ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Monday, December 12, 2011

...ಅವಳಿಗೂ ಹೃದೆಯವಿದೆ ....

ದೀಪದ ಕೆಳಗಿನ ಕತ್ತಲೆ.
----------------------
ಉತ್ಸಾಹದಿಂದ ಬಂದವನಿಗೆ
ಮೈಯನ್ನೇ ಹಾಸಿಗೆಯನಿಸಿ
ಮೈ ಬಿಸುಪನ್ನು ಬಸಿದು
ಹಗುರಾಗಿಸಿದವಳ
ಒಡಲ ಅರ್ತನಾದಾದಗಳು
ಕರಗಿ ಹೋಗಿವೆ ಕಾರಿರುಳಲ್ಲಿ.

ಕನಸುಗಳು ಕಣ್ಣೀರುಡುವಾಗ
ಅವಳ ಆಸೆಗಳಿಗೇನು ಕೆಲಸ!
ಕದವಿಕ್ಕಿ ಕುಳಿತ ಮನಕೆ
ಕತ್ತಲೆ ಅವಳ ಜೊತೆಗಾರನಲ್ಲವೆ!?
ಅವಳ ಪಾಲಿಗೆ ಬೆಳಕು ಬೇಗೆಯಾಗಿದೆ.

ಅವಳಿಗೊಂದು ಬದುಕಿದೆ
ಆ ಬವಣೆಯ ಹಿಂದೆ ಹಸಿವಿದೆ
ನೆಚ್ಚಿಕೊಂಡ ಹೊಟ್ಟೆಗಳ ಹಿಂದೆ
ಅಪ್ಪಿಕೊಂಡ ಸಂಬಂಧದ ಮೇಲೆ
ಬೆದೆಗೆ ಬಂದ ನಾಯಿಗಳು ಸವಾರಿ ಮಾಡಿವೆ.!

ಆದರೆ...!!!

ತನ್ನಂತಾನೆ ಉರಿದುಕೊಂಡು
ಬೆಳಕ ಕೊಡುವ
ದೀಪದ ಕೆಳಗಿನ ಕತ್ತಲೆ ಅವಳು.!!

Friday, November 25, 2011

ನೀ ಬರೋ ದಾರಿಯಲಿ....
ಕಂಗಳು ಕಾದಿರಲು
ಕನಸಿನ ದಾರಿಯಲಿ...,

ಮಲ್ಲಿಗೆ ಚಲ್ಲಿದೆ
ಸಂಪಿಗೆ ಕಂಪಿದೆ
ಜಾಜಿಯ ಸೊಬಗಿದೆ 

ನಿನ್ನ ಬರುವಿಕೆ ಕಾಯುತಲಿ...!

ಕನಿಕರ ಬಾರದೆ
ಕಂಬನಿ ಕಾಣದೆ
ಹೃದೆಯದ ಬೇಗೆಯು
ನಿನ್ನನು ತಾಕದೆ....!

ನನ್ನ ಹೃದೆಯಕ್ಕೆ
ಭಾವವೊಂದೇ
ಭಾವಕ್ಕೆ ಭಾಷೆಯೊಂದೇ 

ಆ ಭಾಷೆಗೆ ಭಾಷ್ಯ ನೀನೆ ನೀನೆ...!

ಮನಸದು ಮಿಡಿಯುತಿದೆ
ಒಲವಿದು ಬಯಸುತಿದೆ
ಸೊಗಸಿನ ಸೊಗಡಿನಲ್ಲಿ
ಸವೆದಿಹ ನಿರೀಕ್ಷೆಯಲಿ...!

ಆಶಯ ಗೀತೆ
ಅಭಿಜ್ಞಾನದಂತೆ
ನಿನಗೀಗ ಕೇಳಿಸದೆ
ನಿನ್ನೊಲವು ಕಾಯುತಿದೆ...

ಪ್ರಥಮದಿ ಅಂಕುರ
ಪ್ರೇಮವು ನಿರಂತರ
ಪ್ರೀತಿಯ ಅಂತರ
ಕಾಲವು ಮಾಗಲು
ಸಾವಲಿ ಕೊನೆಯದು..
ನನ್ನ ಸಾವಲಿ ಕೊನೆಯಿದು.

                ಪ್ರೀತಿಯಿಂದ ಸತೀಶ್, ರಾಮನಗರ 

Monday, November 14, 2011



-----ಕರಗಿ ಹೋದನವನು----- ಇದು ಕಲ್ಪನೆಯಲ್ಲ ನಿಜದ ಕಥೆ.  { ದಯಾ ಮರಣ ಬೇಕೇ ಬೇಡವೇ]
          ಆ ದಿನ ಕೆಲಸಕ್ಕೆ ಹೊರಡಲು ತಯಾರಾಗುತಿದ್ದೆ.  ನಮ್ಮ ಅಣ್ಣ ಸ್ವಲ್ಪ ಗಾಬರಿಯಿಂದ ಬಂದವನೇ '' ಶ್ರೀಧರನಿಗೆ ಮಂಡಿ ನೋವುಬರುತಿತ್ತು.  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಕ್ಸರೇ ತೆಗಿಸಿದೆ.  ಅದನ್ನು ನೋಡಿದ ಡಾಕ್ಟ್ರು, ಮಂಡಿಗೆ ಆಪರೇಶನ್  ಮಾಡಬೇಕು ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದರು'' ನಿನಗೆ ಆ ಡಾಕ್ಟ್ರು ಪರಿಚಯ ಇದ್ದರಲ್ವ.  ಅವರಿಗೆ ಒಂದೆರಡು ಸಾವಿರ ಕೊಟ್ಟರಾಯ್ತು.  ಇಲ್ಲೇ ಆಪರೇಶನ್ ಮಾಡೋಕೆ ಹೇಳೋ ಅಂದ.  ಸರಿ ಹೇಳಿ ನೋಡ್ತೀನಿ  ಎಂದು ಆಸ್ಪತ್ರೆಗೆ ಹೋಗಿ ಡಾಕ್ಟರನ್ನು ಭೇಟಿ ಮಾಡಿ ವಿಚಾರಿಸಿದೆ.  ನಿಮಗೆ ಆ ಹುಡುಗ ಏನಾಗಬೇಕು ಎಂದು ವಿಚಾರಿಸಿದರು.  ಅವನು ನಮ್ಮ ದೊಡ್ಡಪ್ಪನ ಮೊಮ್ಮಗ, ತಂದೆಗೆ ಒಬ್ಬನೇ ಮಗ.   ಮದುವೆಯಾದ ತುಂಬಾ ದಿನಗಳ ನಂತರ ಹುಟ್ಟಿದ.  ಹಿಂದಿನ ವರ್ಷ ಎಸ್ ಎಸ್ ಎಲ್ ಸಿ ಮುಗಿಸಿದ್ದಾನೆ ಎಂದೆ.  ನೀವು ಸ್ವಲ್ಪ ಹೊರಗಡೆ ನಿಂತಿರಿ ಎಂದು ನನ್ನ ಅಣ್ಣನಿಗೆ ಹೇಳಿ, ಎಕ್ಸರೇ ತೋರಿಸುತ್ತಾ ...ನಿಮ್ಮ ಅಣ್ಣನ  ಮಗನಿಗೆ ಬೋನ್ ಕ್ಯಾನ್ಸರ್ ಆಗಿದೆ.  ಯಾವುದಕ್ಕೂ ಕಿದ್ವಾಯ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚೆಕ್ ಮಾಡಿಸಿ ಎಂದರು.  ಒಂದು ಕ್ಷಣ ನನಗೆ ನಂಬಿಕೆ ಬರಲಿಲ್ಲ.  ಡಾಕ್ಟರ್ .....ಎಂದೆ.  ನನಗೆ ತಿಳಿದ ಮಟ್ಟಿಗೆ ಸತ್ಯವನ್ನೇ ಹೇಳಿದ್ದೇನೆ ಎಂದರು.  ದುಗುಡವನ್ನು ತೋರಗೊಡದೆ,  ಶ್ರೀಧರ ಹಾಗೂ ನನ್ನ ಅಣ್ಣನನ್ನು  ಮನೆಗೆ ಕರದುಕೊಂಡು ಬಂದೆ.  ಅಣ್ಣನ ಕೈಗೆ ಸ್ವಲ್ಪ ಹಣವನ್ನು ನೀಡಿ, ಅವನ ಮಂಡಿಗೆ ಇಲ್ಲಿ ಆಪರೇಶನ್ ಮಾಡೋಕೆ ಆಗಲ್ವಂತೆ.  ಅದಕ್ಕೆ ನೀನು ಬೆಳಿಗ್ಗೆ ಕಿದ್ವಾಯ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಬಾ ಎಂದು ನಿಜಾಂಶ ಮುಚ್ಚಿಟ್ಟು ಕಳುಹಿಸಿದೆ.  
           ಅಲ್ಲೂ ಕೂಡ ಆಪರೇಶನ್ ಮಾಡಲೇ ಬೇಕು ಅಂತ ಹೇಳಿದ್ದಾರೆ.   ಅಂಗೈ ಅಗಲ ಇದ್ದ ತುಂಡು ಭೂಮಿಯನ್ನು ಮಾರಿ,  ಸಾಲ ಸೋಲ ಮಾಡಿ ಆಪರೇಶನ್ ಮಾಡಿಸಿದ್ದಾಯ್ತು. ಒಂದು ವರ್ಷ ಚನ್ನಾಗಿಯೇ ಕಳೆಯಿತು.  ನನ್ನ ಅಣ್ಣ ಅತ್ತಿಗೆ ಕೂಡ ಅಷ್ಟೆಲ್ಲ ಸಾಲವಾದರು ಸಹ, ಮಗ... ಮತ್ತೆ ಮೊದಲಿಂತಾದನಲ್ಲ ಎಂದು ಖುಷಿಯಿಂದಿದ್ದರು.  ಒಂದು ದಿನ ಮನೆಯ ಬಳಿ ಶ್ರೀಧರ ಬಂದವನೇ, ಚಿಕ್ಕಪ್ಪ ನನಗೆ ಒಂದು ಆಟೋ ಕೊಂಡುಕೊಡು, ನನಗೆ ಕಾಲ ಕಳೆಯಲು ಬೇಜಾರು ಎಂದ.  ಆಯ್ತಪ್ಪ, ನೀನೆ ಯಾವುದಾದರು ಇದ್ದರೆ ಹುಡುಕು, ನಾನು ದುಡ್ಡು ಕೊಡುತ್ತೇನೆ ಎಂದು ಹೇಳಿ ಕಳುಹಿಸಿದೆ.  ಹುಡುಕಿಕೊಂಡು ಬರುತ್ತೇನೆ ಚಿಕ್ಕಪ್ಪ ಎಂದು ಹೇಳಿ ಹೋದವನನ್ನು ಮತ್ತೆ ಕಂಡದ್ದು ಆಸ್ಪತ್ರೆಯಲ್ಲಿಯೇ.  ಯಾಕೋ... ಆಟೋ ಹುಡುಕಿಕೊಂಡು ಬರುತ್ತೇನೆ ಎಂದು ಹೇಳಿದ್ದವನು ಹೀಗೆ ಆಸ್ಪತ್ರೆ ಸೇರಿದ್ದಿಯಲ್ಲಪ್ಪ ಅಂದೆ.  ಸೊಂಟದಿಂದ ಮೇಲ್ಬಾಗ ಎದೆಗೂಡು  ಎಲ್ಲಾ ತುಂಬಾ ನೋವು ಚಿಕ್ಕಪ್ಪ ಅದಕ್ಕೆ, ಅಪ್ಪಾ ಕರೆದುಕೊಂಡು ಬಂದು ಆಸ್ಪತ್ರೆಗೆ  ಸೇರಿಸಿದರು ಅಂದ.   ನಾನು ಆಗಾಗ ಹೋಗಿ ಬರುತಿದ್ದೆ.  ಆತನ ಆರೋಗ್ಯ ತೀರ ಹದಗೆಡುತ್ತಾ ಬರುತ್ತಿತ್ತು. ಅವನು ಅನುಭವಿಸುತಿದ್ದ ನೋವನ್ನು ನೋಡಲಾರದೆ ಆಸ್ಪತ್ರೆ ಬಳಿ ಹೋಗುವುದನ್ನೇ ಬಿಟ್ಟು ಬಿಟ್ಟಿದ್ದೆ.  ಆದರೆ  ಫೋನಲ್ಲಿ ಮಾತನಾಡುತಿದ್ದೆ.  ಡಾಕ್ಟರು, ಇನ್ನು ಒಂದು ತಿಂಗಳು ಅವನ ಬದುಕಿನ ಅವಧಿ ಎಂದು ನನಗೆ ಮಾತ್ರ ತಿಳಿಸಿದರು.  ಆ ಖಾಯಿಲೆಯ ಭೀಕರತೆಯ ಬಗ್ಗೆ ತಿಳಿದಿದ್ದರಿಂದ, ನಿರೀಕ್ಷಿಸಿಯೇ  ಇದ್ದೆ.  ಮಗನ ಸಾವನ್ನು ಸ್ವಾಗತಿಸಲು, ನನ್ನ  ಅಣ್ಣ ಕೂಡ ಮಾನಸಿಕವಾಗಿ ಸಿದ್ಧನಾಗಿಬಿಟ್ಟಿದ್ದ.  ಅತ್ತಿಗೆಯಿಂದ ಆ ವಿಷಯ ಮುಚ್ಚಿಟ್ಟಿದ್ದೆವು. ಆದರೂ ಅವರಿಗೆ ದೂರದ ಆಸೆ, ಯಾವ ಯಾವುದೋ ನಾಟಿ ವೈದ್ಯರನ್ನು ಕರೆಸಿ ಔಷಧಿ ಕೊಡಿಸಿದ್ದಾಯ್ತು.  ಏನು ಪ್ರಯೋಜನವಾಗಲಿಲ್ಲ.  ಹುಬ್ಬಳ್ಳಿಯಿಂದ ನಾಟಿ  ವೈದ್ಯನೊಬ್ಬ ಬಂದು ನೋಡಿದ.  ಐವತ್ತು ಸಾವಿರ ಕೊಟ್ಟರೆ ಚಿಕಿತ್ಸೆ ಕೊಡುತ್ತೇನೆ.  ನಿಮ್ಮ ಮಗ ಗುಣವಾಗುತ್ತಾನೆ ಎಂದು ನಂಬಿಸಿಬಿಟ್ಟಿದ್ದ.  ನನಗೆ ವಿಷಯ ಮುಟ್ಟಿಸಿದರು.  ಆ ನಾಟಿ, ವೈದ್ಯ ಅಲ್ಲೇ ಪಕ್ಕದೂರಲ್ಲಿ  ಠಿಕಾಣಿ ಹೂಡಿದ್ದ.  ಅವನ ಬಳಿ ನನ್ನ ಅಣ್ಣನೊಡನೆ  ಹೋದೆ.  ಆತ ತನ್ನನ್ನು ಆಯುರ್ವೇದಿಕ್ ಡಾಕ್ಟರ್ ಎಂದು ನನಗೆ ಪರಿಚಯಿಸಿಕೊಂಡ. ಪೇಶಂಟ್ ರಿಪೋರ್ಟೆಲ್ಲ ನೋಡಿದ್ದೀನಿ, ಗುಣಪಡಿಸಬಹುದು ಎಂದ.  ನನ್ನ ಅಣ್ಣನ ಮನಸ್ಸಿಗೆ ಬೇಸರವಾಗಬಾರದೆಂದು ನನ್ನ ಕೋಪವನ್ನು ಅದುಮಿಟ್ಟುಕೊಂಡು ಹೇಳಿದೆ.  ಒಂದು ಲಕ್ಷವನ್ನೇ ಬೇಕಾದರೆ ಕೊಡುತ್ತೇನೆ.  ಆತನನ್ನು ನೀನು ಬದುಕಿಸುವುದು ಬೇಡ, ಆತ ಪಡುತ್ತಿರುವ ನೋವು ಸಂಕಟವನ್ನು ಕಡಿಮೆ ಮಾಡಲಿಕ್ಕೆ ಔಷಧಿ ಕೊಟ್ಟರೆ  ಸಾಕು ಎಂದೆ.  ಏಕೋ ಆತ ನಿರುತ್ತರನಾದ. ಅಣ್ಣನಿಗೆ,  ಮತ್ತೆ ಈ ರೀತಿಯ ವ್ಯಕ್ತಿಗಳನ್ನು ನಂಬಿ ಮೋಸ ಹೋಗಬೇಡ ಎಂದು ಬುದ್ದಿ ಹೇಳಿ ಬಂದೆ.  ಎರಡು ದಿನಗಳ ಬಳಿಕ,   ಚರ್ಚಿನ ಫಾದರ್ ಎಂಬೊಬ್ಬ ವ್ಯಕ್ತಿ, ಏಸುವಿನಲ್ಲಿ ಪ್ರಾರ್ಥಿಸಿ  ಅವನ ನರಳುವಿಕೆಯನ್ನು ಕಡಿಮೆ ಮಾಡುತ್ತೇನೆ ಎಂದು, ನನ್ನ ಅಣ್ಣ ಅತ್ತಿಗೆಯನ್ನು ನಂಬಿಸಿದ.  ಅವರ ಮನಸ್ಸಿಗೆ ಬೇಸರವಾಗಬಾರದೆಂದು ನನ್ನ ಕಾರಿನಲ್ಲಿಯೇ ಕರೆದುಕೊಂಡು ಚರ್ಚಿನ ಬಳಿ ಹೋದೆ.  ಶ್ರೀಧರ ತುಂಬಾ ಕಷ್ಟದಿಂದ ಮೆಟ್ಟಿಲನ್ನು ಏರಿ, ಆಯಾಸ ಪಡುತ್ತಾ ಕುಳಿತುಕೊಂಡ.  ಫಾದರ್, ಕೊಬ್ಬರಿ ಎಣ್ಣೆಯನ್ನು ಏಸು ಮೂರ್ತಿಯ ಬಳಿ ಇಟ್ಟು ಪ್ರಾರ್ಥಿಸಿ, ಅದನ್ನು ತಂದು ಶ್ರೀಧರನ ತಲೆಗೆ ಸವರಿದ.  ದಿನ ಅವನ ತಲೆಗೆ ಎಣ್ಣೆ ಹಚ್ಚಿರೆಂದು ಡಬ್ಬಿಯನ್ನು ನೀಡಿದ.  ಅಲ್ಲಿಗೆ ಬಂದು ಶ್ರೀಧರನ ಆಯಾಸ ಜಾಸ್ತಿ ಆಯಿತೆ ಹೊರತು.  ನೋವು ಮಾಯವಾಗಲಿಲ್ಲ.  ಆ ಹುಡುಗನಿಗೆ ತನ್ನ ಅಂತಿಮ ದಿನಗಳು ಸಮೀಪಿಸುತ್ತಿದೆ ಎಂದು ತಿಳಿದುಹೋಗಿತ್ತು. 
            ಒಂದು ದಿನ ಚಿಕ್ಕಪ್ಪ ನೀನು ಬರಲೇ ಬೇಕು ಎಂದು ಫೋನ್ ಮಾಡಿದ.  ನಾನು ಆತಂಕದಿಂದಲೇ  ಹೋದೆ.  ನನ್ನ ಕೈ ಹಿಡಿದುಕೊಂಡು..'' ಚಿಕ್ಕಪ್ಪ,  ನಾನು ಕಣ್ಣ ತುಂಬಾ ನಿದ್ದೆ ಮಾಡಿ ಆರು  ತಿಂಗಳಾಯ್ತು.  ಇನ್ಜೆಂಕ್ಶನ್ ಕೊಟ್ಟು ಕೊಟ್ಟು ನನ್ನ ಎರಡು ಕುಂಡಿಗಳು ಕಲ್ಲಿನಂತಾಗಿ ಹೋಗಿದೆ.  ಬಲವಂತದಿಂದ ಕೊಟ್ಟಾಗ ಪ್ರಾಣ ಹೋದಂತಾಗುತ್ತದೆ.  ನಾನು ಎರಡು ಸಾರಿ ಸಾಯಲು ಹೋದೆ.  ನಮ್ಮ ಅಪ್ಪಾ ನೋಡಿಕೊಂಡು ಮನೆಯಲ್ಲಿದ್ದ ಅಗ್ಗವನ್ನು ಬೆಂಕಿಗೆ ಹಾಕಿದ.  ನಾನು ಪಡ್ತಾಯಿರೋ ನೋವು ಯಾಕೆ ನಿಮಗೆ ಯಾರಿಗೂ ಅರ್ಥ ಆಗೋಲ್ಲ.  ಹಾಳಾದ್ದ ಸಾವು ದಿನ  ದಿನ ಒಂದೊಂದೇ ಚೂರು ಕೊಲ್ತಾಯಿದೆ.  ಡಾಕ್ಟರಿಗೆ ನನ್ನ ಸಾಯಿಸಿ ಬಿಡಿ ಎಂದು ಕಾಲು ಹಿಡಿದು ಬೇಡಿಕೊಂಡೆ ಅವರಿಗೆ ಕರುಣೆ ಬರಲಿಲ್ಲ.   ಈ ಕತ್ತಿನಿಂದ ಪೂರ್ತ ಕೆಳ ಭಾಗ ಅಸಾಧ್ಯವಾದ ನೋವು.  ನನ್ನ ಪ್ರತಿಯೊಂದು ಕಾರ್ಯಕ್ಕೂ ಈಗ ಅಪ್ಪಾ ಬೇಕೇ ಬೇಕು.  ನನ್ನಿಂದಾಗಿ ಅವರಿಬ್ಬರೂ ಹೊಟ್ಟೆ ತುಂಬಾ ಊಟ ಮಾಡಿ ಎಷ್ಟು ದಿನವಾಯ್ತೋ.    ಚಿಕ್ಕಪ್ಪ ನಿನ್ನ ಬೇಡಿಕೊಳ್ತೀನಿ, ಡಾಕ್ಟರಿಗೆ ಹೇಳಿ ನಾನು ಸಾಯುವ ಹಾಗೆ ಯಾವುದಾದರು ಔಷಧಿ ಕೊಡಲಿಕ್ಕೆ ಹೇಳು.  ಇಲ್ಲ ನಿನ್ನ ಕೈಯಿಂದ ನನ್ನ ಕುತ್ತಿಗೆಯನ್ನು ಹಿಸುಕಿ ಸಾಯಿಸಿಬಿಡು ಚಿಕ್ಕಪ್ಪ.  ನನ್ನ ಕೈಯಲ್ಲಿ ಈ ನೋವನ್ನು ತಡೆದು ಸಾಕಾಗಿ ಹೋಗಿದೆ.  ನಮ್ಮ ಅಪ್ಪಾ ದುಡ್ಡು ಖರ್ಚು ಮಾಡಿಕೊಂಡು ನನ್ನ ಜೊತೇನೆ ದಿನ ಅವನು ಸಾಯ್ತಾಯಿದ್ದಾನೆ''.    ಎಂದು ಹೇಳುವಷ್ಟರಲ್ಲಿ ಎದುಸಿರು ಬಿಡುತಿದ್ದ.  ನನ್ನ ಕಣ್ಣಿನಿಂದ ಜಾರುತಿದ್ದ ಹನಿಗಳನ್ನು ತಡೆದಿಟ್ಟುಕೊಳ್ಳಲಿಕ್ಕೆ ಆಗಲಿಲ್ಲ.  ಸ್ವಲ್ಪ ಸುಧಾರಿಸಿಕೊಂಡು, ಚಿಕ್ಕಪ್ಪ ನಾನು ಸತ್ತರೆ ನಮ್ಮ ಅಪ್ಪಾ ಅಮ್ಮನನ್ನ  ನೋಡಿಕೊಳ್ಳಲು ಯಾರು ಇಲ್ಲ.  ನೀನು ನೋಡಿಕೊಳ್ತೀ ಅನ್ನೋ ನಂಬಿಕೆ ನನಗಿದೆ,  ಎಂದು ಹೇಳುತ್ತಾ ಕಣ್ಣ ತುಂಬಿಕೊಂಡನು.  ನಾನು ಏನು ಮಾತನಾಡಲು ಸಾಧ್ಯವಾಗಲಿಲ್ಲ.  ತಲೆಯಾಡಿಸಿ ಹೊರಗೆ ಬಂದುಬಿಟ್ಟೆ.  ಐದು ದಿನಗಳ ನಂತರ ಅವನ ಸಾವಿನ ಸುದ್ದಿ ಬಂತು.
{  ಈಗ ಹೇಳಿ ದಯಾ ಮರಣ ಬೇಕೇ ಬೇಡವೇ] ಇದು ನಿಜದ ಕಥೆ.  ಕಲ್ಪನೆಯಲ್ಲ.

Saturday, November 12, 2011


 '' ಮುಸ್ಸಂಜೆ '' 

ಒಂದೊಂದು ಸುಕ್ಕಿನ ಸಾಲಿಗೂ 
ಮಾಗಿದ ಹಿರಿತನದ ಪಾಲಿದೆ 
ಸಾಗಿ ಬಂದ ದಾರಿಯ ನೆನಪಿದೆ 
ಕಷ್ಟ ಕಾರ್ಪಣ್ಯಗಳ ನೆರಳು ಹಿಂಬಾಲಿಸಿದೆ.
 
ನೆರಳು ಬೆಳಕಿನ ಆಟದಂತ ಜೀವನ 
ಆ ತಕ್ಷಣ ಬಿಸಿಲು, ಆಗಾಗ ಅಡ್ಡ ಬರುವ ಮೋಡ 
ಮಳೆಯಾಗಿ ಸುರಿಯೆ 
ಬಾಚಿಕೊಂಡ ಇಳೆಯಂತೆ ಬದುಕು 
ಉದುರಿಬಿದ್ದ ತಾರೆಗಳಂತೆ 
ಕುಡಿ ಹೊಡೆದು ಹೊರಬಂದ ನವ ಜೀವ 
ಸಾರ್ಥಕತೆಯ ಭಾವ...!
 
ಹೆಗಲಿಗೆ ನೊಗ ಕಟ್ಟಿ 
ಹಳ್ಳ ದಿಣ್ಣೆಗಳನು ಬಿಡದೆ 
ಉತ್ತಿ ಬಿತ್ತುವ ಕಾಯಕದಿ 
ಸವೆಸಿದ ದಿನಗಳೆಷ್ಟೋ 
ಮುಸ್ಸಂಜೆಗೆ ಆಸರೆಯಾಗದ 
ಬೆವರಿನ ನೆರಳುಗಳು...!
''ಹುಟ್ಟಿಸಿದ ದೇವರು ಹುಲ್ಲು ಮೇಯಿಸಲು 
ಸಾಧ್ಯವೇ'' 
ಸಂವತ್ಸರಗಳು ಬಂದಷ್ಟೇ ವೇಗದಲಿ ಮಾಯವಾಗಿ
ಸುಕ್ಕಿನ ಹಿಂದಿನ ಸಾಲಲಿ ಬಂದು ನಿಂತಿವೆ 
ಮುಸ್ಸಂಜೆಯು ಕರಗುವ ದಾರಿಯನು 
ಎದಿರು ನೋಡುತಾ......!
             ಪ್ರೀತಿಯಿಂದ ಸತೀಶ್.  ರಾಮನಗರ.

Thursday, October 27, 2011

'' ಹಾಗೆ ಸುಮ್ಮನೆ ''  ಓದಿ ಮರೆತು ಬಿಡಿ.. ಮಣಿಕಾಂತ್ ರವರ  ಈ ಗುಲಾಬಿಯು ನಿನಗಾಗಿಯಿಂದ ಪ್ರಭಾವಿತನಾಗಿ  ಬರೆದದ್ದು.

