ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Thursday, October 27, 2011

'' ಹಾಗೆ ಸುಮ್ಮನೆ ''  ಓದಿ ಮರೆತು ಬಿಡಿ.. ಮಣಿಕಾಂತ್ ರವರ  ಈ ಗುಲಾಬಿಯು ನಿನಗಾಗಿಯಿಂದ ಪ್ರಭಾವಿತನಾಗಿ  ಬರೆದದ್ದು.

ಪ್ರೀತಿಯ ಹುಡುಗಿಗೆ....
         ಹೇ,,,ಹುಡುಗಿ, ದಿನಕ್ಕೆ ಎರಡು ಪ್ರೇಮ ಪತ್ರ ಬರಿತೀಯ, ನಿಮಿಷಕ್ಕೆ ಹತ್ತು ಮಿಸ್ ಕಾಲ್ ಕೊಡ್ತಿಯಾ, ಗಂಟೆಗೊಂದು ಸಾರಿ ಫೋನ್ ಮಾಡಿ ತಲೆ ತಿಂತಿಯಾ.  ನಾನು ನಡೆದುಕೊಂಡು ಹೊರಟರೆ, ಹಿಂದಿಂದಿನೆ ಬರ್ತೀಯ.ನಾನು ಬೈಕ್ನಲ್ಲಿ ಹೊರಟರೆ, ನೀನು ಸ್ಕುಟೀಲಿ ಫಾಲೋ ಮಾಡ್ತೀಯ.  ಅಲ್ವೇ ಹುಡುಗಿ...ನೀನು, ಬೆಳದಿಂಗಳು ಚಲ್ಲಿರೋ ಬೆಳಕನ್ನೆಲ್ಲ ಮುದ್ದೆ ಮಾಡಿಟ್ಟು, ಕೆತ್ತಿರೋ ದಂತದ ಬೊಂಬೆಯಂತಿದ್ದಿ ಇನ್ನು ನಾನೋ...ಕನಸುಗಳನ್ನೆಲ್ಲ ಗುಡ್ಡೆ ಮಾಡಿ ಮುದ್ರಿ ಬಿಸಾಡಿರೋ ಪೇಪರ್ ಥರ  ನಾನಿದ್ದೀನಿ.  ಒಂದಕ್ಕೊಂದು ಮ್ಯಾಚೇ ಆಗುತಿಲ್ವಲ್ಲೇ ಹುಡುಗಿ.  
         ಚಿನ್ನದ  ತಟ್ಟೆಯಲ್ಲಿ  ಊಟ ಮಾಡೋ ನೀನೆಲ್ಲಿ.  ಸಿಲ್ವರ್ ತಟ್ಟೆಗೆ ಸೀಮಿತನಾಗಿರೋ ನಾನೆಲ್ಲಿ.  ಹಾಗೆ ಒಂದು ಕ್ಷಣ ಯೋಚನೆ ಮಾಡು.  ಏ ಸಿ  ರೂಮಲ್ಲಿ ಮಲಗೋ ನೀನು, ಸಗಣಿ ತಾರಿಸಿದ ನೆಲದ ಮೇಲೆ, ನಕ್ಷತ್ರಗಳನ್ನ ಲೆಕ್ಕ ಹಾಕ್ತಾ, ಕಿತ್ತೋಗಿರೋ ಕನಸುಗಳ ಜೊತೆ ಬದುಕುತ್ತಿರುವ ನನ್ನ ಜೊತೆ, ಜೀವನ ಪೂರ್ತ ಜೊತೆಯಾಗಿ ಬಾಳ್ತೀನಿ ಅಂತಾ...ಕಾಲಲ್ಲಿ ಒದ್ದರು, ಕೈ ಕಾಲು ಮುರಿದುಕೊಂಡು ಬಿದ್ದಿರುವ ಸಂಪತ್ತನ್ನು ಬಿಟ್ಟು ಬರ್ತೀನಿ ಅಂತ ಹೇಳೋ ನೀನು,  ನಿಜಕ್ಕೂ ಅಮಾಯಕ ಹುಡುಗಿ ಕಣೆ  ನೀನು.  ಈ ಪ್ರೀತಿ ಪ್ರೇಮ ಎಲ್ಲಾ ಎದೆಯಲ್ಲಿ ಕಾವಿರೋ ತನಕ.  ಹಾಳಾದ್ ಹೃದೆಯಕ್ಕೆ ವಿವೇಚನೆ ಅನ್ನೋದೆ ಇರೋಲ್ಲ.  
         ಈ ಆಕರ್ಷಣೆ ಆನ್ನೋದು ಕುಲುಮೆಯ ಬೆಂಕಿಯಲ್ಲಿ ಕಾದ ಕತ್ತಿಯ ಅಲುಗಿದ್ದಂತೆ.  ಅಮಲಿನ ಅಲುಗು ಇಬ್ಬರಿಗೂ ಅಪಾಯ.   ಇರೋ ಬಾರೋ ಕೋಮಲತೆಯನ್ನೆಲ್ಲ ನಿನ್ನ ಕಣ್ಣ ಕಪ್ಪಿನಲ್ಲಿಯೇ ತುಂಬಿಕೊಂಡು, ಹೃದೆಯದ ತುಂಬಾ ಅಮಾಯಕತೆಯ ಆಕರ್ಷಣೆಯನ್ನು   ಕೂಡಿಟ್ಟುಕೊಂಡಿರುವ ನಿನಗೆ ಮೋಸ ಮಾಡಲು ನನ್ನ ಮನಸ್ಸು ಒಪ್ಪುತ್ತಿಲ್ಲ ಹುಡುಗಿ.  ನಾನೊಬ್ಬ ಪೋಲಿ, ಲೋಫರ್ ಅಂತ ತಿಳಿದು, ನನ್ನ ಕ್ಯಾರೆಕ್ಟರ್ ಸರ್ಟಿಪಿಕೇಟಿಗೆ ನಮ್ಮ ಕಾಲೇಜ್ ಪ್ರಿನ್ಸಿಪಾಲರು ಸಹಿನೆ ಮಾಡೋಲ್ಲ ಅಂತಾರೆ.  ಇನ್ನೊಮ್ಮೆ , ಮತ್ತೊಮ್ಮೆ ಯೋಚಿಸು....
                                                                                                                                     ಇಂತಿ 
                                                                                                         ಲೋಫರ್ ಲೋಕಿ.... 

