ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Monday, April 16, 2012

----- ವಿಪರ್ಯಾಸ -----

'' ವಿಶ್ವ,  ನಾಳೆ ಹೆಣ್ಣು ನೋಡೋದಿದೆ ಬರ್ತಿಯೇನೋ...?''  ಕೇಳಿದೆ.  ತಕ್ಷಣ ವಿಶ್ವ ಯಾವ ಪ್ರತಿಕ್ರಿಯೆಯನ್ನು ನೀಡಲಿಲ್ಲ.  
ಯಾಕೋ ವಿಶ್ವ, ನನ್ನ ಮಾತಿಗೆ ಏನು ಹೇಳಲೇ ಇಲ್ಲಾ. 
'' ಮದುವೆ ಆಗ್ಲೇ ಬೇಕಾ...?'' ಆಶ್ಚರ್ಯದಿಂದ ಕೇಳಿದ ವಿಶ್ವ.    ಯಾಕೋ ಹಾಗಂತೀಯ....! ನಾನು ಮದುವೆ ಆಗ್ಬಾರ್ದಾ ...! ?
'' ಹಾಗಲ್ಲಾ ಸತ್ಯ,  ಇನ್ನು ಎರಡು ವರ್ಷ ಮದುವೆ ಆಗುವುದಿಲ್ಲ ಎಂದು ಹೇಳಿದ್ದಲ್ಲ ಅದಕ್ಕೆ ಹಾಗೆ ಕೇಳಿದೆ'' ಎಂದನು ವಿಶ್ವ. 
'' ಹೌದು ಕಣೋ,  ಹಾಗೆಯೇ ಅಂದುಕೊಂಡಿದ್ದೆ.  ನಾನು ಈ  ಮೊದಲೇ ನಿನಗೆ ಹೇಳಿದ್ದೆ.   ನಾನು ಮದುವೆಯಾಗುವುದಾದರೆ ವಿಧವೆಯನ್ನೇ ಎಂದು.  ಆದರೆ ಸ್ವಲ್ಪ ಬದಲಾವಣೆ.  ನಾನು ಈಗ ಮದುವೆಯಾಗಲು ಬಯಸುತ್ತಿರುವ ಹುಡುಗಿ ಗಂಡನಿಂದ ತುಂಬಾ ಹಿಂಸೆಯನ್ನು ಅನುಭವಿಸಿ,  ಜೀವನದಲ್ಲಿ  ನೊಂದಿರುವ  ವಿಚ್ಚೇಧಿತೆಯನ್ನು   ಮದುವೆಯಾಗುವ ತೀರ್ಮಾನ ಮಾಡಿದ್ದೇನೆ.'' ಎಂದೇ.
ವಿಶ್ವನಿಗೆ ಏನನ್ನಿಸಿತೋ ಗೊತ್ತಿಲ್ಲ.   ಸ್ವಲ್ಪ ಕಾಲ ಅವಕ್ಕಾಗಿ ಕುಳಿತುಕೊಂಡನು.   ಅವನನ್ನು ಅಲ್ಲಾಡಿಸಿ ನಾನೇ ವಾಸ್ತವಕ್ಕೆ ಕರೆತರಬೇಕಾಯಿತು.  
''  you are great  ಕಣೋ ಸತ್ಯ.  ನನ್ನ ಸ್ನೇಹಿತ ಇಷ್ಟೊಂದು ವಿಶಾಲ ಮನೋಭಾವನೆ ಹೊಂದಿದ್ದಾನೆ ಎಂದು ತಿಳಿದಿರಲಿಲ್ಲ ನೋಡು '' ಎಂದನು ಆಶ್ಚರ್ಯವಾಗಿ.
ಅದೆಲ್ಲ ಇರಲಿ ಬಿಡು.   ನಾಳೆ ನಾನು ನೀನು ಮಾತ್ರ ಹೆಣ್ಣಿನ ಮನೆಗೆ ಹೋಗುವುದು.  ಆಮೇಲೆ ಮನೆಯವರು ಬಂದು ಹೋಗುತ್ತಾರೆ ಎಂದು ಹೇಳಿದೆ.  
'' ಸರಿ ಬಿಡೋ ಸತ್ಯ..... ನಾಳೆ ಹೇಗೋ ಭಾನುವಾರ ಬಿಡುವಾಗಿರ್ತೀನಿ ''   ಎಂದು ಹೇಳಿದ ವಿಶ್ವ.   ಮಿಸ್ ಮಾಡಬೇಡ ಎಂದು ಮತ್ತೊಮ್ಮೆ ಎಚ್ಚರಿಸಿ ಮನೆ ಕಡೆ ಹೊರಟೆ.  
                       ++++        ++++       ++++
 ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಕಾರಿನಲ್ಲಿ ಶ್ರೀನಗರಕ್ಕೆ ಹೊರಟೆವು.    ನಮ್ಮ ತಂದೆಗೆ ಪರಿಚಯವಿದ್ದ ಮ್ಯಾರೇಜ್ ಬ್ರೋಕರ್ ಜಯಣ್ಣ  ಶ್ರೀನಗರ ಬಸ್ ನಿಲ್ದಾಣದಲ್ಲೇ ಕಾಯುತಿದ್ದ.   ಅವನನ್ನು ಕಾರಿಗೆ ಹತ್ತಿಸಿಕೊಂಡು, ಅವನು ಹೇಳಿದ ವಿಳಾಸವನ್ನು ತಲುಪಿದೆವು.   ಈ ಮೊದಲೇ ಜಯಣ್ಣ ಫೋನ್ ಮಾಡಿದ್ದ ಅಂತ ಕಾಣುತ್ತದೆ ..., ಸುಮಾರು ಐವತ್ತು ವರ್ಷ ಆಜುಬಾಜಿನ ಹೆಂಗಸರೊಬ್ಬರು  ಬಾಗಿಲಲ್ಲೇ ನಮ್ಮನ್ನು ಸ್ವಾಗತಿಸಿದರು.  ನನ್ನ ಹೃದಯದ ಬಡಿತವಂತು  ಕಿವಿಗೆ ಕೇಳಿಸುವಂತೆ ಬಡಿದುಕೊಳ್ಳುತ್ತಿತ್ತು.   ಸ್ವಲ್ಪ ಸಮಯದ ಬಳಿಕ,   ಎಲ್ಲೋ ಹುಡುಗಿ ಎಂದು  ಕಣ್ಸನ್ನೆಯಲ್ಲಿಯೇ ಕೇಳಿದ ವಿಶ್ವ.   ನಾನು ಜಯಣ್ಣನತ್ತಾ  ನೋಡಿದೆ.  ಅರ್ಥವಾದವನಂತೆ  
'' ಅಮ್ಮ , ನಿಮ್ಮ ಮಗಳನ್ನು ಕರೆಯಿರಿ'' ಎಂದು ಕೀರಲು ದನಿಯಲಿ ಹೇಳಿದನು.   ಬರ್ತಿದ್ದಾಳೆ...ಹಿಂದೆಯೇ ಮನೆಯಾಕೆಯ ದನಿ  ಒಳಗಿನಿಂದ ತೂರಿ ಬಂತು.     ಶ್ವೇತಾ... ಮೊದಲು ನೀರು ತೆಗೆದುಕೊಂಡು ನಡಿಯಮ್ಮ ಎಂದು ಹೇಳುತ್ತಾ,  ಹುಡುಗಿಯನ್ನು ಕರೆದುಕೊಂಡು  ನಮ್ಮನ್ನು ಸ್ವಾಗತಿಸಿದ  ಹೆಂಗಸು ಬಂದರು.  ಹುಡುಗಿ ಬರುತಿದ್ದ ಹಾಗೆ ನನ್ನ ಮೈ ಬೆವರುವುದಕ್ಕೆ ಶುರುವಾಯಿತು.  ಮನಸ್ಸಿನಲ್ಲಿಯೇ ಧೈರ್ಯ ತಂದುಕೊಂಡು  ಮುಖದ ಮೇಲೆ ಬಲವಂತದ ಮುಗುಳು ನಗೆಯನ್ನು ತಂದುಕೊಂಡು ಕುಳಿತೆ.  ವಿಶ್ವ ನನ್ನ ಎದಿರುಗಡೆ  ಕೊನೆಯಲ್ಲಿ  ಕುಳಿತಿದ್ದನಾದ್ದರಿಂದ ಬರುತ್ತಿರುವ ಹೆಣ್ಣಿನ ಮುಖ ಅವನಿಗೆ ಕಾಣಿಸುತ್ತಿರಲಿಲ್ಲ. 
ನನ್ನ  ಹತ್ತಿರಕ್ಕೆ ಬಂದು ನಡು ಬಗ್ಗಿಸಿ ಟೀಪಾಯಿಯ ಮೇಲೆ ನೀರನ್ನಿಡುತ್ತಿದ್ದ ಹುಡುಗಿಯನ್ನು  ಕಣ್ಣ ತುಂಬಾ ನೋಡಿದೆ.  ಲಕ್ಷಣವಾಗಿ ಚನ್ನಾಗಿದ್ದಾಳೆ ಅನ್ನಿಸಿತು.  ನನ್ನೆಡೆಗೆ ಒಂದು ಕಿರುನಗೆಯನ್ನು ಹರಿಸಿದಳು. ಆಗ ನಾನು ನಕ್ಕೆನೋ ಇಲ್ಲಾ ಪೆಚ್ಚಾದೆನೋ   ತಿಳಿಯಲಿಲ್ಲ. 