ಪ್ರೀತಿಯ ಹುಡುಗಿಗೆ....
         ಹೇ,,,ಹುಡುಗಿ, ದಿನಕ್ಕೆ ಎರಡು ಪ್ರೇಮ ಪತ್ರ ಬರಿತೀಯ, ನಿಮಿಷಕ್ಕೆ ಹತ್ತು ಮಿಸ್ ಕಾಲ್ ಕೊಡ್ತಿಯಾ, ಗಂಟೆಗೊಂದು ಸಾರಿ ಫೋನ್ ಮಾಡಿ ತಲೆ ತಿಂತಿಯಾ.  ನಾನು ನಡೆದುಕೊಂಡು ಹೊರಟರೆ, ಹಿಂದಿಂದಿನೆ ಬರ್ತೀಯ.ನಾನು ಬೈಕ್ನಲ್ಲಿ ಹೊರಟರೆ, ನೀನು ಸ್ಕುಟೀಲಿ ಫಾಲೋ ಮಾಡ್ತೀಯ.  ಅಲ್ವೇ ಹುಡುಗಿ...ನೀನು, ಬೆಳದಿಂಗಳು ಚಲ್ಲಿರೋ ಬೆಳಕನ್ನೆಲ್ಲ ಮುದ್ದೆ ಮಾಡಿಟ್ಟು, ಕೆತ್ತಿರೋ ದಂತದ ಬೊಂಬೆಯಂತಿದ್ದಿ ಇನ್ನು ನಾನೋ...ಕನಸುಗಳನ್ನೆಲ್ಲ ಗುಡ್ಡೆ ಮಾಡಿ ಮುದ್ರಿ ಬಿಸಾಡಿರೋ ಪೇಪರ್ ಥರ  ನಾನಿದ್ದೀನಿ.  ಒಂದಕ್ಕೊಂದು ಮ್ಯಾಚೇ ಆಗುತಿಲ್ವಲ್ಲೇ ಹುಡುಗಿ.  
         ಚಿನ್ನದ  ತಟ್ಟೆಯಲ್ಲಿ  ಊಟ ಮಾಡೋ ನೀನೆಲ್ಲಿ.  ಸಿಲ್ವರ್ ತಟ್ಟೆಗೆ ಸೀಮಿತನಾಗಿರೋ ನಾನೆಲ್ಲಿ.  ಹಾಗೆ ಒಂದು ಕ್ಷಣ ಯೋಚನೆ ಮಾಡು.  ಏ ಸಿ  ರೂಮಲ್ಲಿ ಮಲಗೋ ನೀನು, ಸಗಣಿ ತಾರಿಸಿದ ನೆಲದ ಮೇಲೆ, ನಕ್ಷತ್ರಗಳನ್ನ ಲೆಕ್ಕ ಹಾಕ್ತಾ, ಕಿತ್ತೋಗಿರೋ ಕನಸುಗಳ ಜೊತೆ ಬದುಕುತ್ತಿರುವ ನನ್ನ ಜೊತೆ, ಜೀವನ ಪೂರ್ತ ಜೊತೆಯಾಗಿ ಬಾಳ್ತೀನಿ ಅಂತಾ...ಕಾಲಲ್ಲಿ ಒದ್ದರು, ಕೈ ಕಾಲು ಮುರಿದುಕೊಂಡು ಬಿದ್ದಿರುವ ಸಂಪತ್ತನ್ನು ಬಿಟ್ಟು ಬರ್ತೀನಿ ಅಂತ ಹೇಳೋ ನೀನು,  ನಿಜಕ್ಕೂ ಅಮಾಯಕ ಹುಡುಗಿ ಕಣೆ  ನೀನು.  ಈ ಪ್ರೀತಿ ಪ್ರೇಮ ಎಲ್ಲಾ ಎದೆಯಲ್ಲಿ ಕಾವಿರೋ ತನಕ.  ಹಾಳಾದ್ ಹೃದೆಯಕ್ಕೆ ವಿವೇಚನೆ ಅನ್ನೋದೆ ಇರೋಲ್ಲ.  
         ಈ ಆಕರ್ಷಣೆ ಆನ್ನೋದು ಕುಲುಮೆಯ ಬೆಂಕಿಯಲ್ಲಿ ಕಾದ ಕತ್ತಿಯ ಅಲುಗಿದ್ದಂತೆ.  ಅಮಲಿನ ಅಲುಗು ಇಬ್ಬರಿಗೂ ಅಪಾಯ.   ಇರೋ ಬಾರೋ ಕೋಮಲತೆಯನ್ನೆಲ್ಲ ನಿನ್ನ ಕಣ್ಣ ಕಪ್ಪಿನಲ್ಲಿಯೇ ತುಂಬಿಕೊಂಡು, ಹೃದೆಯದ ತುಂಬಾ ಅಮಾಯಕತೆಯ ಆಕರ್ಷಣೆಯನ್ನು   ಕೂಡಿಟ್ಟುಕೊಂಡಿರುವ ನಿನಗೆ ಮೋಸ ಮಾಡಲು ನನ್ನ ಮನಸ್ಸು ಒಪ್ಪುತ್ತಿಲ್ಲ ಹುಡುಗಿ.  ನಾನೊಬ್ಬ ಪೋಲಿ, ಲೋಫರ್ ಅಂತ ತಿಳಿದು, ನನ್ನ ಕ್ಯಾರೆಕ್ಟರ್ ಸರ್ಟಿಪಿಕೇಟಿಗೆ ನಮ್ಮ ಕಾಲೇಜ್ ಪ್ರಿನ್ಸಿಪಾಲರು ಸಹಿನೆ ಮಾಡೋಲ್ಲ ಅಂತಾರೆ.  ಇನ್ನೊಮ್ಮೆ , ಮತ್ತೊಮ್ಮೆ ಯೋಚಿಸು....
                                                                                                                                     ಇಂತಿ 
                                                                                                         ಲೋಫರ್ ಲೋಕಿ.... 

Saturday, October 22, 2011

...ಕರಗುವ ಮುನ್ನ...


.....ಕರಗುವ ಮುನ್ನ...
ಬಚ್ಚಿಟ್ಟ ಕನಸುಗಳು 
ಕರಗಿ ಹೋಗುವ ಮುನ್ನ  
ಕಣ್ಣ ಮುಂದೆ 
ಹರವಿ 
ಕುಳಿತುಬಿಡು 
ಒಮ್ಮೆ......

ನೂರು ನೂರರಲ್ಲಿ 
ಒಂದನ್ನು ಹೆಕ್ಕಿ 
ಹೊರಟು ಬಿಡು 
ಹಿಂದೆ ತಿರುಗದೆ 
ಸುಮ್ಮನೆ...

ಗುರಿ ಸಾದಿಸೆ 
ಬಂದು 
ಗರಿ ಮುಡಿದುಕೋ
ಬಿಮ್ಮನೆ....

Wednesday, October 19, 2011


...ಮಾತೃದೇವೋಭವ ...
ನಾವು...
ಗಿರಿ ಶೃಂಗವೆನ್ನದೆ
ಕಲ್ಲು ಕಲ್ಲಿನಲ್ಲಿ ಹರಸುವೆವು 
ಕಾಣದ ದೇವರ,

ಇಲ್ಲ ಸಲ್ಲದ ಮೌಡ್ಯವ ನಂಬಿ  
ಗುಡಿ  ಗೋಪುರಗಳ ಕಟ್ಟಿ
ಕಂದಾಚಾರದ ಗುಂಡಿಗೆ ಬಿದ್ದು, 
ಮಠ ಮಾನ್ಯರ ಕಾಲಿಗೆ ಎರಗಿ 
ದೈವಾಂಶಕ್ಕೇರಿಸಿ ಪಾವನರಾಗುವ....

 ನಾವು ...
ಭಕುತಿಯ ನೆಪವಾಗಿರಿಸಿ 
ನೇಮ ನಿಷ್ಟೆಗಳ ಹೆಸರನ್ನಿರಿಸಿ
ಪಾಪ ಕರ್ಮಗಳ ಕೂಪಕೆ ತಳ್ಳಿ  
ಹೊಟ್ಟೆ ತುಂಬಿಸಿಕೊಳ್ಳುವ
ಹೊಟ್ಟೆಭಾಕರ ನಂಬುವೆವು....

ನಾವು...
ಕಣ್ಣ ಮುಂದಿನ ದೇವರ ಮರೆತು 
ಕಾಣದ ದೇವರ ಹಂಬಲಿಸಿ 
ಕಣ್ಣಿದ್ದು ಕುರುಡಾಗುವೆವು
ನಾವು...    

Monday, October 17, 2011

.... sashesha...


......ಸಶೇಷ...
ನಡುಮನೆಯ ಅಂಗಳದಲಿ 
ಮಲಗಿದ್ದ ಮನಸೊಂದು 
ಸದ್ದಿಲ್ಲದೇ ಮಿಡುಕುತಿದೆ...

ಸದ್ದು ಮಾಡುವ ಜೀವಗಳು 
ಬಗೆ ಬಗೆ ಮಂತ್ರಾಲೋಚನೆಯಲಿ 
ಮಗ್ನವಾಗಿವೆ.

ಮಿಡುಕುವ ಮನಸು 
ನಡುಮನೆಯಲ್ಲಿಯೇ ಗತಿಸಿ ಬಿಟ್ಟರೆ...?
ಅಶುಭ ಅಮರಿಕೊಂಡಂತೆ....!

ತರಾತುರಿಯಲ್ಲಿ ಜಗುಲಿಯ ಮೇಲೊಂದು 
ಹಾಸಿಗೆಯ ಹಾಸಿ 
ಮಿಡುಕುವ ಜೀವವ ಮಲಗಿಸಿ 
ನಿರಾಳ ಉಸಿರೊಂದಿಗೆ 
ರೋದನೆಯ ಜೊತೆಗೂಡಿದರು...

ಜೀವವ ತೇಯ್ದು 
ಹಾಸಿಗೆ ನೇಯ್ದ ಮನಸೀಗ 
ಮಮ್ಮಲ ಮರುಗುತ 
ಕಾದಿದೆ, ಕಾಲನು ಬರುವ ದಾರಿಯಲಿ.......

Friday, October 7, 2011

---- ಪ್ರೀತಿ ಎಂಬ ನಿಗೂಢ ...!! ----

 
ಬಾ ಪ್ರೀತಿಯೇ ಬಾ 
ಮನಸು ಹೃದಯಗಳ ನಡುವೆ 
ಕಿಚ್ಚೆಬ್ಬಿಸಿ....
ಮೈ ಕಾಯಿಸಿಕೊಳ್ಳುವ
ಸ್ವಾರ್ಥಿಯೇ ಬಾ...!

ಮೊದಲ ನೋಟದಲ್ಲೇ ಕಾವೇರಿಸಿ
ಹೃದಯದ ಗೂಡಲ್ಲಿ 
ಅಡಗುವ ನೀನು 
ಕಣ್ಣಿಗೆ ಕಾಣದ ನಿಗೂಢ....!!

ಒಮ್ಮೊಮ್ಮೆ 
ನೀನು ಕೌತುಕವೂ  ಹೌದು 
ಬದುಕಿನ ಜಾತಕವೂ ಹೌದು
ರೋಗದಂತೆ  ಉಲ್ಬಣವಾದರೆ
ಸೂತಕವೂ ಹೌದು....!!!

ನೀನು ಹೀಗೆ ಬಂದು 
ಹಾಗೆ ಹೊರಡುವ ಅತಿಥಿಯಂತಲ್ಲ, 
ದೇಹದಲ್ಲಿಯೇ ಬೆರೆತುಹೋದ 
ಬಿಸಿ ನೆತ್ತರಿನಂತೆ...!
ನಿನ್ನ ಬಸಿಯಲು ಹೋದರೆ 
ಜೀವಕ್ಕೆ ಮಾರಕ....

ನಿನ್ನ ಸೆಳಕಿಗೆ ಸಿಲುಕದವರಿಲ್ಲ
ಸೆಲಬೆಯಂತೆ ನೀನು 
ಸಿಲುಕಿದವರು ಬಿಡಿಸಿಕೊಳ್ಳಲು 
ಬಲು ಕಷ್ಟ ಕಷ್ಟ....!!!   
      

Friday, April 15, 2011

'' ಕಥೆ ಹೇಳುವೆ ''



ಪ್ರೀತಿಯಿಂದ ಅವನ ತಾಯಿ ಸುಂದ್ರು ಅಂತಾನೆ ಕರೀತಿದ್ರು.  ಅವನ ಪೂರ್ಣ ಹೆಸರು ಸುಂದರ ಕುಮಾರ್. ಹಾಗೆಂದು ಅವನು ಸುರಸುಂದರಾಂಗನಾಗಿರಬೇಕೆಂದು  ನೀವು ಅಂದುಕೊಂಡರೆ,  ಅದು ನಿಮ್ಮ ತಪ್ಪು ನಿಲುವಾಗುತ್ತದೆ.  ಆತನ ಪರಿಚಯ ನನಗೆ ಚನ್ನಾಗಿದೆ.  ಆದ್ದರಿಂದ ಬೇಸರಿಸದೆ ಒಮ್ಮೆ  ಕೇಳಿಬಿಡಿ.

 
ಆತನದು ಕಪ್ಪಾದ ಗಟ್ಟಿ ಮುಟ್ಟಾದ ಶರೀರ.  ತುಸು ಒರಟಂತೆ   ಕಂಡುಬರುವ ಮುಖದಲ್ಲಿ ನಿರ್ಲಕ್ಷ್ಯ ತೋರುವ ಕಣ್ಣುಗಳು ಅವನ ಪ್ರಧಾನ ಆಕರ್ಷಣೆ.  ಅವನು ನಕ್ಕರೆ ಒಳೆಯುವ ದಂತಪಂಕ್ತಿ.  ಆದರೆ ಅವನು ನಗುವುದು ತುಂಬಾ ಅಪರುಪವಾದ್ದರಿಂದ,  ಅವನ ನಗೆಯಲ್ಲಿನ ಆಕರ್ಷಣೆ ಬಹಳ ಮಂದಿಗೆ ತಿಳಿದಿಲ್ಲ.  ಆದರೆ ಅವನ ದೇಹ ಸೌಂದರ್ಯಕ್ಕೂ ಆತ್ಮ ಸೌಂದರ್ಯಕ್ಕೂ ಬಹಳ ವ್ಯತ್ಯಾಸ ಇದೆಯೆಂದು ಬಲ್ಲವರ ಅಭಿಪ್ರಾಯ. ಮಲ್ಲಿಗೆ ಮನಸ್ಸಿನ ಮೃಧು ಹೃದೆಯವಂತ.  ಬೇರೆಯವರ  ನೋವಿಗೆ ಸ್ಪಂದಿಸುವಂತೆಯೇ,  ಅವರ ನಲಿವಿಗೆ ಹರ್ಷಿಸುವ ಆತ್ಮೀಯ ಭಾವುಕನವನು.  ಇಂಥಹ ಅಪರೂಪದ ನನ್ನ ಗೆಳೆಯ ಪ್ರೇಮದ ಬಲೆಗೆ ಬಿದ್ದೇಬಿಟ್ಟ.     ಅದು ಹೇಗಂತೀರಾ .........     

 
ಒಮ್ಮೆ ಪತ್ರಿಕೆಯಲ್ಲಿ ಪ್ರಕಟವಾದ '' ಅಂತರಾಳ '' ಎಂಬ ಕಥೆಯು ಸುಂದರನ ಮನಸ್ಸನ್ನು ಬಹಳವಾಗಿ ಸೆಳೆಯಿತು.  ತನ್ನ ಮನದೊಳಗೆ ಅಡಗಿರುವ  ಭಾವನೆಗಳು ಅಕ್ಷರದ ರೂಪತಾಳಿ ಕಥೆಯಾಗಿದೆಯೇನೋ ಎಂಬಂತೆ ಭಾಸವಾಗತೊಡಗಿತು.  ಆ ತಕ್ಷಣವೇ ಕಥೆಯ ಬಗ್ಗೆ ತನ್ನ ಮೆಚ್ಚುಗೆಯನ್ನು ಸೂಸಿ,  ಕಥೆಯ ಲೇಖಕಿ ಸ್ನೇಹಾಳಿಗೆ ಒಂದು ಸುಂದರ ಪತ್ರವನ್ನು  ಆಕರ್ಷಕ ನುಡಿಗಳೊಂದಿಗೆ ಬರೆದು ಹಾಕಿದನು.  

 
ತಾನು ಬರೆದ ಮೊದಲ ಕಥೆಯನ್ನು ಮೆಚ್ಚಿ,  ಸುಂದರನಿಂದ ಬಂದ ಮೊದಲ ಪತ್ರವನ್ನು ಓದುತಿದ್ದಂತೆ,  ಆ ಸುಂದರ ಪತ್ರದಲ್ಲಡಗಿರುವ.... ಭಾವುಕತೆಯ ಲಾಲಿತ್ಯದ ಆತ್ಮೀಯತೆಗೆ ಬೆರೆಗಾದ ಸ್ನೇಹಾ... ಆ ಪತ್ರವನ್ನು ಮತ್ತೊಮ್ಮೆ ಮಗದೊಮ್ಮೆ ಓದತೋಡಗಿದಳು.  ಪತ್ರಗಳನ್ನು ಕಾವ್ಯಮಯವಾಗಿ ಕೂಡ ಬರೆಯಬಹುದೆಂದು ಆ ಪತ್ರವನ್ನು ನೋಡಿದಾಗಲೇ ಅವಳಿಗೆ ತಿಳಿದದ್ದು.  ತನ್ನ ಕಿರು ಕಥೆಯನ್ನು ಮೆಚ್ಚಿ  ಇಂತಹ ಆಕರ್ಷಕ ಪತ್ರ ಬರಬಹುದೆಂದು ನಿರೀಕ್ಷಿಸದ ಅವಳಿಗೆ,  ನಿಜಕ್ಕೂ  ಪದಗಳಿಗೆ ಸಿಗದ ಉಲ್ಲಾಸ-ಉದ್ವೇಗದ ಜೊತೆಗೊಂದಿಷ್ಟು ರೋಮಾಂಚನ .!

  ಸರಿ ನಮ್ಮ ಕಥಾನಾಯಕಿಗೆ ಇಂಥಹ ಸುಂದರ ಸುಲಲಿತ ಪತ್ರವನ್ನು ಬರೆದ ಸುಂದರನ ಪರಿಚೆಯ ಮಾಡಿಕೊಳ್ಳಬೇಕೆಂಬ ಬಯಕೆ ಬಂದದ್ದು ತಪ್ಪೇನಿಲ್ಲ ಬಿಡಿ.   ಮೆಚ್ಚುಗೆಯ ಪತ್ರವನ್ನು ಬರೆದದ್ದಕ್ಕೆ       ವಂದನೆಗಳನ್ನು ತಿಳಿಸುತ್ತಾ...' ತನ್ನ ಹವ್ಯಾಸ , ಅಭಿರುಚಿಯ ಕಿರುಪರಿಚಯದೊಂದಿಗೆ,  ನಿಮ್ಮ ಮಿತ್ರತ್ವವನ್ನು ಬಯಸುವ ಸ್ನೇಹಾ' ಎಂದು  ಕೊನೆಯಲ್ಲಿ ಬರೆದು,  ಪತ್ರವನ್ನು ಪೋಸ್ಟ್ ಮಾಡಿದಳು ನೋಡಿ....ಅಸಲು ಕಥೆ ಇಲ್ಲಿಂದಲೇ ಬೆಳದಿಂಗಳಂತೆ ಆರಂಭವಾಯ್ತು. 

                                         ++++                 ++++                ++++
         ಸ್ನೇಹಾಳಿಂದ ಮರು ಪತ್ರವನ್ನು ನಿರೀಕ್ಷೆ ಮಾಡದ ಸುಂದರನಿಗೆ,  ಆಕೆಯಿಂದ ಬಂದ ಪತ್ರವನ್ನು ಓದುತಿದ್ದಂತೆ ಮೈಯೆಲ್ಲಾ ಕಂಪನದ  ಅನುಭವ.  ತನ್ನ ಮನದಲ್ಲಿ ಉಕ್ಕುವ ಸಂತೋಷವನ್ನು ತಡೆಯಲಾರದೆ, ಮೆಲ್ಲಗೆ ನಡುಗಲಾರಂಬಿಸಿದ.  ಪತ್ರಗಳಲ್ಲಿನ ಅಕ್ಷರಗಳು ಅಸ್ಪಷ್ಟವಾಗಿ ಕಾಣತೊಡಗಿದವು.  ಕಣ್ಣಂಚಿನ ಕಂಬನಿ ಕಂಪಿಸುತ್ತಿತ್ತು.  ಬಹುಷಃ,  ಹುಡುಗಿಯೊಬ್ಬಳು ಸ್ನೇಹಿತೆಯಾಗುವ ಬಯಕೆಯನ್ನು ವ್ಯಕ್ತಪಡಿಸಿ ಬರೆದ ಪತ್ರವನ್ನು ಇದೆ ಮೊದಲ ಬಾರಿಗೆ,  ಓದುತಿದ್ದನಾದ್ದರಿಂದ ಉಂಟಾದ ಕಂಪನದ ಭಾವ ತೀವ್ರತೆಯಿರಬೇಕು.  


           ಕ್ಷಮಿಸಿ,  ನಾನು ನಿಮಗೊಂದು ವಿಷಯವನ್ನು ತಿಳಿಸಲು ಮರೆತಿದ್ದೆ.  ನಮ್ಮ ಸುಂದ್ರುಗೆ ಹುಡುಗಿಯರನ್ನು ಕಂಡರೆ ತುಂಬಾ ಸಂಕೋಚ.   ಹುಡುಗಿಯರೊಡನೆ ಮಾತನಾಡಲೇ ಬೇಕಾದ ಸಮಯ ಸಂದರ್ಭವೇನಾದರು ಬಂದರೆ ಮುಗೀತು,  ಸರಿಗಮಪದನಿ ಹಾಡುವಂತೆ ತಡವರಿಸುತ್ತಾ.... ಹುಡುಗಿಯರ ಕೀಟಲೆಗೆ ಗುರಿಯಾಗುತಿದ್ದನು.  ಇಂತಿಪ್ಪ ಸುಂದರನಿಗೆ ಹುಡುಗಿಯಿಂದ ಮಿತ್ರತ್ವ ಬಯಸಿ  ಮೊದಲ ಬಾರಿಗೆ ಪತ್ರ ಬಂದರೆ, ರೋಮಾಂಚನ ರೋಗದಂತೆ ಬಂದುದ್ದರಲ್ಲಿ ಆಶ್ಚರ್ಯವಿಲ್ಲ ಬಿಡಿ.  

       ಸ್ನೇಹಾಳ ಚಂದದ  ಪತ್ರದಲ್ಲಿನ ಅಂದದ ಬರವಣಿಗೆಯ ಭಾವ ತೀವ್ರತೆ ಹಾಗೂ  ಪದಗಳಲ್ಲಡಗಿದ್ದ   ಸ್ನೇಹಪರತೆಯು,  ಸುಂದರನ ಸುಂದರ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆದು,  ಅವನ ಮನದಲ್ಲಿ ಸುಳಿಯಂತೆ ಸುತ್ತುವ ಸಂಭ್ರಮವಾಯಿತೆಂದರೆ ತಪ್ಪಲ್ಲ.  ಅವನಲ್ಲಡಗಿದ್ದ ಸಂಕೋಚವನ್ನು ದೂರ ಮಾಡಿ,  ಧೈರ್ಯವನ್ನು ನೀಡಿದ ಪತ್ರಕ್ಕೆ ಸ್ಪಂದಿಸಿದವನೇ ಆಸಕ್ತಿಯಿಂದ ಮರು ಪತ್ರವನ್ನು ಬರೆದು ಹಾಕಿದ. ಮೇಘ ಸಂದೇಶದಂತೆ, ಇಬ್ಬರ ನಡುವೆ ಪತ್ರ ಸಮರ ಆರಂಭವಾಯ್ತು.  ಪ್ರತಿ ಪತ್ರಗಳು ಭಾವದಲೆಗಳನ್ನು ಚುಂಬಿಸುವ ಒಲುಮೆಯ ಮುನ್ನುಡಿಯಂತಿರುತ್ತಿದ್ದವು.  ಅವರ ಪತ್ರಗಳಲ್ಲಿ  ಚರ್ಚೆ ಮಾಡದ ವಿಷಯಗಳೇ ಇಲ್ಲ.  ಆದರೆ ಚರ್ಚೆಯಲ್ಲಿ ಬಾರದ ವಿಷಯವೊಂದಿತ್ತು...''  ಅದೇ ಪ್ರೇಮ ''.  ಈ ಪ್ರೇಮದ ಬಗ್ಗೆ ಚರ್ಚಿಸಲು ಇಬ್ಬರಿಗೂ ಏನೋ ಅಳುಕು.

        ಕೆಲದಿನಗಳ ನಂತರ  ಸ್ನೇಹಾಳೆ ಧೈರ್ಯವಹಿಸಿ ಪ್ರೇಮ ಎಂಬ ವಿಷಯದ ಬಗ್ಗೆ ತನ್ನ ಅನಿಸಿಕೆಯನ್ನು ಬರೆಯುತ್ತಾ...'' ಪ್ರೆಮಿಸುವುದಕ್ಕೆ ಭಾವುಕ ಹೃದೆಯವಿರಬೇಕು, ಪ್ರೆಮಿಸುವವರಿಗೆ ಪ್ರೇಮಿಸಲ್ಪಡುವವರಿಗೆ ಉತ್ತಮ ವ್ಯಕ್ತಿತ್ವವು ಇರಬೇಕು.  ಆಗ ಪ್ರೇಮಿಸುವವರು ಹಾಗು ಪ್ರೇಮಿಸಲ್ಪಡುವವರು ನಿರಂತರವಾಗಿ ಸಂತೋಷದಿಂದಿರುತ್ತಾರೆ.  ಪ್ರೇಮ ಬಾಹ್ಯ ಸೌದರ್ಯಕ್ಕಿಂತ ಅಂತರಂಗದ ಸೌದರ್ಯವನ್ನು  ಹೆಚ್ಚು ಇಷ್ಟ ಪಡುತ್ತದೆ ''  ಎಂದು ಪದಗಳನ್ನು ಮುತ್ತಾಗಿಸಿ ಬರೆದಿದ್ದಳು.  

      ಹೀಗೆ ಇಬ್ಬರ ನಡುವೆ ಪತ್ರಗಳ ವಿನಿಮಯ ಮುಂದುವರಿದಂತೆ,  ಭಾವನೆಗಳ ಭಾವಗಳು ಬದಲಾಗಿ ಅವರಿಗೆ ಅರಿವಾಗದಂತೆ ಪ್ರೇಮವು ಪತ್ರಗಳಲ್ಲಿ ಝರಿಯಂತೆ ಹರಿಯತೊಡಗಿತು.  ಅವರ ಪ್ರತಿಯೊಂದು ಪತ್ರಗಳು ತಂಗಾಳಿಯ ತಂಪಂತೆ ಪ್ರೇಮ ಕವನಗಳಾಗತೊಡಗಿದವು.   ಬೆಳದಿಂಗಳ ಪತ್ರದಲ್ಲಿ ಬರೆದ ಪ್ರೇಮ ಕಾವ್ಯಗಳಾಗತೊಡಗಿದವು.  ಇಬ್ಬರ ಕನಸು ಕಲ್ಪನೆಗಳಲ್ಲಿ  ಪ್ರೆಮವೆಂಬುದು  ಹೊನಲಾಗಿ ಹರಿಯತೊಡಗಿತು ಅಡೆತಡೆಯಿಲ್ಲದಂತೆ .........

    ಈ ಆಕಸ್ಮಿಕ ಪತ್ರ  ಪ್ರಣಯ,  ಸುಂದರನ ಜೀವನದ ಹಾದಿಯನ್ನು ಬದಲಿಸಿತ್ತೆಂದರು   ತಪ್ಪಲ್ಲ.  ನಾನು ಸಹ ಹುಡುಗಿಯೊಬ್ಬಳನ್ನು ಪ್ರೇಮಿಸುತ್ತೇನೆ,  ಅವಳಿಂದ ಪ್ರೀತಿಸಲ್ಪಡುತ್ತೇನೆ,  ಪ್ರೀತಿಯ ಹಂಬಲದ ಕುತೂಹಲದೊಡನೆ,  ಅದರ ವಿರಹ ವೇದನೆಯ ತಾಪವನ್ನು ಅನುಭವಿಸುತ್ತೇನೆ,  ನಿದ್ದೆಯ ಸುಳಿವಿಲ್ಲದ ರಾತ್ರಿಗಳು ನನಗಾಗಿ ಕಾದಿರುತ್ತವೆ ಎಂಬ ಅರಿವು, ಲೆಕ್ಕಕ್ಕೆ ಸಿಗದೆ.. ಸರಿದ ರಾತ್ರಿಗಳ ಕನವರಿಕೆಯಲ್ಲಿ ಕಳವಳಗೊಳ್ಳುವ ಪ್ರೇಮಿಯ ಮನಃ ಸ್ಥಿತಿ  ತನಗೂ ಬರಬಹುದೆಂಬ ಒಂದು ಸಣ್ಣ ಕನಸನ್ನು ಸಹ ಕಂಡವನಲ್ಲ.  ನಮ್ಮ ಸುಂದ್ರು...

                    ಒಹ್..! ಇದೆಲ್ಲ ಪ್ರೇಮ ಅಂದ ಮೇಲೆ  ಇದ್ದದ್ದೇ ಬಿಡಿ.   ಪ್ರೇಮದ ಬಗ್ಗೆ ಗೊತ್ತಿಲ್ಲದಿರುವುದನ್ನು  ನಮ್ಮ ಸುಂದರನಿಂದ ತಿಳಿದುಕೊಂಡರಾಯ್ತು.  ಸ್ನೇಹಾಳ ಅಂದ ಚೆಂದದ ಬಗ್ಗೆ ಅವನೆಂದು ಚಿಂತನೆ ಮಾಡಿದವನಲ್ಲ.  ಅವಳನ್ನು ತನ್ನ ಹೃದೆಯದಿಂದ ಪ್ರೀತಿಸುತ್ತಿದ್ದ.  ಮನದಲ್ಲೇ ಆರಾಧಿಸುತಿದ್ದ.  ಅವಳ ಒಲವಿನ ಭಾವ ಮತ್ತು ಸ್ಪಂದಿಸುವ ಹೃದೆಯ ಈ ಎರಡು ಗುಣಗಳಿಂದ ಒಮ್ಮೆಯೂ ನೋಡಿರದ ಸ್ನೇಹಾಳನ್ನು ಹುಚ್ಚನಂತೆ ಪ್ರೇಮಿಸುತಿದ್ದನು.  ಕಂಡರಿಯದ ಅವಳ ರೂಪವನ್ನು ಹುಣ್ಣಿಮೆಯ ಶಶಿಯಲ್ಲಿ ಕಾಣುತಿದ್ದನು,  ಹಸಿರುಟ್ಟ ಪ್ರಕೃತಿಯಲ್ಲಿ ಅರಸುತಿದ್ದನು.   ಬೆಳ್ಳಿಯ ಮೋಡದಂಚಿನ ಮಿಂಚಿನ ಗೆರೆಯಲ್ಲಿ ತನ್ನ ಕಲ್ಪನೆಯ ಸ್ನೇಹಾಳನ್ನು ಕಾಣತೊಡಗಿದನು. ಕಣ್ಣಿಗೆ ಕಾಣದ, ಸ್ಪರ್ಶಕ್ಕೆ ಸಿಗದ, ಕಲ್ಪನೆಗೆ ನಿಲುಕದ , ಮಾತಿಗೆ ಸಿಲುಕದ,  ಹೃದೆಯಕ್ಕೆ ಮಾತ್ರ ತಿಳಿಯುವ ಅನುಭೂತಿಯನ್ನು ಪ್ರೇಮವೆನ್ನಬಹುದೇನೋ.   ಹಿಡಿಯಷ್ಟು ಪ್ರೀತಿಯನ್ನು ಒಂದು ಬಾಣಲಿಯಲ್ಲಿ ಹಾಕಿ, ರುಚಿಗೆ ತಕ್ಕಷ್ಟು  ಕನಸು, ಭಾವನೆ, ಅಮಲು, ಸಡಗರ, ವಿಸ್ಮಯ, ಆರಾಧನೆಯ ಜೊತೆಗೊಂದಿಷ್ಟು ಸಂಕೋಚವನ್ನು  ಹಾಕಿ ಘಮ್ಮೆನ್ನುವವರೆಗೆ ಉರಿದು ಹರಡಿದಂತಿತ್ತು ಸುಂದರನ ಸುಂದರ ಪ್ರೇಮಾಯಣ.
       