Saturday, October 22, 2011

...ಕರಗುವ ಮುನ್ನ...


.....ಕರಗುವ ಮುನ್ನ...
ಬಚ್ಚಿಟ್ಟ ಕನಸುಗಳು 
ಕರಗಿ ಹೋಗುವ ಮುನ್ನ  
ಕಣ್ಣ ಮುಂದೆ 
ಹರವಿ 
ಕುಳಿತುಬಿಡು 
ಒಮ್ಮೆ......

ನೂರು ನೂರರಲ್ಲಿ 
ಒಂದನ್ನು ಹೆಕ್ಕಿ 
ಹೊರಟು ಬಿಡು 
ಹಿಂದೆ ತಿರುಗದೆ 
ಸುಮ್ಮನೆ...

ಗುರಿ ಸಾದಿಸೆ 
ಬಂದು 
ಗರಿ ಮುಡಿದುಕೋ
ಬಿಮ್ಮನೆ....

Wednesday, October 19, 2011


...ಮಾತೃದೇವೋಭವ ...
ನಾವು...
ಗಿರಿ ಶೃಂಗವೆನ್ನದೆ
ಕಲ್ಲು ಕಲ್ಲಿನಲ್ಲಿ ಹರಸುವೆವು 
ಕಾಣದ ದೇವರ,

ಇಲ್ಲ ಸಲ್ಲದ ಮೌಡ್ಯವ ನಂಬಿ  
ಗುಡಿ  ಗೋಪುರಗಳ ಕಟ್ಟಿ
ಕಂದಾಚಾರದ ಗುಂಡಿಗೆ ಬಿದ್ದು, 
ಮಠ ಮಾನ್ಯರ ಕಾಲಿಗೆ ಎರಗಿ 
ದೈವಾಂಶಕ್ಕೇರಿಸಿ ಪಾವನರಾಗುವ....

 ನಾವು ...
ಭಕುತಿಯ ನೆಪವಾಗಿರಿಸಿ 
ನೇಮ ನಿಷ್ಟೆಗಳ ಹೆಸರನ್ನಿರಿಸಿ
ಪಾಪ ಕರ್ಮಗಳ ಕೂಪಕೆ ತಳ್ಳಿ  
ಹೊಟ್ಟೆ ತುಂಬಿಸಿಕೊಳ್ಳುವ
ಹೊಟ್ಟೆಭಾಕರ ನಂಬುವೆವು....

