ್ಟು ಬಿಟ್ಟಿದ್ದೆ.  ಆದರೆ  ಫೋನಲ್ಲಿ ಮಾತನಾಡುತಿದ್ದೆ.  ಡಾಕ್ಟರು, ಇನ್ನು ಒಂದು ತಿಂಗಳು ಅವನ ಬದುಕಿನ ಅವಧಿ ಎಂದು ನನಗೆ ಮಾತ್ರ ತಿಳಿಸಿದರು.  ಆ ಖಾಯಿಲೆಯ ಭೀಕರತೆಯ ಬಗ್ಗೆ ತಿಳಿದಿದ್ದರಿಂದ, ನಿರೀಕ್ಷಿಸಿಯೇ  ಇದ್ದೆ.  ಮಗನ ಸಾವನ್ನು ಸ್ವಾಗತಿಸಲು, ನನ್ನ  ಅಣ್ಣ ಕೂಡ ಮಾನಸಿಕವಾಗಿ ಸಿದ್ಧನಾಗಿಬಿಟ್ಟಿದ್ದ.  ಅತ್ತಿಗೆಯಿಂದ ಆ ವಿಷಯ ಮುಚ್ಚಿಟ್ಟಿದ್ದೆವು. ಆದರೂ ಅವರಿಗೆ ದೂರದ ಆಸೆ, ಯಾವ ಯಾವುದೋ ನಾಟಿ ವೈದ್ಯರನ್ನು ಕರೆಸಿ ಔಷಧಿ ಕೊಡಿಸಿದ್ದಾಯ್ತು.  ಏನು ಪ್ರಯೋಜನವಾಗಲಿಲ್ಲ.  ಹುಬ್ಬಳ್ಳಿಯಿಂದ ನಾಟಿ  ವೈದ್ಯನೊಬ್ಬ ಬಂದು ನೋಡಿದ.  ಐವತ್ತು ಸಾವಿರ ಕೊಟ್ಟರೆ ಚಿಕಿತ್ಸೆ ಕೊಡುತ್ತೇನೆ.  ನಿಮ್ಮ ಮಗ ಗುಣವಾಗುತ್ತಾನೆ ಎಂದು ನಂಬಿಸಿಬಿಟ್ಟಿದ್ದ.  ನನಗೆ ವಿಷಯ ಮುಟ್ಟಿಸಿದರು.  ಆ ನಾಟಿ, ವೈದ್ಯ ಅಲ್ಲೇ ಪಕ್ಕದೂರಲ್ಲಿ  ಠಿಕಾಣಿ ಹೂಡಿದ್ದ.  ಅವನ ಬಳಿ ನನ್ನ ಅಣ್ಣನೊಡನೆ  ಹೋದೆ.  ಆತ ತನ್ನನ್ನು ಆಯುರ್ವೇದಿಕ್ ಡಾಕ್ಟರ್ ಎಂದು ನನಗೆ ಪರಿಚಯಿಸಿಕೊಂಡ. ಪೇಶಂಟ್ ರಿಪೋರ್ಟೆಲ್ಲ ನೋಡಿದ್ದೀನಿ, ಗುಣಪಡಿಸಬಹುದು ಎಂದ.  ನನ್ನ ಅಣ್ಣನ ಮನಸ್ಸಿಗೆ ಬೇಸರವಾಗಬಾರದೆಂದು ನನ್ನ ಕೋಪವನ್ನು ಅದುಮಿಟ್ಟುಕೊಂಡು ಹೇಳಿದೆ.  