                         ಅವನಷ್ಟೇ ಸಂತಸ ಸಡಗರ ಸಂಭ್ರಮದಲ್ಲಿ ಸ್ನೇಹಾ ಕೂಡ ತೇಲುತಿದ್ದಳು.   ತನ್ನೆಲ್ಲ ಆಸೆಗಳನ್ನು ಒಟ್ಟುಗೂಡಿಸಿಕೊಂಡು ಸ್ವಾತಿ ಮುತ್ತಿನ ಮಳೆ ಹನಿಯು, ಮುಗಿಲಿನಿಂದ  ಜಾರಿ ಧರಣಿಯನ್ನು ಅಪ್ಪುವ  ತವಕದಿಂದ  ಬರುತ್ತಿರುವಂತೆ,  ತನ್ನ ಇರುವಿಕೆಯನ್ನು ಅಪಹರಿಸಿರುವ ಸುಂದರನ ತೋಳ ಬಂಧಿಯಾಗಲು ತವಕಿಸುತಿದ್ದಳು.  ನೀರಿನಿಂದ ಹೊರಬಿದ್ದ ಮೀನಿನಂತೆ  ವಿರಹದ ಬೇಗೆಯಿಂದ  ಚಡಪಡಿಸುತಿದ್ದಳು .    ಪ್ರೇಮದಮಲಿನಲ್ಲಿ  ಕನಸುಗಳು ಕೂಡ ಬಹಳ ಖುಷಿ ಕೊಡಬಹುದೆಂದು,  ಅವಳಿಗೆ ದಿನವು ಬೀಳುತಿದ್ದ ಹಗಲು ಗನಸುಗಳಿಂದ ತಿಳಿದುಬರತೊಡಗಿತು.  
      
       ಇಲ್ಲೊಂದು ವಿಚಿತ್ರ,   ಆದರು ಸತ್ಯ.  ನಮ್ಮ ನಾಯಕ-ನಾಯಕಿ  ಇವರಿಬ್ಬರು ತಮ್ಮಗಳ ಭಾವಚಿತ್ರಗಳನ್ನು ನೋಡಬೇಕೆನ್ನುವ ಆಸೆಯನ್ನಾಗಲಿ ಕುತೂಹಲವನ್ನಾಗಲಿ ಪರಿಚವಾದಂದಿನಿಂದ ಎಂದೂ ವ್ಯಕ್ತಪಡಿಸಿರಲಿಲ್ಲ.  ಮುಗಿಲಸ್ಟು ಆಸೆ,  ಮುಗಿಯಲಾರದಷ್ಟು  ಭರವಸೆ ಒಬ್ಬರಿಗೊಬ್ಬರ ಮೇಲೆ.  ಕಾಲ ಕೂಡಿ ಬಂದಾಗ ಮಾತ್ರ ತಾವಿಬ್ಬರು ಸಂಧಿಸಬೇಕೆನ್ನುವ ಅಗೋಚರ ಷರತ್ತು ಇಬ್ಬರ ಆಂತರ್ಯದಲ್ಲಿತ್ತೇನೋ  ಎಂದು  ನನಗನ್ನಿಸಿತ್ತು.   ಈ ಕಥೆಯ ಕಾಲಮಾನ ಸುಮಾರು ಹದಿನೈದು ವರ್ಷಗಳಿಗೂ ಹಿಂದೆ ಆಗಿರುವುದರಿಂದ,  ಈಗಿನಂತೆ ಆಗ ಸೆಲ್ ಫೋನ್,  ಇಂಟರ್ ನೆಟ್ ಸೌಲಭ್ಯವಿರಲಿಲ್ಲ.   ಅಂದಿನ ಚಿತ್ರಣವನ್ನು   ನಿಮಗೂ ತಿಳಿಸುತಿದ್ದೇನೆ.  
                                       +++++            +++++            ++++++
         ದಿನಗಳು ಮಾಗಿದಂತೆ ಅವರ ಒಲವು ಗಾಢವಾಗತೊಡಗಿದವು.ಹೃದಯದ  ಭಾವನೆಗಳು ಅರ್ಥಪೂರ್ಣವಾಗತೊಡಗಿದವು.  ಇಬ್ಬರಿಗೂ ಪರಸ್ಪರ ಸಂಧಿಸಬೇಕೆಂಬ ತವಕ ಚಿಗುರೊಡೆಯತೊಡಗಿತು.  ಆ ತವಕ ಸಧ್ಯಕೆ ಟೆಲಿಫೋನ್ ನಲ್ಲಿ ಸಂಭಾಷಿಸುವವರೆಗೆ ಬಂತು.  ಅವಳ ದನಿ ಕೋಗಿಲೆ ಕಂಠಕೆ ಸವಿ ಜೇನ ಬೆರಸಿ ನುಡಿಸಿದಂತಿರುತ್ತಿತ್ತು.  ಅಥವಾ ಅವನಿಗೆ ಹಾಗೆ ಭಾಸವಾಗುತಿತ್ತು ಅಂದರೆ ಸರಿ ಹೋಗಬಹುದು.  ಅವಳಿಗೂ ಅಷ್ಟೇ,  ಅವನ ಗಾಂಭೀರ್ಯ ಬೆರೆತ ಮಾತು ಮನಸನ್ನು ಹಿಂಚಿಂಚಾಗಿ ಆವರಿಸತೊಡಗಿತು ಅನುರಾಗದಿಂದ.   ಇನ್ನು ತಡೆಯದಾದರು.  ವಿರಹಾಗ್ನಿಯ ಜ್ವಾಲೆ ಮಡಿಲಲ್ಲಿರುವ ಕೆಂಡದಂತೆ ಹೃದೆಯವನ್ನು ದಹಿಸುತಿತ್ತು.  ವಿರಹದಲ್ಲಿ ಬೆಂದ ಹೃದೆಯಗಳನ್ನು  ತಂಪಾಗಿಸಲು,  ವರ್ಷ ಧಾರೆಯು ಇಳೆಯನ್ನು ಚುಂಬಿಸಿ ತಂಪೆಸಗುವಂತೆ,  ಪ್ರೇಮಿಗಳನ್ನು   ಒಗ್ಗೂಡಿಸಲು ವಸಂತ ಕಾಲವೇ ಬರಬೇಕಾಯ್ತು. 
          
          ನಾನು ಒಂದು ವಿಷಯ ಹೇಳೋದನ್ನೇ ಮತೆತಿದ್ದೆ ನೋಡಿ.  ನಮ್ಮ  ಕಥಾನಾಯಕಿ ಕನಸಿನ ಕನ್ಯೆ ತೀರ್ಥಹಳ್ಳಿಯಲ್ಲಿ ವಾಸವಾಗಿದ್ದಳು.  ನನ್ನ ಗೆಳೆಯ ಸುಂದ್ರು ನನ್ನೂರೆ.  ಸರಿ ಚಡಪಡಿಸುವ ಮನಗಳು ಒಂದಾಗಿ ಸೇರಲು ನಿಶ್ಚಯಿಸಿದವು.  ಇಬ್ಬರಿಗೂ ಪರಿಚಿತವಾದ ಆಗುಂಬೆಯ ಸುಂದರ ತಾಣದಲ್ಲಿ ಸಂಧಿಸುವುದೆಂದು ದೂರವಾಣಿಯ ಮುಖಾಂತರ ಮಾತನಾಡಿಕೊಂಡರು.  ಆ ದಿನ ಬಂದೇ ಬಂತು.... 


             ಅವರಿಬ್ಬರೂ  ಸಂಧಿಸುವ ದಿನಗಳು ಹತ್ತಿರ ಹತ್ತಿರ ಬರುತ್ತಿದ್ದ  ಹಾಗೆ ಸುಂದ್ರುವಿನ ಮನದಲ್ಲಿ ತಳಮಳ ಆರಂಭವಾಗಿತ್ತು.  ತನ್ನ ಎಲ್ಲಾ  ವಿಷಯಗಳನ್ನು ನನ್ನ ಮುಂದೆ ಹಂಚಿಕೊಳ್ಳುತಿದ್ದವನು ಇದ್ದಕ್ಕಿದ್ದ ಹಾಗೆ ಯಾವುದೋ ಲೋಕದಲ್ಲಿ ವಿಹರಿಸುತ್ತಿರುವ  ಕನಸುಗಾರನಂತಾಗಿ  ಹೋಗಿದ್ದನು.     '' ಯಾವುದೇ ಹುಡುಗರಾಗಿರಬಹುದು    ಅವರುಗಳೆಲ್ಲರಲ್ಲೂ ಒಂದು ಸಾಮ್ಯತೆ ಇದ್ದೇ   ಇರುತ್ತದೆ.  ಹುಡುಗನೊಬ್ಬನಿಗೆ ಹುಡುಗಿಯೊಡನೆ ಸ್ನೇಹವಿರಲಿ,  ಪ್ರೇಮವಿರಲಿ   ಇಲ್ಲವೆ ಕೇವಲ ಪರಿಚಯ ಮಾತ್ರವಿರಲಿ,  ಅಂತಹ ಸಂದರ್ಭಗಳಲ್ಲಿ  ಹುಡುಗಿಯೊಬ್ಬಳ ಬಳಿಯಲ್ಲಿನ ಹುಡುಗನ ವರ್ತನೆ ಆದಷ್ಟು ಸೌಮ್ಯತೆಯಿಂದ ಕೂಡಿರುತ್ತದೆ.    ತನ್ನಲ್ಲಿರುವ ಅಥವಾ ತನ್ನಲ್ಲಿ ಇಲ್ಲದೆಯಿರುವುದನ್ನು ಕೂಡ.....  ಇದ್ದಂತೆ ಹೆಚ್ಚುಗಾರಿಕೆಯನ್ನು ಪ್ರದರ್ಶಿಸಿ,    ಅವರಿಂದ ಮೆಚ್ಚುಗೆಯನ್ನು ಬಯಸುವುದು ಕೆಲವರಲ್ಲಿ ಕಂಡು ಬರುವ  ಗುಣ''. 

             
                   ಇದು ಪ್ರಕೃತಿ ಸಹಜ  ನಿಯಮ ಬಿಡಿ.   ಆದರೆ ಈ ವಿಚಾರದಲ್ಲಿ ಹಲವು ಜನರು ಆತ್ಮವಂಚನೆ ಮಾಡಿಕೊಳ್ಳುತ್ತಾರೆ.  ಅದನ್ನು ಪಕ್ಕಕ್ಕಿಟ್ಟು ನೋಡಿದಾಗ  ಹುಡುಗನೊಬ್ಬ ನಲ್ಲೆಯ ಬಳಿ ಪ್ರೀತಿಯಿಂದ ವರ್ತಿಸುತ್ತಾನೆ,  ಸ್ನೇಹಿತೆಯ ಬಳಿ ಆತ್ಮೀಯತೆಯಿಂದ ವರ್ತಿಸುತ್ತಾನೆ.  ವ್ಯತ್ಯಾಸ ಮಾತುಗಳಲ್ಲಿ ಮಾತ್ರ.  ಮಿಕ್ಕಂತೆ ಭಾವುಕತೆ ಸ್ಪಂದಿಸುತ್ತದೆ.   ನಾನು ಹೇಳಿರುವ  ಮೇಲಿನ  ಮಾತುಗಳು ನಿಮಗೆ ತೀರ ಸಿಲ್ಲಿಯಾಗಿ ತೋರಬಹುದು.  ಇಲ್ಲವೇ ಅತಿಯಾದಂತೆ ಕಾಣಬಹುದು.  ಆದರೆ ಈ ನನ್ನ ಮಾತುಗಳಿಗೆ ಹಿನ್ನಲೆ  ನನ್ನ ಮಿತ್ರ ಸುಂದರ.  ಅವನ ಇತ್ತೀಚಿನ ಕೆಲವೊಂದು  ವರ್ತನೆಗಳನ್ನು ನೋಡಿದಾಗ,  ನನಗೆ ಅವನೊಂದು ಪ್ರೇಮ ಪ್ರಯೋಗಾಲಯದ ಪ್ರಾಣಿಯಂತೆ  ಕಾಣಿಸುತಿದ್ದ  ಕಾರಣವಿರಬಹುದಾ......  ಎಂದೂ ಯೋಚಿಸಿದಾಗ ನನಗೂ ಸ್ಪಷ್ಟ ಕಾರಣ ದೊರಕಿರಲಿಲ್ಲ.   ಆದರೆ ಒಂದಂತು ಸತ್ಯ.  ಅವನ ನಿರಾಶೆಗಳಿಗೆ ಉತ್ಸಾಹ ತುಂಬಿ,    ತನ್ನ ಮುಖದಲ್ಲಿ  ನಗು ಮೂಡಲು  ಕಾರಣಳಾದ ಸ್ನೇಹಾಳ ಬಗ್ಗೆ, ಸುಂದರನು ತನ್ನ  ಮನದಲ್ಲಿ ವಿಶೇಷವಾದ  ಸ್ಥಾನವನ್ನೇ ನೀಡಿದ್ದನು.  ಅದು ಕಾಮಕ್ಕೂ ಮೀರಿದಂಥಹ  ಭಾವವಾಗಿತ್ತು.   ಭಾಷೆಗೂ ನಿಲುಕದಂತ  ಗೌರವವಾಗಿತ್ತು.  

       
                         ಸ್ನೇಹಾಳನ್ನು ಭೇಟಿಯಾಗುವ ಎರಡು ದಿನಗಳ ಹಿಂದಿನ ಮುಂಜಾನೆಯೇ  ನನ್ನ ರೂಮಿಗೆ ಬಂದ ಸುಂದ್ರುವಿನ ಮುಖದಲ್ಲಿ ದುಗುಡ ಮನೆ ಮಾಡಿತ್ತು.   ನಾನು ಏನಾಯ್ತೋ ಎಂದು ವಿಚಾರಿಸುವ ಮೊದಲೇ,   ''ಲೋ ಸತ್ಯ, ಸತ್ಯ ಹೇಳೋ.....  ನನ್ನ ಮತ್ತು ಸ್ನೇಹಾಳ ಪ್ರೀತಿಯ ಬಗ್ಗೆ  ನಿನಗೆ ಹೇಗೆ ಅನ್ನಿಸುತ್ತೋ ''  ಎಂದು ದುಗುಡದಿಂದಲೇ ಕೇಳಿದನು.  ಇದ್ದಕ್ಕಿದ್ದ ಹಾಗೆ ದುತ್ತೆಂದು ಅವನಿಂದ ಬಂದ ಪ್ರಶ್ನೆಯನ್ನು ನಾನು ನಿರೀಕ್ಷೆ ಮಾಡಿಯೇ ಇರಲಿಲ್ಲ.  ಏನೆಂದು ಹೇಳುವುದು,  ಏನಾದರು ಹೇಳಲೇ ಬೇಕಾಗಿತ್ತು.  ಇಲ್ಲದಿದ್ದರೆ ಅವನು ಉತ್ತರ ಪಡೆಯುವವರೆಗೂ ಇಲ್ಲಿಂದ ಹೋಗುವುದಿಲ್ಲ ಎಂದು ಗೊತ್ತಿತ್ತು. 
      
                 ಅಲ್ಲೋ ಸುಂದ್ರ,.....  ನೀನು ಭಾನುವಾರ ಸ್ನೇಹಾಳನ್ನು ಭೇಟಿ ಮಾಡುವುದಕ್ಕೆ ಹೋಗುತ್ತೇನೆ ಎಂದು ಹೇಳಿದ್ದೆ.  ಆದರೆ ಇದ್ದಕ್ಕಿದ್ದ ಹಾಗೆ ಏಕೋ ನಿನಗೆ ಈ ಅನುಮಾನ.  ಹೆಗಲ ಮೇಲೆ ಕೈಯಿಟ್ಟು ಮಮತೆಯಿಂದ ಕೇಳಿದೆ.   ''  ಏಕೋ ಗೊತ್ತಿಲ್ಲ ಕಣೋ ಸತ್ಯ,.... ಅವಳು ಭೇಟಿಯಾಗೋಣ ಎಂದು ಹೇಳಿದ ದಿನದಿಂದಲೂ,  ನನಗೆ  ಸರಿಯಾಗಿ ನಿದ್ರೆ ಬರುತ್ತಿಲ್ಲ.  ಯಾವುದೋ ತಿಳಿಯದ ಭಯ ನನ್ನನ್ನು  ಹೆದರಿಸುತ್ತಿದೆ.  ಅವಳು ನನ್ನನ್ನು ಒಪ್ಪಿಕೊಳ್ತಾಳಲ್ಲವೇನೋ ' ',   ಆತಂಕದಿಂದ ಕೇಳಿದ.  ಅವನ ಆತಂಕದ ಮುಖ ನನಗೆ ಈಗಲೂ ನೆನಪಿದೆ.  ನಾನವನಿಗೆ ಧೈರ್ಯ ಹೇಳಲೇ ಬೇಕಾಗಿತ್ತು.
  
        
              ನೋಡೋ ಸುಂದ್ರ, ''  ಸ್ನೇಹಾಳ ಬಗ್ಗೆ ಪ್ರತಿಯೊಂದು ವಿಷಯವನ್ನು ನನ್ನ ಬಳಿ ಹೇಳಿಕೊಂಡು ಸಂತೋಷಪಟ್ಟಿದ್ದೀಯ ಸಂಭ್ರಮಿಸಿದ್ದೀಯ.   ನಿನ್ನ ತುಂಬು ಮನದ ವ್ಯಕ್ತಿತ್ವದ ಪರಿಚಯ,  ನಿನ್ನ ಆಸೆ ಆಕಾಂಕ್ಷೆಗಳು,  ಸ್ವಭಾವಗಳೆಲ್ಲವನ್ನು    ನಿನ್ನ ಪತ್ರದ ಮುಖಾಂತರ ಈಗಾಗಲೇ ಅವಳಿಗೆ ತಿಳಿಸಿದ್ದೀಯ.     ಇಬ್ಬರೂ   ದೂರವಾಣಿಯಲ್ಲಿ  ಗಂಟೆಗಟ್ಟಲೆ ಮಾತನಾಡಿದ್ದೀರ.   ಹೀಗಾಗಿ  ಅವಳಿಗೆ ನಿನ್ನ ಬಗ್ಗೆ  ಪ್ರತಿಯೊಂದು ಅರ್ಥವಾಗಿರುತ್ತದೆ.   ಅಷ್ಟೆಲ್ಲ ಗೊತ್ತಿದ್ದೇ ನಿನ್ನೊಂದಿಗೆ ಇಲ್ಲಿಯವರೆಗೂ ಮುಂದುವರೆದು,   ನಿನ್ನನ್ನು  ಭೇಟಿಯಾಗಲು ಮನಸ್ಸು ಮಾಡಿರುವುದು.      ನಿಸ್ವಾರ್ಥ ಪ್ರೇಮಕ್ಕೆ ಈ ಜಾತಿ ಅಂತಸ್ತು,  ಮೇಲು- ಕೀಳು,  ಸೌಂದರ್ಯ,  ಇವುಗಳು ಗಣನೆಗೆ ಬರುವುದಿಲ್ಲ.   ಪ್ರೇಮವೆಂಬುದು  ಹಿಡಿಯಷ್ಟು ಪ್ರೀತಿಯನ್ನು, ಸವೆಯದಷ್ಟು ನಂಬಿಕೆಯನ್ನು ಮಾತ್ರ ಬಯಸುತ್ತದೆ. ಆದ್ದರಿಂದ ನೀನು ಧೈರ್ಯವಾಗಿ ಹೋಗಿ ಬಾರೋ'' ಎಂದು ಹೇಳಿದೆ.   

              ''ಹಾಗಾದರೇ    ನೀನು ನನ್ನ ಜೊತೆ ಬಾರೋ ಸತ್ಯ.   ಇಬ್ಬರು ಜೊತೆಯಾಗಿ   ಹೋಗಿ ಬರೋಣ''   ಎಂದು ಹೇಳಿದ.   '' ಅಲ್ಲೋ ಮಾರಾಯಾ, ಇದೇ   ಮೊದಲ ಸಲ ಇಬ್ಬರು ಭೇಟಿಯಾಗ್ತಾಯಿದ್ದೀರಿ.  ನಿಮ್ಮ ಮಧ್ಯೆ ನಾನು ಯಾಕೋ.  ಬೇಡ ನೀನೆ ಹೋಗಿ ಬಾ'', ಎಂದು ಹೇಳಿದೆ.
              ''ಇಲ್ಲಾ  ಸತ್ಯ,  ನೀನು ನನ್ನ ಜೊತೆಯಲ್ಲಿ ಬರಲೇ ಬೇಕು.   ಚಂದದಿಂದ ಬರೆದ ಪ್ರೇಮ  ಕವನಕ್ಕೆ  ಮುನ್ನುಡಿಯೇ ಆಕರ್ಷಕ.  ಮುನ್ನುಡಿಯಿಲ್ಲದ  ಕವನ ಸತ್ವ ಹೀನವಾಗಿರುತ್ತದೆ.  ಅದೇ ರೀತಿ ನೀನು ನನಗೆ ಬಾಳ ಮುನ್ನುಡಿಯಿದ್ದಂತೆ.   ನೀನು ಬರೋಲ್ಲ ಎಂದರೆ ನಾನು ಹೊಗೋದೆ ಇಲ್ಲ ನೋಡು,''  ಎಂದು  ಆರ್ದ್ರಭಾವದಿಂದ ಹೇಳಿದ.  ಅವನ ಮನಸ್ಸನ್ನು ನೋಯಿಸಲು ಇಚ್ಚೆ ಪಡದೆ, ಬರುತ್ತೇನೆಂದು ಒಪ್ಪಿಗೆ ಸೂಚಿಸಿದೆ.     ಸುಂದರ ಖುಷಿಯಿಂದ ತಲೆ ಆಡಿಸುತ್ತಾ,  ಸರಿ  ನಾಳೆ ಸಂಜೆ ೫ ಗಂಟೆಗೆ ಬರುತ್ತೇನೆ.  ಸಿದ್ಧನಾಗಿರು  ಎಂದು ಹೇಳಿ ಹೊರಟುಬಿಟ್ಟ.    ನಾನು ಕುತೂಹಲದಿಂದ ಆ ದಿನವನ್ನು ಕಾಯತೊಡಗಿದೆ.                 
                
                          ಶನಿವಾರ ಸಂಜೆ ನಾಲಕ್ಕು ಗಂಟೆಯಿರಬಹುದು,  ಬಾಗಿಲು ತಟ್ಟಿದ ಶಬ್ಧವಾಯಿತು,   ಯಾರಿರಬಹುದು....!  ಸುಂದ್ರು    ಐದು ಗಂಟೆಗೆ ಬರುತ್ತೇನೆಂದು ಹೇಳಿದ್ದವನು ಇಷ್ಟು ಬೇಗ ಬಂದುಬಿಟ್ಟನಾ ಹೇಗೆ  ಎಂದು ಯೋಚಿಸುತ್ತಲೇ ಬಾಗಿಲು ತೆರೆದೆ.     ಆಶ್ಚರ್ಯ..!   ಬಂದಿದ್ದವರು ಸುಂದ್ರುವಿನ ತಾಯಿ..?    ಅಮ್ಮ  ಬನ್ನೀ....  ಕುಳಿತುಕೊಳ್ಳಲು ಹೇಳಿದೆ.   ಸುಂದ್ರುವಿನ ಅಮ್ಮ ಯಾವುದೇ ಪೀಠಿಕೆಯಿಲ್ಲದಯೇ  '' ಏನೋ ಸತ್ಯ...  ನೀನು ಸುಂದ್ರು  ಇಬ್ಬರೂ   ಆಗುಂಬೆಗೆ ಹೊರಟಿದ್ದೀರಂತೆ,   ಸುಂದ್ರು ನನಗೆ ಬೆಳಿಗ್ಗೆ ಹೇಳಿದ.  ಏನಪ್ಪಾ ಸಮಾಚಾರ ಅಂತ ಕೇಳಿದ್ದ್ರೆ,   ಸುಮ್ಮನೆ ಅಂತ ಹೇಳ್ದ .  ಸತ್ಯ.., ನೀನಾದ್ರು ಹೇಳೋ''.  ಆಶ್ಚರ್ಯ ಕುತೂಹಲವನ್ನು  ಪ್ರದರ್ಶಿಸುತ್ತಾ   ಕೇಳಿದರು.    ತಮ್ಮ ಮಗನ ಮೇಲೆ ಅವರಿಗಿದ್ದ ವಾತ್ಸಲ್ಯ ಅಕ್ಕರೆ ಎಂತಹುದೆಂದು  ನನಗೆ ಚನ್ನಾಗಿ ತಿಳಿದಿತ್ತು.   ಸುಂದ್ರು ಚಿಕ್ಕವನಾಗಿದ್ದಾಗಲೇ ಅವರ ತಂದೆಗೆ ಸ್ಟ್ರೋಕ್ ಹೊಡೆದು ಕೈ-ಕಾಲುಗಳೆರಡು ಸ್ವಾಧೀನವಿರಲಿಲ್ಲ.    ಇರೋ ಸ್ವಲ್ಪ ತುಂಡು ಭೂಮಿಯಲ್ಲಿ ಗಾಣದೆತ್ತಿನಂತೆ ದುಡಿದರು ಮನೆಯ ಖರ್ಚು ಸರಿದೂಗಿಸಲು ಆಗುತ್ತಿರಲಿಲ್ಲ.  ಗಂಡನ ಆರೋಗ್ಯದ ಖರ್ಚಿಗಾದರು ಆಗಲಿ ಎಂದು ಪರಿಚಯದವರ ಕೆಲ ಮನೆಗಳಲ್ಲಿ ಮನೆಗೆಲಸ ಮಾಡುತಿದ್ದರು.  ಹೊಟ್ಟೆ-ಬಟ್ಟೆಗೆ ಎಷ್ಟೇ  ಕೊರತೆಯಾದರು ಹಸಿವನ್ನೇ ಉಂಡು ಮಲಗುತ್ತಿದ್ದರೆ ಹೊರತು,   ಬೇರೆಯವರ ಬಳಿ ಕೈ ಚಾಚದಂತ ಸ್ವಾಭಿಮಾನಿ ಹೆಣ್ಣು ಆಕೆ.  ಸುಂದರನಿಗೆ ಕೆಲಸ ಸಿಕ್ಕ ನಂತರ ಸ್ವಲ್ಪ ನೆಮ್ಮದಿಯಿಂದ ಇದ್ದಾರೆ.  ಅವರನ್ನು ನೋಡಿದ ಆ ಕ್ಷಣ ಹಳೆಯದೆಲ್ಲ ನೆನಪಿಗೆ ಬಂತು.
   ತಕ್ಷಣ  ಸಾವರಿಸಿಕೊಂಡು, ಅಮ್ಮ '' ನಮ್ಮಿಬ್ಬರ ಸ್ನೇಹಿತನೊಬ್ಬ  ಶೃಂಗೇರಿಯಲ್ಲಿದ್ದಾನೆ.   ಅವನನ್ನು ನೋಡಿಕೊಂಡು ಹಾಗೆಯೇ ಹತ್ತಿರದಲ್ಲಿರುವ  ಆಗುಂಬೆಯನ್ನು  ನೋಡಿಕೊಂಡು ಬರೋಣ ಎಂದು ನಾನೇ ಹೇಳಿದ್ದೆ.      ನಾನು ಅವನ ಜೋತೆಯಲ್ಲೇ ಇರುತ್ತೇನೆ  ನಿಮಗೆ ಗಾಬರಿ ಬೇಡ''  ಎಂದು ಸಮಾಧಾನ  ಹೇಳಿದೆ.      ಸರಿಯಪ್ಪ,  ಈಗ ಮನಸ್ಸಿಗೆ ಸ್ವಲ್ಪ ಸಮಾಧಾನವಾಯ್ತು ನೋಡು.  ದೂರ ಹೋಗ್ತಾಯಿದ್ದೀರ, ಹುಷಾರು.'' ಎಂದು ಹೇಳಿ ಹೊರಟು ಹೋದರು.    ಅವರು ಹೋದ  ಮೇಲೆ,  ನಾನು ಸ್ನಾನ ಮಾಡಿಕೊಂಡು ಬರುವುದರೊಳಗೆ ಸುಂದರನ  ಆಗಮನವಾಯ್ತು. 

