ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Thursday, June 28, 2012

---- ಕಾಲಾಯ ತಸ್ಮೈ ನಮಃ ---



'' ಎಂಥಾ ಮಗು, ಗಂಡು ತಾನೆ '' .?!!
ಇಲ್ಲ .., ಹೆಣ್ಣು ಮಗು...!
ಛೇ., ಸಾಮ್ರಾಜ್ಯ ಪಥನದ ಮುನ್ಸೂಚನೆ..!
ಗೋಡೆ ಮೇಲಿನ ಗೌಳಿ ಲೋಚಗುಟ್ಟುತ್ತಿತ್ತು
ಆದರೇನಂತೆ,
ಮುಂದಾದವು....,
ತನ್ನ ಪೌರುಷದ ಮೇಲಿನ ನಂಬಿಕೆಗೆ,
ಒಂದಲ್ಲ ಎರಡು ಗಂಡು ಮಕ್ಕಳು.
ಬಿತ್ತನೆ ಬೀಜಗಳಂತೆ
ವಂಶಾವಾಹಿನಿಯ  ತಳಿಗಳವು
ದೊಡ್ಡವ ಅಪ್ಪನಿಗೆ; ಕಿರಿಯವ ಅವ್ವನಿಗೆ
ತಲೆ ಬೋಳಿಸಿಕೊಂಡು ಕೊಳ್ಳಿ ಹಿಡಿಯುವುದಕ್ಕೆ,
ಜೊತೆಗೊಂದಿಷ್ಟು ಪಿಂಡ ಹಾಕುವುದಕ್ಕೆ..,
ಸುತ್ತಿ ಬಳಸುವುದಿಲ್ಲ, ಸ್ವರ್ಗಕ್ಕೆ ನೇರದಾರಿ
ತೋರಿಸುವ ಕುಲೋದ್ಧಾರಕರು.
ಕೀರ್ತಿಪತಾಕೆ ಹಾರಿಸುವ ಕೀರ್ತಿವಂತರು.
ನೆಲ ಕಾಣುತಿದ್ದ ಗೌಡನ ಮೀಸೆ ಆಕಾಶ ನೋಡುತ್ತಿತ್ತು. 

ಅದೊಂದು ದಿನ....

ನನ್ನ ಅಸ್ಥಿಯ ಬೂದಿ-
ಯನ್ನು  ನದಿಯಲ್ಲಿ ವಿಸರ್ಜಿಸಿರೆಂದು
ಜೀರ್ಣಾವಸ್ಥೆಯಲ್ಲಿಯೇ ಕಣ್ಮುಚ್ಚಿದ ಅಪ್ಪ.
ಆಶ್ಚರ್ಯ..! ಸಗ್ಗದ ದಾರಿ ಮುಚ್ಚಿದೆ..!
ಇಲ್ಲೇಕೆ ಬಂದಿರಿ...... ಕಿಂಕರರ ಪ್ರಶ್ನೆ..?
ಮಣ್ಣಾದ ಮೇಲೆ ಮತ್ತೇನು ಕಿರಿಕಿರಿ
ಅಪ್ಪನ ಮರು ಪ್ರಶ್ನೆ.
ಮುಕ್ತಿ ಇಲ್ಲದವರಿಗೆಂದೇ  ಇದೇ
ತ್ರಿಶಂಕೂ ಸ್ವರ್ಗ, ಹೋಗೆಂಬ ಉತ್ತರ. 
ಅಯೋಮಯನಾದ ಅಪ್ಪಾ..
ತೊರೆದುಬಂದ ದೇಹದೆಡೆಗೆ ಮತ್ತೆ ಬಂದ. 
ಮುಡಿತುಂಬಾ ಹೂ ಮುಡಿದು, ಕೈತುಂಬಾ ಬಳೆ-
ತೊಟ್ಟ ಹೆಣ್ಣಿನ ಬತ್ತಿದ ಕಣ್ಣೀರ ಜೊತೆಗೆ
ಗೌಜು ಗದ್ದಲ ಏರುದನಿಗಳ  ಮೇಲಾಟ.
ನಡುವೆ.....,
ಅನಾಥವಾಗಿ ಬಿದ್ದಿರುವ ತನ್ನ ದೇಹ.
ಮತ್ತಷ್ಟು ಸನಿಹಕ್ಕೆ ಸರಿದು ಬಂದ
ಸಮಭಾಗ ಸಿಗುವವರೆಗೂ ಹೆಣ ಸುಡಲು
ಬಿಡನೆಂಬ ಮಗನೊಬ್ಬ,
ಮರಣಶಾಸನವಿದೆ ಬೇಕಾದ್ದು ಮಾಡಿಕೊ
ಎನ್ನುವ ಮತ್ತೊಬ್ಬ.  ಹರಿಶಿಣ-
ಕುಂಕುಮಕ್ಕೆ ನನಗೆಲ್ಲಿದೆ ಎಂಬ ಮಗಳು. 
ಇದನ್ನೆಲ್ಲಾ ನೋಡಿದ ಅಪ್ಪ,  ಬಂದಷ್ಟೇ
ವೇಗವಾಗಿ ಹಿಂದಿರುಗಿ  ಹೊರಟ,
ಇವರನ್ನು ಹೆತ್ತ ತಪ್ಪಿಗೆ
ನರಕದ ಬಾಗಿಲಾದರು  ತೆರೆದಿರಬಹುದೆಂಬ
ಆಶಾಭಾವನೆಯಿಂದ...!!