ಸಾವರಿಸಿಕೊಂಡು.....  ಆತ್ಮೀಯ ಮಿತ್ರ  ಎಂದು ವಿಶ್ವನೆಡೆಗೆ  ಕೈ ತೋರಿದೆ.    ಆಕೆ ಹಿಂದೆ ತಿರುಗಿ ವಿಶ್ವನ ಮುಂದೆ ನೀರಿನ ಲೋಟವನ್ನಿಡಿದಳು.   ಅವಳನ್ನು  ನೋಡುತಿದ್ದ ಹಾಗೆ ವಿಶ್ವ ಗರಬಡಿದವನಂತೆ  ಕುಳಿತಿದ್ದನು.     ವಿಶ್ವನನ್ನು ನೋಡುತಿದ್ದ ಹಾಗೆ ಅವಳು ಕೂಡ ಒಂದು ಕ್ಷಣ ಗೊಂಬೆಯಂತೆ ನಿಂತುಬಿಟ್ಟಳು.  ಆದರೆ ಆಕೆಯ ಹಿಂಬದಿಯಲ್ಲಿ ನಾನು ಕುಳಿತಿದ್ದರಿಂದ ಅವಳ ಮುಖದ ಭಾವನೆಗಳನ್ನು  ಕಾಣಲು  ಸಾಧ್ಯವಾಗಲಿಲ್ಲ.  
'' ಒಳಗೆ ಹೋಗಿ ತಿಂಡಿ ತೆಗೆದುಕೊಂಡು ಬಾರಮ್ಮ '' ಎಂದು ಜಯಣ್ಣ ಎಚ್ಚರಿಸಿದಾಗ,  ಸಾವರಿಸಿಕೊಂಡು ಲಗುಬಗೆಯಿಂದ ಹುಡುಗಿ ಒಳಗೆ ಹೋದಳು.   ಆಗ ವಾಸ್ತವಕ್ಕೆ ಬಂದ ವಿಶ್ವ,  ಯಾರಿಗೋ ಫೋನ್ ಮಾಡಿ ಬರುತ್ತೇನೆಂದು ಹೇಳಿ ಮೊಬೈಲ್ ಗುಂಡಿ ಒತ್ತುತ್ತಾ ಹೊರಗೆ ಹೋದನು.  

