ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Saturday, February 11, 2012

ಕುರಿ ಮತ್ತು ನಾನು


                    ಮನೆಯ ಕಾಂಪೌಂಡ್ ಇಷ್ಟೊಂದು ದೊಡ್ಡದಾಗಿದೆ.  ಒಂದು ಚಿಕ್ಕ ಕುರಿಮರಿ ತನ್ನಿ ಸಾಕೋಣ.    ಸುತ್ತಾ ಮುತ್ತಾ ಇರುವ ಹುಲ್ಲನ್ನು ತಿಂದುಕೊಂಡು ಬೆಳೆಯುತ್ತೆ.    ಮೇಯಿಸಲು ಹೊರಗಡೆ ಹೋಗುವ ಅವಶ್ಯಕತೆಯಿರುವುದಿಲ್ಲ.  ನನಗು ಮನೆಯಲ್ಲಿ ಸುಮ್ಮನೆ ಕೂತು ಕಾಲ ಕಳೆಯುವುದು ತಪ್ಪುತ್ತದೆ ಎಂಬ ಅಮ್ಮನ ಮಾತಿಗೆ ಬೆಲೆ ಕೊಟ್ಟು ಅಪ್ಪಾ ಒಂದು ಸಣ್ಣನೆಯ ಕುರಿಮರಿಯನ್ನು ಮಾರನೆಯ ದಿನವೇ ತಂದರು.   


ನಾನು ಶಾಲೆಯಲ್ಲಿ ಕುಳಿತಿದ್ದರು ಕುರಿಮರಿಯದೆ ಧ್ಯಾನ.  ಬೆಲ್ಲು ಎಷ್ಟು ಬೇಗ  ಹೊಡೆಯುವುದೋ ಎಂಬ ನಿರೀಕ್ಷೆಯಲ್ಲಿ ಮೇಷ್ಟ್ರು ಹೇಳಿಕೊಟ್ಟ ಪಾಠ ತಲೆಗೆ ಸೇರುತ್ತಿರಲಿಲ್ಲ.  ಶಾಲೆ ಬಿಟ್ಟ ತಕ್ಷಣ ಓಡುವುದಕ್ಕೆ    ಶುರುಮಾಡಿದರೆ  ಮನೆಯ ಬಳಿ ಬಂದಾಗಲೇ ನನ್ನ  ಕಾಲಿಗೆ ಬ್ರೇಕ್ ಬೀಳುತಿದ್ದುದ್ದು.   ಕುರಿಮರಿಯನ್ನು ಒಮ್ಮೆ ಮುದ್ದಾಡಿ,    ಅದರ ಪಿಳಿ ಪಿಳಿ ಕಣ್ಣುಗಳನ್ನು ನೋಡುತ್ತಾ ಮತ್ತೊಮ್ಮೆ ಅದರ ಮೈದಡವಿದರೆ ಸಾಕು,  ಕುರಿಮರಿ ಚಂಗನೆ  ಮೇಲಕ್ಕೆಗರಿ ಸುತ್ತಲು ಕುಣಿದು ಕುಪ್ಪಳಿಸುತಿತ್ತು.   ನನ್ನಷ್ಟೇ ಆಸಕ್ತಿಯಿಂದ ಕುರಿಮರಿಯ ಬಾಲಲೀಲೆಯನ್ನು ನೋಡಲು ಕಣ್ಣರಳಿಸಿಕೊಂಡು ಬರುತ್ತಿದ್ದಳು ನನ್ನ ಚಿಕ್ಕ ಮುದ್ದು ತಂಗಿ.  ಹೀಗೊಂದು ದಿನ ಕಾಣದ ಹಾಗೆ ಅಪ್ಪನ ಜೇಬಿನಿಂದ ಕದ್ದ ಕಾಸಿನಿಂದ ಒಂದು ಚಿಕ್ಕ ಗಂಟೆಯನ್ನು ಕೊಂಡು ತಂದು  ಕುರಿಮರಿಯ ಕೊರಳಿಗೆ ಕಟ್ಟಿದೆ.  ಅದು ಚಂಗನೆ ನೆಗೆದಾಗ ಹೊಮ್ಮುತಿದ್ದ ಗಂಟೆಯ ಕಿಣಿ ಕಿಣಿ ಶಬ್ದ  ಕೇಳಿದಾಗ  ಎಂತಹುದೋ ಸಾರ್ಥಕ ಭಾವ ನನ್ನ ಮನದಲ್ಲಿ.


