ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Tuesday, August 13, 2013

ಬೈರಾಗಿ ದೇಶಿಯರು
-----------------
ಕೌಣಪನನ್ನು ಕಂಡು ಕೌತುಕ ತೋರಿ
ಶಾಂತಿಮಂತ್ರ ಬೋಧಿಸುವ ಬೈರಾಗಿ
ನನ್ನ ದೇಶ. ಸಾವಿನ ಮನೆಯ ಇಟ್ಟಿಗೆ
ನನ್ನ ಯೋಧ!. ಧರ್ಮಗಳೇ ಆಯುಧ!
ಪಾಖಂಡಿ ಮನಸುಗಳ ಸೋಗಿಗೆ
ಭ್ರಾತೃತ್ವ ಬೆಸೆಯುವ ಭ್ರಾಂತಿಗೀಗ
ಅರವತ್ತೇಳನೆ   ಸಂವತ್ಸರ!!

ಹೊಂದಾಣಿಕೆ ಎಂಬುದಿಲ್ಲಿ ನಮಗೆಲ್ಲ
ಹಾಸುಹೊಕ್ಕಾಗಿ ಹೆಣೆದ ಚಾಪೆಯಾದರೆ
ಬಾಯಿತುಂಬಿ ಉಗುಳುವಷ್ಟು
ವಿಶಾಲತೆ ತುಂಬಿ ತುಳುಕಿ
ಕಿಚ್ಚು ಕೀವು ತುಂಬಿ ರೋಗಿಷ್ಟವಾಗಿದೆ

ವಿರೋಧಕ್ಕೂ ಬರ ಬಂದು
ವಿಪರೀತ ಬುದ್ದಿ ತಲೆ ತುಂಬಿದೆ
ಆಲಸ್ಯವೋ ಕುಚೋದ್ಯವೋ
ಉಚ್ಚ್ವಾಸ ನಿಶ್ವಾಸವೂ ಕೃತಕ
ಕೌಲಿಕನೆಂದರೆ ಅಡ್ಡಿಯಿಲ್ಲ
ಭಿನ್ನತೆ ಎಂಬ ಭಗ್ನ ಕಣ್ಣಾಗಿ
ವಾಸ್ತವವ ಕುರುಡಾಗಿಸಿದೆ.

1 comment:

  1. ಕಡೆಯ ಸಾಲಿನ ವಾಸ್ತವತೆ ಅಣಕಿಸುತ್ತದೆ ಸಾರ್. :(

    ReplyDelete