ಕೆಲ ನಿಮಿಷಗಳ ಬಳಿಕ  ಒಳಗಿನ ಕೋಣೆಯಿಂದ ಹೊರಬಂದ ಮತ್ತೊಬ್ಬ ಹೆಂಗಸು,  ನಾನು ಹುಡುಗಿಯ  ತಾಯಿ ಎಂದು ಪರಿಚಯಿಸಿಕೊಂಡರು.   ಅವರೇ ಮುಂದುವರಿದು.... ಆಗಲೇ ಹುಡುಗಿಯೊಂದಿಗೆ ಬಂದಿದ್ದಾಕೆ  ನನ್ನ ದೂರದ ಸಂಬಂಧಿ.   ಇನ್ನೂ  ಮನೆಯವರು ಹಾಗೂ ನನ್ನ ಮಗ ಯಾವುದೋ ಕೆಲಸದ ಮೇಲೆ ಮಂಗಳೂರಿಗೆ ಹೋಗಿದ್ದಾರೆ ಎಂದರು.  ಅಷ್ಟರಲ್ಲಿ  ತಿಂಡಿಯೊಂದಿಗೆ ಪ್ರತ್ಯಕ್ಷಳಾದಳು ಹುಡುಗಿ.   ಆದರೆ ಆಕೆಯ ಮುಖದಲ್ಲಿ ಮೊದಲಿನ ಉತ್ಸಾಹ ಕಂಡುಬರಲಿಲ್ಲ.  ಶಾಸ್ತ್ರಕ್ಕೆ ಎಂಬಂತೆ ಚೂರು ಸಿಹಿಯನ್ನು ತಿಂದೆ.      ಇನ್ನು ಹೆಚ್ಚು ಹೊತ್ತು ಕುಳಿತುಕೊಳ್ಳಲು  ಮನಸ್ಸು ಬರಲಿಲ್ಲ.  ಹುಡುಗಿಯಂತೂ ಒಪ್ಪಿಗೆಯಾಗಿದ್ದಳು.  ಮುಂದಿನವಾರ ಮನೆಯವರನ್ನು ಕಳುಹಿಸುತ್ತೇನೆ ಎಂದು ಹೇಳಿ ಹೊರಗಡೆ ಬಂದೆ.   ಸಿಗರೇಟ್ ಸೇದುತ್ತಾ ನಿಂತಿದ್ದ ವಿಶ್ವ  ನಮ್ಮನ್ನು ನೋಡಿ ಹತ್ತಿರ ಬಂದು ಕಾರನ್ನೇರಿದನು.    ಕಾರಿನಲ್ಲಿ ಯಾರು ಮಾತನಾಡಲಿಲ್ಲ.  ಕೊನೆಗೆ  ಜಯಣ್ಣನೆ '' ಸತ್ಯಪ್ಪಾ,  ನಿಮಗೆ ಹುಡುಗಿ ಹಿಡಿಸಿದಳ ''  ಎಂದನು.   ನಾನು ಇಷ್ಟವಾದಳೆಂದು ತಲೆಯಾಡಿಸಿ,  ಪಕ್ಕಕ್ಕೆ ತಿರುಗಿ  '' ವಿಶ್ವ ನಿನಗೆ ಏನನ್ನಿಸಿತೋ''  ಕೇಳಿದೆ.   ವಿಶ್ವ ಏನನ್ನು ಮಾತನಾಡದೆ  ಗಂಭೀರವಾಗಿ ಕುಳಿತಿದ್ದ.     ಶ್ರೀನಗರ ಬಸ್ ನಿಲ್ದಾಣ ಬಂತು.  ಜಯಣ್ಣನ ಕೈಗೆ ಐದುನೂರರ ಒಂದು ನೋಟನ್ನು ತುರುಕಿ,  ಫೋನ್ ಮಾಡುತ್ತೇನೆ ಎಂದು ಹೇಳಿ,  ಮುಂದೆ ಹೊರಟೆ.   ಮನೆಗೆ ಹೋಗುವವರೆಗೂ ವಿಶ್ವ ಏನನ್ನು ಮಾತನಾಡಲಿಲ್ಲ. 
                                +++   +++   +++    
ಮನೆಯಲ್ಲಿ ಕುಳಿತುಕೊಂಡ ಮೇಲೆ  ಮತ್ತೆ ಕುತೂಹಲದಿಂದ ಕೇಳಿದೆ '' ಚನ್ನಾಗಿದ್ದಾಳೇನೋ''
'' ಚಂದಾಗಿದ್ದಾಳೆ '' ಎಂದನು ಗಂಭೀರವಾಗಿ.   ಆ ಕ್ಷಣದಲ್ಲಿ ಅವನ ಮುಖದ ಮೇಲೆ   ನೋವಿನ ನೆರಳೊಂದು ಸುಳಿದು ಮರೆಯಾಯಿತು ಅನ್ನಿಸಿತು.  
ವಿಶ್ವ, ನಿಜ ಹೇಳೋ...ನೀನು ಬೆಳಿಗ್ಗೆ  ಹೊರಟಾಗ ಎಷ್ಟೊಂದು ಲವಲವಿಕೆಯಿಂದ ಇದ್ದೇ.  ಆದರೆ ಹುಡುಗಿಯನ್ನು ನೋಡಿದ ತಕ್ಷಣ,   ನಿನ್ನ ಮುಖದಲ್ಲಿ  ಏನೋ ಬದಲಾವಣೆಯಾಯ್ತು.  ಅದನ್ನು  ನಾನು ಗಮನಿಸಿದೆ.    ಮೊದಲೇ ಹುಡುಗಿ ಪರಿಚಯ ಏನಾದರು ಇತ್ತಾ...? ಕುತೂಹಲದಿಂದ ಕೇಳಿದೆ.  
'' ಸ್ವಲ್ಪ ಇರು ''  ಎಂದು  ಹೇಳಿ,   ಒಳಗಡೆಯಿಂದ ಫೋಟೋ ಆಲ್ಬಮ್ ಒಂದನ್ನು ತಂದು  ಕೈಗಿತ್ತು,  ಸಿಗರೇಟಿನ ತುದಿಗೆ  ಬೆಂಕಿ ಹಚ್ಚಿದನು ವಿಶ್ವ.  
ಅದರಲ್ಲಿದ್ದ ಫೋಟೋಗಳನ್ನು ನೋಡುತ್ತಿದ್ದ ಹಾಗೆ  ನಂಬಲು ಸಾಧ್ಯವಾಗಲಿಲ್ಲ.    ಅದು ವಿಶ್ವ ಹಾಗು ಈಗ ತಾನೆ ನೋಡಿಕೊಂಡು ಬಂದ ಹುಡುಗಿಯ  ಮದುವೆಯ ಫೋಟೋಗಳಾಗಿದ್ದವು....!!
ಒಂದು ಕ್ಷಣ  ಏನು ಮಾತನಾಡಬೇಕೆಂದು ತೋಚಲಿಲ್ಲ.   
ವಿಶ್ವ... ಏನೋ ಇದೆಲ್ಲಾ....!  ಅಯೋಮಯವಾಗಿ ಕೇಳಿದೆ. 

'' ಅದು ನನ್ನ ಹಾಗೂ ಶ್ವೇತಾಳ ಮದುವೆಯ ಚಿತ್ರಗಳು  ನೀನೆ ನೋಡುತಿದ್ದಿಯಲ್ಲ '' ಎಂದನು ವಿಷಣ್ಣತೆಯಿಂದ.    ಏನು ಹೇಳಬೇಕೆಂದು ತಿಳಿಯಲಿಲ್ಲ.  ಸುಮ್ಮನೆ ಅವನ ಮುಖವನ್ನು ನಿರ್ಭಾವುಕತೆಯಿಂದ ನೋಡುತ್ತಾ ಕುಳಿತು ಬಿಟ್ಟೆ.   ವಿಶ್ವನೇ ಮುಂದುವರಿದು...

