ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Tuesday, August 13, 2013

ಬೈರಾಗಿ ದೇಶಿಯರು
-----------------
ಕೌಣಪನನ್ನು ಕಂಡು ಕೌತುಕ ತೋರಿ
ಶಾಂತಿಮಂತ್ರ ಬೋಧಿಸುವ ಬೈರಾಗಿ
ನನ್ನ ದೇಶ. ಸಾವಿನ ಮನೆಯ ಇಟ್ಟಿಗೆ
ನನ್ನ ಯೋಧ!. ಧರ್ಮಗಳೇ ಆಯುಧ!
ಪಾಖಂಡಿ ಮನಸುಗಳ ಸೋಗಿಗೆ
ಭ್ರಾತೃತ್ವ ಬೆಸೆಯುವ ಭ್ರಾಂತಿಗೀಗ
ಅರವತ್ತೇಳನೆ   ಸಂವತ್ಸರ!!

ಹೊಂದಾಣಿಕೆ ಎಂಬುದಿಲ್ಲಿ ನಮಗೆಲ್ಲ
ಹಾಸುಹೊಕ್ಕಾಗಿ ಹೆಣೆದ ಚಾಪೆಯಾದರೆ
ಬಾಯಿತುಂಬಿ ಉಗುಳುವಷ್ಟು
ವಿಶಾಲತೆ ತುಂಬಿ ತುಳುಕಿ
ಕಿಚ್ಚು ಕೀವು ತುಂಬಿ ರೋಗಿಷ್ಟವಾಗಿದೆ

ವಿರೋಧಕ್ಕೂ ಬರ ಬಂದು
ವಿಪರೀತ ಬುದ್ದಿ ತಲೆ ತುಂಬಿದೆ
ಆಲಸ್ಯವೋ ಕುಚೋದ್ಯವೋ
ಉಚ್ಚ್ವಾಸ ನಿಶ್ವಾಸವೂ ಕೃತಕ
ಕೌಲಿಕನೆಂದರೆ ಅಡ್ಡಿಯಿಲ್ಲ
ಭಿನ್ನತೆ ಎಂಬ ಭಗ್ನ ಕಣ್ಣಾಗಿ
ವಾಸ್ತವವ ಕುರುಡಾಗಿಸಿದೆ.

Monday, August 5, 2013

ಮೈಲಿಗೆ
------------
ನನ್ನ ಅಷ್ಟೂ ಕನಸುಗಳನ್ನು
ಮೂಟೆ ಕಟ್ಟಿ ಅಟ್ಟದ ಮೇಲೆಸೆದಿದ್ದೆ.
ಈಗ ಒ೦ದೊ೦ದಾಗಿ ತೆರೆಯುತಿದ್ದೇನೆ
ಚಿತ್ರವಿಲ್ಲ ಬರಹವಿಲ್ಲ ಖಾಲಿ ಖಾಲಿ
ಆಶ್ಚರ್ಯ, ಕನಸಿಗೆ ಮೈಲಿಗೆ ಮೆತ್ತಿದೆ!

ಅಡಿಪಾಯವಿಲ್ಲದ ನೆಲದ ಮೇಲಿನ
ಸೂರಿನ ಕೇಳಗಿನ ಉಸಿರು, ಬೆನ್ನುತೋರಿಸಿ ಚಿತೆಗೆ
ಇದ್ದಷ್ಟು ದಿನ ಜೀವ೦ತ ಶವ.
ನನ್ನ ದೇಹದ ಸ್ವಾಧೀನ ಪರಾವಲ೦ಬಿ
ಈಗ ಉಸಿರಿಗೂ ಮೈಲಿಗೆ ಮೆತ್ತಿದೆ!

ದನಿಯೆತ್ತುವ ನಾಲಿಗೆಯ ನರಕು೦ದಿದೆ!
ಊಳಿಡುವ ನರಿಗಳ ಕೂಗು ಕಿವಿ ತು೦ಬಿದೆ!
ಸತ್ಯ ತಿಳಿವ ಕಣ್ಣಲ್ಲಿ ತು೦ಬಿ ಬರುತಿದೆ ಹಳದಿ
ವ್ರಣ ಕೆರೆದಷ್ಟು ನಚ್ಚಗೆ, ಮತ್ತಷ್ಟು ದೊಡ್ಡ ಗಾಯ
ಕ್ರಮೇಣ ಮೈ ಮನಸ್ಸೆಲ್ಲ ಮೈಲಿಗೆ!


