ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Friday, May 10, 2013

                                             ====   ಮೋಡದ ಮರೆಯಲ್ಲಿ ==

          ತನಗಿಂತ ಇನ್ನೊಂದು ವರ್ಷ ಮೇಲ್ಪಟ್ಟ ಮಗುವಿನೊಂದಿಗೆ ಜೂಟ್ ಆಟವಾಡಿಕೊಂಡು ಆಯತಪ್ಪಿ ಮೋರಿಯೊಳಗೆ ಬಿದ್ದು ಹೊರಬರಲಾರದೆ ಆ ಮಗು ಅಳುತ್ತಿತ್ತು.   ಜೊತೆಯಲ್ಲಿದ್ದ  ಮತ್ತೊಂದು ಮಗು ಗಾಬರಿಯಿಂದ   ಈ ಸುದ್ದಿಯನ್ನು ತಿಳಿಸಲು ದೂರದಲ್ಲಿದ್ದ ಮನೆಯ ಕಡೆಗೆ ಅಳುತ್ತಾ ಓಡತೊಡಗಿತು. 

             ಆತನ ಕೆದರಿದ ಕೂದಲು ಎಣ್ಣೆ ನೀರು ಕಂಡು ತುಂಬಾ ದಿನಗಳಾಗಿದೆ ಎಂದು ಸಾರಿ ಹೇಳುತ್ತಿತ್ತು.  ಮೈಮೇಲಿನ ಬಟ್ಟೆಯದು ಅದೇ ಕಥೆ.  ಆತನ ಹೆಗಲಿನ ಮೇಲೆ ಜಿಡ್ಡು ಕಟ್ಟಿದ ಚೀಲವೊಂದು ನೇತಾಡುತ್ತಿತ್ತು.  ಈ ಅವತಾರವೇ ಸಾಕು.   ಅವನು ಚಿಂದಿ ಆಯುವ   ಹುಡುಗನೆಂದು  ಕರೆಯಲು.  ಹೀಗೆ ಪೇಪರ್, ಪ್ಲಾಸ್ಟಿಕ್ ಅರಸುತ್ತಾ ಮೋರಿಯ ಸಮೀಪ ಹೋಗುತಿದ್ದವನಿಗೆ ಮಗು ಅಳುತಿದ್ದ ಶಬ್ದ ಕೇಳಿಸಿತು.  ಅಳುವಿನ ಶಬ್ದವನ್ನು ಅನುಸರಿಸಿ ಹೊರಟವನಿಗೆ ಕಂಡದ್ದು ಸುಮಾರು ಮೂರು ವರ್ಷದ ಮಗು.  ಆ ಮಗುವನ್ನು ಮೋರಿಯಿಂದ  ಮೇಲಕ್ಕೆತ್ತಿ  ಅದರ ಕೈ ಕಾಲುಗಳಿಗೆ ಮೆತ್ತಿಕೊಂಡಿದ್ದ ಮೋರಿಯ ಕೊಳಕನ್ನು ತನ್ನ ಬಳಿಯಿದ್ದ ಕೊಳಕು ಬಟ್ಟೆಯಿಂದಲೇ  ಒರೆಸಿದನು.    ಅಳು ನಿಲ್ಲಿಸಲೆಂದು ತನ್ನ ಕೊಳಕು ಜೇಬಿನಲ್ಲಿದ್ದ ಒಂದು ಚಾಕೊಲೇಟ್ ನೀಡಿದರು ಮೋರಿಯೊಳಗೆ ಬಿದ್ದ ಗಾಬರಿಗೋ ಇಲ್ಲ ಇವನ ಅವತಾರವನ್ನು ನೋಡಿಯೋ ಆ ಮಗು ಮತ್ತಷ್ಟು ಅಳಲು ಶುರುಮಾಡಿತು.  ತಕ್ಷಣ ಮಗುವನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಸಂತೈಸತೊಡಗಿದರು ಸಹ    ಆ ಮಗುವಿನ ಅಳು ಕಡಿಮೆಯಾಗಲೇ ಇಲ್ಲ.   ಆ ಮಗುವಿನ ಬಗ್ಗೆ ಯಾರಲ್ಲಿ ವಿಚಾರಿಸುವುದು ಎಂದು ತೋಚದೆ  ಗೊಂದಲದಿಂದ ನಿಂತಿದ್ದನು.  ಎದಿರಾಗಿ ಬರುತ್ತಿದ್ದ ಕೆಲವರು  ಅಳುತಿದ್ದ ಮಗು ಹಾಗು ಅದನ್ನು ಸಂತೈಸಲು ಒದ್ದಾಡುತಿದ್ದ  ಚಿಂದಿ  ಆಯುವ ಹುಡುಗನನ್ನು  ಅನುಮಾನದಿಂದ ನೋಡತೊಡಗಿದರು.  ಅವರಳೋಗೊಬ್ಬ ''ಇವನು ಮಕ್ಕಳ ಕಳ್ಳನ ಹಾಗೆ ಕಾಣ್ತಾನೆ.  ಮಗುನ ಎಲ್ಲೋ ಕದ್ದುಕೊಂಡು ಬಂದಿರಬೇಕು'' ಎಂದನು.  ಅವನ ಮಾತಿನಿಂದ ಉತ್ತೇಜಿತರಾದವರಂತೆ ಎಲ್ಲರು ಹಿಡ್ಕೊಳ್ಳಿ ಮಕ್ಕಳ ಕಳ್ಳ ಎಂದು ಕೂಗತೊಡಗಿದರು.     ಅವರ ಕೂಗಿಗೆ ಮತ್ತೆಲ್ಲೋ  ಇದ್ದ ಮತ್ತಷ್ಟು ಜನರು ಒಮ್ಮೆಲೇ  ಪ್ರತ್ಯಕ್ಷರಾದರು.  ಅವನಿಗೆ ಮಾತನಾಡಲು ಅವಕಾಶಕೊಡದಂತೆ ಎಲ್ಲಂದರಲ್ಲಿ ಹೊಡೆಯತೊಡಗಿದರು.  ಅವನು ನಿಜ ವಿಷಯವನ್ನು  ಹೇಳುತಿದ್ದರು ಯಾರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.  ಮತ್ತೊಂದು ಮಗುವಿನ ಕೈ ಹಿಡಿದುಕೊಂಡು ಓಡಿ ಬಂದ  ಮಗುವಿನ ತಾಯಿ  ತನ್ನು ಮಗು ಮೋರಿಗೆ ಬಿದ್ದಿದ್ದ ವಿಷಯವನ್ನು ಹೇಳುವ ತನಕ ಚಿಂದಿ  ಆಯುವ ಹುಡುಗ  ಅಲ್ಲಿದ್ದವರಿಗೆಲ್ಲರಿಗೂ  ಅಕ್ಷರ ಸಹ ಫುಟ್ಬಾಲಾಗಿ   ಹೋಗಿದ್ದ.   ನಾ ಮುಂದು ತಾ ಮುಂದು ಎಂದು ಒದೆಯುತಿದ್ದವರೆಲ್ಲರು,  ಒಹ್  ಹಾಗ..,  ಈ ನನ್ನ ಮಗ ಮೊದಲೇ ಹೇಳಿದ್ದರೆ ಏಟಾದರು   ತಪ್ಪಿರೋದು ಎಂದು ನಗುತ್ತಾ ಹೇಳಿ ಹೊರಟುಹೋದರು.  ತಾಯಿ ಮಗುವನ್ನು ಎದೆಗವುಚಿಕೊಂಡು ಸಂತೈಸುತ್ತಾ ಮನೆಯ ಕಡೆಗೆ ಹೊರಟಳು.