          ಸುಂದ್ರು ಬರುವುದರೊಳಗೆ  ನಾನು  ಸಿದ್ಧನಾಗಿದ್ದೆ.    ಇಬ್ಬರು  ಬಸ್ಸನ್ನೇರಿ ಬೆಂಗಳೂರಿಗೆ ಹೋಗಿ ಅಲ್ಲಿ  ಶೃಂಗೇರಿಯ ಕಡೆ ಹೊರಡುವ  ಬಸ್ಸಿನ ಬಳಿ ಹೋದೆವು.  ಬಸ್ಸು ಹೊರಡಲು ಇನ್ನು ಒಂದು ಗಂಟೆಯ ಸಮಯವಿತ್ತು.  ನನಗೋ ದೂರದ ರಾತ್ರಿ ಪ್ರಯಾಣ ನಿದ್ದೆ ಬರೋಲ್ಲ.  ಸ್ವಲ್ಪ ಪರಮಾತ್ಮ ಹೊಳಗಿದ್ದರೆ,  ಹಾಗೋ ಹೀಗೋ ನಿದ್ದೆ ಮಾಡಬಹುದು.  ಬಸ್ಸಿನಲ್ಲಿ ಅಷ್ಟಾಗಿ ಜನರಿರಲಿಲ್ಲ  ''ಡ್ರೈವರಣ್ಣಾ  ಎಷ್ಟೊತ್ತಿಗೆ ನಿಮ್ಮ ಬಸ್ಸು ಶೃಂಗೇರಿ ತಲುಪುತ್ತೆ..? ಕೇಳಿದೆ.   ಡ್ರೈವರಣ್ಣ  ಉದಾಸೀನವಾಗಿ  ಹೇಳಿದ.  '' ಬೆಳಿಗ್ಗೆ ೭ ಗಂಟೆಗೆಲ್ಲ  ಹೋಗುತ್ತೆ.  ಅತ್ತು ಅತ್ತು '' ಎಂದ.   ನಾನು  ತಡಮಾಡದೆ, '' ಸುಂದ್ರು ನೀನು ಬಸ್ಸಿನಲ್ಲೇ  ಕುಳಿತಿರು,  ಒಂದು ಫೋನ್ ಮಾಡಿ ಬರುತ್ತೇನೆ''  ಎಂದು ಹೇಳಿ,  ರೈಲ್ವೆ ಸ್ಟೇಷನ್ನಿನ ಎಡಭಾಗದಲ್ಲಿದ್ದ  ಬಾರಿಗೆ ಹೋಗೆ  ಪರಮಾತ್ಮನನ್ನು  ಆವಾಹಿಸಿಕೊಂಡು ಬಂದು ಬಸ್ಸನ್ನೇರಿದೆ.  ನನ್ನನ್ನೇ ಕಾಯುತ್ತಿರುವವನಂತೆ ಡ್ರೈವರಣ್ಣ ನನ್ನನ್ನೊಮ್ಮೆ ಸುಧೀರ್ಘವಾಗಿ ನೋಡಿ ಬಸ್ಸನ್ನ ಚಾಲೂ ಮಾಡಿದ. 
                                            +++++         +++++            +++++        
       ನಾನು  ಮತ್ತೆ ಕಣ್ಣು ತೆರೆದಾಗ ನಮ್ಮ ಬಸ್ಸು ಶೃಂಗೇರಿಯನ್ನು   ಸಮೀಪಸಿತ್ತು.      ಇಬ್ಬರು ಬಸ್ಸಿನಿಂದ ಇಳಿದು ಮೊದಲು ಲಾಡ್ಜೊಂದರಲ್ಲಿ  ರೂಮನ್ನು ಬಾಡಿಗೆಗೆ ಪಡೆದು ನಿತ್ಯಕರ್ಮಗಳನ್ನೆಲ್ಲ ಮುಗಿಸಿಕೊಂಡು ಹೋಟೆಲೊಂದರಲ್ಲಿ ತಿಂಡಿ ತಿಂದೆವು.   '' ಸುಂದ್ರು, ಆ ಹುಡುಗಿ ನಿನ್ನನ್ನು ಎಷ್ಟು ಗಂಟೆಗೆ  ಭೇಟಿ ಆಗೋದಾಗಿ ಹೇಳಿದ್ದಾಳೆ''  ಕೇಳಿದೆ.    ಸಂಜೆ ೪ ಗಂಟೆ ಸುಮಾರಿಗೆ ಆಗುಂಬೆ ಕ್ರಾಸ್ ಬಳಿ ಬರ್ತೀನಿ ಎಂದಿದ್ದಾಳೆ ಕಣೋ ಅಂದ.  ಅಯ್ಯೋ , ಇನ್ನು ಹತ್ತು ಗಂಟೆಯಲ್ಲೋ.  ಬಾ ದೇವಸ್ಥಾನ ನೋಡಿಕೊಂಡು,  ಹಾಗೆ  ರೂಮಲ್ಲಿ ಸ್ವಲ್ಪ ಹೊತ್ತು ರೆಸ್ಟ್ ತಗೊಳೋಣ ಎಂದು ಕೆರೆದುಕೊಂಡು ಹೋದೆ.  ಇಬ್ಬರೂ ದೇವಸ್ಥಾನದಲ್ಲಿ ತಾಯಿಯ ದರ್ಶನ ಮಾಡಿಕೊಂಡು  ಬಂದು ರೂಮಿನಲ್ಲಿ ಮಲಗಿದೆವು.      ನಾನಂತೂ ಒಳಗೆ ಹೊಕ್ಕ ತಕ್ಷಣ ನಿದ್ದೆಗೆ ಶರಣಾದೆ.   ಸುಮಾರು ೨  ಗಂಟೆಗೆ  ಎಚ್ಚರವಾಯ್ತು.  ನಾನು   ಸ್ನಾನ ಮಾಡಿ ಬರುವಷ್ಟರಲ್ಲೇ ನಮ್ಮ   ಸುಂದ್ರು... ಉಲ್ಲಾಸಭರಿತನಾಗಿ,  ಅರ್ಧ ಕಣ್ಣನ್ನು ಮುಚ್ಚಿ,  ಇನ್ನರ್ಧ ಮತ್ತೆಲ್ಲೋ ಇಟ್ಟವನಂತೆ,   ಮಲಗಿದ್ದನು.  
          
           ಲೋ  ಸುಂದ್ರಾ....,  ಕಿರುಚುವವನಂತೆ  ಕರೆದೆ.   ಗಡಬಡಿಸಿ ಎದ್ದ ಸುಂದ್ರು '' ಏನೋ ಸತ್ಯಾ '' ಅಂದ,  ಗಾಬರಿಯಿಂದ.   ''  ವಾಸ್ತವಾಕ್ಕೆ ಬಾರೋ.  ಇನ್ನು ಸಂಜೆ ಆಗೋಕ್ಕೆ ೨ ಗಂಟೆ ಸಮಯವಿದೆ.  ಅಷ್ಟೊತ್ತಿಂದ ರಿಹರ್ಸಲ್ ಮಾಡಿಕೊಂಡಿ  ರುವುದನ್ನೆಲ್ಲ ಸ್ನೇಹಾಳ ಮುಂದೆ  ಹೇಳುವೆಯಂತೆ '' ಎಂದು ರೇಗಿಸಿದೆ.  ಅವನು ಸಂಕೋಚದಿಂದ  ''  ಹಾಗೇನಿಲ್ಲ ಹೋಗೋ ಸತ್ಯ   ನಿನಗೆ ಯಾವಾಗಲು ತಮಾಷೇನೆ''. ಎಂದು ಹೇಳುತ್ತಾ ಸ್ನಾನ ಮಾಡಲಿಕ್ಕೆ ಹೋದನು.   ಅವನು ಮದುವೆ ಗಂಡಿನಂತೆ ಸಿದ್ಧವಾಗಿ ಹೊರಗಡೆ ಬರುವುದಕ್ಕೆ ಬರೋಬ್ಬರಿ ಒಂದು ಗಂಟೆ ತೆಗೆದುಕೊಂಡನು.  
         
           ಸರಿ ಇಬ್ಬರೂ ಆಗುಂಬೆಯ ಕಡೆ ಹೋಗುವ ಮಿನಿ ಬಸ್ಸೊಂದನ್ನು ಹತ್ತಿಕೊಂಡು ಆಗುಂಬೆ ಕ್ರಾಸ್ ಬಳಿ ಇಳಿದೆವು.   ಅಲ್ಲಿ ಯಾರು ಜನರೇ ಇರಲಿಲ್ಲ.   ಸ್ನೇಹಾ ಬರುವುದಕ್ಕೆ ಇನ್ನು ಅರ್ಧ ತಾಸಿತ್ತು.   '' ಅದೇಕೋ ಸುಂದ್ರು,   ಆಗುಂಬೆಯಲ್ಲಿ ಸನ್ಸೆಟ್ ಪಾಯಿಂಟ್ ಬಳಿ ತಾನೆ ನೀವಿಬ್ಬರು ಭೇಟಿಯಾಗಬೇಕು.  ಈ ಕ್ರಾಸ್ ಬಳಿ ಯಾಕೆ.  ಅದು ಅಲ್ಲದೆ ನಿನ್ನನ್ನು ಆಕೆ ಹೇಗೆ ಗುರ್ತಿಸ್ತಾಳೋ '' ಆಶ್ಚರ್ಯದಿಂದ ಕೇಳಿದೆ.    '' ನಾನ ಈಗ ಹಾಕಿಕೊಂಡಿರುವ ಡ್ರೆಸ್ಸನ್ನು ಕೊರಿಯರಲ್ಲಿ ಅವಳೇ ಕಳಿಸಿದ್ದಳು.   ಹಾಗಾಗಿ ನಾನೇ ಗುರ್ತಿಸುತ್ತೇನೆ ಎಂದಿದ್ದಾಳೆ.     ಸನ್ಸೆಟ್ ಪಾಯಿಂಟ್ ಬಳಿ  ಹೆಚ್ಚು ಜನರಿರುತ್ತಾರೆ.   ಆದ್ದರಿಂದ  ಇಲ್ಲಿಂದಲೇ ಇಬ್ಬರೂ  ಮಾತನಾಡಿಕೊಂಡು ನಿಧಾನಕ್ಕೆ ಅಲ್ಲಿಗೆ  ಹೋಗೋಣವೆಂದು ಹೇಳಿದ್ದಳು'' ಎಂದನು ನಾಚುತ್ತಾ...   ಓಹೋ ಹಾಗೆ ವಿಷಯ.    '' ನೋಡು ಸುಂದ್ರು,  ನಿಮ್ಮಿಬ್ಬರ ನಡುವೆ  ನಾನು ಇರೋದು ಬೇಡ.  ಅಲ್ಲಿ  ದೂರದಲ್ಲಿ  ಕಾಣಿಸುತ್ತಿದೆಯಲ್ಲ ಆ ಹೊಂಗೆಯ ಮರದ ಬಳಿಯಿರುವ ದಿಬ್ಬದ ಮೇಲೆ  ಕುಳಿತಿರುತ್ತೇನೆ.   ಆಕೆ ಬಂದ ನಂತರ,  ಕಂಡ ಕನಸುಗಳು,  ನೆನಪಿಗೆ ಬಂದು ಮರೆತು ಹೋಗಿದ್ದ  ಮಾತುಗಳು.     ನೆನಸಿಕೊಂಡ ಮಧುರ ಭಾವಗಳು,  ಕನಸಿಗೂ ಬಾರದ  ಬಿಡಿ ಬಿಡಿ ಸಂತೋಷಗಳನ್ನೆಲ್ಲ  ಒಟ್ಟು ಗೂಡಿಸಿ ಹೊಗೆದುಬಿಡು ಅವಳ ಮುಂದೆ,  ಸ್ವಲ್ಪವೂ  ಉಳಿಸಿಕೊಳ್ಳಬೇಡ.  ಕಳೆದುಹೋಗಲಿ ಕನವರಿಕೆ.  ಆಮೇಲೆ ಬೇಕಾದರೆ ನಾನೇ ಬಂದು ಪರಿಚಯವಾಗುತ್ತೇನೆ ''   ಎಂದು ಹಾರೈಸಿದವನೇ  ಹೋಗಿ  ದಿಬ್ಬದ ಮೇಲೆ ಕುಳಿತುಕೊಂಡೆ.   ಸಮಯ  ನೋಡಿದೆ.  ನಾಲಕ್ಕು ಗಂಟೆಗೆ ಇನ್ನು ಐದು ನಿಮಿಷಗಳಿದ್ದವು.   ಸುಂದ್ರು  ಸಂಪಿಗೆಯ ಮರವನ್ನು ಹೊರಗಿಕೊಂಡು ನಿಂತಿದ್ದನು.  
             
              ದೂರದ ದಿಬ್ಬದ ಬೆಲೆ ಕುಳಿತುಕೊಂಡೆ,   ಕಾಣದ ಸುಂದರನ ಬೆಳದಿಂಗಳ ಬಾಲೆಯನ್ನು ಅರಸುತ್ತಾ ಸಂಪಿಗೆಯ ಮರವನ್ನೇ ನೋಡುತಿದ್ದೆ.  ಒಹ್..!  ಅದೋ ಬರುತಿದ್ದಾಳೆ.  ಬೆಳದಿಂಗಳನ್ನು ನಾಚಿಸುವಂತಾ ಚಲುವೆ.  ಅವಳು ಬಳುಕಿ ಬರುವ ಚಂದ ಹಂಸದ ನಡಿಗೆಯೇ ಸರಿ.  ಮುಗಿಲು ಕೂಡ  ಮುನಿಸಿಕೊಳ್ಳುವಂತಹ ಮುಂಗುರುಳು...!    ಬಿಟ್ಟು ಬಿಟ್ಟು ತಬ್ಬಿಕೊಳ್ಳುವ ಪ್ರೇಮಿಗಳಂತೆ ಒಂದನ್ನೊಂದು  ಬಿಡಲಾರದಂತಹ   ಆ  ಕಣ್ಣ ರೆಪ್ಪೆಗಳು...!   ಆ ರೆಪ್ಪೆಯೋಳಗಣ ಬಟ್ಟಲ ಕಂಗಳು...!    ಸಂಪಿಗೆ ಕೂಡ ನಾಚಿ ನೀರಾಗುವಂತಾ ನಾಸಿಕ..!   ಕಾಮನ ಬಿಲ್ಲನ್ನು ನೆನಪಿಸುವ ಆ ಕರಿ ಹುಬ್ಬು..!   ನಕ್ಕರೆ ನಸು ನಾಚಿ ತಲೆಬಾಗುವ ದಾಳಿಂಬೆಯಂತಾ ದಂತಪಂಕ್ತಿ ..!   ಸೂರ್ಯನೇ ಮಂಕಾಗುವಂತೆ  ಹೊಳೆವ  ಕದಪುಗಳು ...!    ಆ ಚಂದಿರನೆ ಜಾರಿ ಕುಳಿತಂತಹ  ಮೃದು ಮಧುರ ಅಧರಗಳು ..!   ಹುಣ್ಣಿಮೆಯ ರಾತ್ರಿಯಲ್ಲಿ  ಉಕ್ಕಿ ಬರುವ ಅಲೆಯಂತಾ ಆ ತುಂಬು ಜವ್ವನ...!     ಬಳುಕುವಾಗ ಉಳಿಕಿತೇನೋ ಎನ್ನಬಹುದಾದ,  ಇಳಿಜಾರನು ನೆನಪಿಗೆ ತರುವ ಸೊಂಟ..!    ನಡೆದು ಬರುವಾಗ ಎದೆ ನಡುಗುವ ಹಾಗೆ,  ಜಗ್ಗುವ ಜಘನ...!    ಅವಳನ್ನು  ಕಾಣುತಿದ್ದ   ಹಾಗೆ  ಅವಳ  ಪಾದಗಳಿಗೆ ನೋವಾಗದಂತೆ ಮೃದುವಾಯಿತು ಧರಣಿ ....!     ಹಸಿರುಟ್ಟ ಪ್ರಕೃತಿಯು ತನ್ನ ಅಂದವನೇ, ಅವಳಿಗಾಗಿ ಮೀಸಲಿಟ್ಟು ಧನ್ಯವಾಯಿತು...!    ಹೌದು, ಅದೋ..  ಅದೇ ಹುಡುಗಿ ಇರಬೇಕು.  ಸುಂದರನಿರುವ ಕಡೆ ಮೆಲ್ಲನೆ ಸಾಗುತ್ತಿದ್ದಳು  ಸುಂದರಾಂಗಿ.    ರಸಿಕ ನನ್ನ ಸ್ನೇಹಿತ.  ಏನಾಶ್ಚರ್ಯ...!   ಬರಸೆಳೆದು ಬಿಗಿದಪ್ಪಿಯೇ ಬಿಟ್ಟ.     
                  ಹೇ ಸತ್ಯಾ.. ಎಂದು ಕೂಗುತ್ತಾ ಭುಜವನ್ನು ಅಲ್ಲಾಡಿಸಿದ ಹಾಗಾಯ್ತು. ಕಣ್ಣನ್ನು ಉಜ್ಜಿಕೊಂಡು ಸರಿಯಾಗಿ ನೋಡಿದೆ.   ಅದು ನಮ್ಮ ಸುಂದ್ರು...ಒಹ್  ಹಾಗಾದರೆ  ಇಷ್ಟೊತ್ತು ಕಂಡದ್ದು ಹಗಲುಗನಸಾ...!    ಸಮಯ ನೋಡಿದೆ ಸಂಜೆ ೬  ಗಂಟೆಯಾಗಿತ್ತು.   ''ಸುಂದ್ರು  ನಿನ್ನ ಸ್ನೇಹಾ ಇಷ್ಟು ಬೇಗ ಬಂದು ಹೊರಟು ಹೋದಳೇನೋ...?   ನನಗೆ ಪರಿಚಯ ಮಾಡಿಸಬೇಕು ಅಂತ ನಿನಗೆ ಅನ್ನಿಸಲಿಲ್ಲವೇನೋ '', ಎಂದು  ಕೇಳಿದೆ.      ಹೇ, ಹೋಗೊಲೋ ... ''ಅವಳು ಬಂದಿದ್ದ್ರೆ ತಾನೆ ಪರಿಚಯ ಮಾಡಿಸೋಕೆ. ಸುಮ್ಮನೆ ಅಷ್ಟು ದೂರದಿಂದ ಬಂದು ಕಾಯ್ದಿದ್ದ್ ಆಯ್ತು''.   ಅವನ ಕಣ್ಣಂಚಿನಲ್ಲಿ ಕಂಬನಿ ಇಣುಕುತಿತ್ತು.     ಹೇ ಸುಂದ್ರಾ, ''ಆಕೆ ಇದೆ ಸ್ಪಾಟಿಗೆ ತಾನೆ ಬರುತ್ತೇನೆ ಎಂದು ಹೇಳಿದ್ದು.   ಫೋನಲ್ಲಿ ಸರಿಯಾಗಿ ಕೇಳಿಸಿಕೊಂಡಿದ್ದಾ ಹೇಗೆ...!'' ಆಶ್ಚರ್ಯದಿಂದ ಕೇಳಿದೆ.   '' ಹೌದು ಕಣೋ, ಇದೆ ಸಂಪಿಗೆ ಮರದ ಬಳಿ ಸರಿಯಾಗಿ ನಾಲಕ್ಕು ಗಂಟೆಗೆ ಬರುತ್ತೇನೆ ಎಂದು ಹೇಳಿದ್ದಳು. ಆರು ಗಂಟೆಯಾದರೂ ಬರಲೇ ಇಲ್ಲಾ''  ಬೇಸರದಿಂದ ಹೇಳಿದ.  '' ಸುಂದ್ರು,   ನೊಂದುಕೊಳ್ಳಬೇಡ,  ಏನೋ ಎಡವಟ್ಟಾಗಿದೆ ಅನ್ನಿಸುತ್ತೆ.   ನಿನ್ನ ಬಳಿ ಸ್ನೇಹಾಳ ಮನೆಯ ಫೋನ್ ನಂಬರ್ ಇದೆ ತಾನೆ..?''    ನೆನಪಲ್ಲೇ ಇದೆ. ಅದನ್ನು ಕಟ್ಟಿಕೊಂಡು ಏನ್ ಈಗ,  ಕೋಪದಿಂದ ಹೇಳಿದ..
  
                                                             
    '' ನೋಡು ಸುಂದ್ರಾ, ಸಮಾದಾನ ಮಾಡಿಕೊ, ಮುಂದೆ  STD ಬೂತ್ ಇದೆ. ಅಲ್ಲಿಂದ ಫೋನ್ ಮಾಡಿ ತಿಳಿದುಕೊಳ್ಳೋಣ ಬಾ. ಕತ್ತಲಾಗಿ ಹೋಗುತ್ತೆ '' ಎಂದು ಹೇಳಿ, ಬೇಗ ಹೊರಡಿಸಿಕೊಂಡು   STD ಬೂತ್ ಬಳಿ ಬಂದು,   ಅವನಿಂದ  ನಂಬರ್ ಪಡೆದು  ಸ್ನೇಹಾಳ ಮನೆಗೆ ನಾನೇ ಫೋನ್ ಮಾಡಿದೆ.  ಆಕಡೆಯಿಂದ ಯಾರೋ ಹೆಣ್ಣು ಮಗು ಫೋನ್ ತೆಗೆದುಕೊಂಡು  '' ಯಾರು ಬೇಕು...? '' ಎಂದು ಕೇಳಿತು.  ನಾನು ಸ್ನೇಹಾ..... ಎಂದು ಮುಂದಕ್ಕೆ ಹೇಳುವಷ್ಟರಲ್ಲಿಯೇ, '' ಅಕ್ಕನನ್ನು ನೋಡಲು  ಗಂಡಿನ ಕಡೆಯವರು ಬರುತಿದ್ದಾರೆ.   ಅದಕ್ಕೆ ಅಕ್ಕ ರೆಡಿ ಆಗುತಿದ್ದಾಳೆ.  ಸ್ವಲ್ಪ ತಾಳಿ ಕರೆಯುತ್ತೇನೆ ಎಂದು ಹೇಳಿದವಳೇ , ಅಂಕಲ್ ನಿಮ್ಮ ಹೆಸರೇನು''. ಎಂದು ಆ ಹುಡುಗಿ ಕೇಳುತಿದ್ದ ಹಾಗೆ ಫೋನ್ ಇಟ್ಟುಬಿಟ್ಟೆ.   ನಾನು ಮಾತನಾಡುತಿದ್ದಾಗ ಸುಂದ್ರು ಕೂಡ ಕುತೂಹಲದಿಂದ ತನ್ನ ಕಿವಿಯನ್ನು ರಿಸೀವರ್ಗೆ ತಾಕಿಸಿಕೊಂಡು ನಿಂತಿದ್ದನಾದ್ದರಿಂದ, ಆ ಮಗು ಆ ಕಡೆಯಿಂದ ಹೇಳಿದ ವಿಷಯವನ್ನು ಕೇಳಿಸಿಕೊಂಡು ಬಿಟ್ಟಿದ್ದ.    ಬರುತ್ತಿರುವ ದುಃಖವನ್ನು ಬಚ್ಚಿಟ್ಟುಕೊಳ್ಳುವವನಂತೆ,  ಆ ತಕ್ಷಣ ಸಣ್ಣದಾಗಿ ಕೆಮ್ಮತೊಡಗಿದ. ನಾನು ಅವನ ತೋಳನ್ನು ಬಳಸಿಕೊಂಡು ಅಲ್ಲಿಂದ ಹೊರಗೆ ಕರೆದುಕೊಂಡು ಬಂದೆ.  ಇಬ್ಬರೂ ಅಲ್ಲಿಯೇ ಬರುತಿದ್ದ ಬಸ್ಸನ್ನು ಹತ್ತಿ ರೂಮನ್ನು ಸೇರಿಕೊಂಡೆವು.  
           
                ನೆನ್ನೆ ಹೊರಟಾಗ ಇದ್ದ ಕುತೂಹಲ, ಉತ್ಸಾಹ ಎಣ್ಣೆಯಿಲ್ಲದ ದೀಪದಂತೆ ಬತ್ತಿಹೋಗಿದ್ದವು.   ಸುಮಾರು ಒಂದು ಗಂಟೆಯ ಕಾಲ ಇಬ್ಬರೂ ಮೌನವಾಗಿಯೇ ಕುಳಿತುಕೊಂಡಿದ್ದೆವು.  ಸುಂದರನ ಮನಸ್ಸು ಎಷ್ಟೊಂದು ಘಾಸಿಯಾಗಿರಬೇಕೆಂಬ ಅಂದಾಜು ನನಗೆ ಆ ತಕ್ಷಣ ತಿಳಿಯಲಿಲ್ಲ. ಪ್ಲೀಸ್ ಸುಂದ್ರು   ಏನಾದ್ರೂ ಮಾತಾಡೋ ಎಂದೆ. '' ಮಾತಾಡುವುದಕ್ಕೆ ಇನ್ನೇನು ಉಳಿದಿದೆ ಸತ್ಯಾ... ನಾನಾಡುವ ಮಾತುಗಳೆಲ್ಲ ಮುಗಿದುಹೋಗಿವೆ. ಸರಿ ನಡಿ ಹೋಗೋಣ  9 ಗಂಟೆಗೆ ಬಸ್ಸಾದರು ಸಿಗುತ್ತೆ'' ಎಂದು ಹೇಳಿದವನೇ, ತಾನು ಧರಿಸಿದ್ದ ಬಟ್ಟೆಯನ್ನು ಬಿಚ್ಹೆಸೆದು,  ಬರುವಾಗ ಹಾಕಿಕೊಂಡು ಬಂದಿದ್ದ ಬಟ್ಟೆಯನ್ನು ತೊಟ್ಟು  ಬಸ್ ನಿಲ್ದಾಣದ ಕಡೆ ಹೊರಟ.  

              ನಾನು ರೂಮಿನ ಬಾಡಿಗೆ ಚುಕ್ತ ಮಾಡಿ ಅವನ ಹಿಂದೆಯೇ ಬಸ್ ನಿಲ್ದಾಣಕ್ಕೆ ಬಂದೆ.   ಬಸ್ಸು ಬೆಂಗಳೂರಿಗೆ ಹೊರಡಲು ಸಿದ್ಧವಾಗಿತ್ತು.   ತಕ್ಷಣ ಹತ್ತಿಕೊಂಡೆವು. ನಾನು ಕಿಟಕಿಯ ಬಳಿಯೇ ಕುಳಿತುಕೊಂಡೆ.    ಆಗ, ಒಂದು ಚಿಕ್ಕ ಹುಡುಗಿ ಹಾಗು ಸುಮಾರು ಇಪ್ಪತ್ತು ವಯಸ್ಸಿನ ಆಜುಬಾಜಿನ ಹುಡುಗಿ,  ಇಬ್ಬರು ಯಾರನ್ನೋ ಹುಡುಕುತಿರುವಂತೆ ಪ್ರತಿಯೊಂದು ಬಸ್ಸಿನ ಬಾಗಿಲಲ್ಲಿ ಇಣಿಕಿ ನೋಡುತಿದ್ದರು.   ದೊಡ್ಡ ಹುಡುಗಿಯ ಮುಖದಲ್ಲಂತೂ ದುಗುಡ ಭಾವ ಸ್ಪಷ್ಟವಾಗಿ ಗೋಚರಿಸುತಿತ್ತು.   ಪಕ್ಕದಲ್ಲಿರುವ ಚಿಕ್ಕ ಹುಡುಗಿ, '' ಅಕ್ಕ ಅವರನ್ನ ನೋಡಿದ್ದಿಯೇನೆ '' ಎಂದು ಹೇಳಿಕೊಂಡು ಅವಳ ಹಿಂದಿಂದೆಯೇ ಬರುತಿತ್ತು.   ಇಲ್ಲ ಕಣೆ ಎನ್ನುತ್ತಲೇ ಆ ಹುಡುಗಿ ನಮ್ಮ ಬಸ್ಸಿನ ಬಾಗಿಲನ್ನು ಒಮ್ಮೆ ಇಣುಕಿ ನೋಡಿ ಮುಂದೆ ಹೊರಟುಹೋದಳು.   ಆ ಸಮಯದಲ್ಲಿ ಸುಂದರನು ಹಿಂದಕ್ಕೊರಗಿ ಕಣ್ಮುಚ್ಚಿ ಕುಳಿತಿದ್ದನು.   ನನಗೆ ಒಂದು ಕ್ಷಣ,  ಆ ಹುಡುಗಿ ಸ್ನೇಹಾನೆ ಇರಬೇಕೇನೋ ಎಂಬ ಸಣ್ಣ ಅನುಮಾನ ಬರುವುದರೊಳಗೆ ಡ್ರೈವರಣ್ಣ ಬಸ್ಸನ್ನು ಮುಂದಕ್ಕೆ ಚಲಾಯಿಸಿದ...ದೂರದಲ್ಲಿ ಆ ಪುಟಾಣಿ ಹುಡುಗಿ ಹಾಗೂ ಅವಳ ಅಕ್ಕ ಅಸಹಾಯಕರಂತೆ  ಅಲ್ಲಿಂದ ಹೊರಡುವ ಬಸ್ಸುಗಳನ್ನು   ದಿಟ್ಟಿಸುತ್ತಾ ನಿಂತಿದ್ದರು.