Friday, June 14, 2013

ನಾನು ಬೆತ್ತಲಾದಾಗ..
--------------------
ನೀನು ಸನಿಹವಿದ್ದಷ್ಟು  ಘಳಿಗೆ,
ಹೊತ್ತು, ಸರಿದು ಮುಸುಕು ಹೊದ್ದು
ನಿದ್ದೆಗೆ ಜಾರಿದ್ದು ತಿಳಿಯಲಿಲ್ಲ.
ಏಕೆಂದರೆ  ನನ್ನ ಪ್ರೀತಿ ಬಲಿಯುತ್ತಿತ್ತು;
ಬಯಕೆ ಬುಸುಗುಟ್ಟುತ್ತಿತ್ತು;

ನಿಜ! ಅಷ್ಟೇಕೆ,
ನಿನ್ನ ಮೈ ವಾಸನೆಯಲಿ ಅರಳಿ
ತುಂಬಿದೆದೆಯ ನಡುವೆ ನಲುಗಿ
ನಿನ್ನನ್ನೇ ಆವರಿಸುವಷ್ಟು ದಾಹ!
ಸಂಸರ್ಗದಲಿ ಸಂಸಿದ್ಧಿ ಹೊಂದುವ ತವಕ!

ಬಯಕೆ ಆಸೆ ಮೋಹ ಪ್ರೀತಿಗೆ ಲೇಪ
ನೀನು,  ಅದರ ನೆರಳೆಂದರೂ  ಸರಿಯೇ!
ನೆರಳಂತೆ ಮನಸ್ಸು,
ಹಿಂಬಾಲಿಸುತ್ತಲೇ ಇರುತ್ತದೆ
ಭಾವನೆಗಳಿಗೆ ಆತ್ಮಸಾಕ್ಷಿ ಬಾಗಿಲು 

ಆತ್ಮವಂಚನೆ ನನಗೆ ಸಿದ್ಧಿಸಿಲ್ಲ
ಬೆತ್ತಲೆ ಊರಲ್ಲಿ  ಬೆದೆಗೆ ಬಂದವನಲ್ಲ
ನಿನ್ನ ಮುಂದೆ ಬೆತ್ತಲಾಗಬೇಕಷ್ಟೇ!
ಬೆಳಕು ಬೆತ್ತಲೆಯಲ್ಲವೇ?
ಹಾಗೆ ನಾನು ಬೆತ್ತಲೆ!


Friday, May 10, 2013

                                             ====   ಮೋಡದ ಮರೆಯಲ್ಲಿ ==

          ತನಗಿಂತ ಇನ್ನೊಂದು ವರ್ಷ ಮೇಲ್ಪಟ್ಟ ಮಗುವಿನೊಂದಿಗೆ ಜೂಟ್ ಆಟವಾಡಿಕೊಂಡು ಆಯತಪ್ಪಿ ಮೋರಿಯೊಳಗೆ ಬಿದ್ದು ಹೊರಬರಲಾರದೆ ಆ ಮಗು ಅಳುತ್ತಿತ್ತು.   ಜೊತೆಯಲ್ಲಿದ್ದ  ಮತ್ತೊಂದು ಮಗು ಗಾಬರಿಯಿಂದ   ಈ ಸುದ್ದಿಯನ್ನು ತಿಳಿಸಲು ದೂರದಲ್ಲಿದ್ದ ಮನೆಯ ಕಡೆಗೆ ಅಳುತ್ತಾ ಓಡತೊಡಗಿತು. 

