ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Sunday, November 4, 2012



ಗೆದ್ದಲು ಹುಳಗಳು
------------------------


ಪವರನೆಂಬ ದುರಹಂಕಾರಿಯ  ನಿರ್ಧಾರ 
ಹಸಿದೊಟ್ಟೆಗಳ ಮೇಲಿನ ಪ್ರಹಾರವಾಯ್ತು.
ದವಸ ಧಾನ್ಯಗಳ ತಿಂದುಂಡ ಹೆಗ್ಗಣಗಳು ದುಂಡಗಾದವು,
ಲೆಕ್ಕಕ್ಕೆ ಸಿಗದ ದವಸ ಮಣ್ಣಾಯ್ತು.
ಪಶ್ಚಾತಾಪದ ಕುರುಹು ಇವನಿಗಿಲ್ಲವಾಯ್ತು.

ತರಂಗಾಂತರಂಗ ಹೊಕ್ಕ ಕೀರೀಟವಿಲ್ಲದ ರಾಜ
ಒಂದೇ ಕಿಕ್ಕಿಗೆ ಭೋಜನವುಂಡ ಕವಿಯತ್ರಿ
ದುರಾಸೆ ಮುಂದಾಗಿ ಜೈಲುಪಾಲಾದರು.

ಕ್ರೀಡೆಗೂ ಗ್ರಹಣ ಬಡಿಸುವ ಕಲೆಗಾರ ಕಲ್ಮಾಡಿ
ಅಂಡೊರೆಸುವ
ಕಾಗದಕ್ಕೂ
ಕೋಟಿ ಕೋಟಿ ಬಾಚಿದ್ದು ಇವನ ಜೀವಮಾನ ಸಾಧನೆ
ಬಿಡುಗಡೆಯಾದಮೇಲೆ ಕೊಂಡಾಡಿದ್ದು ಆ ಪಕ್ಷದ ಮಹತ್ಸಾದನೆ.

ಸಿಂಗ್ ಕಿಂಗ್ ಆದಿಯಾಗಿ ಕಲ್ಲಿದ್ದಲ ಕಪ್ಪಲ್ಲಿ ಮುಖತೊಳೆದು

ಏನು ಆಗಿಲ್ಲವೆಂದು ತಿಪ್ಪೆಸಾರಿಸಿ, ಕನ್ನಡಿ ಹಿಂದೆ ನಿಂತುಬಿಟ್ಟವರು
ಮೂರು ಬಿಟ್ಟದ್ದು ಎಲ್ಲರಿಗು ತಿಳಿದಿಲ್ಲವೆಂದು ಮುಸಿ ಮುಸಿ ನಕ್ಕಿದ್ದು
ಕಾಂಗ್ರೇಸ್ ಗಿಡದಷ್ಟೇ ಸತ್ಯ. 

ಗಡಾರಿ ಹಿಡಿದ ಗಡ್ಕರಿ
ಪ್ರಹಾರ ಮಾಡಿದ್ದು ಯಾವ ಪರಿ
ಆಳುವವನ ಹಿಡಿದು ಉಳುವವನ
ಹೆಡೆಮುರಿ ಕಟ್ಟಿ ಆದನು ಸಿರಿ-
ವಂತ.  ಇಂಗು ತಿಂದ ನಿ-ತಿನ್
ಮಂಗನಂತಾದವರು ಸ್ವಯಂ ಸೇವಕರು. 