ಒಂದು ಲಕ್ಷವನ್ನೇ ಬೇಕಾದರೆ ಕೊಡುತ್ತೇನೆ.  ಆತನನ್ನು ನೀನು ಬದುಕಿಸುವುದು ಬೇಡ, ಆತ ಪಡುತ್ತಿರುವ ನೋವು ಸಂಕಟವನ್ನು ಕಡಿಮೆ ಮಾಡಲಿಕ್ಕೆ ಔಷಧಿ ಕೊಟ್ಟರೆ  ಸಾಕು ಎಂದೆ.  ಏಕೋ ಆತ ನಿರುತ್ತರನಾದ. ಅಣ್ಣನಿಗೆ,  ಮತ್ತೆ ಈ ರೀತಿಯ ವ್ಯಕ್ತಿಗಳನ್ನು ನಂಬಿ ಮೋಸ ಹೋಗಬೇಡ ಎಂದು ಬುದ್ದಿ ಹೇಳಿ ಬಂದೆ.  ಎರಡು ದಿನಗಳ ಬಳಿಕ,   ಚರ್ಚಿನ ಫಾದರ್ ಎಂಬೊಬ್ಬ ವ್ಯಕ್ತಿ, ಏಸುವಿನಲ್ಲಿ ಪ್ರಾರ್ಥಿಸಿ  ಅವನ ನರಳುವಿಕೆಯನ್ನು ಕಡಿಮೆ ಮಾಡುತ್ತೇನೆ ಎಂದು, ನನ್ನ ಅಣ್ಣ ಅತ್ತಿಗೆಯನ್ನು ನಂಬಿಸಿದ.  ಅವರ ಮನಸ್ಸಿಗೆ ಬೇಸರವಾಗಬಾರದೆಂದು ನನ್ನ ಕಾರಿನಲ್ಲಿಯೇ ಕರೆದುಕೊಂಡು ಚರ್ಚಿನ ಬಳಿ ಹೋದೆ.  ಶ್ರೀಧರ ತುಂಬಾ ಕಷ್ಟದಿಂದ ಮೆಟ್ಟಿಲನ್ನು ಏರಿ, ಆಯಾಸ ಪಡುತ್ತಾ ಕುಳಿತುಕೊಂಡ.  ಫಾದರ್, ಕೊಬ್ಬರಿ ಎಣ್ಣೆಯನ್ನು ಏಸು ಮೂರ್ತಿಯ ಬಳಿ ಇಟ್ಟು ಪ್ರಾರ್ಥಿಸಿ, ಅದನ್ನು ತಂದು ಶ್ರೀಧರನ ತಲೆಗೆ ಸವರಿದ.  ದಿನ ಅವನ ತಲೆಗೆ ಎಣ್ಣೆ ಹಚ್ಚಿರೆಂದು ಡಬ್ಬಿಯನ್ನು ನೀಡಿದ.  ಅಲ್ಲಿಗೆ ಬಂದು ಶ್ರೀಧರನ ಆಯಾಸ ಜಾಸ್ತಿ ಆಯಿತೆ ಹೊರತು.  ನೋವು ಮಾಯವಾಗಲಿಲ್ಲ.  ಆ ಹುಡುಗನಿಗೆ ತನ್ನ ಅಂತಿಮ ದಿನಗಳು ಸಮೀಪಿಸುತ್ತಿದೆ ಎಂದು ತಿಳಿದುಹೋಗಿತ್ತು. 