ಕ್ರಮೇಣ ಸ್ನೇಹಿತರ ಜೊತೆ ಆಟವಾಡುವುದನ್ನು ಬಿಟ್ಟು  ಕುರಿಮರಿಯ ಜೊತೆಯಲ್ಲಿಯೇ ನನ್ನ ಆಟವನ್ನು ಶುರುವಿಟ್ಟುಕೊಳ್ಳುತಿದ್ದೆ.    ದಿನಕಳೆದಂತೆ ಕುರಿಮರಿ ನನಗೆ ಹೊಂದಿಕೊಂಡು ಬಿಟ್ಟಿತೋ, ನಾನೇ ಅದಕ್ಕೆ ಹೊಂದಿಕೊಂಡು ಬಿಟ್ಟೆನೋ ಗೊತ್ತಿಲ್ಲ.   ನಾನು ಮನೆಯಿಂದ  ಹೊರಗಡೆ ಎಲ್ಲೇ ಹೋದರು ಹಿಂದಿಂದೆಯೇ ಬರುತ್ತಿತ್ತು.    ಶಾಲೆಗೇ ಹೋಗಬೇಕಾದರೆ ಅದನ್ನು ಅಗ್ಗದಿಂದ ಕಟ್ಟಿ ಹಾಕಿ ಬರಬೇಕಾಗಿತ್ತು.   ಇಲ್ಲವಾದರೆ ಶಾಲೆಯ ತನಕ ನನ್ನ ಹಿಂದೆಯೇ ಬಂದು ಬಿಡುತ್ತಿತ್ತು.   ಕೊನೆ ಕೊನೆಗೆ ನನಗೆ ಕುರಿಮರಿ ಎಷ್ಟು  ಇಷ್ಟವಾಗಿ ಹೋಯ್ತು ಎಂದರೆ,   ಅದು ಕೂಡ ನನ್ನ ಪಕ್ಕದಲ್ಲಿಯೇ ಚಾಪೆಯ ಮೇಲೆ ಮಲಗಬೇಕೆಂದು ಅಪ್ಪನ ಹತ್ತಿರ ಜಗಳವಾಡಿ ಮಲಗಿಸಿಕೊಂಡಿದ್ದೆ.    ಆದರೆ ನನ್ನ ಕುರಿಮರಿಯ ಒಂದು ಕೆಟ್ಟ ಅಭ್ಯಾಸ  ಎಂದರೆ ಯಾವಾಗ ಎಂದರೆ ಆವಾಗ ಪಿಕ್ಕೆ ಹಾಕಿ,  ಹುಚ್ಚೆ ಹುಯ್ದು ಬಿಡುತ್ತಿತ್ತು.    ಅದರಿಂದಾಗಿ ನಾನು ಹೊದ್ದುಕೊಳ್ಳುವ ಬೆಡ್ ಶೀಟ್ ಕೂಡ ಚುಂಗು ಚುಂಗು ವಾಸನೆ ಬರುವುದಕ್ಕೆ    ಶುರುವಾಗಿ ಮೈಮೇಲೆ ಹಾಕಿಕೊಳ್ಳುವುದಕ್ಕೆ ಬೇಸರವಾಗುತ್ತಿತ್ತು.    ಕುರಿಪಿಕ್ಕೆಗಳೆಲ್ಲ ನನ್ನ ಬೆಡ್ ಶೀಟ್ಗೆ ಅಂಟಿಕೊಂಡು ಬಿಡುತಿದ್ದವು.    ಅಮ್ಮ ದಿನವು ಬಯ್ಯುತ್ತಾ ನಾನು ಹಾಸಿ ಹೊದ್ದುಕೊಳ್ಳುವ ಬಟ್ಟೆಗಳನ್ನು ಹೊಗೆಯಲಿಕ್ಕೆ ಹಾಕುತಿದ್ದರು.   ಆಮೇಲೆ ನನಗೆ ಸಾಕಷ್ಟು ಬುದ್ಧಿವಾದವನ್ನು ಹೇಳಿ ಪಕ್ಕದ ಶೆಡ್ಡಿನಲ್ಲಿ ಅದಕ್ಕೆ ಮಲಗಲು ವ್ಯವಸ್ಥೆ ಮಾಡಿದ್ದರು.