ರಾಷ್ಟದಳಿಯ ಮನೆತೊಳಿಯ
ಅವನೊಬ್ಬ ವಾದ್ರಾ..,
ಕೆಲಸ  ಸೊನ್ನೆ.  ಅರ್ಹತೆ ಪ್ರಿಯಳ ಅಂಕ
ಅತ್ತೆಯ ನೆರಳು.  ಡಿ ಎಲ್ ಎಪ್ ಇವಗೆ ಮರುಳು.
ಬಹುಪರಾಕ್ ಮಂದಿ ತಾರಿಸುತಿಹರು ತಿಪ್ಪೆ  

ರಾಷ್ಟ್ರಸೇವಕರಿಗೆಂದಿದ್ದ ಸೂರ
ಸೂರೆಗೊಂಡರನೇಕರು. ಲಜ್ಜೆಯಿಲ್ಲದ ಮಂದಿ
ಮಂಡಿಯೂರಿ ನೆಕ್ಕಿಹರು ಇಟಾಲಿಯನ್ನಿನ ಚಪ್ಪಲಿ. 
ಅಭಯ ಹಸ್ತ ದೊರಕಿ, ನಗುತಿಹರು ಪ್ರೇತದಂತೆ. 

ನೈಸಾಗಲಿಲ್ಲ  ರಸ್ತೆ.  ವೈನಾದರು ತಿಂದುಂಡವರೆಲ್ಲ.

ಕಣಿ ಹೇಳುವಂತೆ ಕಾಣ್ವ ಖೇಣಿ .
ಹರಳೆಣ್ಣೆ ಕುಡಿದಂತ ಗೌಡ.
ಸಿಡುಕು ಮೊರೆ ಸುಬ್ಬನೆಂಬ ಅಡ್ಡಾದಿಡ್ಡಿ
ವಿಗ್ಗಿನಡಿಯಲ್ಲಿ ಕೆಲಸ ಮುಗಿಸಿದ ಚತು-
ರ.  ಕರೆದರಡ್ಡಿಯಿಲ್ಲ ಇವ ಕುಟಿಲ ಕೃಷ್ಣಯ್ಯ.

ಕರುನಾಡ ಮುಷ್ಠಿಯಲಿಡಿದು
ಪುರಜನರ ಕಾಲಡಿಯಿಕ್ಕಿ 
ಮಣ್ಣನ್ನೇ ಹೊನ್ನಾಗಿಸಿ ಮೆರೆದು
ಗಾಲಿಯನೇರಿದ ಜನಾರ್ಧನನೀಗ
ಕಂಬಿಯ ಹಿಂದೆ ಕಂಬಿನಿ ನುಂಗುತ
ಹುಸಿನಗೆ ಬೀರುತಿಹನು. 

ಹುದ್ದೆಯ ಜಿದ್ದಿಗೆ ಬಿದ್ದು
ಟೊಂಕಕಟ್ಟಿ ದುಡಿದು
ಅಧಿಕಾರಕ್ಕೇರಿ, ದೋಚಿ-ಬಾಚಿ
ಕೊನೆಗಾಯ್ತು  ಯಡ್ಡಿಯ ಅವಸಾನ. 

4 comments:

  1. ಅತ್ಯಂತ ಪರಿಣಾಮಕಾರಿ.ದುಷ್ಟ ವ್ಯವಸ್ಥೆಯ ರುದ್ರ ನರ್ತನ.ಅವಸಾನದ ಅಂಚಿಗೆ ಹೋಗುವವರೆಗೂ ಇವರಿಗೆ ಬುದ್ದಿ ಬರದು.ಯಾರೂ ಶಿಷ್ಟರಾಗಿಲ್ಲ.ಕೆಲವರು ಬಹಳ ಇನ್ನು ಕೆಲವರು ಅಲ್ಪ ಮತ್ತೆ ಕೆಲವರು ವಿಪರೀತ ದುರಾಸೆಗೆ ಒಳಗಾಗಿ ಈ ಸುಂದರ ಗಟ್ಟಿ ಪ್ರಜಾಪ್ರಭುತ್ವದ ಬೇರುಗಳನ್ನು ಅಲ್ಲಾಡಿಸ ಹೊರಟಿದ್ದಾರೆ.ಹಬ್ಬಕ್ಕೆ ತಂದ ಹರಕೆಯ ಕುರಿ ತಳೀರು ತೋರಣವ ಮೇಯ್ದಿತ್ತು ಕೊಲ್ಲುವರೆಂಬ ಅರಿವಿಲ್ಲದೆ...............ಕೊಂದವರೇನು ಉಳಿದರೇ.........,ಹೀಗೆ ನಮ್ಮರಿವು ಇರುವಿಕೆ ಜವಾಬ್ದಾರಿಗಳ ವಿವೇಕವಿಲ್ಲದೇ ಹೋದರೆ ದುಃಖಾಂತ್ಯದಲ್ಲಿ ವಿಷಾಧ ನೋವು ತೊಳಲಾಟ.ಇದು ಬೇಕೇ ನಮಗೆ.ಪ್ರಸಕ್ತ ವರ್ತಮಾನದ ಹಸಿ ಹಸಿ ಚಿತ್ರಣವನ್ನು ಉಣ ಬಡಿಸಿ ರಾಜನೀತಿಗಾಗುತ್ತಿರುವ ಮರ್ಮಾಘಾತವನ್ನು ಪರಿಣಾಮಕಾರಿಯಾಗಿ ಬಣ್ಣಿಸಿದ್ದೀರಿ ಸತೀಶಜೀ.