            ಒಂದು ದಿನ ಚಿಕ್ಕಪ್ಪ ನೀನು ಬರಲೇ ಬೇಕು ಎಂದು ಫೋನ್ ಮಾಡಿದ.  ನಾನು ಆತಂಕದಿಂದಲೇ  ಹೋದೆ.  ನನ್ನ ಕೈ ಹಿಡಿದುಕೊಂಡು..'' ಚಿಕ್ಕಪ್ಪ,  ನಾನು ಕಣ್ಣ ತುಂಬಾ ನಿದ್ದೆ ಮಾಡಿ ಆರು  ತಿಂಗಳಾಯ್ತು.  ಇನ್ಜೆಂಕ್ಶನ್ ಕೊಟ್ಟು ಕೊಟ್ಟು ನನ್ನ ಎರಡು ಕುಂಡಿಗಳು ಕಲ್ಲಿನಂತಾಗಿ ಹೋಗಿದೆ.  ಬಲವಂತದಿಂದ ಕೊಟ್ಟಾಗ ಪ್ರಾಣ ಹೋದಂತಾಗುತ್ತದೆ.  ನಾನು ಎರಡು ಸಾರಿ ಸಾಯಲು ಹೋದೆ.  ನಮ್ಮ ಅಪ್ಪಾ ನೋಡಿಕೊಂಡು ಮನೆಯಲ್ಲಿದ್ದ ಅಗ್ಗವನ್ನು ಬೆಂಕಿಗೆ ಹಾಕಿದ.  ನಾನು ಪಡ್ತಾಯಿರೋ ನೋವು ಯಾಕೆ ನಿಮಗೆ ಯಾರಿಗೂ ಅರ್ಥ ಆಗೋಲ್ಲ.  ಹಾಳಾದ್ದ ಸಾವು ದಿನ  ದಿನ ಒಂದೊಂದೇ ಚೂರು ಕೊಲ್ತಾಯಿದೆ.  ಡಾಕ್ಟರಿಗೆ ನನ್ನ ಸಾಯಿಸಿ ಬಿಡಿ ಎಂದು ಕಾಲು ಹಿಡಿದು ಬೇಡಿಕೊಂಡೆ ಅವರಿಗೆ ಕರುಣೆ ಬರಲಿಲ್ಲ.   ಈ ಕತ್ತಿನಿಂದ ಪೂರ್ತ ಕೆಳ ಭಾಗ ಅಸಾಧ್ಯವಾದ ನೋವು.  ನನ್ನ ಪ್ರತಿಯೊಂದು ಕಾರ್ಯಕ್ಕೂ ಈಗ ಅಪ್ಪಾ ಬೇಕೇ ಬೇಕು.  ನನ್ನಿಂದಾಗಿ ಅವರಿಬ್ಬರೂ ಹೊಟ್ಟೆ ತುಂಬಾ ಊಟ ಮಾಡಿ ಎಷ್ಟು ದಿನವಾಯ್ತೋ.    ಚಿಕ್ಕಪ್ಪ ನಿನ್ನ ಬೇಡಿಕೊಳ್ತೀನಿ, ಡಾಕ್ಟರಿಗೆ ಹೇಳಿ ನಾನು ಸಾಯುವ ಹಾಗೆ ಯಾವುದಾದರು ಔಷಧಿ ಕೊಡಲಿಕ್ಕೆ ಹೇಳು.  ಇಲ್ಲ ನಿನ್ನ ಕೈಯಿಂದ ನನ್ನ ಕುತ್ತಿಗೆಯನ್ನು ಹಿಸುಕಿ ಸಾಯಿಸಿಬಿಡು ಚಿಕ್ಕಪ್ಪ.  ನನ್ನ ಕೈಯಲ್ಲಿ ಈ ನೋವನ್ನು ತಡೆದು ಸಾಕಾಗಿ ಹೋಗಿದೆ.  ನಮ್ಮ ಅಪ್ಪಾ ದುಡ್ಡು ಖರ್ಚು ಮಾಡಿಕೊಂಡು ನನ್ನ ಜೊತೇನೆ ದಿನ ಅವನು ಸಾಯ್ತಾಯಿದ್ದಾನೆ''.    ಎಂದು ಹೇಳುವಷ್ಟರಲ್ಲಿ ಎದುಸಿರು ಬಿಡುತಿದ್ದ.  ನನ್ನ ಕಣ್ಣಿನಿಂದ ಜಾರುತಿದ್ದ ಹನಿಗಳನ್ನು ತಡೆದಿಟ್ಟುಕೊಳ್ಳಲಿಕ್ಕೆ ಆಗಲಿಲ್ಲ.  ಸ್ವಲ್ಪ ಸುಧಾರಿಸಿಕೊಂಡು, ಚಿಕ್ಕಪ್ಪ ನಾನು ಸತ್ತರೆ ನಮ್ಮ ಅಪ್ಪಾ ಅಮ್ಮನನ್ನ  ನೋಡಿಕೊಳ್ಳಲು ಯಾರು ಇಲ್ಲ.  ನೀನು ನೋಡಿಕೊಳ್ತೀ ಅನ್ನೋ ನಂಬಿಕೆ ನನಗಿದೆ,  ಎಂದು ಹೇಳುತ್ತಾ ಕಣ್ಣ ತುಂಬಿಕೊಂಡನು.  ನಾನು ಏನು ಮಾತನಾಡಲು ಸಾಧ್ಯವಾಗಲಿಲ್ಲ.  ತಲೆಯಾಡಿಸಿ ಹೊರಗೆ ಬಂದುಬಿಟ್ಟೆ.  ಐದು ದಿನಗಳ ನಂತರ ಅವನ ಸಾವಿನ ಸುದ್ದಿ ಬಂತು.