             ಆತನ ಕೆದರಿದ ಕೂದಲು ಎಣ್ಣೆ ನೀರು ಕಂಡು ತುಂಬಾ ದಿನಗಳಾಗಿದೆ ಎಂದು ಸಾರಿ ಹೇಳುತ್ತಿತ್ತು.  ಮೈಮೇಲಿನ ಬಟ್ಟೆಯದು ಅದೇ ಕಥೆ.  ಆತನ ಹೆಗಲಿನ ಮೇಲೆ ಜಿಡ್ಡು ಕಟ್ಟಿದ ಚೀಲವೊಂದು ನೇತಾಡುತ್ತಿತ್ತು.  ಈ ಅವತಾರವೇ ಸಾಕು.   ಅವನು ಚಿಂದಿ ಆಯುವ   ಹುಡುಗನೆಂದು  ಕರೆಯಲು.  ಹೀಗೆ ಪೇಪರ್, ಪ್ಲಾಸ್ಟಿಕ್ ಅರಸುತ್ತಾ ಮೋರಿಯ ಸಮೀಪ ಹೋಗುತಿದ್ದವನಿಗೆ ಮಗು ಅಳುತಿದ್ದ ಶಬ್ದ ಕೇಳಿಸಿತು.  ಅಳುವಿನ ಶಬ್ದವನ್ನು ಅನುಸರಿಸಿ ಹೊರಟವನಿಗೆ ಕಂಡದ್ದು ಸುಮಾರು ಮೂರು ವರ್ಷದ ಮಗು.  ಆ ಮಗುವನ್ನು ಮೋರಿಯಿಂದ  ಮೇಲಕ್ಕೆತ್ತಿ  ಅದರ ಕೈ ಕಾಲುಗಳಿಗೆ ಮೆತ್ತಿಕೊಂಡಿದ್ದ ಮೋರಿಯ ಕೊಳಕನ್ನು ತನ್ನ ಬಳಿಯಿದ್ದ ಕೊಳಕು ಬಟ್ಟೆಯಿಂದಲೇ  ಒರೆಸಿದನು.    ಅಳು ನಿಲ್ಲಿಸಲೆಂದು ತನ್ನ ಕೊಳಕು ಜೇಬಿನಲ್ಲಿದ್ದ ಒಂದು ಚಾಕೊಲೇಟ್ ನೀಡಿದರು ಮೋರಿಯೊಳಗೆ ಬಿದ್ದ ಗಾಬರಿಗೋ ಇಲ್ಲ ಇವನ ಅವತಾರವನ್ನು ನೋಡಿಯೋ ಆ ಮಗು ಮತ್ತಷ್ಟು ಅಳಲು ಶುರುಮಾಡಿತು.  ತಕ್ಷಣ ಮಗುವನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಸಂತೈಸತೊಡಗಿದರು ಸಹ    ಆ ಮಗುವಿನ ಅಳು ಕಡಿಮೆಯಾಗಲೇ ಇಲ್ಲ.   ಆ ಮಗುವಿನ ಬಗ್ಗೆ ಯಾರಲ್ಲಿ ವಿಚಾರಿಸುವುದು ಎಂದು ತೋಚದೆ  ಗೊಂದಲದಿಂದ ನಿಂತಿದ್ದನು.  ಎದಿರಾಗಿ ಬರುತ್ತಿದ್ದ ಕೆಲವರು  ಅಳುತಿದ್ದ ಮಗು ಹಾಗು ಅದನ್ನು ಸಂತೈಸಲು ಒದ್ದಾಡುತಿದ್ದ  ಚಿಂದಿ  ಆಯುವ ಹುಡುಗನನ್ನು  ಅನುಮಾನದಿಂದ ನೋಡತೊಡಗಿದರು.  ಅವರಳೋಗೊಬ್ಬ ''ಇವನು ಮಕ್ಕಳ ಕಳ್ಳನ ಹಾಗೆ ಕಾಣ್ತಾನೆ.  ಮಗುನ ಎಲ್ಲೋ ಕದ್ದುಕೊಂಡು ಬಂದಿರಬೇಕು'' ಎಂದನು.  ಅವನ ಮಾತಿನಿಂದ ಉತ್ತೇಜಿತರಾದವರಂತೆ ಎಲ್ಲರು ಹಿಡ್ಕೊಳ್ಳಿ ಮಕ್ಕಳ ಕಳ್ಳ ಎಂದು ಕೂಗತೊಡಗಿದರು.     ಅವರ ಕೂಗಿಗೆ ಮತ್ತೆಲ್ಲೋ  ಇದ್ದ ಮತ್ತಷ್ಟು ಜನರು ಒಮ್ಮೆಲೇ  ಪ್ರತ್ಯಕ್ಷರಾದರು.  ಅವನಿಗೆ ಮಾತನಾಡಲು ಅವಕಾಶಕೊಡದಂತೆ ಎಲ್ಲಂದರಲ್ಲಿ ಹೊಡೆಯತೊಡಗಿದರು.  ಅವನು ನಿಜ ವಿಷಯವನ್ನು  ಹೇಳುತಿದ್ದರು ಯಾರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.  ಮತ್ತೊಂದು ಮಗುವಿನ ಕೈ ಹಿಡಿದುಕೊಂಡು ಓಡಿ ಬಂದ  ಮಗುವಿನ ತಾಯಿ  ತನ್ನು ಮಗು ಮೋರಿಗೆ ಬಿದ್ದಿದ್ದ ವಿಷಯವನ್ನು ಹೇಳುವ ತನಕ ಚಿಂದಿ  ಆಯುವ ಹುಡುಗ  ಅಲ್ಲಿದ್ದವರಿಗೆಲ್ಲರಿಗೂ  ಅಕ್ಷರ ಸಹ ಫುಟ್ಬಾಲಾಗಿ   ಹೋಗಿದ್ದ.   ನಾ ಮುಂದು ತಾ ಮುಂದು ಎಂದು ಒದೆಯುತಿದ್ದವರೆಲ್ಲರು,  ಒಹ್  ಹಾಗ..,  ಈ ನನ್ನ ಮಗ ಮೊದಲೇ ಹೇಳಿದ್ದರೆ ಏಟಾದರು   ತಪ್ಪಿರೋದು ಎಂದು ನಗುತ್ತಾ ಹೇಳಿ ಹೊರಟುಹೋದರು.  ತಾಯಿ ಮಗುವನ್ನು ಎದೆಗವುಚಿಕೊಂಡು ಸಂತೈಸುತ್ತಾ ಮನೆಯ ಕಡೆಗೆ ಹೊರಟಳು.