ದಿನ  ಕಳೆದಂತೆ ಕುರಿಮರಿ  ದಷ್ಟಪುಷ್ಟವಾಗತೊಡಗಿತು.   ಆಮೇಲಾಮೇಲೆ  ಏಕೋ ಕಾಣೆ ನನ್ನ ಮಾತಿಗೆ ಸರಿಯಾಗಿ  ಮಾರ್ಯಾದೆಯನ್ನೇ ಕೊಡುತ್ತಿರಲಿಲ್ಲ.  ನನ್ನ ಮಾತೆ ಕೇಳುತ್ತಿರಲಿಲ್ಲ.  ತಿನ್ನುವುದೇ ಅದರ ಹವ್ಯಾಸವಾಗಿ ಹೋಗಿತ್ತು.   ಆದರೂ ಆಗೊಮ್ಮೆ ಹೀಗೊಮ್ಮೆ   ಬಂದು ತನ್ನ ಮುಖವನ್ನು ನನ್ನ ಕಾಲಿಗೆ ತಿಕ್ಕುತ್ತಾ ನಿಲ್ಲುತ್ತಿತ್ತು.    ಹೀಗೆ ಒಂದು ವರ್ಷ ಅದು ಹೇಗೋ ಕಳೆದು ಹೋಯಿತು.   ನಮ್ಮ  ಮನೆಯ ಹಿಂದೆ ಇದ್ದ  ಸಾಬಣ್ಣ ಆಗಾಗ ನಮ್ಮ ಕುರಿಯನ್ನೇ ದಿಟ್ಟಿಸಿ ನೋಡಿ,  ಮನಸಲ್ಲೇ ಏನೇನೋ ಲೆಕ್ಕ ಹಾಕುತ್ತಾ ಒಂದು  ನಿಮಿಷ ನಿಂತಿದ್ದು,  ತನ್ನ ಹಳೇ ಸೈಕಲ್ಲನ್ನು ಹತ್ತಿಕೊಂಡು ಹೋಗುತ್ತಿದ್ದ.  ಹೀಗೆಯೇ ಮತ್ತೆ ಕೆಲ ದಿನಗಳು ಉರುಳಿ ಹೋದವು.   ನಾನು ಮಾಮೂಲಿನಂತೆ ಶಾಲೆಯಿಂದ ಬಂದ ತಕ್ಷಣ ಕುರಿ ಮರಿಯ ಯೋಗಕ್ಷೇಮದ ಕಡೆ ನನ್ನ ಗಮನವನ್ನು ನೀಡುತ್ತಿದ್ದೆ.   ಸ್ವಲ್ಪ ಅದರ ಮೈ ಗಲೀಜು ಕಂಡರೂ ಅದಕ್ಕೆ ಸ್ನಾನ ಮಾಡಿಸಲೇಬೇಕು ನಾನು.  ಆ ವಿಷಯದಲ್ಲಿ ನಮ್ಮ ಕುರಿಮರಿ ನಾನು ಹೇಳಿದಂತೆ ಕೇಳುತಿತ್ತು.