'' ಹೌದು ಸತ್ಯ.   ಅವಳೇ ನನ್ನ ಹೆಂಡತಿ.   ಆದರೆ ಈಗ ಅವಳು ನನ್ನ ಹೆಂಡತಿಯಲ್ಲ.   ಮದುವೆಯಾಗಿ ಒಂದೂವರೆ ವರ್ಷವಾಯ್ತು.    ಮದುವೆಯನ್ನು ಸರಳವಾಗಿ ಮಾಡಿಕೊಂಡೆ.  ಹಾಗಾಗಿ ಸರಿಯಾಗಿ ಯಾರಿಗೂ ತಿಳಿಸಿರಲಿಲ್ಲ.  ನೀನಂತು   ಕಂಪನಿಯ ಕೆಲಸದ ಮೇಲೆ ಬಾಂಬೆಯಲ್ಲಿ ನೆಲಸಿದ್ದೆ.   ನೀನು ಮತ್ತೆ ಬೆಂಗಳೂರಿಗೆ ಬರುವಷ್ಟರಲ್ಲಿ,  ನನ್ನ ಮದುವೆ ವಿಚ್ಚೇಧನದಲ್ಲಿ ಪರ್ಯವಸಾನವಾಗಿತ್ತು''    ವಿಶ್ವನ ಮಾತು ಕೇಳಿ ಮತ್ತಷ್ಟು ಗೊಂದಲಕ್ಕೊಳಗಾದೆ.

ಅದೇ ವಿಷಣ್ಣತೆಯಿಂದ ವಿಶ್ವ ಮುಂದುವರಿಸಿದ  '' ಯಾರೋ ಹೀಗೆ ಮದುವೆಯ ಬ್ರೋಕರ್ ಒಬ್ಬ ಬಂದು  ಅವಳನ್ನು ತೋರಿಸಿದ.    ಈಗ ನಿನಗಾದಂತೆ   ಮೊದಲ ಸಲಕ್ಕೆ ನನಗೂ ಇಷ್ಟವಾದಳು.   ಅಪ್ಪ ಅಮ್ಮ ಕೂಡ ಒಪ್ಪಿದರು.   ಯಾವುದೇ ವರೋಪಚಾರವಿಲ್ಲದೆ ಸರಳವಾಗಿಯೇ  ಮದುವೆಯಾದೆ.   ಮದುವೆಯಾದ ಮೇಲೆ,  ಶಾಸ್ತ್ರದಂತೆ ಹುಡುಗಿಯನ್ನು  ಹಳ್ಳಿಗೆ ಕರೆದುಕೊಂಡು ಹೋದೆ.   ಮನೆಯ ಬಳಿ ಇಳಿಯುತಿದ್ದಾಗ  ಅವಳ ಬಾಯಿಂದ ಬಂದ  ಮೊದಲ ಮಾತು '' ಏನ್ರೀ,...   ನಿಮ್ಮ ಊರು ಇಷ್ಟೊಂದು ಕೊಳಕಾಗಿದೆ.   ಸರಿಯಾದ ರಸ್ತೆಯಿಲ್ಲ.  ಎಲ್ಲೆಲ್ಲು ದೂಳು.    ಇನ್ನು  ಈ ನಿಮ್ಮ ಮನೆಯೋ ಈಗಲೋ ಆಗಲೋ ಮುರಿದು ಬೀಳುವ ಹಾಗಿದೆ ಎಂದಳು.''   ಅವಳು ಅಷ್ಟೊಂದು ಒರಟಾಗಿ ಮಾತನಾಡುತ್ತಾಳೆಂದು   ನಾನು ತಿಳಿದಿರಲಿಲ್ಲ.  ಮೌನವಾಗಿರುವಂತೆ ಸೂಚಿಸಿ ರೂಮಿನತ್ತಾ  ಕೈತೋರಿದೆ.       ಅವಳಿದ್ದ ಎರಡು ದಿನಗಳು ಯಾವುದೇ ಮಾತು  ಕಥೆಯಿಲ್ಲದಂತೆ ಕರಗಿಹೋದವು.    ಹೊಸ ಪರಿಸರವಾದುದರಿಂದ  ಅವಳು ಹೊಂದಿಕೊಳ್ಳಲು ಇನ್ನು ಸ್ವಲ್ಪ ದಿನಗಳು ಬೇಕಾಗುತ್ತದೆಂದು ಸುಮ್ಮನಾದೆ.   ಸಂಪ್ರದಾಯದಂತೆ ಆಕೆಯ ತಂದೆ ತಾಯಿ ಹಾಗೂ ಕೆಲವರು ಬಂದು ಶ್ವೇತಾಳನ್ನು    ಕರೆದುಕೊಂಡು ಹೋದರು.   

ಎರಡು ದಿನಗಳು ಕಳೆದ ಬಳಿಕ ನಿಷೇಕ ಶಾಸ್ತ್ರ ಇಟ್ಟುಕೊಂಡಿದ್ದೇವೆ ಬರಬೇಕೆಂದು ಮಾವನವರು  ಫೋನ್ ಮಾಡಿದರು.    ಜೀವನದ ಮೊದಲ ರಾತ್ರಿಯ ಮೊದಲ ಸಮಾಗಮದ ಕುತೂಹಲದ ಕನಸೊಂದನ್ನು  ಕಟ್ಟಿಕೊಂಡು ಅವರ ಮನೆಯನ್ನು ಉತ್ಸಾಹದಿಂದಲೇ ಪ್ರವೇಶಿಸಿದೆ.    ಆದರೆ ಮನೆಯಲ್ಲಿ ಶಾಸ್ತ್ರಕ್ಕೆ ಸಂಬಂಧಿಸಿದ ಯಾವುದೇ ಕುರೂಹು ಕಂಡು ಬರಲಿಲ್ಲ.  ನನ್ನ ಮಾವನವರೆ ಬಂದು ಸ್ವಾಗತಿಸಿದರು.    ಕ್ಷೇಮವನ್ನೆಲ್ಲ ವಿಚಾರಿಸಿ ಕುಳಿತುಕೊಳ್ಳಲು ಹೇಳಿದರು.   ಶ್ವೇತ  ಅಲ್ಲೆಲ್ಲೂ ಕಂಡು ಬರಲಿಲ್ಲ.  