                                  ++++                   ++++             +++++

  ಸೋಮವಾರ ಬೆಳಿಗ್ಗೆ ಹತ್ತು ಗಂಟೆಗೆಲ್ಲ ರಾಮನಗರ ತಲುಪಿದೆವು.   ಸುಂದರನಂತು ತುಂಬಾನೇ ಡಿಸ್ಟರ್ಬ್ ಆಗಿದ್ದ.    ನಾನು ಸಾಕಷ್ಟು ಉಪದೇಶ,  ಬುದ್ಧಿಮಾತುಗಳನ್ನು  ಹೇಳಿ ಮನೆತನಕ ಬಿಟ್ಟು ಬಂದಿದ್ದೆ.  ಹೀಗೆ ಹತ್ತು  ದಿನಗಳು ಸರಿದುಹೋದವು.    ಆ ಹತ್ತು  ದಿನಗಳಲ್ಲಿ  ನಮ್ಮ ಸುಂದ್ರು ಬಹಳಷ್ಟು  ಬದಲಾಗಿಹೋಗಿದ್ದ.  ಶೇವ್ ಇಲ್ಲದೆ ಕಳಹೀನವಾಗಿದ್ದ ಮುಖ.   ಸುಕ್ಕುಗಟ್ಟಿದ ಆತನ ಬಟ್ಟೆಗಳು.  ಸುಂದರ   ಮೊದಲಿನಂತೆ ಇಲ್ಲ ಎಂಬುದನ್ನು ಸಾರಿ ಸಾರಿ ಹೇಳುತಿದ್ದವು.    ಹನ್ನೊಂದನೆಯ ದಿನ ಸುಂದರನಿಗೆ  ಸ್ನೇಹಾಳಿಂದ ಫೋನ್ ಕರೆ ಬಂತು,   ಫೋನಿನಲ್ಲಿ ಸ್ನೇಹಳ ದನಿ ಕೇಳಿದ ತಕ್ಷಣ,  ಸುಂದರ  ಕೋಪದಿಂದ  ಫೋನ್  ಇಟ್ಟುಬಿಟ್ಟ.    ಅತ್ತಕಡೆಯಿಂದ ಸ್ನೇಹ ಮಾತನಾಡುವುದಕ್ಕೆ ಪ್ರಯತ್ನಿಸುತ್ತಲೇ ಇದ್ದಳು.   ಆದರೆ ಫೋನ್ ರಿಸೀವ್ ಮಾಡದೆ ಕೇಳಿಸದವನಂತೆ   ಸುಮ್ಮನೆ ಕುಳಿತಿದ್ದ ಮಗನನ್ನು ನೋಡಿ  ಯಾರೋ ಅದು ಸುಂದ್ರು.   ಸ್ವಲ್ಪ ತಡಿ ನಾನೇ ಮಾತನಾಡಿ ಕೇಳುತ್ತೇನೆ ಎಂದು ಹೇಳಿ ಪೋನ್ ರಿಸೀವ್ ಮಾಡಿದರು.   ಅತ್ತ ಕಡೆಯಿದ್ದ ಸ್ನೇಹ,   ಅವರು ಹಲೋ  ಎಂದು ಹೇಳುವುದಕ್ಕೆ ಮುಂಚೆಯೇ..... ಮಾತನಾಡುವುದಕ್ಕೆ ಪ್ರಾರಂಭಿಸಬಿಟ್ಟಳು.    ಸುಂದರನ ತಾಯಿಗೆ,   ಸ್ನೇಹಾ ಏನು  ಮಾತನಾಡುತಿದ್ದಾಳೆ ಎಂದು ಅರ್ಥವಾಗದೆ, '' ಲೋ ಸುಂದ್ರು,   ನೋಡು ಯಾವುದೋ ಹುಡುಗಿ ಆಗುಂಬೆ ಶೃಂಗೇರಿ ಬಸ್ ಸ್ಟ್ಯಾಂಡ್ ಎಂದು ಏನೇನೋ ಹೇಳುತಿದ್ದಾಳೆ.  ನನಗೆ ಏನು ಅರ್ಥ ಆಗುತ್ತಿಲ್ಲ.  ನೀನು ಆಗುಂಬೆಗೆ ಹೋಗಿದ್ದಾಗ ಪರಿಚಯವಾದ  ಹುಡುಗಿ ಇರಬೇಕು.    ತಗೋ ಏನಾಗಬೇಕು  ಕೇಳು''  ಎಂದು ಸುಂದರನ ಕೈಗೆ ಫೋನ್ ಕೊಟ್ಟು ಅಡಿಗೆ ಮನೆಗೆ ಹೋದರು.
            
            ಸ್ವಲ್ಪ ಸಮಯದ ನಂತರ ಸಮಾಧಾನವಾಗಿ,   ಹಾ  ಹೇಳಿ ಎಂದನು.    ಅತ್ತ ಕಡೆಯಿದ್ದ ಸ್ನೇಹ, ''   ಒಹ್, ಆಗಲೇ ನಿಮ್ಮ ತಾಯಿ ಫೋನ್ ತೆಗೆದುಕೊಂಡಿದ್ರ,   ಸಾರಿ ನನಗೆ ಗೊತ್ತಾಗಲಿಲ್ಲ.  ಸುಂದರ್, ನನ್ನಿಂದ  ನಿಮ್ಮ ಮನಸ್ಸಿಗೆ  ತುಂಬಾ  ಬೇಸರವಾಗಿದೆ ಎಂದು ನನಗೆ ಗೊತ್ತು.    ಅದಕ್ಕಾಗಿ ಮೊದಲು ನಿಮ್ಮಲ್ಲಿ   ಕ್ಷಮೆ ಕೇಳುತ್ತೇನೆ.    ನಾನು ಆ ದಿನ ಬರದೆಯಿರುವುದಕ್ಕೆ ಕಾರಣವಿದೆ.    ನಮ್ಮ ತಂದೆ ಆ ದಿನ ಬೆಳಿಗ್ಗೆ ಇದ್ದಕ್ಕಿದ್ದ ಹಾಗೆ ಗಂಡಿನ ಕಡೆಯವರು ಸಂಜೆ ಬರುತ್ತಾರೆ.    ನೀನು ಆ ಸಮಯದಲ್ಲಿ ಮನೆಯಲ್ಲಿಯೇ ಇರು,   ಎಲ್ಲಿಗೂ ಹೋಗಬೇಡವೆಂದರು.    ಆ ವಿಷಯ ನನಗೆ ಅನಿರೀಕ್ಷಿತವಾಗಿತ್ತು.    ನನಗೆ ಈಗಲೇ ಮದುವೆ ಬೇಡಪ್ಪ,   ಇನ್ನು ಸ್ವಲ್ಪ ದಿನಗಳು ಕಳಿಯಲಿ ಎಂದು ಹೇಳಿದೆ.   ಆದರೆ ನಮ್ಮ ತಂದೆ, '' ನೋಡಮ್ಮ , ವಯಸ್ಸಿಗೆ ಬಂದ ಹೆಣ್ಣು ಮಗು ಇರುವ ಮನೆಗೆ ಗಂಡಿನ ಕಡೆಯವರು ಬರುವುದು ಸಾಮಾನ್ಯ.   ಮೊದಲು ಅವರು ಬಂದು ಹೋಗಲಿ.    ಆಮೇಲೆ  ನೋಡೋಣ''  ಎಂದು ಹೇಳಿ,    ಬೇರೆ ಮಾತಿಗೆ ಅವಕಾಶವಿಲ್ಲದಂತೆ ಹೊರಗೆ ಹೊರಟು ಹೋದರು.   ಈ ವಿಷಯವನ್ನು ನಿಮಗೆ ಫೋನ್ ಮಾಡಿ  ತಿಳಿಸೋಣವೆಂದು ಪ್ರಯತ್ನಪಟ್ಟೆ ಆದರೆ ಲೈನ್ ಸಿಗಲಿಲ್ಲ.     ನಿಜಕ್ಕೂ ಆ ದಿನ ನನ್ನ ಮನಸ್ಸಿಗೆ ತುಂಬಾನೇ ಬೇಸರವಾಯ್ತು.   ನೀವು ಬಂದು ನಾಲಕ್ಕು ಗಂಟೆಗೆ ಅಲ್ಲಿ ಕಾಯುತ್ತಾ ಇರುತ್ತೀರಿ ಎಂದು ನನಗೆ ಗೊತ್ತು.   ಅದೇ ಸಮಯಕ್ಕೆ ವರನ ಕಡೆಯವರು ಬರುತ್ತಾರೆಂದು  ಯಾರೋ ಬಂದು ಹೇಳಿ ಹೋದರು.   ಆದ್ದರಿಂದ  ಅಲ್ಲಿಗೆ ಬಂದು ನಿಮ್ಮನ್ನು ಕಂಡು ಮಾತನಾಡುವ  ಭಾಗ್ಯ ನನಗೆ ಇಲ್ಲವಾಯ್ತು.   ಆ ದಿನ ಸಂಜೆ ನೀವು ಫೋನ್ ಮಾಡಿದಾಗ,  ನನ್ನ ತಂಗಿ ರಿಸೀವ್ ಮಾಡಿದ್ದಳು.   ಅವಳು ಬಂದು ನನಗೆ ವಿಷಯ ತಿಳಿಸುವಷ್ಟರಲ್ಲಿ, ಲೈನ್ ಕಟ್ಟಾಗಿತ್ತು.   ಆದರೆ ನೋಡಿ,  ಆ ದಿನ ನಾಲಕ್ಕು ಗಂಟೆಗೆ ಗಂಡಿನ ಕಡೆಯವರು ಬರುತ್ತೇನೆ ಎಂದು ಹೇಳಿದವರು ಆರು  ಗಂಟೆಯಾದರೂ ಬರಲೇ ಇಲ್ಲ.    ಹೇಗಾದರಾಗಲಿ ನಿಮ್ಮನ್ನು ಸಂಧಿಸಲೇ ಬೇಕು ಎಂದು ನಿಶ್ಚಿಯಿಸಿದೆ.   ತಕ್ಷಣ ಚಿಕ್ಕಮ್ಮನ ಮನೆಗೆ ಹೋಗಿ ಬೆಳಿಗ್ಗೆ ಬರುತ್ತೇವೆ ಎಂದು ಅಪ್ಪನಿಗೆ ಹೇಳಿ ನನ್ನ ತಂಗಿಯೊಡನೆ ಹೊರಟುಬಿಟ್ಟೆ.   ನಮ್ಮ   ಚಿಕ್ಕಮ್ಮನ ಮನೆ ಶೃಂಗೇರಿಯಲ್ಲಿಯೇ  ಇದೇ.    ನಾನು  ಶೃಂಗೇರಿಯ ಬಸ್ ಸ್ಟ್ಯಾಂಡ್ನಲ್ಲಿ  ಇಳಿದಾಗ ಸಮಯ ಸುಮಾರು ೮-೩೦ ಆಗಿತ್ತು .      ಆದರೆ ಒಂದು ದಿನವು ನೋಡದ ನಿಮ್ಮನ್ನು ಪ್ರತಿಯೊಂದು ಬಸ್ಸಿನಲ್ಲು   ಹುಡುಕಿದೆ.   ನಾನು  ಕಳುಹಿಸಿದ್ದ ಬಟ್ಟೆಯನ್ನು ಧರಿಸಿರುವ  ವ್ಯಕ್ತಿ ಕಾಣಲೇಯಿಲ್ಲ.   ಎಲ್ಲಾದರು ಕಾಣಬಹುದೆಂದು  ಸುಮಾರು ಹೊತ್ತು ನನ್ನ ತಂಗಿಯೊಡನೆ ಹುಡುಕಿದೆ.    ನೀವು ಕೊನೆಗೂ ನನಗೆ ಕಾಣಿಸಲೇಯಿಲ್ಲ.         ಮನಸ್ಸಿಗೆ ತುಂಬಾ ಸಂಕಟವಾಯ್ತು.     ಮರುದಿನ    ನಿಮಗೆ ಫೋನ್ ಮಾಡಿ ಎಲ್ಲಾ ವಿಷಯವನ್ನು ಹೇಳೋಣವೆಂದುಕೊಂಡೆ,   ಆದರೆ ನಿಮ್ಮ ಮನೆಯ ಫೋನ್ ಡೆಡ್ ಆಗಿತ್ತು.    ದಿನವು ಪ್ರಯತ್ನ ಪಡುತಿದ್ದೆ,  ಈ ದಿನ ಸಂಪರ್ಕ ಸಿಕ್ಕಿತು.   ಪ್ಲೀಸ್ ಸುಂದರ್,   ನನ್ನನ್ನು ಅರ್ಥ ಮಾಡ್ಕೊಳಿ.  ನಾನು ಹೇಳುತ್ತಿರುವುದೆಲ್ಲ ಸತ್ಯ.    ನಾನು ಹೇಳಿರುವುದನ್ನೆಲ್ಲ ಕುಳಿತು  ನಿಧಾನಕ್ಕೆ ಯೋಚಿಸಿ.  ನಿಮ್ಮ ಫೋನಿಗಾಗಿ ಕಾಯಿತ್ತಿರುತ್ತೇನೆ '' ಎಂದು ಹೇಳಿ ಫೋನ್ ಇಟ್ಟಳು.  
         
            ಸುಂದರನ ಮನದಲ್ಲಿ  ಕವಿದಿದ್ದ ಕಾರ್ಮೋಡ  ಆ ಕ್ಷಣದಲ್ಲೇ ಕರಗಿಹೋಯಿತು.    ಹೌದು ಪ್ರತಿಯೊಬ್ಬ ಪ್ರೇಮಿಗಳು ಅಷ್ಟೇ.    ಅವರ ಪ್ರೇಮಕ್ಕೆ ಭಾಷೆಯಿರುವುದಿಲ್ಲ, ಆದರೆ  ಭಾವುಕತೆಯಿರುತ್ತದೆ.  ಪ್ರೇಮಕ್ಕೆ ಘಾಸಿಗೊಳಿಸುವ ಮನಸ್ಸಿರುವುದಿಲ್ಲ,   ಆದರೆ ಪ್ರೀತಿಸುವ  ಮನಸ್ಸಿರುತ್ತದೆ.   ಪ್ರೇಮಕ್ಕೆ ಸುಳ್ಳು ಹೇಳುವ ಅವಶ್ಯಕತೆಯಿರುವುದಿಲ್ಲ,  ಆದರೆ ಸತ್ಯ ಹೇಳುವ ಧೈರ್ಯವಿರುತ್ತದೆ. ಸಧ್ಯದ  ಸುಂದರನ ಪರಿಸ್ಥಿತಿಯು ಇದೇ    ಆಗಿತ್ತು.    ಸ್ನೇಹಾಳ  ಬಗ್ಗೆ ತಾನು ಹೊಂದಿದ್ದ ತಪ್ಪು ಅಭಿಪ್ರಾಯಕ್ಕೆ,  ತನ್ನ ಬಗ್ಗೆಯೇ ನಾಚಿಕೆಯಾಗತೊಡಗಿತು.    ಮತ್ತೊಂದೆಡೆ  ಮನಸ್ಸು ಉಲ್ಲಾಸದಿಂದ ಕೇಕೆ ಹಾಕಿ ನಗುತ್ತಲಿತ್ತು.  ಮನದಲ್ಲಿ  ಉಳಿದು ಹೋಗಿದ್ದ ನೂರಾರು ಮಾತುಗಳು,   ಹೊರಬರಲು ತವಕಿಸುತಿದ್ದವು.   ಮನದಲ್ಲಿ ಮಡುಗಟ್ಟಿ ಕುಳಿತಿದ್ದ ದುಃಖ ಕಣ್ಣೀರಾಗಿ ಹರಿಯಲಾರಂಬಿಸಿತು.     ಅತ್ತಕಡೆ ತನ್ನ ಫೋನಿಗೆ ಕಾಯುತ್ತಿರುತ್ತೆನೆಂದು  ಸ್ನೇಹಾ  ಹೇಳಿದ್ದು  ನೆನಪಿಗೆ ಬಂತು.   ತಕ್ಷಣವೇ ಫೋನ್ ಮಾಡಿ ಮಾತ ನಾಡಲಾರಂಬಿಸಿದ,   ಅಷ್ಟುದಿನಗಳ ಕಾಲ  ಮಾತನಾಡದೆ  ಮನದಲ್ಲಿ  ಉಳಿದು ಹೋಗಿದ್ದ ನೂರಾರು ಮಾತುಗಳನ್ನು ನಿವೇದನೆಯ ರೂಪದಲ್ಲಿ ಹೇಳಲಾರಂಬಿಸಿದ.  ಸುಮಾರು ಒಂದು ಗಂಟೆಗಳ ಕಾಲ ಇಹ ಲೋಕದ ಪರಿವೆ ಇಲ್ಲದವರಂತೆ ಇಬ್ಬರು ಪರಸ್ಪರರಾಗಿ ಹೋಗಿದ್ದರು.  ಪ್ರೀತಿಯಿಂದ.
        
      ಸ್ನೇಹ ಮಾತನಾಡುತ್ತಲೇ   '' ಸುಂದರ್, ನಾನು ಮುಂದಿನ ಭಾನುವಾರ ಬೆಂಗಳೂರಿಗೆ ಬರುತಿದ್ದೇನೆ.  ಆ ದಿನ ನನ್ನ ಸ್ನೇಹಿತೆಯ ಅಕ್ಕನ ಮಗುವಿನ ನಾಮಕರಣವಿದೆ.  ನನ್ನನ್ನು ಬರಲೇ ಬೇಕೆಂದು ಹೇಳಿದ್ದಾರೆ.  ನಾನು ಫಂಕ್ಷನ್ ಮುಗಿಸಿಕೊಂಡು ಸಾಯಂಕಾಲ ಕಂಡಿತ  ನಿಮ್ಮನ್ನು ಭೇಟಿಯಾಗುತ್ತೇನೆ.  ಅದೇ ಲಾಲ್ ಬಾಗ್ ನಲ್ಲಿರುವ ಚಿಕ್ಕಗುಡ್ಡದ  ಮೇಲೊಂದು ಮಂಟಪ ಇದೆಯಲ್ಲ  ಅಲ್ಲಿಗೆ ಸಾಯಂಕಾಲ ಆರು ಗಂಟೆಯ ಒಳಗೆ ಬರುತ್ತೇನೆ.  ಈ ಬಾರಿ  ಕಂಡಿತ ಇಬ್ಬರೂ  ಭೇಟಿಯಾಗುತ್ತೇವೆಂಬ ನಂಬಿಕೆ ನನ್ನಲ್ಲಿದೆ.   ಅಲ್ಲಿಯವರೆಗೂ ನಿಮ್ಮ ನೆನಪಲ್ಲೇ ಇರುತ್ತೇನೆ..'' ಎಂದು ಹೇಳಿ ಫೋನ್ ಇಟ್ಟಳು.  ಅವಳು ಹಾಗೆಂದಾಕ್ಷಣ, ಸುಂದರ ಆಗಲೇ ಭೇಟಿಯಾಗುವ ಕನಸು ಕಾಣತೊಡಗಿಡ.  
                                                                         
              ಆ ದಿನ ಯಾವ ಕೆಲಸವೂ ಇರಲಿಲ್ಲ ರೂಮಿನಲ್ಲೇ ಇದ್ದೇ.   ಫೋನ್ ಟ್ರಿಣ್ ಗುಟ್ಟಿತು.  ಯಾರಪ್ಪ ಅದು ಎಂದುಕೊಂಡು  ಹಲೋ ಎಂದೆ.  '' ಸತ್ಯಾ , ಸಂಜೆ ರೂಮಲ್ಲೇ ಇರೋ  ಎಲ್ಲಿಗೂ ಹೋಗಬೇಡ.   ನಿನ್ನ ಹತ್ತಿರ  ತುಂಬಾ ಮಾತನಾಡೋದು ಇದೆ''  ಎಂದು ಹೇಳಿದವನೇ ನನ್ನ ಪ್ರತ್ಯುತ್ತರಕ್ಕೆ ಕಾಯದೆ ಫೋನ್ ಇಟ್ಟುಬಿಟ್ಟ ಸುಂದ್ರ .   ಇದ್ದಕ್ಕಿದ್ದ ಹಾಗೆ ಸುಂದ್ರ ಫೋನ್ ಮಾಡಿದ್ದರಿಂದ,  ಮತ್ತೇನೋ ಅವಾಂತರ ಮಾಡಿಕೊಂಡಿದ್ದಾನೋ ಎನಿಸದಿರಲಿಲ್ಲ. 
          
                ಸಂಜೆ ೫ ಗಂಟೆಗೆಲ್ಲ ನಮ್ಮ ರಾಜಕುಮಾರನ ಆಗಮನವಾಯ್ತು.    ಆದರೆ, ನಾನು ಅಂದುಕೊಂಡಂತೆ ಸುಂದ್ರು ಮಂಕಾಗಿರಲಿಲ್ಲ.    ಪ್ರಪಂಚದ ದುಃಖವನೆಲ್ಲ ಮುಟೆಕಟ್ಟಿ   ತಲೆಮೇಲೆ ಹೊತ್ತಿಕೊಂಡವನಂತೆ   ಇದ್ದವನು,  ಈಗ ಇರೋಬರೋ ಸುಖವನ್ನೆಲ್ಲ ತಲೆಮೇಲೆ ಸುರಿದುಕೊಂಡವನಂತೆ ತುಂಬಾ ಉತ್ಸಾಹದಿಂದಿದ್ದ.     ಹೇಳಪ್ಪಾ ಸುಂದ್ರು ಏನ್ ವಿಷಯ  ಎಂದು ಹೇಳಿ,  ನನ್ನ ಕಿವಿಗಳನ್ನು ಅವನ ವಶಕ್ಕೆ ನೀಡಿ ಕುಳಿತುಕೊಂಡೆ.    ತಾನು ಅನುಭವಿಸಿದ ಮಾನಸಿಕ ವೇದನೆಯಿಂದ ಹಿಡಿದು,  ಸ್ನೇಹ  ಹೇಳಿದ ಪ್ರತಿಯೊಂದು ವಿಷಯವನ್ನು ಚಾಚು ತಪ್ಪದಂತೆ ಹೇಳಿದ.   ನನ್ನನ್ನು ಹುಡುಕಿಕೊಂಡು ಬಸ್ ಸ್ಟ್ಯಾಂಡ್ಗೂ ಬಂದಿದ್ದಳಂತೆ   ಕಣೋ ಎಂದಾಗ,   ಒಂದು ಚಿಕ್ಕ ಹುಡುಗಿಯ ಕೈ ಹಿಡಿದುಕೊಂಡು ಪ್ರತಿಯೊಂದು ಬಸ್ಸಿನ ಬಾಗಿಲ  ಒಳಗೆ ಇಣುಕಿ ನೋಡುತ್ತಾ ನಿರಾಶೆಯಿಂದ   ಹೋಗುತಿದ್ದ  ಆ ಹುಡುಗಿಯ ಚಿತ್ರ ನನ್ನ  ಕಣ್ಣ  ಮುಂದೆ ಬಂತು.  
           
            ಸುಂದ್ರು, '' ಆ ಹುಡುಗಿಯನ್ನು ಆ ದಿನ ನಾನು ನೋಡಿದೆ ಕಣೋ''   ಎಂದೆ.      ಸುಂದರನು... '' ಅಯ್ಯೋ ಪಾಪಿ.  ಈ ವಿಷಯವನ್ನು ನನಗೆ ಹೇಳಲೇ ಇಲ್ಲವಲ್ಲೋ.  ಆಗ  ನನಗೂ ತೋರಿಸಬೇಕಾಗಿತ್ತು  ತಾನೆ ...?''   ಎಂದನು.    ಫೋನಿನಲ್ಲಿ ಸ್ನೇಹ ತಿಳಿಸಿದ  ವಿಚಾರವನ್ನು  ನೀನು ಹೇಳಿದ   ಮೇಲೆಯೇ ಅವಳು ಸ್ನೇಹ ಎಂದು  ನೆನಪಿಗೆ ಬಂದದ್ದು  ಎಂದು ಹೇಳಿದೆ.    ಹೋ.. ಸರಿ ಬಿಡು.  ನಿನಗೆ ತಾನೆ ಅವಳೇ ಸ್ನೇಹ ಎಂದು ಹೇಗೆ ಗೊತ್ತಾಗಬೇಕು ಎಂದು ಗೊಣಗುವವನಂತೆ ಹೇಳಿದನು.      ಸತ್ಯಾ..'' ಈ ಸಾರಿ ಮಿಸ್ಸಿಲ್ಲ ಕಣೋ,  ಅವಳನ್ನು ಭೇಟಿ ಆಗುತ್ತೇನೆಂಬ   ಭರವಸೆ ಇದೆ.  ನಾಳೆ ಮಧ್ಯಾಹ್ನ   ಬೆಂಗಳೂರಿಗೆ ಹೊರಟು ಬಿಡೋಣ ಕಣೋ'' ಎಂದು ಮುಖ್ಯ ವಿಷಯಕ್ಕೆ ಬಂದನು.    ನಾನು ಬರುವುದಿಲ್ಲ ಎಂದರು ಅವನು ಬಿಡುವುದಿಲ್ಲ ಎಂದು ಗೊತ್ತಿತ್ತು.    ಅದಕ್ಕೆ,   ಸರಿ ಬರುತ್ತೇನೆ  ಬಿಡೋ ಎಂದು ಹೇಳಿದೆ.    ಆಯ್ತು ನಾಳೆ ಬರುತ್ತೇನೆ  ರೆಡಿಯಾಗಿರು ಎಂದು ಹೇಳಿ ಹೊರಟು ಹೋದನು. 
          
        ಆಶ್ಚರ್ಯದ ವಿಷಯವೇನೆಂದರೆ,  ಸ್ನೇಹ  ಹೇಗಿದ್ದಾಳೆಂದು  ಅವಳ ರೂಪದ ಬಗ್ಗೆ ಸುಂದರ  ಒಂದು ಮಾತನ್ನು  ಕುತೂಹಲಕ್ಕಾದರೂ  ಕೇಳಲಿಲ್ಲ.     ನನಗೆ ಅವನ ಬಗ್ಗೆ ಹೆಮ್ಮೆ ಅನ್ನಿಸಿದಾಕ್ಷಣವದು.  ಈ ಪ್ರೇಮವೇ   ಹೀಗೋ,  ಇಲ್ಲ ಪ್ರೇಮಿಗಳೇ ಹೀಗೋ ಗೊತ್ತಿಲ್ಲ.   ಯಾವ ತಕರಾರು ಇಲ್ಲದೆ ಬೇಗ ಕನ್ವಿನ್ಸ್ ಆಗೋದು,    ತಕ್ಷಣ ನಿರ್ಣಯ ತಗೋಳೋದು ಪ್ರೇಮಿಗಳೇ ಇರಬೇಕು.   ಪ್ರೇಮಕ್ಕೆ ಬಿದ್ದಾಕ್ಷಣ ಪ್ರತಿಯೊಂದು ಮಾತುಗಳು ಕೇಳುವುದಕ್ಕೆ ಮಧುರವಾಗಿಯೇ ಇರುತ್ತವೆ.  ಇನ್ನು ಸರಿಯಾಗಿ ಹೇಳಬೇಕಂದರೆ ಹಾಗೆ ತೋರುತ್ತವೆ.     ಆ ಮಾತುಗಳಿಗೆ ಕಾಮ, ಫುಲ್ಸ್ಟಾಪ್ ಏನು ಬೇಕಾಗಿಲ್ಲ.  ಇರಿಯುವಂತ ಮಾತುಗಳಿರುತ್ತವೆ.    ಆದರೆ ಅದು ಹೃದಯಕ್ಕೆ ಮಾತ್ರ...!   ಕರಗಿ ನೀರಾಗುವಂತಹ  ವರ್ಣನೆಗಳಿರುತ್ತವೆ.    ಆದರೆ ಅದು ಮನಸ್ಸಿಗೆ ಮಾತ್ರ....!   ಪಿಸುಮಾತುಗಳಿಗೆ ಕಿವಿಯಾಗಬೇಕಷ್ಟೇ.  ಅವು  ಸವಿಮಾತುಗಳಾಗಿ ಮನಸ್ಸು ತುಂಬಿಹೊಗುತ್ತವೆ...!   ಅಲ್ಲಿ ಸಂಕೋಚಕ್ಕೆ ಎಡೆಯಿಲ್ಲ.   ಆದರೆ  ಭಾವುಕತೆಗೆ ಬೆಲೆಯುಂಟು...!   ಅದೆಲ್ಲ ನಮ್ಮ ಸುಂದ್ರು ಹಾಗು ಸ್ನೇಹಾರಲ್ಲಿ ಉಂಟಾ...! ನೋಡೋಣಾ.  ಎಂದುಕೊಂಡವನೇ,   ಸುಂದರನ ಜೊತೆ  ಮರುದಿನ ನಾಲಕ್ಕು ಗಂಟೆ ಸಮಯಕ್ಕೆ  ಲಾಲ್ ಬಾಗ್    ತಲುಪಿದೆ. 
                                       +++++              +++++             +++++



    ''ಸುಂದ್ರು, ಎಷ್ಟೊತ್ತಿಗೋ ಸ್ನೇಹ ಬರ್ತೀನಿ ಅಂತ ಹೇಳಿರೋದು'' ಕೇಳಿದೆ. '' ಇನ್ನೇನು ಬರಬಹುದು ಬಾರೋ'' ಎಂದು ಹೇಳಿ ಮುಂದೆ ಎಡ ಭಾಗದಲ್ಲಿದ್ದ ಚಿಕ್ಕ ಗುಡ್ಡದ ಮೇಲಿನ ಮಂಟಪದ ಕಡೆ ಹೊರಟನು. ಇವನನ್ನು ಇಲ್ಲಿ ಅವಳು ಹೇಗೆ ಗುರುತಿಸುತ್ತಾಳೆ...? ಎಂದು ಯೋಚಿಸುತ್ತಾ, ಅದರ ಬಗ್ಗೆ ಕೇಳೋಣವೆಂದು ಅಂದುಕೊಳ್ಳುವಷ್ಟರಲ್ಲಿಯೇ ನೆನಪಿಗೆ ಬಂತು. ಅಂದು ಆಗುಂಬೆಯಲ್ಲಿ ಸ್ನೇಹಾಳನ್ನು ನೋಡಲು ಹಾಕಿಕೊಂಡಿದ್ದ ಡ್ರೆಸ್ಸನ್ನು ಈ ದಿನವೂ ಹಾಕಿದ್ದ. ಅದನ್ನು ನೋಡುತಿದ್ದ ಹಾಗೆ ನನ್ನ ಅನುಮಾನ ನಿವಾರಣೆ ಆಯ್ತು. '' ಸುಂದ್ರು, ಇಬ್ಬರೂ ಮೊದಲಾ ಸಲ ಬೇಟಿ ಆಗ್ತಿದ್ದೀರ. ನಾನು ನಿನ್ನ ಜೊತೆಯಿದ್ದರೆ ಆಕೆಗೆ ನಿನ್ನೊಂದಿಗೆ ಮುಕ್ತವಾಗಿ ಮಾತನಾಡಲು ಮುಜುಗರವಾಗಬಹುದು. ಆದ್ದರಿಂದ ನಾನು ದೂರದಲ್ಲಿ, ನನ್ನ ಸಂಗಾತಿ ಸಿಗರೇಟಿನ ಜೊತೆ ಕಾಲ ಕಳೆಯುತ್ತಿರುತ್ತೇನೆ. ನೀವಿಬ್ಬರು ಮನಸ್ಸು ಬಿಚ್ಚಿ ಮಾತನಾಡಿಕೊಳ್ಳಿ. ಆಮೇಲೆ ಬೇಕಾದರೆ ನನಗೆ ಪರಿಚಯ ಮಾಡಿಸುವೆಯಂತೆ '' , ಎಂದು ಹೇಳಿ ಅಲ್ಲೇ ದೂರದಲ್ಲಿದ್ದ ಕಲ್ಲು ಹಾಸಿನ ಮೇಲೆ ಹೋಗಿ ಕುಳಿತೆ. ಸರಿಯಪ್ಪ , ನೀನು ಹೇಳಿದ್ದು ಸರಿಯಾಗಿದೆ ಆ ಮಂಟಪದ ಬಳಿ ಇರುತ್ತೇನೆ, ಆಮೇಲೆ ಬಾ ಎಂದು ಹೇಳಿ ಮಂಟಪದ ಬಳಿ ಹೋಗಿ ಕುಳಿತುಕೊಂಡನು.