ನಾವು...
ಕಣ್ಣ ಮುಂದಿನ ದೇವರ ಮರೆತು 
ಕಾಣದ ದೇವರ ಹಂಬಲಿಸಿ 
ಕಣ್ಣಿದ್ದು ಕುರುಡಾಗುವೆವು
ನಾವು...    

Monday, October 17, 2011

.... sashesha...


......ಸಶೇಷ...
ನಡುಮನೆಯ ಅಂಗಳದಲಿ 
ಮಲಗಿದ್ದ ಮನಸೊಂದು 
ಸದ್ದಿಲ್ಲದೇ ಮಿಡುಕುತಿದೆ...

ಸದ್ದು ಮಾಡುವ ಜೀವಗಳು 
ಬಗೆ ಬಗೆ ಮಂತ್ರಾಲೋಚನೆಯಲಿ 
ಮಗ್ನವಾಗಿವೆ.

ಮಿಡುಕುವ ಮನಸು 
ನಡುಮನೆಯಲ್ಲಿಯೇ ಗತಿಸಿ ಬಿಟ್ಟರೆ...?
ಅಶುಭ ಅಮರಿಕೊಂಡಂತೆ....!

ತರಾತುರಿಯಲ್ಲಿ ಜಗುಲಿಯ ಮೇಲೊಂದು 
ಹಾಸಿಗೆಯ ಹಾಸಿ 
ಮಿಡುಕುವ ಜೀವವ ಮಲಗಿಸಿ 
ನಿರಾಳ ಉಸಿರೊಂದಿಗೆ 
ರೋದನೆಯ ಜೊತೆಗೂಡಿದರು...

ಜೀವವ ತೇಯ್ದು 
ಹಾಸಿಗೆ ನೇಯ್ದ ಮನಸೀಗ 
ಮಮ್ಮಲ ಮರುಗುತ 
ಕಾದಿದೆ, ಕಾಲನು ಬರುವ ದಾರಿಯಲಿ.......

Friday, October 7, 2011

---- ಪ್ರೀತಿ ಎಂಬ ನಿಗೂಢ ...!! ----

 
ಬಾ ಪ್ರೀತಿಯೇ ಬಾ 
ಮನಸು ಹೃದಯಗಳ ನಡುವೆ 
ಕಿಚ್ಚೆಬ್ಬಿಸಿ....
ಮೈ ಕಾಯಿಸಿಕೊಳ್ಳುವ
ಸ್ವಾರ್ಥಿಯೇ ಬಾ...!

ಮೊದಲ ನೋಟದಲ್ಲೇ ಕಾವೇರಿಸಿ
ಹೃದಯದ ಗೂಡಲ್ಲಿ 
ಅಡಗುವ ನೀನು 
ಕಣ್ಣಿಗೆ ಕಾಣದ ನಿಗೂಢ....!!

ಒಮ್ಮೊಮ್ಮೆ 
ನೀನು ಕೌತುಕವೂ  ಹೌದು 
ಬದುಕಿನ ಜಾತಕವೂ ಹೌದು
ರೋಗದಂತೆ  ಉಲ್ಬಣವಾದರೆ
ಸೂತಕವೂ ಹೌದು....!!!

ನೀನು ಹೀಗೆ ಬಂದು 
ಹಾಗೆ ಹೊರಡುವ ಅತಿಥಿಯಂತಲ್ಲ, 
ದೇಹದಲ್ಲಿಯೇ ಬೆರೆತುಹೋದ 
ಬಿಸಿ ನೆತ್ತರಿನಂತೆ...!
ನಿನ್ನ ಬಸಿಯಲು ಹೋದರೆ 
ಜೀವಕ್ಕೆ ಮಾರಕ....

ನಿನ್ನ ಸೆಳಕಿಗೆ ಸಿಲುಕದವರಿಲ್ಲ
ಸೆಲಬೆಯಂತೆ ನೀನು 
ಸಿಲುಕಿದವರು ಬಿಡಿಸಿಕೊಳ್ಳಲು 
ಬಲು ಕಷ್ಟ ಕಷ್ಟ....!!!