ಆ ದಿನವಂತೂ,   ಸಾಬಣ್ಣ  ಯಾವುದೋ ನಿರ್ಧಾರಕ್ಕೆ ಬಂದವನಂತೆ  ನಮ್ಮ ಕುರಿಮರಿಯ ಬಳಿಗೆ ಬಂದು ಅದರ ತೂಕ ಅಳತೆ ಮಾಡುವವನಂತೆ ಅದನ್ನು ಮುಟ್ಟಿ ಮುಟ್ಟಿ ನೋಡುತ್ತಾ ಏನನ್ನೋ ಲೆಕ್ಕಾಚಾರ ಹಾಕುತಿದ್ದನು.  ನಾನು ಅದೇ ತಾನೆ ಶಾಲೆಯಿಂದ ಬಂದೆ  ” ಮರಿ ನಿಮ್ಮದು  ಅಪ್ಪಾ ಇನ್ನು ಬಂದಿಲ್ಲಾ ” ಎಂದೂ ಕೇಳಿದ.   ನಾನು, ”  ಇಲ್ಲಾ, ಸಂಜೆ ಆರು ಗಂಟೆಯ ಮೇಲೆ ಬರುತ್ತಾರೆ”  ಎಂದೂ ಹೇಳಿದೆ.    ಆಗ ಅಮ್ಮ ಪಾತ್ರೆ ತೊಳೆಯುತ್ತಾ ಬಚ್ಚಲು ಮನೆಯಲ್ಲಿದ್ದಳು.   ಸರಿ ಬಿಡು ಮಗ ಬೆಳಿಗ್ಗೇನೆ ಬರ್ತೀನಿ ಎಂದೂ ಹೇಳಿ ಹೊರಟು ಹೋದನು.   ಯಾವತ್ತು ಇಲ್ಲದವನು,    ಇವನ್ಯಾಕೆ ನಮ್ಮ ಅಪ್ಪನನ್ನು ಕೇಳಿದ  ಎಂದೂ ಯೋಚಿಸುತ್ತಾ  ಮನೆಯೊಳಗೇ ಹೋದೆ.


ಮಾರನೆಯ ದಿನ ಭಾನುವಾರ.   ಹೇಗಿದ್ದರೂ ಈ ದಿನ ಶಾಲೆಗೆ  ರಜಾ.   ಇನ್ನೊಂದಿಷ್ಟು ನಿದ್ದೆ ಮಾಡುವ ಎಂದೂ ಬೆಚ್ಚಗೆ ಕಂಬಳಿಯನ್ನು ಹೊದ್ದು ಮಲಗಿದ್ದೆ.   ನಮ್ಮ ಕುರಿ  ಮ್ಯಾ ಮ್ಯಾ  ಎಂದೂ ಇದ್ದಕ್ಕಿದ್ದಂತೆ ಅರಚುತ್ತಿರುವುದು ಕೇಳಿಸಿತು.     ನಾನು ಇನ್ನು ಅದರ ಹತ್ತಿರ ಬಂದಿಲ್ಲ ಎಂದೂ ಕಿರುಚುತ್ತಿರಬಹುದು  ಎಂದುಕೊಂಡು,   ಆಮೇಲೆ ಹೋಗಿ ಅದರ ಕ್ಷೇಮ ವಿಚಾರಿಸಿದರಾಯ್ತು  ಎಂದು  ಹಾಗೆಯೇ ಮಲಗಿದ್ದೆ.   ಕ್ರಮೇಣ ಅದರ ದನಿ ಕೇಳದಂತಾಯಿತು.   ಹಾಗೆ ನಿದ್ದೆ ಹೋಗಿದ್ದೆ.   ಅಮ್ಮ ಬಂದು, ಗಂಟೆ ಒಂಭತ್ತಾಯಿತು  ಹೇಳು ಮೇಲಕ್ಕೆ ಎಂದು ಎಬ್ಬಿಸಿದಾಗಲೇ ಎಚ್ಚರವಾಗಿದ್ದು.  ಸರಿ ಮಾಮೂಲಿನಂತೆ ನಮ್ಮ ಕುರಿಯನ್ನು ನೋಡುವುದಕ್ಕೆ ಶೆಡ್ಡಿಗೆ ಹೋದೆ.  ಅದು ಅಲ್ಲಿರಲಿಲ್ಲ.  ಅಮ್ಮ ಮೇಯುವುದಕ್ಕೆ ಬಿಟ್ಟಿದ್ದಾಳೇನೋ ಎಂದು ಕಾಂಪೌಂಡ್ ಸುತ್ತ ಮುತ್ತೆಲ್ಲ ನೋಡಿದೆ.  ಕುರಿ ಕಾಣಿಸಲಿಲ್ಲ.  ಗಾಬರಿಯಿಂದ ಓಡಿ ಬಂದು ಅಮ್ಮನಿಗೆ ಕುರಿ ಕಾಣಿಸುತ್ತಿಲ್ಲವೆಂದು  ಹೇಳಿದೆ.    ” ಹಿಂದಿನ ಮನೆಯ ಸಾಬರು ಬೆಳಿಗ್ಗೇನೆ ಅದನ್ನು ನಿಮ್ಮ ಅಪ್ಪನ ಬಳಿ ವ್ಯಾಪಾರ ಮಾಡಿಕೊಂಡು ಎಳೆದುಕೊಂಡು ಹೋದ ಕಣೋ” ಎಂದರು.    ಅಮ್ಮ ಹಾಗೆಂದಾಕ್ಷಣ ನನಗೆ ಅಳು ತಡೆಯದಾಯಿತು.   ಅಳುತ್ತಲೇ  ” ಆ ಸಾಬರು ಅವತ್ತಿನಿಂದ ನಮ್ಮ ಕುರಿಯನ್ನೇ  ನೋಡುತ್ತಿದ್ದ.  ಅವನಿಗೆ ಏಕೆ ಕೊಟ್ಟಿರಿ ” ಎಂದು ಕೇಳಿದೆ.   ಅದಕ್ಕೆ ಅಮ್ಮ ” ಅವನು ಕುರಿಗಳನ್ನು ಕೊಂಡುಕೊಂಡು ಹೋಗಿ,   ಅವುಗಳನ್ನು ಕೊಯ್ದು  ವ್ಯಾಪಾರ ಮಾಡುತ್ತಾನೆ.    ಅದಕ್ಕೆ ನಮ್ಮ ಕುರಿಯನ್ನು ವ್ಯಾಪಾರ ಮಾಡಿಕೊಂಡು ಹೋದಾ ಕಣೋ”  ಎಂದರು.      ಆಗ ನಾನು ಸಿಟ್ಟಿನಿಂದ ಅಪ್ಪನ ಬಳಿ ಹೋಗಿ ” ನೀವು ಕುರಿಯನ್ನು ಅವನಿಗೆ ಏಕೆ ಮಾರಿದಿರಿ.     ಅವನು ಅದನ್ನು ಕೊಂದು ಬಿಡುತ್ತಾನೆ.   ನಡೀರಿ ಅದನ್ನು ವಾಪಸ್ಸು ತರೋಣ ” ಎಂದು ಹೇಳಿದೆ.  ಅದಕ್ಕೆ ಅಪ್ಪಾ ಸಮಾಧಾನ ಮಾಡುವ ದನಿಯಲ್ಲಿ,  ” ಮಗು,  ಕುರಿಯನ್ನು ಸಾಕುವುದೇ  ತಿನ್ನುವುದಕ್ಕೆ.   ಅದನ್ನು ಕೊನೆಯವರೆಗೆ ನಾವು ಮೇಯಿಸಿಕೊಂಡು ಇಟ್ಟುಕೊಳ್ಳಲು ಹೋದರೆ ನಮಗೆ ಅದರಿಂದ ಯಾವ ಉಪಯೋಗವು ಆಗುವುದಿಲ್ಲ.  ಅದನ್ನು  ಬೆಳಸಲು ನಾವು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗುವುದಿಲ್ಲ.    ಅದಕ್ಕೆ ಆ ಸಾಬರಿಗೆ ಮಾರಿದೆ.”  ಎಂದು ಹೇಳಿದರು.     ಅಪ್ಪನ ಮಾತುಗಳು  ನನಗೆ ಸಮಾಧಾನತರಲಿಲ್ಲ.    ” ಅದು ಇಲ್ಲೇ ಸುತ್ತಾ ಮುತ್ತಾ ಹುಲ್ಲು ಮೇಯ್ದು ಕೊಂಡಿತ್ತು.  ನಮಗೆ ಅದರಿಂದ ಏನು ತೊಂದರೆ ಆಗಿರಲಿಲ್ಲ.   ಅದು ಕೊನೆಯತನಕ ನಮ್ಮ ಜೊತೆಯೇ ಇರಲಿ”.   ನಡಿಯಪ್ಪ ಅದನ್ನು ವಾಪಸ್ಸು ತರೋಣ ಎಂದು ಹೇಳಿದೆ.   ಆದರೆ ಅಪ್ಪನ ಮನಸ್ಸು ಕರಗಲಿಲ್ಲ.   ಅವನಾಗಲೇ ಆ ಕುರಿಯನ್ನು ಕೂದಿರಬೇಕು.  ನಿನಗೆ ಇದೆಲ್ಲ ಅರ್ಥ ಆಗೋಲ್ಲಾ    ಹೋಗು ಆಟವಾಡಿಕೋ,   ಎಂದು ಹೇಳಿ ಹೊರಗೆ ಹೊರಟುಹೋದರು.