    ReplyDelete
  2. ಮೂರೂ ಬಿಟ್ಟವರು ಊರಿಗೆ ದೊಡ್ಡವರಾಗಿದ್ದಾರೆ! ಕಬ್ಬಿಣ ಗಟ್ಟಿಯಿದೆಯೆಂದಪ್ಪಿಕೊಂಡರೆ ಅದು ಗೆದ್ದಲು ಹಿಡಿದ ಒಣಕಡ್ಡಿ! ಸುಣ್ಣದಲಿ ಕಟ್ಟಿದ ಸೇತುವೆ ಗಟ್ಟಿಯಿರಬಹುದೆಂದರೆ ಅದು ಬೂದಿ!

    ಸಮಾಧಾನವೊಂದೇ ಎಂದರೆ ಕೊನೆಗೆಲ್ಲರಿಗೂ 'ಸಮಾಧಿ'!

    ReplyDelete
  3. ಮಾನಗೆಟ್ಟ ರಾಜಕಾರಣಿಗಳನ್ನು ಎಡೆಮುರಿ ಕಟ್ಟಿ ಬಡಿದ ಪರಿ ಕವಿತೆಯ ಒಡಲನ್ನು ಓದುಗನೆದೆಗೆ ನುಗ್ಗಿಸುತ್ತದೆ. ಒಬ್ಬ ಪ್ರಜ್ಞಾವಂತ ಮತದಾರನಾಗಿ ಅವನ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ಗುರ್ತಿಸುತ್ತದೆ. ಎಡೆಯೆಟ್ಟು ಎಂಜಲು ತಿನ್ನುವುದನ್ನು ನಮ್ಮ ಜನರು ಬಿಡದ ಹೊರತು ದೇಶದ ವ್ಯವಸ್ಥೆ ಶುದ್ಧವಾಗದು. ಪ್ರಜ್ಞಾವಂತ ಸಮಾಜಕ್ಕೆ ಕೈಗನ್ನಡಿ ಈ ಕವಿತೆ, ಪ್ರತಿಫಲನಗಳನ್ನು ಗುರ್ತಿಸುವ ಜಾಣ್ಮೆ ತೋರಬೇಕು ಓದುಗ(ಮತದಾರ). ಹಿಡಿಸಿತು ಕವಿತೆ.

    ReplyDelete
  4. ಅಸಹ್ಯ ರಾಜಕಾರಣಿಗಳ ಖಾದಿ ಕಲಚಿಡುವ ಇಂತಹ ರಾಜಕೀಯ ವಿಡಂಬಾತ್ಮಕ ಕವನಗಳಿಗೆ ತುಂಬು ಹೃದಯದ ಸ್ವಾಗತ.

    ReplyDelete