{  ಈಗ ಹೇಳಿ ದಯಾ ಮರಣ ಬೇಕೇ ಬೇಡವೇ] ಇದು ನಿಜದ ಕಥೆ.  ಕಲ್ಪನೆಯಲ್ಲ.

Saturday, November 12, 2011


 '' ಮುಸ್ಸಂಜೆ '' 

ಒಂದೊಂದು ಸುಕ್ಕಿನ ಸಾಲಿಗೂ 
ಮಾಗಿದ ಹಿರಿತನದ ಪಾಲಿದೆ 
ಸಾಗಿ ಬಂದ ದಾರಿಯ ನೆನಪಿದೆ 
ಕಷ್ಟ ಕಾರ್ಪಣ್ಯಗಳ ನೆರಳು ಹಿಂಬಾಲಿಸಿದೆ.
 
ನೆರಳು ಬೆಳಕಿನ ಆಟದಂತ ಜೀವನ 
ಆ ತಕ್ಷಣ ಬಿಸಿಲು, ಆಗಾಗ ಅಡ್ಡ ಬರುವ ಮೋಡ 
ಮಳೆಯಾಗಿ ಸುರಿಯೆ 
ಬಾಚಿಕೊಂಡ ಇಳೆಯಂತೆ ಬದುಕು 
ಉದುರಿಬಿದ್ದ ತಾರೆಗಳಂತೆ 
ಕುಡಿ ಹೊಡೆದು ಹೊರಬಂದ ನವ ಜೀವ 
ಸಾರ್ಥಕತೆಯ ಭಾವ...!
 
ಹೆಗಲಿಗೆ ನೊಗ ಕಟ್ಟಿ 
ಹಳ್ಳ ದಿಣ್ಣೆಗಳನು ಬಿಡದೆ 
ಉತ್ತಿ ಬಿತ್ತುವ ಕಾಯಕದಿ 
ಸವೆಸಿದ ದಿನಗಳೆಷ್ಟೋ 
ಮುಸ್ಸಂಜೆಗೆ ಆಸರೆಯಾಗದ 
ಬೆವರಿನ ನೆರಳುಗಳು...!
''ಹುಟ್ಟಿಸಿದ ದೇವರು ಹುಲ್ಲು ಮೇಯಿಸಲು 
ಸಾಧ್ಯವೇ'' 
ಸಂವತ್ಸರಗಳು ಬಂದಷ್ಟೇ ವೇಗದಲಿ ಮಾಯವಾಗಿ
ಸುಕ್ಕಿನ ಹಿಂದಿನ ಸಾಲಲಿ ಬಂದು ನಿಂತಿವೆ 
ಮುಸ್ಸಂಜೆಯು ಕರಗುವ ದಾರಿಯನು 
ಎದಿರು ನೋಡುತಾ......!
             ಪ್ರೀತಿಯಿಂದ ಸತೀಶ್.  ರಾಮನಗರ.