Saturday, June 16, 2012

------ಋತುಮಾನ -------




ಮೊಗ್ಗು ಮೈನೆರೆದಾಗಿನ 
ಬದಲಾದ  ಮೈಯ ಬಿಸುಪು, 
ಮಾದಕತೆ ಮೈತಾಕಿ, 
ಕುತೂಹಲವಾಯ್ತು ಇಮ್ಮಡಿ.
ವಿಸ್ಮಯವಿಲ್ಲಿ ವಿಹಿತ,
ಅದು ಬರೀ ಬೆರಗಲ್ಲ.!
ಅಡಿಯಿಂದ ಮುಡಿಯವರೆಗಿನ ಅಚ್ಚರಿ.!! 
ಅಂಕು ಡೊಂಕಿನ ದಾರಿ
ಇಕ್ಕೆಲಗಳಲ್ಲಿ ಹಸಿರು ತುಂಬಿ, 
ಮಾಘದಲ್ಲಿ  ತೂಗಿ  ಬಾಗೋ   
ವಯ್ಯಾರದ ಪ್ರಕೃತಿ ಸೊಬಗ,
ಉಬ್ಬು ತಗ್ಗುಗಳ ಕಣಿವೆಯಲ್ಲಿ 

ಕಳೆದುಹೋದ ಕ್ಷಣದಲಿ, 
ಸ್ತಂಭಿಸಿದ ಬೀಸು ಗಾಳಿಯ 
ನಡುವೆ,  ಸೌಸವದ ಬೆವರು.!
ಘನೀಭವಿಸಿದ ಮೋಡ.
ಹನಿಯಾಗಿ ಸ್ಖಲಿಸುವ ಮುಂಚಿ-
ನಲಿ, ಗುಡುಗು ಮಿಂಚಿನಾರ್ಭಟ
ಸೋನೆ ಮಳೆಗೆ
ಮನ ತಣಿದ  ಇಳೆಯಂತೆ.
ಸ್ವಾದದ ಅನುಭೂತಿ 
ಸಂತೃಪ್ತಿಯ,  ಬೆನ್ನಿಗಂಟಿದ 
ಸೃಷ್ಟಿಯ ರಹಸ್ಯ.!  
ಪ್ರಕೃತಿಯ ಸಮ್ಮಿಲನದಿ   
ಬೆತ್ತಲು ಬಯಲು,
ಹೊಸ ದೃಷ್ಟಿಯ ಉಗಮ.