                ಸ್ವಲ್ಪ ಸಮಯದಲ್ಲೇ, ನಾನು ಆ ದಿನ ಶೃಂಗೇರಿಯ ಬಸ್ ನಿಲ್ದಾಣದಲ್ಲಿ ನೋಡಿದ್ದ ಹುಡುಗಿ ಅವಳ ಜೊತೆಯಲ್ಲಿ ಮತ್ತೊರೋ ಹುಡುಗಿ.... ಸ್ನೇಹಿತೆಯಿರಬೇಕು, ಇಬ್ಬರು ನಾನು ಕುಳಿತಿದ್ದ ಕಲ್ಲು ಹಾಸಿನ ಪಕ್ಕದಲ್ಲಿಯೇ ಹಾದುಹೋದರು. ಸ್ನೇಹಾ ತುಂಬಾ ಸಿಂಪಲ್ಲಾಗಿ ಚೂಡಿದಾರ್ ಧರಿಸಿದ್ದಳು. ಮುಖದಲ್ಲಿ ಮುಗ್ಧಭಾವ ಹೊರಸೂಸುತಿತ್ತು. ಜೊತೆಯಲ್ಲಿದ್ದ ಹುಡುಗಿ ಟೈಟ್ ಜೀನ್ಸ್ ಪ್ಯಾಂಟ್ ಮೇಲೊಂದು ಟೀ ಷರ್ಟ್ ಹಾಕಿದ್ದಳು. ನಾನು ಅವರು ಹೋಗುತ್ತಿರುವ ಕಡೆಯೇ ಕುತೂಹಲದಿಂದ ನೋಡುತಿದ್ದೆ. ಸುಂದರನು ಮಂಟಪದ ಕಲ್ಲಿಗೆ ಹೊರಗಿದಂತೆ ಕುಳಿತಿದ್ದನು. ದೂರಕ್ಕೆ ಅಸ್ಪಷ್ಟವಾಗಿ ಕಾಣುತಿದ್ದನು. ಸ್ನೇಹ ಪಕ್ಕದಲ್ಲಿದ್ದ ಹುಡುಗಿಗೆ, ಮಂಟಪದ ಕಡೆ ಕೈ ತೋರಿಸಿ ಜೊತೆಯಲ್ಲಿದ್ದ ಹುಡುಗಿಗೆ ಏನೋ ಹೇಳುತಿದ್ದಳು. ಪಕ್ಕದಲ್ಲಿದ್ದ ಹುಡುಗಿ ಗುಸು ಗುಸು ಪಿಸು ಪಿಸು ಅಂತ ಅದೇನೋ ಸ್ನೇಹಾಳ ಕಿವಿಯಲ್ಲಿ ಹೇಳಿ, ನಾನು ಕರೆಯುವ ತನಕ ಬರಬೇಡ ಇಲ್ಲೇ ಕುಳಿತಿರು ಎಂದು ಹೇಳಿ, ಸುಂದರನಿರುವ ಕಡೆ ಹೊರಟಳು.


              ಇದೇನಿದು ಕಥೆ ಉಲ್ಟಾ ಆಗುತ್ತಿದೆಯಲ್ಲ. ಸ್ನೇಹಾ ಇಲ್ಲೇ ಉಳಿದುಕೊಂಡಳು. ಆ ಹುಡುಗಿ ಮಾತ್ರ ಸುಂದರನ ಬಳಿ ಹೋಗುತಿದ್ದಾಳೆ, ಹೇಗೋ ಸ್ನೇಹ ಒಬ್ಬಳೇ ಇದ್ದಾಳೆ, ಹೋಗಿ ಪರಿಚಯ ಮಾಡಿಕೊಳ್ಳಲೇ ಎಂಬ ಯೋಚನೆ ಬಂತು. ಆದರೆ ಆ ಹುಡುಗಿ ಏನು ಹೇಳಿಕೊಟ್ಟು ಹೋಗಿದ್ದಾಳೋ ಏನೋ ಸ್ನೇಹ ತಲೆಯೆತ್ತದೆ ಒಂದು ರೀತಿಯ ಆತಂಕದಿಂದ ನಿಂತಿದ್ದಳು. ನಾನು ಈಗ ಮಾತನಾಡಿಸುವುದು ಬೇಡ, ಏನಾಗುತ್ತದ್ದೋ ನೋಡೋಣವೆಂದು ಅಲ್ಲಿಯೇ ಕುಳಿತುಕೊಂಡೆ. ಅಷ್ಟರಲ್ಲಿ ಸ್ನೇಹಾಳ ಸ್ನೇಹಿತೆ ಸುಂದರನ ಸಮೀಪ ಹೋದಳು...ಏನಾಗುತ್ತದೋ ಎಂದು ಅತ್ತಕಡೆಯೇ ನೋಡುತಿದ್ದೆ..


                       ಸ್ವಲ್ಪ ಹಿಂದಕ್ಕೆ ಹೋಗೋಣ. ಹೇಳಿಯೇ ಬಿಡುತ್ತೇನೆ ಕೇಳಿ. ಸ್ನೇಹಾಳ ಜೊತೆ ಬಂದಿರುವ ಹುಡುಗಿಯ ಹೆಸರು ರಮ್ಯ. ಅವಳು ಚಿಕ್ಕಂದಿನಿಂದಲೂ ತೀರ್ಥಹಳ್ಳಿಯಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿಯೇ ಇದ್ದಳು. ಇಬ್ಬರು ಶಾಲೆಗೆ ಹೋಗುವಾಗಿನಿಂದಲೂ ಅನ್ಯೋನ್ಯ ಗೆಳತಿಯರು. ರಮ್ಯಾಳ ಮಾತನ್ನು ಸ್ನೇಹ ಯಾವತ್ತಿಗೂ ತಿರಸ್ಕರಿಸುತ್ತಿರಲಿಲ್ಲ. ರಮ್ಯಾಳ ತಂದೆ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ಉಡುಪಿಯಿಂದ ಬೆಂಗಳೂರಿಗೆ ವರ್ಗಾವಣೆಯಾದ ಮೇಲೆ ಬೆಂಗಳೂರಿನ ಶ್ರೀನಗರದಲ್ಲಿ ವಾಸವಾಗಿದ್ದರು. ರಮ್ಯ ಡಿಗ್ರಿ ಓದುವ ಸಲುವಾಗಿ ಅಜ್ಜಿಯ ಮನೆಯಿಂದ ಬೆಂಗಳೂರಿನ ತಮ್ಮ ಸ್ವಂತ ಮನೆಗೆ ಬಂದಿದ್ದಳು. ಸ್ನೇಹ ತನ್ನ ಗೆಳತಿ ರಮ್ಯಾಳಿಗೆ, ಸುಂದರ ಹಾಗೂ ತಾನು ಪರಸ್ಪರ ಪ್ರೇಮಿಸುತ್ತಿರುವ ಬಗ್ಗೆ ಏನನ್ನು ಮುಚ್ಚಿಡದೆ ಪ್ರತಿಯೊಂದೂ ವಿಷಯವನ್ನು ಹೇಳಿಕೊಂಡಿದ್ದಳು. ಆದ್ದರಿಂದ ಸುಂದರನನ್ನು ನೋಡಬೇಕೆಂಬ ಕುತೂಹಲ ದಿಂದ, ರಮ್ಯ ಸ್ನೇಹಾಳೊಂದಿಗೆ ಬಂದಿದ್ದಳು. ರಮ್ಯ ಐಶಾರಾಮಿ ಜೀವನದಲ್ಲಿ ಬೆಳದಿರುವ ಕಾರಣ, ಅಹಂಕಾರ ಅವಳಿಗೆ ಗೊತ್ತಿಲ್ಲದಂತೆ ಆವರಿಸಿತ್ತು. ಸ್ವಭಾವತಃ ಒಳ್ಳೆಯವಳೇ. ಆದರೆ ದುಡುಕು ಸ್ವಭಾವ ಅವಳ ಆಸ್ತಿಯಂತಾಗಿ ಹೋಗಿತ್ತು. ಅವಳ ಆತುರದ ನಿರ್ಧಾರಗಳು ಕೆಲವೊಮ್ಮೆ ಅನಾಹುತಕ್ಕೆ ಕಾರಣವಾಗುತಿದ್ದವು.


                ಸ್ನೇಹಾಳ ಬಗ್ಗೆ ರಮ್ಯಾಳಿಗೆ ಪ್ರೀತಿ ವಿಶ್ವಾಸ ಅನ್ಯೋನ್ಯತೆಯಿದ್ದರು, ರೂಪದಲ್ಲಿ ತನಗಿಂತ ಅಂದಗಾತಿಯಾಗಿದ್ದ ಸ್ನೇಹಾಳ ಚಲುವು ಒಂದು ಬಗೆಯ ಅಸೂಯೆಗೆ ಕಾರಣವಾಗಿತ್ತು. ಆದರೆ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ ಅಷ್ಟೇ. ಆದರೆ ಹಾಲಿನಂತ ಮನಸ್ಸನ್ನು ಹೊಂದಿದ್ದ ಸ್ನೇಹಾಳ ಮನದಲ್ಲಿ ಯಾವ ಕುರೂಪವು ಇರಲಿಲ್ಲ. ಚಿಕ್ಕಂದಿನಿಂದಲೂ ಅವರಿಬ್ಬರೂ ಒಟ್ಟಿಗೆ ಬೆಳೆದ ಕಾರಣ, ರಮ್ಯಾಳ ಬಗ್ಗೆ ಅತೀ ಅನ್ನಿಸುವಷ್ಟು ವಿಶ್ವಾಸ. ಜೊತೆಗೆ ಬಲಹೀನತೆ ಕೂಡ.


                          '' ನೀನು ಇಲ್ಲೇ ನಿಂತಿರು, ನಾನು ಸ್ನೇಹ ಎಂದು ಹೋಗಿ ಪರಿಚಯ ಮಾಡಿಕೊಳ್ಳುತ್ತೇನೆ. ನಿನ್ನ ಸುಂದ್ರುವಿನ ಪ್ರತಿಕ್ರಿಯೆ ಯಾವ ರೀತಿ ಇರುತ್ತೋ ನೋಡ್ತೀನಿ. ಪ್ಲೀಸ್ ಒಪ್ಪಿಕೊಳ್ಳೇ. ಇಲ್ಲದಿದ್ದರೆ ನನ್ನಾಣೆ'' ಎಂದು ಹೇಳಿ ತನ್ನ ಉತ್ತರಕ್ಕೂ ಕಾಯದೆ ಸುಂದರನ ಬಳಿಗೆ ಹೋಗುತ್ತಿರುವ ರಮ್ಯಾಳನ್ನು ನೋಡಿದ ಸ್ನೇಹಾಳಿಗೆ ಮನದಲ್ಲಿಯೇ ದಿಗಿಲಾಯಿತು. ದೇವರೇ ಏನು ಅನಾಹುತವಾಗದಿರಲಿ ಎಂದು ದೇವರನ್ನು ನೆನೆಯುತ್ತಾ ತಲೆ ಬಗ್ಗಿಸಿ ನಿಂತಿದ್ದಳು. ಸುಂದರನ ಬಳಿ ಬಂದ ರಮ್ಯಾ ... ಹಲೋ ಎಂದಳು. ಆದರೆ ಸುಂದರನಿಂದ ಯಾವುದೇ ಪ್ರತಿಕ್ರಿಯ ಬರಲಿಲ್ಲ. ಮತ್ತೊಮ್ಮೆ ಸ್ವಲ್ಪ ಜೋರಾಗಿ ಹಲೋ ಸುಂದರ್ ಎಂದಳು. ಆಗ ಬೆಚ್ಚಿ ಬಿದ್ದವನಂತೆ ಸುಂದರ ಕನಸಿನಿಂದ ವಾಸ್ತವಕ್ಕೆ ಬಂದನು. ಎದಿರು ನಿಂತಿರುವ ರಮ್ಯಾಳನ್ನು ನೋಡುತಿದ್ದಂತೆ. .....ಕಂಪಿಸತೊಡಗಿದನು. ತಕ್ಷಣ ಏನು ಮಾತನಾಡಬೇಕೆಂದು ಹೊಳೆಯಲಿಲ್ಲ. ಫೋನಿನಲ್ಲಿ ಗಂಟೆಗಟ್ಟಲೆ ಮಾತನಾಡುತಿದ್ದವನಿಗೆ ಈಗ ಗಂಟಲು ಕಟ್ಟಿದಂತಾಗಿತ್ತು. ಆದರೂ ಧೈರ್ಯವನ್ನು ಒಗ್ಗೂಡಿಸಿಕೊಂಡು, ಕಣ್ಣಲ್ಲಿಯೇ ಹರ್ಷವನ್ನು ಉತ್ಸಾಹವನ್ನು ವ್ಯಕ್ತಪಡಿಸುತ್ತಾ, ಮಾತನಾಡಲೆಂದು ಬಾಯಿ ತೆರೆದ ಸುಂದರನಿಗೆ...ರಮ್ಯಾಳ ಮುಖದ ಮೇಲಿನ ಭಾವನೆಗಳನ್ನು ನೋಡುತಿದ್ದಂತೆ, ಒಂದು ಕ್ಷಣ ಏಕೋ ಇವಳು ಸ್ನೇಹ ಅಲ್ಲವೇನೋ ಎಂಬ ಅನುಮಾನ ಬಂತು. ನೀವು......ನೀವು ... '' ಹೌದು ನಾನೇ ಸ್ನೇಹ '' ಎಂದಳು ರಮ್ಯಾ. ಸುಂದರನಿಗೆ ಆಗಲು ನಂಬಿಕೆ ಬರಲಿಲ್ಲ. ಗೊಂದಲದಿಂದ ಅವಳ ಮುಖವನ್ನೇ ನೋಡುತಿದ್ದನು. '' ಏನ್ರಿ ಹಾಗ್ ನೋಡ್ತಾಯಿದ್ದೀರಾ. ಈ ಎರಡು ವರ್ಷಗಳಿಂದ ಪತ್ರದ ಮುಖಾಂತರ ಪ್ರೀತಿಸುತಿದ್ದ ಹುಡುಗಿ ನಾನೇ, ಈಗ ನಿಮ್ಮ ಕಣ್ಣ ಮುಂದೆ ಬಂದು ನಿಂತುಕೊಂಡಿದ್ದೀನಿ ಗೊಂಬೆ ಹಾಗೆ ನೋಡ್ತಿದ್ದೀರಲ್ಲ...! ಹಾಗಾದರೆ ನೀವು ಇಲ್ಲಿಯವರೆಗೆ ಪತ್ರದಲ್ಲಿ ಬರೆಯುತ್ತಾ ಇದ್ದುದ್ದೆಲ್ಲ ಬೂಟಾಟಿಕೆನಾ...! ನಾನು ಏನೋ ಅಂದ್ಕೊಂಡಿದ್ದೆ ನಿಮ್ಮ ಬಗ್ಗೆ ... ನಾನು ಬಂದಾಕ್ಷಣ ಓಡಿ ಬಂದು ನನ್ನನ್ನು ಅಪ್ಪಿಕೊಂಡು ಹಾಗ್ ಮಾಡ್ತೀರ, ಹೀಗ್ ಮಾಡ್ತೀರ ಅಂದುಕೊಂಡಿದ್ದೆ. ಆದರೆ ನಿಮಗೆ ಆ ಧೈರ್ಯನೇ ಇಲ್ಲ ಅನ್ಸತ್ತೆ. ನನ್ನನ್ನು ಪ್ರೀತಿ ಮಾಡಬೇಕೆಂದು ಎಷ್ಟೊಂದು ಜನ ಕಾಯ್ತಿದ್ದ್ರು, ಅವ್ರ್ನೆಲ್ಲಾ ಬಿಟ್ಟು ಕೊರಡಿನಂತ ನಿಮ್ಮ ಕಪ್ಪು ದೇಹಕ್ಕೆ ಮನಸು ಕೊಟ್ಟು ಬಿಟ್ಟೆ ನೋಡಿ.'' ಎಂದು ಅಣಕಿಸುವ ದನಿಯಲ್ಲಿ ಹೇಳಿದಳು ರಮ್ಯಾ..


           ಅವಳ ಮಾತಿನಿಂದ ಸ್ವಲ್ಪವೂ ವಿಚಲಿತನಾಗದೆ ಸುಂದ್ರ, '' ನೋಡಿ ನನ್ನ ಮನಸ್ಸು ಹೇಳುತಿದೆ..... ನೀವು ಕಂಡಿತ ಸ್ನೇಹ ಆಗಿರುವುದಕ್ಕೆ ಸಾಧ್ಯವಿಲ್ಲ. ನನ್ನ ಮನಸ್ಸನ್ನು, ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡಿರುವ ಸ್ನೇಹ ಈ ರೀತಿ ಮಾತನಾಡುವುದಿಲ್ಲ ಎಂದು ಬಲ್ಲೆ. ಕೆಲವೊಂದು ಸಾರಿ ಕಣ್ಣಿಗೆ ಕಾಣಲಾರದ್ದು ಮನಸ್ಸಿಗೆ ಕಾಣುತ್ತದಂತೆ. . ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಜೊತೆ ದೂರವಾಣಿಯಲ್ಲಿ ಮಾತನಾಡುವಾಗ ಸ್ನೇಹಾಳ ದನಿಯಲ್ಲಿನ ಸ್ನೇಹಪರತೆ ಆತ್ಮೀಯತೆ, ಈ ನಿಮ್ಮ ಕಂಠದಲ್ಲಿಲ್ಲ. ದುರಹಂಕಾರ ಮೈಗೂಡಿಸಿ ಕೊಂಡಿರುವುದು ನಿಮ್ಮ ಮಾತುಗಳಿಂದಲೇ ತಿಳಿದುಬರುತ್ತಿದೆ. ಹೆಣ್ಣಿಗೆ ನಾಚಿಕೆ ಜೊತೆಗೊಂದಿಷ್ಟು ಅಂಜಿಕೆ ಇದ್ದರೆ ಅವಳಿಗದೇ ಅಂದ. ಆಡುವ ಮಾತುಗಳಲಿ ಮಾಧುರ್ಯವಿರಬೇಕು. ಅಹಂಕಾರವಲ್ಲ... ನೋಡುವ ನೋಟದಲ್ಲಿ ಸ್ನೇಹಪರತೆಯಿರಬೇಕು. ಕೊಂಕು ನೋಟವಲ್ಲ. ನೋಡಿ ನೀವ್ಯಾರೋ ನನಗೆ ಗೊತ್ತಿಲ್ಲ. ಆದರು ನನ್ನ ಹೆಸರನ್ನು ತಿಳಿದುಕೊಂಡಿದ್ದೀರ.... ಹಾ ಹೇಳಿ ನೀವ್ಯಾರು...?''. ಎಂದು ಕೇಳಿದನು.


              ಸುಂದರನ ಮಾತುಗಳನ್ನು ಕೇಳಿ ರಮ್ಯಾಳ ಅಹಂಗೆ ಧಕ್ಕೆಯಾದಂತಾಯಿತು. ತನ್ನನ್ನು ಅಹಂಕಾರಿ, ಬುದ್ಧಿಯಿಲ್ಲದವಳು ಎಂದು ಜರಿದ ಸುಂದರನನ್ನು ಯಾವುದೇ ಕಾರಣಕ್ಕೂ ಸ್ನೇಹಾಳೊಂದಿಗೆ ಒಂದಾಗಲು ಬಿಡಬಾರದು ಎಂದು ಆ ಕ್ಷಣದಲ್ಲೇ ಒಂದು ನಿಶ್ಚಯಕ್ಕೆ ಬಂದು ಬಿಟ್ಟಳು ರಮ್ಯಾ.



'' ಹೌದ್ರಿ....., ನೀವು ಹೇಳಿದ ಹಾಗೆ ನಾನು ಸ್ನೇಹ ಅಲ್ಲ ಅವಳ ಗೆಳತಿ ರಮ್ಯಾ. ಈ ರೀತಿ ನಿಮ್ಮೊಂದಿಗೆ ನಡೆದುಕೊಳ್ಳಲು ಅವಳೇ ನನಗೆ ಹೇಳಿಕಳುಹಿಸಿದ್ದು. ಮೊದಲು ನೀನೆ ಹೋಗಿ ಅವರನ್ನು ನೋಡು. ಒಳ್ಳೆಯ ಹ್ಯಾಂಡ್ಸಮ್ ಪರ್ಸನಾಲಿಟಿ ಆಗಿದ್ದು, ನನಗೆ ಅವರು ಚಂದದ ಜೋಡಿ ಅಂತ ನಿನಗೆ ಅನ್ನಿಸಿದರೆ ಬಂದು ನನ್ನನ್ನು ಕೂಗು ಬರುತ್ತೇನೆ ಎಂದಿದ್ದಾಳೆ. ನೋಡಿ......ನನ್ನ ಗೆಳತಿಗೆ ನೀವು ಕಂಡಿತ ಸರಿ ಜೋಡಿ ಅಲ್ಲ. ಅವಳ ಅಂದದ ಮುಂದೆ... ನೀವು ಹಾಲು ಬೆಳದಿಂಗಳ ಚಂದ್ರನನ್ನು ಆವರಿಸುವ ಕಪ್ಪು ಮೋಡದಂತೆ. ಬಿಳೀ ಹಾಳೆಯ ಮೇಲೆ ನೀವು ವರ್ಣಿಸಿ ಬಿಡಿಸುತಿದ್ದ ಚಿತ್ತಾರದ ಭಾವನೆಗಳಿಗೆ ತಕ್ಕ ಹಾಗೆ ನೀವು ಸುಂದರವಾದ ಆಕರ್ಷಕ ಪುರುಷನಿರಬೇಕು ಎಂದು ತಿಳಿದು ಪ್ರೀತಿಸಿಬಿಟ್ಟಿದ್ದಾಳೆ ಅಷ್ಟೇ. ಸೊಗಸು ತುಂಬಿದ ಹೆಣ್ಣಿಗೆ ಸೊಬಗೇ ಮೆರುಗು. ಅಂತ ಅಪರೂಪದ ಹುಡುಗಿ ನನ್ನ ಗೆಳತಿ. ಅಂಥಹ ಸೊಗಸಿನ ಮುಂದೆ, ಮೆರುಗು ಕಳೆದುಕೊಂಡ ಜೀವವಿಲ್ಲದ ಬೊಂಬೆಯಂತಿರುವ ನೀವು ಅವಳಿಗೆ ಸರಿ ಸಾಟಿಯೇ ಅಲ್ಲ. ಅವಳೇನಾದರೂ ಇಲ್ಲಿಗೆ ಬಂದು ನಿಮ್ಮನ್ನು ಒಮ್ಮೆ ನೋಡಿಬಿಟ್ಟಿದ್ದರೆ, ಇಷ್ಟು ದಿನ ಇಂಥ ವ್ಯಕ್ತಿಯನ್ನೇ ನಾನು ಪ್ರೀತಿಸಿದ್ದು ಎಂದು ಜೀವನಪರ್ಯಂತ ಕೊರಗಿಬಿಡೋಳು. ಅವಳ ಮನಃಸ್ಥಿತಿ ಎಂತಹುದೆಂದು ಬಾಲ್ಯದ ಗೆಳತಿಯಾದ ನನಗೆ ಚನ್ನಾಗಿ ಗೊತ್ತು. ಕುರೂಪವನ್ನು ಅವಳು ತುಂಬಾನೇ ದ್ವೇಷ ಮಾಡ್ತಾಳೆ. ಹೋಗ್ಲಿ ಬಿಡಿ ನಾನು ಅವಳನ್ನು ಬೇರೆ ರೀತಿ ಸಮಾದಾನ ಮಾಡುತ್ತೇನೆ. ಅವಳು ದೂರದಲ್ಲಿ ನಿಂತು ನಮ್ಮನ್ನು ಗಮನಿಸುತಿದ್ದಾಳೆ. ಅವಳಿಗೆ ನಿಮ್ಮ ಮುಖ ಸ್ಪಷ್ಟವಾಗಿ ಕಾಣುವುದಿಲ್ಲ. ನನ್ನ ಉತ್ತರಕ್ಕಾಗಿ ಕಾಯುತಿದ್ದಾಳೆ. ಅವಳು ತನ್ನ ಮನಸ್ಸಿನಲ್ಲಿ ಕಲ್ಪಿಸಿಕೊಂಡಿರುವ ಸುಂದರ ತರುಣ ಹಾಗೆಯೇ ಇರಲಿ. ಇನ್ನು ಮುಂದೆ ಅವಳನ್ನು ಮರೆತುಬಿಡಿ. ನಿಮ್ಮನ್ನೇನಾದ್ರು ಅವಳು ನೋಡಿದರೆ ಕಂಡಿತ ಹುಚ್ಚಿಯಂತಾಡುತ್ತಾಳೆ. ಎಂದು ಸರಾಗವಾಗಿ ಸುಳ್ಳುಗಳನ್ನೂ ಪೋಣಿಸಿದಂತೆ ಹೇಳಿಬಿಟ್ಟಳು. ಸುಂದರ ಮುಖ ನೋಡುತ್ತಿದ್ದಂತೆ ಪ್ರತೀಕಾರ ತೀರಿಸಿಕೊಂಡ ತೃಪ್ತಿ ರಮ್ಯಾಳ ಮನದಲ್ಲಿ ಮೂಡತೊಡಗಿತು. ಸರಿ ಟೈಮ್ ಆಯ್ತು ಸುಂದರ್. ಸ್ನೇಹ ನನ್ನ ಬರುವನ್ನೇ ಕಾಯುತ್ತಾ ಒಬ್ಬಳೇ ನಿಂತಿದ್ದಾಳೆ. ನಾನು ಇನ್ನು ಹೊರಡ್ತೀನಿ, ಎಂದು ಹೇಳಿ ಏನು ಗೊತ್ತಿಲ್ಲದವಳ ಹಾಗೆ ಸ್ನೇಹಾಳ ಬಳಿಗೆ ಹೊರಟಳು.


