ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Thursday, August 23, 2012

'' ಖಾಲಿ ಪುಟದ ಕವನ '' --------


ಖಾಲಿ ತಲೆ ಖಾಲಿ

ಇತ್ತೀಚಿನ ಖಯಾಲಿ,
ಬೆರಳಿಗಂಟಿದ ಶಾಯಿ
ಮೂಡಿಸದೆ ಅಕ್ಷರ
ಹಾಳೆ ಖಾಲಿ ಹಾಳೆ.

ಧೃತಿಗೆಡಲಿಲ್ಲ, ಗೀಚಿದೆ  

ತೋಚದೆ ಸುಮ್ಮನೆ;
ಭೀಷಣ ಪಾಷಾಣ
ಮೆತ್ತಿದ ಪಾಖಂಡಿ
ಮನಸುಗಳಲಿ
ಮಂದಿರ ಮಸೀದಿ
ಚರ್ಚ್ ಎಂಬ-
ನಡುಮನೆಯ ಅಪೀಮು,
ನೆತ್ತಿಗಡರಿ
ನರನಾಡಿಗಳೆಲ್ಲ ನಂಜಾದವು
ಕಣ್ಣು  ಕೆಂಪಾಗಿ
ರಕ್ತ ಕಪ್ಪಾಯಿತು,

ಭಾವ ಬಂಜೆಯಂತಾಗಿ

ಭ್ರಾಮಕ ಉಸಿರಾಗಿ
ಬಸಿರಾಗಲಿಲ್ಲ ಭ್ರಾತೃತ್ವ.
ಇನ್ನೆಲ್ಲಿ ಹೆರಿಗೆ ಬೇನೆ...!!

ಛೇ..! ಈ
ಗೊಡ್ಡು ಭ್ರಾಂತು
ಪಥ್ಯವಿಲ್ಲದ ರೋಗ.
ಇದೆಲ್ಲ..,
ಕಸದ ತೊಟ್ಟಿಯಲ್ಲಿ
ಗೊಬ್ಬರವಾಗುವ ವಿಷಯ.
ಯಾರಿಗೂ ಬೇಡದ
ಕಾಡದ ಸಂಗತಿ
ನನಗೇಕೆ ಬೇಕು...?
ಅರ್ಬುದ ರೋಗ
ಕಾಲಿನ ಬುಡದ ಸತ್ಯ
ನಿರ್ಲಕ್ಷಿಸಿದರೆ
ಆಪತ್ತು ಬಂದು ಚಾಪೆಯಲ್ಲಿ
ಸುತ್ತೊಯ್ವುದು, ಕೇಳದೆ..!

ಇಲ್ಲಾ...,  ಕವನವಾಗಲಿಲ್ಲ

ಪದಗಳ ಬೆಸುಗೆ
ಸರಿಹೋಗಲಿಲ್ಲ..,
ಬರೆದದ್ದನ್ನೆಲ್ಲ ಹರಿದು
ಮೊದಲಿಗೆ ಬಂದೆ
ಮತ್ತದೇ ಶೂನ್ಯ ....

ಖಾಲಿ ತಲೆ

ದೆವ್ವದ ನೆಲೆ,
ಈ ಸತ್ಯದ ಉಕ್ತಿಗೆ 
ಹೊಸತೊಂದು ಪುಟ
ಸೇರ್ಪಡೆ..!
ಇದುವೇ ನನ್ನ
ಖಾಲಿ ಪುಟದ ಕವನ...!!