        ಮೂಗು ಬಾಯಿಯಲ್ಲಿ ಹರಿಯುತಿದ್ದ ರಕ್ತವನ್ನು ಒರೆಸಿಕೊಳ್ಳುವ ಶಕ್ತಿಯು ಇಲ್ಲದವನಂತೆ ಆ ಚಿಂದಿ  ಆಯುವ ಹುಡುಗ ರಸ್ತೆಯ ಬದಿಯಲ್ಲಿ ನರಳುತ್ತಾ ಬಿದ್ದಿದ್ದನು.  ಈ ಘಟನೆಗೆ ಸಾಕ್ಷಿಯಾಗಿದ್ದ ಸೂರ್ಯ ಮೋಡದೊಳಗೆ ಮರೆಯಾಗಿಹೋದ!!
                                      ===========

Wednesday, April 10, 2013

ಮೊದಲು ನೀ ಬದಲಾಗು.!
---------------------------
ಬಿಸಿರಕ್ತದಲಿ
ಮಿಂದೆದ್ದ ಬೆರಣಿಗಳು
ನಿಗಿ ನಿಗಿ
ಬೇಯ್ದಾಕ್ಷಣಕೆ
ನೀರಲ್ಲಿ
ಪರಿವರ್ತನೆ,
ಬದಲಾವಣೆ
ಬರಬೇಕೆನ್ನುವ ಸಹಜತೆಗೆ
ಶಾಖಕಿಲ್ಲವೇ ವ್ಯವಧಾನ.!
ಮಾನಗೆಟ್ಟ ಬಿಸಿಗೆ
ಅರಿವಾಗಲಿಲ್ಲವೆ ಹೊಸಗೆ.!
ಎದೆಗೆ ಗುಂಡಿಕ್ಕಿ
ಮೀಟಿದಾಗಲೇ ತಿಳಿಯಲಿಲ್ಲವೆ
ಹುಲಿಯ ಚಿತ್ತಾರವಿದು
ಗಮನಿಸಿದರೆ; ಕಾಗದದಮೇಲೆಂದು.
ನಡೆಯಲ್ಲಿ ನುಡಿಯಿರಲಿ
ನಡುಕ ಬಂದರೆ
ಛತ್ರಿಯ ಕೆಳಗಿನ ನೆರಳಿಗೆ
ಜಾಲಿಯ ಮರ
ಗಾಳೀಯ ಬೀಸಿದಂತೆ.!
ಇನ್ನಾದರು ತಿಳಿದೀತೆ
ಹೊಂಗೆಯ  ಮರ ತಂಪೆಂದು.!!!





Monday, January 14, 2013

ಸಿಹಿಮುತ್ತು

ನೀ ನೀಡುವ
ಒಂದೊಂದು ಮುತ್ತಿನಲು
ಅದೆಷ್ಟೊಂದು ಸಿಹಿಯಡಗಿದೆ
ಕಾರಣವೇನೆಂದು
ಮತ್ತಿನಿಂದುಲಿದಳವಳು!
ವೈದ್ಯರೇಳಿದ ಮಾತನ್ನು
ನಂಬಿರಲಿಲ್ಲ ನಾನು,
ದೃಢವಾಯಿತೀಗ
'ಸಕ್ಕರೆಖಾಯಿಲೆ'ಇದೆ ನನಗೆ
ಅದಕ್ಕಷ್ಟೊಂದು ಸಿಹಿಯೆಂದನವನು!!  


ವಿಪರ್ಯಾಸ
-------------
ಅವನು..,
ನಾ
ಬರೆದು
ಕಳುಹಿಸಿಕೊಟ್ಟ
ಪ್ರೇಮಪತ್ರಗಳೆಲ್ಲವನ್ನೂ
ಓದಿದೆಯ-ಇಷ್ಟವಾಯಿತೆ.?