ಭ್ರಮೆಯಂತೆ ತನ್ನ ಬಳಿಗೆ ಬಂದ ರಮ್ಯಾ, ಸ್ನೇಹಾಳ ಅಂತರಂಗದ ಬಗ್ಗೆ ಹೇಳಿದ ಮಾತುಗಳನ್ನೂ ಕೇಳಿ ಜೀವನದಲ್ಲಿ ಮೊದಲಬಾರಿಗೆ ತುಂಬಾ ನೊಂದುಕೊಂಡ ಕ್ಷಣವದು. ಯಾರ ಮನಸ್ಸಿಗೂ ನೋವು ನೀಡದಂತಹ ಉತ್ತಮ ವ್ಯಕ್ತಿ ಅವನು. ಒರಟಾಗಿ ಮಾತನಾಡಿದರೆ ಬೇರೆಯವರ ಮನಸ್ಸಿಗೆ ನೋವಾಗುತ್ತದೇನೋ ಎಂದು ಯೋಚಿಸಿ, ಆಲೋಚಿಸಿ ಮಾತನಾಡುತಿದ್ದ ಸುಂದರನ ಹೃದಯಕ್ಕೆ ಬಲವಾದ ಪೆಟ್ಟು ರಮ್ಯಾಳ ಮಾತುಗಳಿಂದ ಆಗಿತ್ತು. ರಮ್ಯ ಹೇಳಿದ ಮಾತುಗಳನ್ನು ನಂಬದಿರಲಾಗಲಿಲ್ಲ. ತಾನು ಇಷ್ಟು ದಿನಗಳ ಕಾಲ ಮನಸೋತಿದ್ದು, ಮಾಸುವ ಸೌಂದರ್ಯಕ್ಕೆ ಬೆಲೆ ಕೊಡುವ ಬೇಡಗಿಗೆಂದು ತಿಳಿದಾಗ ಸಂಕಟವಾಯ್ತು . ಕಣ್ಣಂಚಿನ ಕಂಬನಿಯು ಇನ್ನೆಂದು ಜಾರುವುದಿಲ್ಲವೆಂಬಂತೆ, ಮಡುಗಟ್ಟಿ ಕಣ್ಣ ಕೊನೆಯಲ್ಲಿಯೇ ನೆಲೆ ನಿಂತಿತು. ಸುಂದರನ ಹೃದಯಕ್ಕಾದ ಆಘಾತ ಮತ್ತೆಂದು ವಾಸಿಯಾಗದ ಆರದ ಗಾಯದಂತಾಗಿ ಹೋಯ್ತು. ರಮ್ಯ ಹೇಳಿದ ಮಾತು ನಿಜವೋ ಸುಳ್ಳೋ ಎಂದು ವಿವೇಚಿಸುವ ಮನಸ್ಸು ಆ ಕ್ಷಣದಲ್ಲಿ ಇಲ್ಲವಾಗಿತ್ತು.


ಸ್ನೇಹ, ತಾನು ಮೊದಲಾ ಸಲ ಸುಂದರನಿಗೆ ಬರೆದ ಪತ್ರದಲ್ಲಿ, ದೇಹ ಸೌಂದರ್ಯಕ್ಕಿಂತ ಆತ್ಮ ಸೌಂದರ್ಯ ನನಗೆ ತುಂಬಾ ಇಷ್ಟ ಎಂದು ಬರೆದಿದ್ದ ಅವಳ ವಾಕ್ಯ ಸುಂದರನನ್ನು ಆಕರ್ಷಿಸಿ ಪ್ರೇಮಿಸುವುದಕ್ಕೆ ಪ್ರೇರೇಪಿಸಿತು ಎಂದರೆ ಸರಿಯೇನೋ. ಈ ವಿಚಾರವಾಗಿ ನನ್ನ ಬಳಿ ಸಾಕಷ್ಟು ಸಲ ಚರ್ಚೆ ಮಾಡಿದ್ದ. ಅವಳು ಹೇಗಿದ್ದರೂ ಸ್ವೀಕರಿಸುವ ಆರಾಧಿಸುವ ಮನಸ್ಸು ಮನಸ್ಥಿತಿ ಸುಂದರನಿಗಿತ್ತು. ಆ ದುಖಃದಲ್ಲಿಯೂ ಕೂಡ, ಅವಳು ಕನಸಿನಲ್ಲಿ ಕಂಡಂತಹ, ಭ್ರಮಿಸಿದಂತಹ ಸುಂದರ ವ್ಯಕ್ತಿ ನಾನಾಗದಿರುವುದಕ್ಕೆ ಆಕೆಯ ಮನಸ್ಸಿಗೆ ಅದೆಷ್ಟೊಂದು ನೋವಾಗಬಹುದೆಂದು ಚಿಂತಿಸತೊಡಗಿದ. ತನ್ನ ಮೇಲೆ ತನಗೆ ಕನಿಕರ ಬರತೊಡಗಿದ ಸ್ಥಿತಿಯಲ್ಲಿದ್ದ ಸುಂದರನಿಗೆ, ನೋವಿಗೂ ಮೀರಿದ ಭಾವಶೂನ್ಯತೆ ಆಗಲೇ ಅವನನ್ನು ಆವರಿಸತೊಡಗಿತು. ಕೆಲಕಾಲ ಎಲ್ಲವನ್ನು ಎಲ್ಲರನ್ನು ಮರೆತವನಂತೆ ಎಲ್ಲಿಗೆ ಹೋಗುತಿದ್ದೇನೆಂಬ ಅರಿವೇ ಇಲ್ಲದೆ ಎದುರಿಗೆ ಕಂಡ ದಾರಿಯಲ್ಲಿ ಹೋಗತೊಡಗಿದನು.


ಸುಂದರನ ಮನಸ್ಸಿನಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದ ರಮ್ಯ ಏನು ಗೊತ್ತಿಲ್ಲದವಳಂತೆ ಸ್ನೇಹಾಳ ಬಳಿ ಬಂದಳು. ರಮ್ಯಾ ಬಂದು ಏನು ಹೇಳುವಳೋ ಎಂಬ ಕುತೂಹಲ ಕಾತರ ಆಸೆಯ ಕಂಗಳಿಂದ ಅವಳ ಬರುವನ್ನೇ ಎದಿರು ನೋಡುತಿದ್ದ ಸ್ನೇಹಾಳಿಗೆ, ಏನು ಮಾತನಾಡದೆ ತನ್ನ ಬಳಿ ಬಂದು ಸುಮ್ಮನೆ ನಿಂತ ರಮ್ಯಾಳನ್ನು ಕಂಡು ಆಶ್ಚರ್ಯವಾಯ್ತು. ತಂಕದಿಂದ '' ಹೇ ರಮ್ಯಾ, ಸುಂದರ್ ಅವರನ್ನು ಮಾತನಾಡಿಸದ, ನನ್ನ ಬಗ್ಗೆ ಅವರು ಏನ್ ಹೇಳಿದ್ದ್ರು. ನಡಿಯೇ ಹೋಗೋಣ... ಅವರೆಲ್ಲೋ ಕೆಳಗಡೆಯ ದಾರಿಯ ಕಡೆ ಹೊರಟಿರುವಹಾಗಿದೆ. ಅವರೇ ತಾನೇ. ದೂರದಲ್ಲಿದ್ದ ನನಗೆ ಏನು ಗೊತ್ತಾಗಲಿಲ್ಲ. '' ಎಂದು ಸುಂದರನು ಹೋಗುತಿದ್ದ ಕಡೆ ನೋಡುತ್ತಾ ಹೇಳಿದಳು.


ಸ್ನೇಹಾಳನ್ನು ತಡೆಯುತ್ತಾ, '' ನಾನು ಇಷ್ಟೊತ್ತು ಮಾತನಾಡಿದ್ದು ಸುಂದರನ ಬಳಿ ಅಲ್ಲ ಕಣೆ, ಆತನ ಸ್ನೇಹಿತನ ಹತ್ತಿರ. ನೀನು ಆ ದಿನ ಆಗುಂಬೆಯ ಬಳಿ ಸಂಧಿಸೋಣವೆಂದು ಹೇಳಿ ತಪ್ಪಿಸಿಕೊಂಡಿದ್ದಲ್ಲ, ಅದಕ್ಕೆ ತನ್ನ ಸ್ನೇಹಿತನನ್ನು ಕಳುಹಿಸಿದ್ದಾನೆ. ನೀನು ನಾಟಕವಾಡುತ್ತಿರಬಹುದೆಂದು ಸುಂದರನಿಗೆ ನಿನ್ನ ಬಗ್ಗೆ ಏಕೋ ಅನುಮಾನವಂತೆ. ಅದಕ್ಕಾಗಿ ನಿನ್ನನ್ನು ಪರೀಕ್ಷಿಸಲು ತನ್ನ ಸ್ನೇಹಿತನನ್ನು ಕಳುಹಿಸಿದ್ದಾನೆ. ಅವತ್ತಿನ ನಿನ್ನ ಪರಿಸ್ಥಿಯನ್ನು ಇನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಅವನು. ಅವನ ಸ್ನೇಹಿತನೆಂದು ಹೇಳಿಕೊಂಡು ಬಂದಿದ್ದದ್ದವನು ಸುಂದರನ ಬಗ್ಗೆ ಇನ್ನು ಏನೇನೋ ಹೇಳಿದ. ಬೇಡ ಬಿಡು ಅವನು ಹೇಳಿರುವ ವಿಷಯಗಳನ್ನೆಲ್ಲ ಹೇಳಿದರೆ ನಿನ್ನ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ''. ಎಂದಳು.


'' ಇಲ್ಲಾ ರಮ್ಯಾ, ನೀನು ಹುಡುಗಾಟ ಆಡ್ತಾಯಿದ್ದೀಯ. ಪ್ಲೀಸ್ ನಿಜ ಹೇಳು. ಆಗಲೇ ಅಲ್ಲಿ ನಿಂತಿದ್ದವರು ಸುಂದರ್ ತಾನೆ..?'' ವೇದನೆಯಿಂದ ಅಳುತ್ತಾ ಕೇಳಿದಳು ಸ್ನೇಹಾ. ಆದರೆ ಮನಸ್ಸಿನಲ್ಲಿ ಬರಿ ಹಾಲಾಹಲವನ್ನೇ ತುಂಬಿಕೊಂಡಿದ್ದ ರಮ್ಯಾಳಿಗೆ, ಅವಳ ಪ್ರೀತಿಯ ಆಳ ಅರ್ಥವಾಗಲಿಲ್ಲ. ನನ್ನ ಮಸಸ್ಸು ಹೇಳುತಿದೆ. ಅವರೇ ಸುಂದರ್ ಎಂದು ಹೇಳುತ್ತಾ.... ಸುತ್ತಲಿನ ಪರಿವೇ ಇಲ್ಲದವಳಂತೆ ಸುಂದರ ಹೊರಟ ದಾರಿಯ ಕಡೆ ಸ್ನೇಹ ಓಡತೊಡಗಿದಳು.

                                       +++++               +++++                  +++++            

ನಾನು ಕುಳಿತಲ್ಲಿಂದಲೇ ಕುತೂಹಲದಿಂದ ನೋಡುತಿದ್ದೆ. ಸುಂದರನ ಬಳಿಗೆ ಹೋದ ಸ್ನೇಹಾಳ ಗೆಳತಿ, ಕೈ ಬಾಯಿ ತಿರುಗಿಸಿಕೊಂಡು ಮಾತನಾಡುತ್ತಿರುವುದು ಕಾಣುತಿತ್ತು. ಈ ಕುತೂಹಲ ಟೆನ್ಷನ್ನು ಇವುಗಳಿಂದಾಗಿ, ಸಿಗರೇಟ್ ಸೇದಬೇಕೆಂಬ ಬಯಕೆ ಬಹಳವಾಗಿ ಕಾಡತೊಡಗಿತು. ಹತ್ತಿರದಲ್ಲೆಲ್ಲೂ ಸಿಗರೇಟ್ ಸಿಗುವ ಸೂಚನೆ ಕಾಣಲಿಲ್ಲ. ಬೇಗ ತೆಗೆದುಕೊಂಡು ಬಂದುಬಿಡೋಣವೆಂದು ಹುಡುಕಿಕೊಂಡು ಹೊರಟೇ.

ನಾನು ಕೊನೆಗೂ ಸಿಗರೇಟ್ ಮಾರುವ ಸ್ಥಳವನ್ನು ಸಾಹಸದಿಂದಲೇ ಕಂಡುಹಿಡಿದೆ. ಬೇಗ ಬೇಗ ಸಿಗರೇಟ್ ಹಚ್ಚಿಕೊಂಡು ಹೋಗೆ ಬಿಟ್ಟಾಗಲೇ ಸಮಾದಾನವಾಗಿದ್ದು. ಹಾಗೆ ಸೇದಿಕೊಂಡು ನಾನು ಈ ಮೊದಲು ಕುಳಿತುಕೊಂಡಿದ್ದ ಕಲ್ಲು ಹಾಸಿನ ಬಳಿ ಬಂದೆ. ಎದಿರುಗಡೆಯಿರುವ ಮಂಟಪದ ಕಡೆ ನೋಡುತ್ತೇನೆ... ಸುಂದರನು ಇಲ್ಲ ಆ ಹುಡುಗಿಯು ಇಲ್ಲ. ಸ್ವಲ್ಪ ದೂರದಲ್ಲಿ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಸ್ನೇಹ ಸಹ ಇರಲಿಲ್ಲ. ಆ ಮೂವರು ಖುಷಿಯಾಗಿ ಮಾತನಾಡಿಕೊಂಡು, ನನ್ನನ್ನು ಮರೆತು ಬೇರೆ ಕಡೆ ಎಲ್ಲಿಯಾದರೂ ಹೋದರೋ ಏನೋ ಎಂದು ಯೋಚಿಸುತ್ತಾ.... ಆ ಮಂಟಪದ ಬಳಿ ಹೋಗಿ ಸುತ್ತಾ ಮುತ್ತಾ ನೋಡಿದೆ. ಅವರುಗಳು ಎಲ್ಲಿಯೂ ಕಾಣಲಿಲ್ಲ. ಜೋರಾಗಿ ಸುಂದರನ ಹೆಸರನ್ನು ಕೂಗೋಣವೆಂದರೆ.... ಬೇರೆಯವರು ನನ್ನನ್ನು ನೋಡಿ ನಗಬಹುದೆಂದು ಆ ಪ್ರಯತ್ನವನ್ನು ಕೈಬಿಟ್ಟೆ. ಕಿರಿದಾದ ಕಾಲುದಾರಿಗಳು ಕವಲೋಡೆದಂತೆ ಗಿಡ ಮರ ಪೊದೆಗಳ ಸಂದಿಯಿರುವ ಕಡೆಯೆಲ್ಲಾ ಹಾದು ಹೋಗಿದ್ದವು. ಯಾವ ಕಡೆ ಹೋಗಿರಬಹುದೆಂದು ಎಂದು ತಿಳಿಯದೆ ಗೊಂದಲವಾಯಿತು. ಕಂಡ ಹಾದಿಯ ಕಡೆ ಹುಡುಕಿಕೊಂಡು ಹೊರಟೇ.

ಕೈಗೆಟುಕುವ ದೂರದಲ್ಲಿದ್ದರು ಕೈಗೆ ಸಿಗದೆ ತಪ್ಪಿಸಿಕೊಳ್ಳುವ ಹಣೆಬರಹದಂತೆ, ಸನಿಹವೇ ಇದ್ದ ಸುಂದರನ್ನನ್ನು ಸಂಧಿಸಲಾಗದ ಸ್ನೇಹ, ಆತನನ್ನು ಹುಡುಕುತ್ತಾ.... ದಿಕ್ಕು ದಿಶೆ ತಿಳಿಯದೆ ಓಡತೊಡಗಿದಳು. ಸುಂದರನು ತೊಟ್ಟಿದ್ದ ಬಟ್ಟೆಯಂತೆಯೇ ಬಿಳಿ ಶರ್ಟು ಹಾಗು ನೀಲಿ ಜೀನ್ಸ್ ಹಾಕಿಕೊಂಡಿದ್ದ ಕೆಲವರ ಬಳಿ ಹೋಗಿ ಮಾತನಾಡಿಸಿ, ಅವರು ಸುಂದರನಲ್ಲವೆಂದು ತಿಳಿದಾಗ ನಿರಾಶೆಯಿಂದ ವತ್ತರಿಸಿಕೊಂಡು ಬರುತಿದ್ದ ಅಳುವನ್ನು ನುಂಗಿಕೊಂಡು, ಬೇರೆಲ್ಲಾದರೂ ಸಿಗಬಹುದೇನೋ ಎಂಬ ಆಶಾ ಭಾವನೆಯಿಂದ ಹುಡುಕುತ್ತಾ ಹೊರಟಳು.....



 ಸುಂದರನೇನಾದರು ಸ್ನೇಹಾಳಿಗೆ ಕಾಣಿಸಿಬಿಟ್ಟರೆ,   ತಾನು ಹೇಳಿದ ಸುಳ್ಳು  ಎಲ್ಲಿ ಬಯಲಾಗಿಬಿಡುತ್ತದೋ ಎಂಬ ಆತಂಕದಿಂದ ಅವಳನ್ನು  ತಡೆಯಲು   ಹಿಂದೆಯೇ ಓಡಿ ಬಂದಳು ರಮ್ಯ.     ಆದರೆ ಗೊಂದಲದ ಮುಖಭಾವದಿಂದ,  ಯಾರೆಂದು ತಿಳಿಯದ ಸುಂದರನನ್ನು   ಅರಸುತ್ತಿರುವ ಸ್ನೇಹಾಳನ್ನು ಕಂಡು ರಮ್ಯಾಳ ಮನಸ್ಸಿಗೆ ಆಗ ಸ್ವಲ್ಪ ಸಮಾಧಾನವಾಯ್ತು.   '' ಹೇ ಸ್ನೇಹಾ,  ಸುಮ್ಮನೆ ಟೆನ್ಷನ್ ಮಾಡಿಕೊಳ್ತಾಯಿದ್ದೀಯಾ.... ಆಗಲೇ ನನ್ನ ಜೊತೆ ಮಾತನಾಡಿದವನು ಸುಂದರ ಅಲ್ಲ ಕಣೆ.    ಅವನ ಸ್ನೇಹಿತ ಎಂದರೆ ನೀನು ನಂಬುತ್ತಿಲ್ಲ.    ನೀನು ತಿಳಿಯದೆ ಪ್ರೀತಿಸುತ್ತಿರುವ ಸುಂದರ ಒಬ್ಬ ಮೋಸಗಾರನಂತೆ.     ಈಗಾಗಲೇ ನಿನ್ನಂತೆ ಹಲವಾರು ಹುಡುಗಿಯರ ಪರಿಚಯ ಅವನಿಗಿದೆಯಂತೆ.    ಅವರಲ್ಲಿ ನೀನು ಒಬ್ಬಳಷ್ಟೇ.   ನೋಡು,   ಅವನನ್ನು ನಂಬಿ ಮೋಸ ಹೋದ ಮೇಲೆ ಕೊರಗುವುದಕ್ಕಿಂತ,   ಈಗಲೇ ಆತನ ನೀಚತನ ತಿಳಿಯಿತಲ್ಲ.  ಮತ್ತೆಂದು ಅವನ ಸ್ನೇಹ ಮಾಡಬೇಡ.     ಕತ್ತಲು ಕವಿಯುತ್ತಿದೆ   ಬಾ ಮನೆಗೆ ಹೋಗೋಣಾ''   ಎನ್ನುತ್ತಾ ಸ್ನೇಹಾಳ ಹೆಗಲ ಮೇಲೆ ಕೈಯಿರಿಸಿದಳು ರಮ್ಯ.  

 ತನ್ನ ಹೆಗಲ ಮೇಲಿದ್ದ ರಮ್ಯಾಳ ಕೈಯನ್ನು ತೆಗೆಯುತ್ತಾ......     ''  ಇಲ್ಲಾ  ರಮ್ಯಾ,    ನಾನು ಸುಂದರ್ ರವರನ್ನು   ನೋಡದೆ ಇರಬಹುದು.    ಆದರೆ ಈ ನನ್ನ ಮನಸ್ಸಿನಿಂದ ಅವರನ್ನು ಕಂಡಿದ್ದೇನೆ ಆರಾಧಿಸಿದ್ದೇನೆ.     ಅವರು ಬರೆಯುತ್ತಿದ್ದ  ಪತ್ರಗಳಲ್ಲಿನ ಸೊಗಸು ಕಂಡಿತ ಸೋಗಲಾಡಿತನದಲ್ಲ.    ತುಂಬು ಹೃದಯದ ಪ್ರೀತಿಯನ್ನು ಪದಗಳಾಗಿಸಿ ಒಲವಿನಿಂದ ಪ್ರತಿ ಪದಗಳಲ್ಲಿ  ಭಾವತುಂಬಿ ಬರೆಯುತಿದ್ದರು.     ಅವರು ಬರೆಯುತ್ತಿದ್ದ  ಪದಗಳು ಕೇವಲ ಹುಸಿ ಅಕ್ಷರಗಳಾಗಿರಲಿಲ್ಲ.......ಉಸಿರು  ಬೆರಸಿ ಬರೆದಂತಹ ಪತ್ರಗಳಾಗಿದ್ದವು.       ಅವರು ದೂರವಾಣಿಯಲ್ಲಿ ನನ್ನೊಡನೆ ಮಾತನಾಡುವಾಗ, ಅವರ ಮಾತುಗಳು ಕೇವಲ ಮಾತಿಗಾಗಿ ಮಾತನಾಡುವ ಒಣ ಮಾತುಗಳಾಗಿರುತ್ತಿರಲಿಲ್ಲ.      ಪ್ರೀತಿಯಲ್ಲಿ ಅದ್ದಿ  ತೆಗೆದ ಸಿಹಿ ಮಾತುಗಳಂತಿರುದ್ದವು.      ಅವರ ಮಾತುಗಳಲ್ಲಿ  ಎಂದೂ ಕೂಡ    ಕಾಮನೆಗಳನ್ನು ಕೆರಳಿಸುವ ವಾಸನೆಯಿರಲಿಲ್ಲ.     ಆದರೆ ಮನಮೋಹಕ ವಿಸ್ಮಯ ಲಾಲಿತ್ಯವಿತ್ತು.     ಜೊತೆಗೆ ಪ್ರೀತಿಯ ಸಾಂಗತ್ಯವಿತ್ತು.     ನೀನು ಅಂದುಕೊಂಡಂತೆ    ಅವರಿರಲು ಸಾಧ್ಯವೇ ಇಲ್ಲ.  ನನ್ನ ಹೃದಯ ಅವರ ವಿಷಯವಾಗಿ ಕಂಡಿತ  ಮೊಸಹೋಗಿಲ್ಲ.         ನಿನ್ನನ್ನು ಬೆಸ್ತು  ಬೀಳಿಸಲು ಸುಮ್ಮನೆ ತಮ್ಮ ಬಗ್ಗೆ ಆ ರೀತಿ ಹೇಳಿಕೊಂಡಿರಬಹುದಷ್ಟೇ.      ನೀನು ಅವರನ್ನು ಈಗಾಗಲೇ ನೋಡಿದ್ದೀಯಾ... ಪ್ಲೀಸ್ ಬಾರೇ ಅವರನ್ನು ಹುಡುಕೋಣ''  ಎಂದು ಹೇಳಿ ಅಳುತ್ತಾ....  ಕೈ ಮುಗಿದು ಕುಸಿದು ಕುಳಿತಳು ಸ್ನೇಹ.  

 ಸುಂದರನ  ಬಗ್ಗೆ,   ಸ್ನೇಹಾಳ  ಮನದಲ್ಲಿರುವ ಕರಗಲಾರದ ಪ್ರೀತಿಯನ್ನು ಕಂಡ ರಮ್ಯಾ  ಚಲಿಸಿಹೋದ ಕ್ಷಣವದು.  ಕಂಡರಿಯದ ವ್ಯಕ್ತಿಯೊಬ್ಬನನ್ನು ಕಂಡಂತೆ ಪ್ರೀತಿಸಿ,       ಬೆಟ್ಟದಷ್ಟು ಭರವಸೆ ಕರಗದಷ್ಟು ನಂಬಿಕೆಯೊಂದಿಗೆ  ಸುಂದರನನ್ನು  ಆರಾಧಿಸುತ್ತಿರುವ   ಸ್ನೇಹಾಳನ್ನು  ಕಂಡು,   ರಮ್ಯಾಳಿಗೆ  ತನ್ನ ಬಗ್ಗೆ ತನಗೆ ಅಸಹ್ಯವಾಯಿತು.     ಆದರೆ ಕಾಲ ಮಿಂಚಿ ಹೋಗಿತ್ತು.    ರಮ್ಯಾಳ  ದುಡುಕಿಗೆ ಸ್ನೇಹಾ ಬಲಿಪಶುವಾದರೆ,     ನಮ್ಮ  ಸುಂದರ  ಕತೆಯಾದನು   ಕಥೆಯೊಂದಕ್ಕೆ.  
      
 ಅಳುತ್ತಾ ಕುಳಿತಿದ್ದ ಸ್ನೇಹಾಳನ್ನು ಮೇಲಕ್ಕೆಬ್ಬಿಸಿ    ಪಶ್ಚಾತಾಪದಿಂದ ತಬ್ಬಿಕೊಂಡಳು ರಮ್ಯಾ... '' ನಾನು ಕ್ಷಮೆಗೆ ಕಂಡಿತ ಅರ್ಹಳಲ್ಲ ಎಂದು ಗೊತ್ತು.    ನಿನ್ನ ಪ್ರೀತಿಯ ಆಳವನ್ನು ತಿಳಿಯದೆ ಹುಡುಗಾಟ    ಆಡಿಬಿಟ್ಟೆ.      ಈ ನಿನ್ನ ಗೆಳತಿಯನ್ನು ಕ್ಷಮಿಸಿ ಬಿಡು ಸ್ನೇಹ,     ನನಗೀಗ  ಪಶ್ಚಾತಾಪವಾಗಿದೆ.     ನಡಿ  ಹೇಗಾದರೂ ಸರಿ  ಹುಡುಕೋಣ '' ಎಂದ ರಮ್ಯಾ,   ಸ್ನೇಹಾಳ ಕೈ ಹಿಡಿದುಕೊಂಡು  ಸುಂದರನನ್ನು ಹುಡುಕುತ್ತಾ ಹೊರಟಳು ...
     
                              +++++            ++++++            +++++++                
ಕತ್ತಲು ಕವಿಯತೊಡಗಿದಂತೆ  ಉದ್ಯಾನವನದಲ್ಲಿ ಇದ್ದ  ಜನರೆಲ್ಲಾ ಕರಗತೊಡಗಿದರು.     ಉದ್ಯಾನವನವನ್ನು ಕಾಯುವ ವನಪಾಲಕರು ಸಮಯವಾಯಿತೆಂದು ವಿಷಲ್   ಊದತೊಡಗಿದರು.    ರಮ್ಯಾಳ ಮಾತುಗಳಿಂದ ಘಾಸಿಗೊಂಡಿದ್ದ ಸುಂದರನು,   ಎಲ್ಲಿಗೆ   ಹೋಗುತಿದ್ದೇನೆ ಎಂಬ ಪರಿವೇ  ಇಲ್ಲದವನಂತೆ      ಗುಂಪು ಗುಂಪಾಗಿ ಬೆಳೆದ ಪೊದೆಯ ನಡುವೆಯಿದ್ದ ಕಾಲು ದಾರಿಯಲ್ಲಿ ಅನ್ಯಮನಸ್ಕನಾಗಿ   ಹೋಗುತ್ತಿದ್ದನು.   ಆಗಲೇ  ಕತ್ತಲು ಆವರಿಸತೊಡಗಿದ ಕಾರಣ ಮುಂದಿನ ದಾರಿ ಸರಿಯಾಗಿ ಕಾಣಿಸುತ್ತಿರಲಿಲ್ಲ.    ಆದರೂ ತಡವರಿಸಿಕೊಂಡೆ ಮುಂದೆ ಮುಂದೆ ಹೋಗುತಿದ್ದನು.    ಅವನು ಸಾಗುತಿದ್ದ ಕಿರುದಾರಿಗೆ ಅಡ್ಡಲಾಗಿ ಒಣಗಿದ ದಪ್ಪ ರೆಂಬೆಯೊಂದು  ಮುರಿದು ಬಿದ್ದಿತ್ತು.    ಅದನ್ನು ಗಮನಿಸದ ಸುಂದರನು ಅದನ್ನು ಎಡವಿ ಮುಂದಕ್ಕೆ ಮುಗ್ಗರಿಸಿ,  ಬದಿಯಲ್ಲಿದ್ದ ಚೂಪಾದ ಕಲ್ಲಿನ ಮೇಲೆ   ಕೆಳಮುಖವಾಗಿ    ಬಿದ್ದ ರಭಸಕ್ಕೆ ತಲೆ ಹೊಡೆದು ರಕ್ತ ಸುರಿಯತೊಡಗಿತು.    ಏನಾಯಿತು ಎಂದೂ ತಿಳಿಯುವುದಕ್ಕೆ ಮುನ್ನವೇ,  ಕಣ್ಣು ಮಂಜಾಗಿ ಕ್ರಮೇಣ ಪ್ರಜ್ಞಾಶೂನ್ಯನಾದನು.

 ದುರಾದೃಷ್ಟ ಬೆನ್ನು ಹತ್ತಿದಾಗ ಅದೃಷ್ಟ ಬೆನ್ನು ಮಾಡಿದಂತಾಗಿತ್ತು ಸ್ನೇಹಾಳ ಸ್ಥಿತಿ.     ಸುಂದರನನ್ನು ಅರಸುತ್ತಾ ಅತ್ತಲೇ ಬಂದ  ಸ್ನೇಹಾಳಿಗೆ,    ದೂರದಲ್ಲಿ  ಮುಖಡಿಯಾಗಿ ಬಿದ್ದಿದ್ದ ವ್ಯಕ್ತಿಯ ಹಿಂಬಾಗ ಗೋಚರಿಸಿತು.      ''  ಹೇ ರಮ್ಯ.. ಅಲ್ಲಿ ನೋಡೇ ದಾರಿಯ ಮಧ್ಯದಲ್ಲಿ ಯಾರೋ ಬಿದ್ದಿರುವ ಹಾಗಿದೆ.      ಅವರೇನಾದರೂ..... '' ಎಂದು ಸಂದೇಹದಿಂದ  ಸುಂದರನು ಬಿದ್ದಿದ್ದ ಕಡೆ ತೋರಿಸಿದಳು.  
  