ಮಾವನವರು ಯಾವುದೇ ಪೀಠಿಕೆಯಿಲ್ಲದೆ..'' ಅಳಿಯಂದಿರು ಮದುವೆಯ ಸಮಯಕ್ಕೆ ಬೆಂಗಳೂರಿನಲ್ಲಿ ಮನೆ ಮಾಡುತ್ತಾರೆಂದು ತಿಳಿದಿದ್ದೆವು.    ಆ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಏನು ಹೇಳಲೇಯಿಲ್ಲವಲ್ಲ...?  ನಾನು ಮಗಳನ್ನು ಕರೆದುಕೊಂಡು ಹೋಗಲು  ಬಂದಾಗ ಈ ವಿಷಯ ಕೇಳೋಣ ಅಂದುಕೊಂಡಿದ್ದೆ.  ಆದರೆ ಸಾಧ್ಯವಾಗಲಿಲ್ಲ.    ಮನೆ ನೋಡಿದ್ದೀರ ಹೇಗೆ..''  ಎಂದು ಕೇಳಿದರು.  ಒಂದು ಕ್ಷಣ ಅವರು ಯಾವ ವಿಷಯದ ಬಗ್ಗೆ ಮಾತನಾಡುತಿದ್ದಾರೆಂದು ತಿಳಿಯಲಿಲ್ಲ.  ನಾನ್ಯಾಕೆ ಬೆಂಗಳೂರಿಗೆ ಬಂದು ಮನೆ ಮಾಡಬೇಕು...? ನಿಮ್ಮ ಮಾತು  ಅರ್ಥ ಆಗಲಿಲ್ಲ ಮಾವನವರೇ ಎಂದು ಹೇಳಿದೆ.  

'' ಹಾಗಂದ್ರೆ ಹೇಗೆ ಅಳಿಯಂದ್ರೆ   ನಿಮಗೆ  ಮದುವೆಯ ಬ್ರೋಕರ್ ಹೇಳಿರಲಿಲ್ಲವೇ ....?  ಅವನು ಎಲ್ಲವನ್ನು ಹೇಳಿ ಒಪ್ಪಿಸಿದ್ದೇನೆ ಎಂದು ಹೇಳಿದ್ದನಲ್ಲ...?'' ಎಂದು  ಆಶ್ಚರ್ಯವಾಗಿ ಕೇಳಿದರು.   ಅವರ ಮಾತುಗಳನ್ನೂ ಕೇಳಿ ನಾನು ಮತ್ತಷ್ಟು ಗೊಂದಲಕ್ಕೊಳಗಾದೆ.    ವಿವರವಾಗಿ ಹೇಳಿ ಮಾವನವರೇ ಎಂದೆ. 
  
'' ನೋಡಿ....ನಮಗಿರುವುದು  ಒಬ್ಬಳೇ ಮಗಳು.   ಅವಳನ್ನು ಮುದ್ದಿನಿಂದ ಸಾಕಿದ್ದೇವೆ.      ಅವಳು ಇಷ್ಟಪಟ್ಟಿದ್ದನ್ನು  ಇಲ್ಲಾ  ಅಂದವರಲ್ಲ.    ನಮ್ಮ ಮಗಳನ್ನು ಹಳ್ಳಿಗಾಡಿಗೆ ಕೊಟ್ಟು ಮದುವೆ ಮಾಡುವ ಯೋಚನೆಯೇ  ನಮಗೆ ಇರಲಿಲ್ಲ.   ಮದುವೆಗೆ ಮುನ್ನವೇ ಬೆಂಗಳೂರಿನಲ್ಲಿ ಮನೆ ಮಾಡುವಂತೆ ನಿಮ್ಮನ್ನು  ಒಪ್ಪಿಸಿದ್ದೇನೆ ಎಂದು  ಆ ಮದುವೆಯ ಬ್ರೋಕರ್ ಹೇಳಿದ್ದ.  ಆ ಕಾರಣದಿಂದ ನಾವು ಒಪ್ಪಿದೆವು.   ಆದರೆ ಮದುವೆಯಾದರು ಸಹ ನೀವು .....''  ಎಂದರು.  ಅವರ ಮಾತುಗಳನ್ನೂ ಕೇಳಿ  ಕುಸಿದು ಹೋದೆ.     ಮಾವನವರೇ,...  ನನಗೆ    ಆ ವಿಚಾರವೇ ಗೊತ್ತಿಲ್ಲ.     ವಯಸ್ಸಾದ ತಂದೆ ತಾಯಿ ಹಾಗೂ  ಜಮೀನನ್ನು  ಬಿಟ್ಟು ಪಟ್ಟಣಕ್ಕೆ ಬಂದು ನೆಲೆಸಲು ಸಾಧ್ಯವಿಲ್ಲ  ಎಂದು ಸೌಮ್ಯವಾಗಿಯೇ ಹೇಳಿದೆ.  

ನಾನು ಹಾಗೆನ್ನುತಿದ್ದ ಹಾಗೆ...ಶ್ವೇತ   ಹಿಂದಿನ ರೂಮಿನಿಂದ ಹೊರಗೆ ಬಂದಳು.   ನಮ್ಮ ಸಂಭಾಷಣೆಯನ್ನು  ಕೇಳಿಸಿಕೊಂಡಿದ್ದಾಳೆಂದು  ಅವಳ ಮುಖಭಾವವೇ ಹೇಳುತಿತ್ತು.  
'' ನೋಡಿ ನಾನು ಹಳ್ಳಿಗೆ ಯಾವುದೇ ಕಾರಣಕ್ಕೂ ಬರುವುದಿಲ್ಲ.   ಇಲ್ಲೇ ಎಲ್ಲಾದರು ಮನೆಯನ್ನು ಮಾಡಿ.  ನಿಮ್ಮ ತಂದೆ ತಾಯಿ ಬೇಕಾದರೆ ಹಳ್ಳಿಯಲ್ಲೇ ಇರಲಿ.  ಅವರು ಇಲ್ಲಿಗೆ ಬರುವುದು ಬೇಡ.  ಕೊನೇತನಕ  ಅವರ ಸೇವೆ ಮಾಡಿಕೊಂಡು ಬಿದ್ದಿರುವುದಕ್ಕೆ ನನ್ನ ಕೈಯಲ್ಲಿ ಸಾಧ್ಯವಿಲ್ಲ.    ಇರುವಷ್ಟು   ದಿನಗಳು  ನಾವಿಬ್ಬರೇ ಲೈಫನ್ನು ಎಂಜಾಯ್ ಮಾಡಬೇಕು.   ಅಡಿಗೆ ಹಾಗು ಮನೆ ಕೆಲಸಕ್ಕೆ ಯಾರನ್ನಾದರು ನಮ್ಮ ತಂದೆಯೇ ನೋಡುತ್ತಾರೆ.  ಆ ಹಳ್ಳಿಗಾಡಿನಲ್ಲಿದ್ದರೆ ನನಗೆ ಉಸಿರು ಕಟ್ಟಿದಂತಾಗುತ್ತದೆ.  ಮುಂದಕ್ಕೆ ನಮಗೆ ಹುಟ್ಟುವ ಮಕ್ಕಳಿಗೆ ಒಳ್ಳೆಯ ಎಜುಕೇಶನ್ ಕೊಡಿಸುವುದಕ್ಕೆ  ಆ ಹಳ್ಳಿ ಕೊಂಪೆಯಲ್ಲಿ ಸಾಧ್ಯವಿಲ್ಲ.   ನನ್ನ ಮದುವೆಯ ಕನಸುಗಳ ಬಗ್ಗೆ, ನನ್ನ ಜೀವನದ ಬಗ್ಗೆ   ಮೊದಲೇ ನಮ್ಮ ಪಪ್ಪಾಗೆ ತಿಳಿಸಿದ್ದೇನೆ.   ಅದು ನಿಮಗೂ ತಿಳಿದಿರಬಹುದು ಅಂದುಕೊಂಡಿದ್ದೆ'' ಎಂದಳು.  