ಅವಳು...,
ನಿನ್ನ ಮಿತ್ರ
ಅವುಗಳನ್ನು
ಕೊಡುತ್ತಿರಲಿಲ್ಲ
ನನ್ನ
ಮುಂದೆ
ಓದುತಿದ್ದ.!

ಇಷ್ಟವಾಯಿತೆ.?

ಹೌದು
ಓದುತಿದ್ದ ರೀತಿ
ಹಾಗು
ಅವನು ಎರಡೂ
ಇಷ್ಟವಾಯಿತು.!!!


 ನೆನಪು
--------
ನಲ್ಲ
ನನ್ನ ತುಟಿಗೆ
ನೀ ಮುತ್ತನ್ನೀಯುವಾಗ
ಕಣ್ಣು ಮುಚ್ಚುವುದು ಏಕೆ ?

ಮತ್ತಾರಿಗೋ
ನೀಡಿದ
ಮುತ್ತಿನ ನೆನಪು
ಬಾರದಿರಲೆಂದು.!!


 ಅವನು-ಅವಳು
---------------
ಅವನು,
ನನ್ನ ಕಣ್ಣಲ್ಲಿ
ಕರಗಿ
ಕನಸಲ್ಲಿ ಕಾಡುವ
ನೀನು
ಹೃದಯದಲ್ಲಿ
ಕೂರುವುದು
ಯಾವಾಗ.?

ಅವಳು,
ನನ್ನ ಮನೆಗೆಂದು
ಬಂದು
ಎನ್ನ
ನಲ್ಲನ ಕೇಳು
ಅವರೊಪ್ಪಿದರಡ್ಡಿಯಿಲ್ಲ
ಯಾವಾಗ ಬರುವಿ
ಹೇಳು.?

Wednesday, January 9, 2013

ಭ್ರಾಂತಿ ಎಂಬ ಸ್ಖಲನ
---------------------------

ಹುಳಿ-ಉಪ್ಪು ಮುಂದಾಗಿ
ಸೊಕ್ಕಿ ಉಕ್ಕುವ ಗೇಹ
ಬಯಕೆಯ ಬಾಣಲಿಯಲಿ-
ಸಂಡಿಗೆ. ಉಪ್ಪುಕಾರ ಜೊತೆಯಲಿ.

ಕನಸುಮೇಲೋಗರ.!
ಹಳ್ಳ ದಿಣ್ಣೆ  ತೆವರಿ ತಿಟ್ಟಿನ
ಬದದಾಚೆಗೀಚಿನ ತೂಗಿ ಬಾಗೊ
ಚಲುವಿನಾ ಪ್ರಕೃತಿ.

ಸೆಳೆಯಲಷ್ಟೇ ಸಾಕು; ವಿಕೃತಿ
ಮುಂದಾಗುವುದೆಲ್ಲ ವಿಸ್ಮೃತಿ
ಮೃಗಕ್ಕಿಲ್ಲ ಬಂಧುತ್ವ
ಅನಾಗರೀಕತೆಗಿಲ್ಲ ಸಾಧುತ್ವ.

ನೆನಪುಗಳ ನೇವರಿಸುವಾಗ
ನೆಪಕ್ಕೆಂದಿಟ್ಟಿದ್ದ ವೀರ್ಯ.., ಸ್ಖಲನ,
ಮತ್ತೇಕೆ ಬೇಕು ವ್ಯವಕಲನ
ಗಂಡು ಹೆಣ್ಣು ಅಂದರೆ ಸಂಕಲನ. 

 
ಸುಡುಗಾಡು ಬೆಂಕಿಯಲಿ-
ಬೆಂದ ದೇಹದ ತಾಪ
ಹಸಿ ಹಸಿ ವಾಸನೆಗೆ

ಬೇಕಿತ್ತು ನೆಪ.

ವಿವೇಕಕ್ಕಿಲ್ಲ  ವಿಶ್ಲೇಷಣೆ
ಕಾಮಕ್ಕೆಲ್ಲಿಯದು ಕಣ್ಣು
ಮೈಭಾರ ತಗ್ಗಬೇಕು
ಬಿಸಿಯುಸಿರ ಬಸಿಯಬೇಕು.! 


ಕಾಮಾದಿ ಬಯಕೆಯಲಿ
ನಾಯಿ ಮುಟ್ಟಿದ ಮಡಿಕೆ;ಮನಸು
ತೊಗಲಾಚೆಗೀಚಿನ ವ್ಯಾಮೋಹ
ಜೀವಮಾನ ಹರಣಕ್ಕಾರಣ.