ನಾನು ಅಳುತ್ತಾ ತಿಂಡಿಯನ್ನು ಸಹ ತಿನ್ನದೇ ಕಂಪೌಂಡ್ ಮೂಲೆಯಲ್ಲಿ  ಕುಳಿತಿದ್ದೆ.   ನನ್ನ ತಂಗಿಯೂ ಸಹ ನಾನಿದ್ದಲ್ಲಿಗೆ ಬಂದು ನನ್ನ ನೋವಿಗೆ ಸ್ಪಂಧಿಸುವವಳಂತೆ ನನ್ನ ಮುಖವನ್ನೇ ನೋಡುತ್ತಾ ಸಪ್ಪಗೆ ಕುಳಿತಿದ್ದಳು.  ಅಷ್ಟರಲ್ಲಿ ಕುರಿ ವ್ಯಾಪಾರ ಆಗಿಹೋಗಿದ್ದ ವಿಷಯ ಅವಳಿಗೂ ತಿಳಿದಿತ್ತು.    ಅಮ್ಮ ಬಂದು ಸಮಾಧಾನ ಮಾಡಿದರು ನನ್ನ ಮನದೊಳಗಿನ ಅಳು ನಿಂತಿರಲಿಲ್ಲ.   ಆಗ ನಾನೊಂದು ನಿಶ್ಚಯಕ್ಕೆ ಬಂದೆ.   ಅಪ್ಪಾ ನನಗೆ ಹೊಡೆದರು ಸರಿಯೇ  ಆ ಕುರಿಯನ್ನು  ಆ ಸಾಬಣ್ಣನಿಂದ ಎಳೆದುಕೊಂಡು ಬರಬೇಕೆಂದು  ತೀರ್ಮಾನಿಸಿ  ಅವನ ಅಂಗಡಿಯ ಕಡೆ ಓಡಿದೆ.  ನಾನು ಹೋಗುವುದರೊಳಗೆ ಅದರ ಕತ್ತನ್ನು ಕತ್ತರಿಸಿ,  ದೇಹದ  ಮೇಲಿದ್ದ ಚರ್ಮವನ್ನು ಸುಲಿಯುತಿದ್ದ.  ಅದನ್ನು ನೋಡಿ ನನ್ನ ಕರುಳು ಕಿವುಚಿದ ಹಾಗಾಯ್ತು.   ನನ್ನ ಚರ್ಮವನ್ನೇ ಸುಲಿಯುತಿದ್ದಾನೇನೋ ಎಂಬಂತೆ ಭಾಸವಾಗತೊಡಗಿತು.   ಅಲ್ಲಿ ನಿಂತು ಆ ದೃಶ್ಯವನ್ನು ನೋಡಲಾಗಲಿಲ್ಲ.  ಅಲ್ಲಿಂದ  ಎಲ್ಲಿಗೆ ಎಂಬ ಅರಿವಿಲ್ಲದವನಂತೆ ಓಡಿದೆ.   ವಾಸ್ತವಕ್ಕೆ ಬಂದಾಗ  ನಮ್ಮ ಶಾಲೆಯ ಪಕ್ಕದಲ್ಲಿದ್ದ ಎತ್ತರವಾದ ಬಂಡೆಯ ಮೇಲೆ ನಿಂತಿದ್ದೆ.  ಸಂಜೆಯವರೆಗೂ ಅದರ ಮೇಲೆಯೇ ಕುಳಿತಿದ್ದೆ.    ಆದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ.   ಕತ್ತಲು ಕವಿಯಲಾರಂಭಿಸಿತು  ಮೆಲ್ಲನೆ ಮನೆಯ ಕಡೆ ಹೊರಟೆ.