ಅವಳ ಮಾತುಗಳನ್ನು ಕೇಳುತಿದ್ದಂತೆ   ಉತ್ಸಾಹವೆಲ್ಲ ಬತ್ತಿ ಹೋದಂತಾಯಿತು.   ಅಷ್ಟೊಂದು  ಒರಟಾಗಿ ನಡೆದುಕೊಳ್ಳುವ ಹುಡುಗಿಯರೂ  ಇರುತ್ತಾರೆಂದು ನನಗೆ ಅಂದೇ   ಅರಿವಿಗೆ ಬಂತು.     ಹೆಣ್ಣೆಂದರೆ ತಾಳ್ಮೆ, ಹೆಣ್ಣೆಂದರೆ ಗೌರವ, ಹೆಣ್ಣೆಂದರೆ ಪ್ರೀತಿ ವಿಶ್ವಾಸ, ವಾತ್ಸಲ್ಯ  ಎಂದು ತಿಳಿದಿದ್ದ ನನ್ನ ಭಾವನೆಗಳಿಗೆ ಧಕ್ಕೆಯಾದ ಕ್ಷಣವದು.   ಆಗ ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಲೇ ಬೇಕಾಗಿತ್ತು.     

ನೋಡಿ...ತಂದೆ ತಾಯಿಯನ್ನು ಬಿಟ್ಟು,  ಹಳ್ಳಿ ಬದುಕನ್ನು ಬಿಟ್ಟು ಪಟ್ಟಣ ಸೇರುವ ಆಸೆ ನನಗೆ ಮೊದಲಿನಿಂದಲೂ ಇರಲಿಲ್ಲ.    ಮುಂಚೆಯೇ ನಿಮ್ಮ ಅಭಿಪ್ರಾಯ ತಿಳಿದಿದ್ದರೆ  ಬಹುಷಃ  ಈ ಮದುವೆಯೇ ಜರುಗುತ್ತಿರಲಿಲ್ಲ.    ಹಳ್ಳಿ ಎಂದು ಅಷ್ಟೊಂದು ಕಡೆಗಣನೆ ಮಾಡಬೇಡಿ.    ಅಲ್ಲಿನ ಜನಗಳನ್ನು ನಿಕೃಷ್ಟವಾಗಿ ಕಾಣುವ ನಿಮ್ಮ ಮನೋಭಾವನೆಯನ್ನು ಮೊದಲು ಬದಲಾಯಿಸಿಕೊಳ್ಳಿ.   ನಮ್ಮ ಊರಿನಿಂದ ವಿದೇಶಕ್ಕೆ ಹೋದವರು ಇದ್ದಾರೆ.     ಮತ್ತೆ ಅಲ್ಲಿಂದ ಬಂದು ನಮ್ಮ  ಊರಿನಲ್ಲಿಯೇ ನೆಲೆಸಿದ್ದಾರೆ.    ನಮ್ಮ ದೇಶ ನಿಂತಿರುವುದೇ ಹಳ್ಳಿಗಾಡಿನ  ಬದುಕಿನಿಂದ.  ನೋಡಿ  ಮಾವನವರೇ..,   ಬಂದು ಇರುವುದಾದರೆ ಶ್ವೇತಾಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ.  ಪಕ್ಕದಲ್ಲಿರುವ ಪಟ್ಟಣದಲ್ಲಿ ಒಳ್ಳೆಯ ಶಾಲೆಗಳಿವೆ ಅಲ್ಲಿಯೇ ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಿಸಬಹುದು.    ನನ್ನ ಮಾತನ್ನು ನಂಬಿ ಎಂದೆ.    ಆ  ಮಾತುಗಳನ್ನು  ಕೇಳಿ,  ಶ್ವೇತ ಕೋಪಗೊಂಡು ಒಳಗೆ ಹೊರಟುಹೋದಳು. 

ಕೊನೆಗೆ   ನಮ್ಮ ಮಾವನವರೇ '' ನೋಡಿ ವಿಶ್ವ.... ಇದೇ ಏರಿಯಾದಲ್ಲಿ ಮನೆ ಮಾಡೋಣ.   ಈ ಮನೆ ನನ್ನ ಸ್ವಂತದ್ದಲ್ಲ.     ಶ್ರೀನಗರದಲ್ಲಿ ನನ್ನ ಮಗಳ ಹೆಸರಿನಲ್ಲಿ ಸೈಟ್ ತೆಗೆದಿದ್ದೇನೆ.  ಈಗ ಮನೆ ಕಟ್ಟಲು  ಪ್ರಾರಂಭ  ಮಾಡಬೇಕು.   ಆಮೇಲೆ ಅಲ್ಲಿ ಎಲ್ಲರೂ   ಒಟ್ಟಾಗಿರೋಣ   ಬಿಡಿ.    ನಿಮ್ಮ ತಂದೆ ತಾಯಿ ಹಳ್ಳಿಯಲ್ಲೇ ಇರಲಿ.    ಹೇಗೋ ಹಳ್ಳಿ ಜೀವನಕ್ಕೆ ಅವರು ಹೊಂದಿಕೊಂಡಿದ್ದಾರಲ್ಲ'' ಎಂದರು.    ಅವರ ಮಾತುಗಳನ್ನೂ ಕೇಳಿ ಅವರ ಬಗ್ಗೆ  ಅಸಹ್ಯವಾಯಿತು.   ಇನ್ನು ಇವರ ಬಳಿ ಮಾತನಾಡಿ ಪ್ರಯೋಜನವಿಲ್ಲವೆನಿಸಿತು.         ನಿಮ್ಮ ಮಗಳನ್ನು ಮುಂದಿನವಾರ ನನ್ನ ಮನೆಗೆ ಕರೆದುಕೊಂಡು ಬನ್ನಿ ಎಂದು ಹೇಳಿ ಬೇರೆ ಮಾತಿಗೆ ಅವಕಾಶ ಕೊಡದೆ ಕೋಪದಿಂದ ಹೊರಟು ಬಂದೆ. 