        ಮೂಗು ಬಾಯಿಯಲ್ಲಿ ಹರಿಯುತಿದ್ದ ರಕ್ತವನ್ನು ಒರೆಸಿಕೊಳ್ಳುವ ಶಕ್ತಿಯು ಇಲ್ಲದವನಂತೆ ಆ ಚಿಂದಿ  ಆಯುವ ಹುಡುಗ ರಸ್ತೆಯ ಬದಿಯಲ್ಲಿ ನರಳುತ್ತಾ ಬಿದ್ದಿದ್ದನು.  ಈ ಘಟನೆಗೆ ಸಾಕ್ಷಿಯಾಗಿದ್ದ ಸೂರ್ಯ ಮೋಡದೊಳಗೆ ಮರೆಯಾಗಿಹೋದ!!
                                      ===========

1 comment:

  1. ಹೊರ ಅವತಾರವೇ ಮುಖ್ಯವಾಗಿ, ಒಳ ಮಾನವೀಯತೆ ಎಂದೋ ಮರೆಯಾಗಿ ಹೋಗಿದೆ. ಈ ಕಥನದ ಸರಳತೆ ಮತ್ತು ಅದು ಒಳ್ಳೆಯತನಕ್ಕೆ ಸಿಕ್ಕ ಬೆಲೆಯ ಬಗ್ಗೆ ವ್ಯಕ್ತಪಡಿಸುವ ವಿಷಾದ ಮನಮುಟ್ಟಿತು.

    ReplyDelete