ಅಪ್ಪಾ ಇನ್ನು ಬಂದಿರಲಿಲ್ಲ.  ” ಬೆಳಿಗ್ಗೆ ಹೋದವನು.  ಎಲ್ಲೋ ಹೊರಟುಹೋಗಿದ್ದೆ.  ಬೆಳಿಗ್ಗೆ ತಿಂಡಿಯನ್ನು ಸಹ  ತಿಂದಿರಲಿಲ್ಲ.   ಆಟ ಆಡ್ತಾಯಿದ್ದರೆ ಎಲ್ಲವನ್ನು ಮರೆತು ಬಿಡ್ತೀಯ.  ಕೈ ತೊಳೆದುಕೋ.   ಊಟ ಹಾಕಿಕೊಡ್ತೀನಿ” ಅಂದಳು ಅಮ್ಮ.  ನನಗೆ ಊಟ ಮಾಡುವುದಕ್ಕೆ ಇಷ್ಟವಿಲ್ಲದಿದ್ದರೂ ಸಹ ಅಮ್ಮನ ಬಲವಂತಕ್ಕೆ ಕೈ ತೊಳೆದುಕೊಂಡು ಬಂದು ಊಟಕ್ಕೆ ಕುಳಿತೆ.   ಈ ದಿನ ಮಾಂಸದ ಅಡಿಗೆಯೆಂದು   ವಾಸನೆಯಿಂದಲೇ ತಿಳಿಯುತ್ತಿತ್ತು.   ಮೊದಲು ಅನ್ನ ಹಾಕಿಕೊಂಡು ಬಂದು ತಟ್ಟೆಗೆ ಸುರಿದಳು ಅಮ್ಮ.   ಮತ್ತೊಂದು ಪಾತ್ರೆಯಲ್ಲಿ ತಂದಿದ್ದ  ಮಾಂಸದ ಸಾರನ್ನು  ಸೌಟಿನಿಂದ ಸ್ವಲ್ಪ ಸ್ವಲ್ಪವೇ ಹಾಕುತಿದ್ದರು.   ನಾನು ಮೌನವಾಗಿದ್ದೆ.   ” ಸಾಕೇನೋ” ಎಂದಳು.   ” ಅಮ್ಮ ಈ ಮಾಂಸವನ್ನು  ಎಲ್ಲಿಂದ  ಕೊಂಡು ತಂದೆ”   ಎಂದು ಕೇಳಿದೆ.     ”ನಮ್ಮ ಕುರಿಯನ್ನು ತಗೊಂಡು ಹೋಗಿದ್ದನಲ್ಲ ಆ ಸಾಬಣ್ಣ ತಂದುಕೊಟ್ಟಿದ್ದು”  ಹೇಳಿ ಕೋಣೆಗೆ  ಹೋದಳು ಅಮ್ಮ.    ಅಮ್ಮನ ಮಾತು ಕೇಳಿ ವಾಂತಿ ಬರುವ ಹಾಗಾಯಿತು.   ಆದರೆ ಹೊಟ್ಟೆಯಲ್ಲಿ ಏನು ಇಲ್ಲದ ಕಾರಣ ವಾಂತಿಯಾಗಲಿಲ್ಲ.   ತಟ್ಟೆಗೆ ಕೈ ತೊಳೆದು ಹೊರಗೆ ಬಂದು ಬಿಟ್ಟೆ.
* * * * * * * *

No comments:

Post a Comment