ಒಂದು ತಿಂಗಳಾದರೂ ಯಾರು  ಬರಲಿಲ್ಲ.     ಒಂದು ತಿಂಗಳು ಕಳೆದ ಬಳಿಕ  ವಕೀಲರಿಂದ ನೋಟೀಸ್ ಬಂತು.   ಶ್ವೇತ ವಿಚ್ಚೇಧನಕ್ಕೆ  ಅರ್ಜಿ ಹಾಕಿಕೊಂಡಿದ್ದಳು.    
   ನಾನು ಯಾವುದೇ ರಾಜಿ ಪಂಚಾಯಿತಿಯನ್ನು ಮಾಡಿಸಲಿಲ್ಲ.   ಅವಳ ವಿಚಾರಧಾರೆಯನ್ನು ಕಂಡು ಅವಳೊಡನೆ ಜೀವನ ನಡೆಸಬೇಕೆಂಬ ಕನಸು ಅದಾಗಲೇ ಭಗ್ನವಾಗಿ ಹೋಗಿತ್ತು.     ಯಾವುದೇ ವಿರೋಧ ಸೂಚಿಸದೆ ಸಮ್ಮತಿ ವಿಚ್ಚೇಧನಕ್ಕೆ   ಒಪ್ಪಿಗೆ ನೀಡಿದೆ.   ಕೆಲವು  ದಿನಗಳ  ಹೆಂದೆ ವಿಚ್ಚೇಧನ ಪತ್ರ ಕೈಸೇರಿತು.       ಇದು ನಮ್ಮ ದೊಡ್ಡಪ್ಪನ ಮನೆ.       ನೋವಿಗಿಂತ ನನ್ನ ನಂಬಿಕೆ ಹಾಗು ಆಶೋತ್ತರಗಳಿಗೆ ಬಿದ್ದ ಹೊಡೆತದಿಂದ  ಮನಸ್ಸು ಜರ್ಜರಿತವಾಗಿದೆ.    ಮದುವೆಯ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡಿದ್ದೇನೆ.   ಹಳ್ಳಿಯಲ್ಲಿ ಇನ್ನು ಈ ವಿಷಯ ಗೊತ್ತಿಲ್ಲ.    ನನಗೂ ಸುಳ್ಳು ಹೇಳಿ ಸಾಕಾಗಿತ್ತು.    ಕೆಲದಿನಗಳಿಂದ   ಇಲ್ಲಿಂದಲೇ ಕೆಲಸಕ್ಕೆ ಹೋಗುತಿದ್ದೇನೆ.   ನನ್ನ ದೊಡ್ದಪ್ಪನವರಿಗೆ  ಮಕ್ಕಳಿಲ್ಲ.    ಎರಡು ತಿಂಗಳು ಭಾರತ ಪ್ರವಾಸ ಮಾಡಿ ಬರುತ್ತೇವೆಂದು ಹೋದರು.     ಅದಕ್ಕಾಗಿ ಕಾವಲುಗಾರನಂತೆ ಇಲ್ಲಿಯೇ ಇದ್ದೇನೆ ನೋಡು.   ಇದು ನನ್ನ ಕಥೆ ಎಂದನು.  ಹಾಗೆನ್ನುವಾಗ ಅವನ ಕಣ್ಣ ಕೊನೆಯಲ್ಲಿ ನೋವು ಮಡುಗಟ್ಟಿ ನಿಂತಿತ್ತು.  

ವಿಶ್ವನ ಕಥೆಯನ್ನು ಕೇಳಿ  ಮನಸ್ಸು ಭಾರವಾಯ್ತು.   ಏನು ಮಾತನಾಡಬೇಕೆಂದು ತೋಚದೆ,  ವಿಶ್ವನ ಕೈಯನ್ನು ಅದುಮುತ್ತಾ ''  ಕ್ಷಮಿಸೋ ವಿಶ್ವ.  ಗೊತ್ತಿದ್ದರೆ ನಾನು ಆ  ಹುಡುಗಿಯನ್ನು ನೋಡುವುದಕ್ಕೆ ಹೋಗುತ್ತಿರಲಿಲ್ಲ.  ಆ ಬ್ರೋಕರ್  ಸುಳ್ಳು ಹೇಳಿದ್ದ ಎಂದು ನನಗೀಗ ತಿಳಿಯುತ್ತಿದೆ.    ಆದರೆ.... ನಾನು ಮೊದಲ ಬಾರಿಗೆ ಹೆಣ್ಣು ನೋಡಲು ಹೋಗಿದ್ದು  ಸ್ನೇಹಿತನ ಹೆಂಡತಿಯನ್ನು  ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಬಹಳ ಕಷ್ಟವಾಗುತ್ತಿದೆ ವಿಶ್ವ ''  ಎಂದು ಸಂಕೋಚದಿಂದ ಹೇಳಿದೆ.   ಹಾಗೆನ್ನಬೇಡವೆಂಬಂತೆ  ತಲೆಯಾಡಿಸುತ್ತಾ  ನನ್ನ ಹೆಗಲ ಮೇಲೆ ಕೈಯಿರಿಸಿದನು ವಿಶ್ವ.   

6 comments:

 1. ನಿಮ್ಮ ಭಾವ ನನಗೆ ತುಂಬಾ ಖುಷಿ ಆಯಿತು. ಹಲವು ದಿನಗಳಿಂದ ಯೋಚಿಸುತ್ತಿದ್ದ ಭಾರಗಳು ಪದಗಳಲ್ಲಿ ಸೆರೆ ಹಿಡಿದಿದ್ದೀರಿ ಅಂತ ಅರ್ಥವಾಗುತ್ತದೆ. ಈ ಸಮಾಜಮುಖಿ ಯೋಚನೆ ಎಲ್ಲರಿಗೂ ಭಗವಂತ ಕೊಡುವುದಿಲ್ಲ. ಶುಭವಾಗಲಿ.

  ReplyDelete
 2. ಬೆಳ್ಳಂಬೆಳಗಿನ ಟ್ವಿಸ್ಟ್ ತುಂಬಾನೇ ಇಷ್ಟ ಆಯ್ತು ಮಗ ವಿಶ್ವನನ್ನು ನೋಡಿ ಕಿಚ್ಚನ್ನಿಸ್ತು ಪಾಪದ ಹುಡುಗ ಅಲ್ವ, ಜಯಣ್ಣ ಸಿಕ್ಕರೆ ತಲೆಗೆರಡು ಬಾರಿಸ್ತೇನೆ

  ReplyDelete
 3. ಕಥೆ ಸೊಗಸಾಗಿದೆ. ಸಮಾಜದಲ್ಲಿನ ಅಪರೂಪದ ಸತ್ಯಘಟನೆ ನಮ್ಮ ಮುಂದಿಟ್ಟಿದ್ದೀರಿ. ನಿರೂಪಣೆ ಚೆನ್ನಾಗಿದೆ. ನನಗೊಂದು ಪುಟ್ಟ ಸಂದೇಹ! ಶ್ವೇತಳನ್ನು ಕಾಣಲು ಹೋದಾಗ ಅವಳ ತಂದೆ ತಾಯಿ ಅಲ್ಲಿತ್ತಿಲ್ಲವೇ? ವಿಶ್ವನನ್ಯಾರೂ ಅಲ್ಲಿ ಗಮನಿಸಲಿಲ್ಲವೇ? :)

  ReplyDelete
  Replies
  1. ಕೆಲ ನಿಮಿಷಗಳ ಬಳಿಕ ಒಳಗಿನ ಕೋಣೆಯಿಂದ ಹೊರಬಂದ ಮತ್ತೊಬ್ಬ ಹೆಂಗಸು, ನಾನು ಹುಡುಗಿಯ ತಾಯಿ ಎಂದು ಪರಿಚಯಿಸಿಕೊಂಡರು. ಅವರೇ ಮುಂದುವರಿದು.... ಆಗಲೇ ಹುಡುಗಿಯೊಂದಿಗೆ ಬಂದಿದ್ದಾಕೆ ನನ್ನ ದೂರದ ಸಂಬಂಧಿ. ಇನ್ನೂ ಮನೆಯವರು ಹಾಗೂ ನನ್ನ ಮಗ ಯಾವುದೋ ಕೆಲಸದ ಮೇಲೆ ಮಂಗಳೂರಿಗೆ ಹೋಗಿದ್ದಾರೆ ಎಂದರು.

   ಕೊನೆಗೆ ನಮ್ಮ ಮಾವನವರೇ '' ನೋಡಿ ವಿಶ್ವ.... ಇದೇ ಏರಿಯಾದಲ್ಲಿ ಮನೆ ಮಾಡೋಣ. ಈ ಮನೆ ನನ್ನ ಸ್ವಂತದ್ದಲ್ಲ. ಶ್ರೀನಗರದಲ್ಲಿ ನನ್ನ ಮಗಳ ಹೆಸರಿನಲ್ಲಿ ಸೈಟ್ ತೆಗೆದಿದ್ದೇನೆ. ಈಗ ಮನೆ ಕಟ್ಟಲು ಪ್ರಾರಂಭ ಮಾಡಬೇಕು. ಆಮೇಲೆ ಅಲ್ಲಿ ಎಲ್ಲರೂ ಒಟ್ಟಾಗಿರೋಣ ಬಿಡಿ.

   Delete
 4. ನಿಜ ಜೀವನಕ್ಕಿಡಿದ ಕನ್ನಡಿ ಈ ಕಥೆ.. ಕಥಾನಾಯಕ ತನ್ನ ಆದರ್ಶಗಳ ಬೆನ್ನತ್ತಿ ನೊಂದ ವಿಚ್ಛೇಧಿತ ಮಹಿಳೆಗೆ ಬಾಳು ಕೊಡುಲು ಮುಂದಾಗುವಾಗ ತಾನು ಸಂದರ್ಶನಕ್ಕೆ ಹೊರಟ ಮೊದಲ ಹುಡುಗಿಯೇ ಗೆಳೆಯನ ಜೀವನದ ದೊಡ್ಡ ಗಾಯದ ರೂವಾರಿ ಮತ್ತು ಅವನ ಮಾಜಿ ಹೆಂಡತಿ ಎಂದು ತಿಳಿದಾಗಿನ ಕಥಾನಾಯಕನ ಮನದ ತುಡಿತಗಳು ಭಾವ ಸಮ್ಮಿಳಿತವಾಗಿ ಮಾತನಾಡಿವೆ.. ಒಂದು ಚೆಂದದ ಪ್ರಯತ್ನ ಸತೀಶಣ್ಣ.. ಐಶಾರಾಮಿ ಜೀವನದ ಹಿಂದೆ ಬಿದ್ದ ಪಾಪದ ಹುಡುಗಿಯೊಬ್ಬಳ(ಅವಳನ್ನು ಕನಿಕರದಿಂದ ನೋಡುವುದಲ್ಲದೆ ಏನೆಂದು ಸಂಭೋಧಿಸುವುದೂ ನನಗೆ ಸಾಧ್ಯವಾಗುತ್ತಿಲ್ಲ) ಜೀವನವನ್ನು ಮಾರ್ಮಿಕವಾಗಿ ತೆರೆದಿಟ್ಟಿದ್ದೀರಿ..

  ReplyDelete
 5. ಕಥೆ ಅಚ್ಚುಕಟ್ಟಾಗಿದೆ. ಕಥೆಯನ್ನು ಓದುವಾಗ, ಮುಂದೇನು ಎಂಬ ಕುತೂಹಲವಿದ್ದರೆ ಆ ಕಥೆಗೆ ಒಂದು ಬೆಲೆ. ಅದನ್ನು ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದೀರಿ. ನಿಮ್ಮಲ್ಲಿ ಒಳ್ಲೆಯ ಕಥೆಗಾರನಿದ್ದಾನೆ ಮತ್ತು ನಿಮ್ಮ ಪುಟ್ಟ ಕವಿತೆಗಳು ಓದಲು ಹಿತವಾಗಿದೆ. ಯಾವುದೇ ಕಾರಣಕ್ಕೂ ಬರವಣಿಗೆಯನ್ನು ನಿಲ್ಲಿಸಬೇಡಿ.

  ReplyDelete