ಆದರೆ ಆಗಲೇ ಕತ್ತಲು ಕವಿದಿದ್ದರಿಂದ   ದೂರದಲ್ಲಿ ನಿಂತಿದ್ದ ರಮ್ಯಾಳಿಗೆ ಅದು  ಯಾರೆಂದು ಸ್ಪಷ್ಟವಾಗಿ ಗೊತ್ತಾಗಲಿಲ್ಲ.
  
  
 '' ಅವರಲ್ಲ ಅನ್ಸುತ್ತೆ ಕಣೆ,  ಅವರೇಕೆ ಆ ರೀತಿ  ಸುಮ್ಮನೆ ದಾರಿ ಮದ್ಯೆ ಬಿದ್ದಿರ್ತಾರೆ.    ಈ ದಾರಿಯಲ್ಲಿ ಯಾರು ಸರಿಯಾಗಿ ಹೋಡಾಡುತ್ತಿಲ್ಲ.   ನಿರ್ಜನವಾಗಿದೆ.   ಸುತ್ತಲು   ಕತ್ತಲಿರುವುದರಿಂದ   ಸರಿಯಾಗಿ    ಕಾಣಿಸುತ್ತಿಲ್ಲ''.  ಎಂದೂ ಸ್ವಲ್ಪ ಭಯದಿಂದ ಅಲ್ಲಿಯೇ ನಿಂತಳು ರಮ್ಯ.    ಆದರೆ ಸ್ನೇಹಾಳಿಗೆ  ತಡೆಯಲಾಗಲಿಲ್ಲ.   ''  ಹೋಗ್ಲಿ 
ಬಾರೆ,   ಪಾಪ ಯಾರಿರಬಹುದು  ಎಂದು ಒಂದ್ಸಾರಿ ಹತ್ತಿರ ಹೋಗಿ ನೋಡಿಕೊಂಡು ಬಂದು ಬಿಡೋಣ''  ಎಂದು ಮುಂದಡಿಯಿಟ್ಟಳು.    

ಅಷ್ಟರಲ್ಲಿ....   ವಿಷಲ್ ಊದುತ್ತಾ  ಇವರತ್ತಲೇ  ಬಂದ ಕಾವಲುಗಾರ   '' ಏನ್ ಮಾಡ್ತಾಯಿದ್ದಿರ ಇಲ್ಲಿ.    ಹೆಣ್ಣು ಮಕ್ಕಳು ಇಷ್ಟೊತ್ತಾದ್ರು  ಇಲ್ಲಿರೋದು ಸರಿಯಲ್ಲ,    ಬೇಗ ಮನೆಕಡೆ  ಹೋಗಿ... ಹೂ  ನಡೀರಿ ನಡೀರಿ'' ಎಂದನು.   ಅವನ ಮಾತಿಗೆ  
 ದೂರದಲ್ಲಿ   ಪ್ರಜ್ಞೆಯಿಲ್ಲದೆ ಬಿದ್ದಿದ್ದ ಸುಂದರನನ್ನು ತೋರಿಸಿ,   ಅವರನ್ನು ನೋಡ ಬೇಕಿತ್ತು ಎಂದರು.     ಅವರು ತೋರಿಸಿದ ಕಡೆ ನೋಡಿದ ಕಾವಲುಗಾರ ''  ಓ ಅವ್ರ ನೋಡ್ರಮ್ಮ ... ಈ ತರ ಕುಡಿದು ಅಲ್ಲಲ್ಲಿ  ಬಹಳ ಜನ ಬಿದ್ದಿರ್ತಾರೆ.     ನಿಶೆ ಇಳಿದ ಮೇಲೆ ಅವರೇ ಎದ್ದು ಹೋಗ್ತಾರೆ.     ಇಲ್ಲ ಅಂದ್ರೆ ಇನ್ನೊಂದು ಸ್ವಲ್ಪ ಹೊತ್ತು ಬಿಟ್ಟು,   ನಾವೇ ಎಬ್ಬಿಸಿ ಕಳಿಸ್ತೀವಿ.    ಇಲ್ಲಿ ಇವೆಲ್ಲ ಮಾಮೂಲು.    ನಿಮಗ್ಯಾಕ್  ಬೇಕು ಈ ಕುಡುಕರ ಉಸಾಬರಿ.     ನಾವ್ ನೋಡ್ಕೋತೀವಿ,    ಇನ್  ನೀವು ಹೊರ್ಡಿ ತಾಯಿ. 
  
ನೋಡಿ,  ನಿಮ್ಮ ಎಡಗಡೆ ಕಾಣಿಸ್ತಾದಲ್ಲ,    ಆ ದಾರಿಲೇ  ನೇರ್ವಾಗಿ ಹೋಗಿ ಬಲಕ್ಕೆ ತಿರ್ಕೋಳಿ,  ಗೆಟ್ ಅತ್ರ ಹೋಗ್ತದೆ ದಾರಿ  '' ಎಂದನು.   ಕಾವಲುಗಾರನ ಮಾತಿಗೆ ಏನ್ ಹೇಳಬೇಕೆಂದು ತಿಳಿಯದೆ  ಇಬ್ಬರೂ   ತಲೆ ಅಲ್ಲಾಡಿಸಿ,   ಅವನು ತೋರಿಸಿದ ದಾರಿಯಲ್ಲಿ  ಬಾಡಿದ ಮುಖವನ್ನು ಹೊತ್ತು ಸಾಗತೊಡಗಿದರು.    


 ನಾನು  ಆ ಕೆರೆಯ ದಡದ ಮೇಲೆಲ್ಲಾ ಹುಡುಕಿದೆ ಎಲ್ಲು ಕಾಣಿಸಲಿಲ್ಲ.    ಇಷ್ಟು ದೊಡ್ಡ ಉದ್ಯಾನವನದಲ್ಲಿ ಇನ್ನೆಲ್ಲಿ ಹುಡುಕಲಿ ಕತ್ತಲು ಬೇರೆ ಕವಿಯುತ್ತಿದೆ.    ಅಲ್ಲೊಂದು ಇಲ್ಲೊಂದು ಮಿಣುಕು ಮಿಣುಕೆನ್ನುವ  ಟ್ಯೂಬ್ ಲೈಟ್ಗಳು.    ಎಲ್ಲಿ ಅಂತ ಹುಡುಕಾಡಲಿ   ಎಂದು ಯೋಚಿಸುತ್ತಾ....ದಂಡೆಯನ್ನು ಇಳಿದು ಕೆಳಗಿನ ರಸ್ತೆಯ ಪಕ್ಕದಲ್ಲಿದ್ದ ಕಾಲುದಾರಿಯಲ್ಲಿ ನಡೆದುಕೊಂಡು ಬರುತಿದ್ದೆ.     ಎದಿರುಗಡೆಯಿಂದ ಬರುತಿದ್ದ ಕಾವಲುಗಾರ,   '' ರೀ ಸ್ವಾಮಿ,   ಟೈಮ್ ಆಯ್ತು.    ಬೇಗ ಬೇಗ ಹೊರ್ಡಿ''  ಎಂದನು.     ಇವನಿಗೆ ಒಂದುಬಾರಿ  ಕೇಳಿ ಬಿಡೋಣವೆಂದುಕೊಂಡು  '' ಅಣ್ಣಾ,   ಇಬ್ಬರು ಹುಡುಗೀರು,   ಜೋತೆಯಲ್ಲೊಬ್ಬ ಹುಡುಗ ಈ ಕಡೆ ಬಂದದ್ದನ್ನು  ತಾವೇನಾದರು ನೋಡಿದ್ದರಾ'' ಎಂದೆ.     ನಾನು ಕೇಳಿದ ರೀತಿಗೋ ಏನೋ ,    ಕಾವಲುಗಾರ ನನ್ನನ್ನು ಸಂಶಯದಿಂದ ನೋಡತೊಡಗಿದ.    ಮತ್ತೊಮ್ಮೆ , '' ಅಣ್ಣಾ,   ಒಂದು ಹುಡುಗಿ  ಜೀನ್ಸ್ ಪ್ಯಾಂಟ್ ಹಾಗು ಟೀ ಷರ್ಟ್ ಹಾಕಿದ್ದಳು.   ಮತ್ತೊಬ್ಬಳು ಚೂಡಿದಾರ್ ಹಾಕಿದ್ದಳು.     ನನ್ನ ಸ್ನೇಹಿತ ಬಿಳಿ ಶರ್ಟು ಹಾಗು ನೀಲಿ ಜೀನ್ಸ್ ಹಾಕಿದ್ದ ......ಅವರನ್ನ   ಇಲ್ಲೆಲ್ಲಾದರೂ   ಕಂಡಿದ್ದರೆ   ದಯವಿಟ್ಟು ಹೇಳಿ ''  ಎಂದು ವಿನಯದಿಂದ ಕೈ ಮುಗಿದು ಕೇಳಿದೆ.  ನನ್ನ ವಿನಯತೆ   ಕೆಲಸ ಮಾಡ್ತು ಅಂತ ಕಾಣಿಸುತ್ತೆ.     ಕಾವಲುಗಾರ  ತನ್ನ  ತಲೆಯನ್ನು ಕೆರೆದುಕೊಳ್ಳುತಾ
  
'' ನೀವು ಹೇಳಿದ್ರಲ್ಲ  ಅವ್ರ ಥರನೇ ಇರೋ ಇಬ್ಬರೂ  ಹುಡುಗೀಯರನ್ನ ಈಗೊಂದ್ ಹತ್ ನಿಮಿಷದ್ ಹಿಂದೆ ಇದೆ ದಾರೀಲಿ ನೋಡ್ದೆ.     ಆದರೆ   ಯಾವ ಹುಡುಗನೂ  ಅವರ ಜೊತೆ ಇರಲಿಲ್ಲ.      ಅವರು ನಿಮ್ಮಂಗೆ ಯಾರ್ನೊ ತಡ ಕಾಡ್ತಿದ್ದಂಗಿತ್ತು.       ಅಲ್ಯಾರೋ ಒಬ್ಬ ಆಸಾಮಿ  ಕುಡಿದು ಬಿದ್ದಿದ್ದ,  ಅವನ್ನಾ ನೋಡ್ಬೇಕು ಅಂದ್ರು.    ನಾನೇ ಬೇಡ ಅಂತ ಬುದ್ದಿವಾದ ಹೇಳಿ ಕಳಿಸ್ದೆ '' ಎಂದು ಹೇಳಿದ.       ''  ಅಣ್ಣಾ, ನೀವು ಯಾರನ್ನೋ  ಬಿದ್ದಿದ್ದ ಅಂದ್ರಲ್ಲ,     ಆ  ವ್ಯಕ್ತಿಯ ಮುಖವನ್ನೇನಾದ್ರು   ನೋಡಿದ್ರ...'' ಎಂದು ಅನುಮಾನದಿಂದ  ಕೇಳಿದೆ.       '' ಯಾರೋ ಕುಡ್ದು ಬಿದ್ದಿರ್ಬೇಕು ಅಂತ,   ನಾನು ಹತ್ತಿರ ಹೋಗಿ  ನೋಡ್ಲಿಲ್ಲ'' ಎಂದನು.     ಅವನ ಮಾತು ಕೇಳಿ   ಅಲ್ಲಿ  ಬಿದ್ದಿದ್ದ  ವ್ಯಕ್ತಿಯನ್ನು ನೋಡಬೇಕೆಂಬ ಭಾವನೆ ಕೆರಳತೊಡಗಿತು.      ಆಗ ಕಾವಲುಗಾರನ ಕೈಗೆ ನೂರು ರುಪಾಯಿ ಕೊಟ್ಟು ''  ಆ ಜಾಗ ನನಗೊಂದ್ ಸಾರಿ ತೋರಿಸಿ ಅಣ್ಣಾ ಅಂದೆ''.      ಕೈಗೆ ದುಡ್ಡು ಬಂದ ತಕ್ಷಣ,    ಸರಿ  ಬನ್ನಿ   ಎಂದು ಕರೆದುಕೊಂಡು ಹೋದ.     ನಾನು ಕತ್ತಲಲ್ಲೇ ತಡವರಿಸಿಕೊಂಡು ಅವನ ಹಿಂದೆ ಹೊರಟೆ....ಸ್ವಲ್ಪ ದೂರ ಹೋದ ಮೇಲೆ ಕಾವಲುಗಾರ ಕೈ ತೋರಿಸಿದ ಕಡೆ ನೋಡಿದೆ.      ಬಿಳಿ ಷರ್ಟ್ ಮಾತ್ರ ಎದ್ದು  ಕಾಣಿಸುತ್ತಿತ್ತು.     ಮನದಲ್ಲೇ  ಸ್ವಲ್ಪ ಗಾಬರಿಯಾಗತೊಡಗಿತು.    ಇಬ್ಬರು ಹತ್ತಿರ ಹೋದೆವು.    ಅವನು ಟಾರ್ಚ್ ತಂದಿರಲಿಲ್ಲ.     ಮುಖಡಿಯಾಗಿ ಬಿದ್ದಿದ್ದ ವ್ಯಕ್ತಿಯನ್ನು  ಹೊರಳಿಸಿ    ಬೆಂಕಿ ಕಡ್ಡಿ ಗೀರಿ   ಮುಖದ ಬಳಿ ಹಿಡಿದ......ಒಹ್ ಬಿದ್ದಿದ್ದವನು ಸುಂದರ...!      ತಲೆಯಿಂದ ರಕ್ತ ಸುರಿದು ಮುಖದ ಮೇಲೆಲ್ಲಾ  ಹೆಪ್ಪು ಕಟ್ಟಿತ್ತು.     ಆದರೆ ಅವನಿಗೆ ಪ್ರಜ್ಞೆಯಿರಲಿಲ್ಲ..... 

 ಸುಂದರನನ್ನು    ಆ ಸ್ಥಿತಿಯಲ್ಲಿ  ಅಲ್ಲಿ ನೋಡುತ್ತೇನೆ  ಅಂದುಕೊಂಡಿರಲಿಲ್ಲ.     ಆ ಕ್ಷಣದಲ್ಲಿ ಏನು ಮಾಡಬೇಕೆಂದು ತೋಚದೆ ಗಾಬರಿಯಿಂದ    ದುಃಖಿಸುತ್ತಾ ನಿಂತುಕೊಂಡಿದ್ದೆ.     ''  ಸ್ವಾಮಿ, ಇವರೇನಾ ನಿಮ್ಮ ಸ್ನೇಹಿತರು ''   ಕೇಳಿದ ಕಾವಲುಗಾರ.     ನಾನು ತಲೆಯಾಡಿಸುತ್ತಾ.......ಇನ್ನು ಯೋಚನೆ ಮಾಡುತ್ತಾ ಕುಳಿತುಕೊಳ್ಳುವ ಸಮಯವಲ್ಲ  ಅಂದುಕೊಂಡು  '' ಅಣ್ಣಾ,   ನೀವು ಬೇಗ ಹೋಗಿ ಯಾವುದಾದರು ಆಟೋ ಸಿಕ್ಕರೆ  ಕರೆದುಕೊಂಡು ಬನ್ನಿ,   ನಾನು ಹೆಗಲ ಮೇಲೆ ಹೊತ್ತುಕೊಂಡು ಬರುತ್ತಿರುತ್ತೇನೆ '' ಎಂದೆ.     ಅದಕ್ಕೆ ಕಾವಲುಗಾರ  '' ಬೇಡ ಸ್ವಾಮಿ.     ಆ ದೀಪ ಕಾಣಿಸ್ತಾ  ಐತಲ್ಲ ಅಲ್ಲಿವರ್ಗೆ ನಾನು ನಿಮ್ಮ  ಜೊತೇಲಿ ದಾರಿ ತೋರಿಸ್ಕೊಂಡು ಬತ್ತೀನಿ  .... ಕತ್ತಲು ಬೇರೆ.    ನಿಮಗೆ ದಾರಿ ಸರಿಯಾಗಿ ಕಾಣಕಿಲ್ಲ..''  ಎಂದು  ಹೇಳಿ, ಬನ್ನಿ ಎಂದು  ದಾರಿ ತೋರಿಸಿಕೊಂಡು ಹೋಗುತಿದ್ದ.   ಸುಂದರನನ್ನು ಹೆಗಲಮೇಲೆ ಹೊತ್ತುಕೊಂಡು ಕಷ್ಟದಿಂದ ಹೆಜ್ಜೆ ಹಾಕುತಿದ್ದೆ.     ಸ್ವಲ್ಪ ವಿಶಾಲವಾದ ರಸ್ತೆಗೆ ಕರೆದುಕೊಂಡು ಬಂದು  ''  ಸ್ವಾಮಿ  ಇನ್ನು ನೀವು ನಿಧಾನಕ್ಕೆ ಬರ್ತಾಯಿರಿ,   ನಾನು ಬೇಗ ಆಟೋ ಕರ್ಕೊಂಡ್ ಬರ್ತೀನಿ''  ಎಂದು ಹೇಳಿ ಕಾವಲುಗಾರ ಓಡುವ ನಡಿಗೆಯಲ್ಲಿ ಹೋಗಿ,    ಆಟೋದೊಂದಿಗೆ  ಬಂದನು.  ಸುಂದರನನ್ನು ಆಟೋದಲ್ಲಿ ಕುಳ್ಳಿರಿಸಲು ಆಟೋ ಡ್ರೈವರ್ ಹಾಗೂ  ಕಾವಲುಗಾರ ಇಬ್ಬರೂ ಸಹಾಯ ಮಾಡಿದರು.   '' ಸ್ವಾಮಿ ನಡೀರಿ ನಾನು ಬರ್ತೀನಿ, 
ನೀವೊಬ್ಬರೇ  ಇದ್ದೀರ... ಪಾಪ ನಿಮ್ಮ ಸ್ನೇಹಿತ್ರುಗೆ ತಲೆಗೆ ಜೋರಾಗೆ ಏಟ್ ಬಿದ್ದಾಂಗದೆ. 
ಇಲ್ಲೇ ಪಕ್ಕದಲ್ಲಿ ನಿಮಾನ್ಸ್ ಆಸ್ಪತ್ರೆ ಐತೆ''  ಎಂದವನೇ ಕಾವಲುಗಾರ   ಆಟೋ ಏರಿ ಕುಳಿತುಕೊಂಡ.     ನಾನು ಕಣ್ಣಲ್ಲಿಯೇ ಅವನಿಗೆ ಕೃತಜ್ಞತೆ ಸಲ್ಲಿಸಿದೆ. 
 
  ನಾವು ಕುಳಿತಿದ್ದ ಆಟೋ ಉದ್ಯಾನವನದ ಮುಖ್ಯ ಗೇಟಿಂದ ಬಲಕ್ಕೆ ತಿರುಗಿಕೊಳ್ಳುತಿತ್ತು.     ಆಗ ನೋಡಿದೆ ಆ ಇಬ್ಬರು ಹುಡುಗಿಯರನ್ನು.      ಅವರು ಗೇಟಿನಿಂದ  ಹೊರಗೆ  ನಡೆದುಕೊಂಡು ಬರುವ ಜನರನ್ನೇ ಆತಂಕದಿಂದ ಗಮನಿಸುತಿದ್ದರು.   ಕಾವಲುಗಾರನು ಸಹ ಅದೇ ವೇಳೆಗೆ ಅವರನ್ನು ನೋಡಿ,     ''ಸ್ವಾಮಿ,  ಅಲ್ಲಿ ನಿಂತಿರಿರೋರಲ್ವಾ ನೀವು ಆಗ್ಲೇ ಕೇಳಿದ ಹುಡ್ಗೀರು...'' ಎಂದನು.    ಹೌದು ಎಂದೆ.  ''  ಮತ್ತೆ  ಕರೀರಿ...ಅವರು ನಿಮ್ಮನ್ನೇ ಹುಡುಕ್ತಾ ಇರೋಹಾಂಗದೆ''.  ಎಂದನು.    ಬೇಡ ನಡೀರಿ ಮೊದಲು ಆಸ್ಪತ್ರಗೆ ಹೋಗೋಣವೆಂದು ಹೇಳಿ ಮತ್ತೆ ಬಲಕ್ಕೆ  ತಿರುಗಿ ನೋಡಿದೆ,    ಆಗ ಅಚಾನಕ್ಕಾಗಿ  ಸ್ನೇಹ... ನಾವು ಕುಳಿತಿದ್ದ ಆಟೋವನ್ನೊಮ್ಮೆ ನೋಡಿದ ಹಾಗಾಯ್ತು.      ಅಷ್ಟರಲ್ಲಿ ಬಸ್ಸೊಂದು ನಮ್ಮ ಆಟೋ ಸಾಗುತ್ತಿದ್ದ   ಬಲಬದಿಯಲ್ಲಿ  ಬಂದ ಕಾರಣ ಆಟೋವನ್ನು ತಕ್ಷಣ ನಿಲ್ಲಿಸುವುದಕ್ಕೆ ಸಾಧ್ಯವಿರಲಿಲ್ಲ.    ಹಿಂದೆ ಮುಂದೆಯೆಲ್ಲ ವಾಹನಗಳು ಸಾಗುತಿದ್ದವು.   ಸ್ನೇಹ  ಸುಂದರನನ್ನೇ ಹುಡುಕುತ್ತಿರಬಹುದೇ... ಯಾಕೋ ನನ್ನ ಮನಸ್ಸು ತಡೆಯಲಿಲ್ಲ.     ತಕ್ಷಣಕ್ಕೆ ಒಂದು ನಿರ್ಧಾರಕ್ಕೆ ಬಂದವನೇ.....ಡ್ರೈವರ್ ಗೆ   ಆಟೋ ನಿಲ್ಲಿಸಿ ಎಂದೆ.      ತಡೀರಿ ಸಾರ್ ಹಿಂದೆ ಮುಂದೆಯೆಲ್ಲ ಗಾಡಿಗಳು ಬರ್ತಾಯಿವೆ ಎಂದು ಹೇಳಿ      ಮುಂದೆ  ಹಾಪ್ಕಾಮ್ಸ್ ಸ್ಟಾಪ್  ಬಳಿ ನಿಲ್ಲಿಸಿದ.   ನಮ್ಮ ಆಟೋ ಸನಿಹವೇ ಎರೆಡೆರಡು  ಬಿಟಿಎಸ್ ಬಸ್ಸುಗಳು ಒಂದರ ಹಿಂದೆ ಒಂದರಂತೆ ಬಂದು ನಿಂತವು.    ನಾನು ಆಟೋ ಇಳಿದು ಕೂಡಲೇ ಬಲಭಾಕ್ಕೆ  ಹೋಗಲು ಸಾಧ್ಯವಿರಲಿಲ್ಲ.  ಆ ಬಸ್ಸುಗಳು ಜನರನ್ನು ಇಳಿಸಿ ಹತ್ತಿಸಿಕೊಂಡು ಮುಂದೆ ಹೊರಟ ಮೇಲೆ,   ಕಷ್ಟದಿಂದ ಓಡುತ್ತಾ  ರಸ್ತೆಯನ್ನು ದಾಟಿ,   ಸ್ನೇಹಾ ನಿಂತಿದ್ದ ಸ್ಥಳಕ್ಕೆ ಬಂದೆ.     ಅಷ್ಟರಲ್ಲಾಗಲೇ  ಆಕೆ ಅಲ್ಲಿರಲಿಲ್ಲ. 
                                ++++++               ++++++                 ++++++

 ಉದ್ಯಾನವನದಿಂದ    ಹೊರಗಡೆ ಬಂದ ಸ್ನೇಹಿತೆಯರು,   ಹೊರಗಡೆ  ಬರುತ್ತಿರುವ ಜನರನ್ನು ತದೇಕ ಚಿತ್ತಾದಿಂದ ಗಮನಿಸುತಿದ್ದರು.   ಆದರೆ,  ಸುಂದರನ ಸುಳಿವೇ ಇರಲಿಲ್ಲ.   ಸ್ನೇಹಾಳ ಮುಖವಂತೂ.... ಮೋಡ ಕವಿದ ಶಶಿಯಂತಾಗಿ ಹೋಗಿತ್ತು.     ರಮ್ಯಾ ಕೂಡ ಮನದಲ್ಲಿಯೇ ಚಡಪಡಿಸುತಿದ್ದಳು.     ಯಾರೋ ಜೀನ್ಸ್  ದಾರಿ  ಯುವಕನೊಬ್ಬ ನಿಧಾನಕ್ಕೆ ಬರುತಿದ್ದನು,  ಅವನು ಸುಂದರನಾಗಿರಬಾರದೆ  ಎಂದುಕೊಂಡ   ರಮ್ಯಾ ಮುಂದೆ ಓಡಿ  ಹತ್ತಿರದಿಂದ ನೋಡಿದಾಗ  ನಿರಾಶೆಯಾಯಿತು.     ಅವನು ಸುಂದರನಾಗಿರಲಿಲ್ಲ.      ಅದೇ ಸಮಯಕ್ಕೆ ಅದೇ ಗೇಟಿನ ಮುಖಾಂತರ ಆಟೋವೊಂದು ನಿಧಾನಕ್ಕೆ ಸಾಗಿಹೋಯಿತು.  ಆಗಲೇ ಅದರತ್ತ ಸ್ನೇಹ,  ಒಮ್ಮೆ ಅಚಾನಕ್ಕಾಗಿ ನೋಡಿದಳು.     ರಮ್ಯಾ ಸ್ನೇಹಾಳ ಹತ್ತಿರ ಬಂದು... ''  ಬಾ ಮುಂದೆ ಇನ್ನೊಂದು ಗೇಟಿದೆ.    ಅಲ್ಲೊಂದು ಸಾರಿ ನೋಡೋಣಾ ''  ಎಂದವಳೇ  ಪಾರ್ಕಿಂಗ್ ಮಾಡಿದ್ದ ತನ್ನ ಮೊಪೇಡ್   ತರಲು ಹೋದಳು.    ಆ  ಆಟೋದಲ್ಲಿದ್ದ  ಕುಳಿತಿದ್ದ  ವ್ಯಕ್ತಿಯೊಬ್ಬ ಹಿಂದೆ  ತಿರುಗಿ  ನೋಡಿದ್ದು  ನೆನಪಿಗೆ ಬಂತು.    ಅದರಲ್ಲಿಯೇ ಸುಂದರ್ ಇದ್ದರಾ ...? ಹೂ ಹೂಂ.. ಅವಳ ತಲೆ ಗೊಂದಲದ ಗೂಡಾಯಿತು.     ಮೊಪೆಡ್ ತಂದ ರಮ್ಯಾ,  ಸ್ನೇಹಾಳನ್ನು ಹತ್ತಿಸಿಕೊಂಡು ಮುಂದಿನ ಗೇಟಿನ ಕಡೆ ಹೊರಟಳು. 


ಸುತ್ತಲು ನೋಡಿದೆ ಅವರಿಬ್ಬರು  ಎಲ್ಲಿಯೂ  ಕಾಣಲಿಲ್ಲ.    ಇನ್ನು ಅವರನ್ನು  ಹುಡುಕುತ್ತಾ  ಅಲೆಯುವ ಸಮಯ ಇದಲ್ಲವೆಂದು ಯೋಚಿಸಿ,   ಪುನಃ ಬಂದು ಆಟೋ ಏರಿದೆ.      ಕಾವಲುಗಾರನ ಸಹಾಯದಿಂದ ಸುಂದರನನ್ನು ಆಸ್ಪತ್ರೆಗೆ ಸೇರಿಸಿದೆ.   ಸುಂದರನನ್ನು ಪರೀಕ್ಷಿಸಿದ ವೈದ್ಯರು,  ಅವನನ್ನು ಕೂಡಲೇ ತೀವ್ರ ನಿಗಾ ಘಟಕಕ್ಕೆ  ವರ್ಗಾಯಿಸಿದರು.  ನಾನು ಆತಂಕದಿಂದಲೇ ಕೇಳಿದೆ  '' ಡಾಕ್ಟರ್, ಸುಂದರನಿಗೆ ಏನಾಗಿದೆ''.   ತಲೆಗೆ ಬಲವಾದ ಪೆಟ್ಟುಬಿದ್ದಿರುವುದರಿಂದ  ಹೆಚ್ಚು ರಕ್ತಸ್ರಾವವಾಗಿದೆ.    ನೋಡೋಣ ಮೊದಲು ಪ್ರಜ್ಞೆ ಬರಲಿ.   ಇವರಿಗೆ ಪ್ರಜ್ಞೆ ಬಂದ ಮೇಲೆ  ನನಗೆ ಬಂದು ತಿಳಿಸಿ  ಎಂದು ಹೇಳಿ ಒಳ ಹೋದರು.  ಸುಂದರನ ಪಕ್ಕದಲ್ಲೇ ಚೇರಿನ ಮೇಲೆ ಹಾಗೆ ಕುಳಿತಿದ್ದೆ,  ಸ್ವಲ್ಪ ಸಮಯದಲ್ಲೇ ಮಂಪರು ಕವಿದಂತಾಗಿ ಕುಳಿತಲ್ಲಿಯೇ ನಿದ್ದೆ ಮಾಡತೊಡಗಿದೆ.  

 ಸ್ನೇಹಾಳನ್ನು ಕರೆದುಕೊಂಡು ಪೂರ್ವ ದಿಕ್ಕಿನಲ್ಲಿದ್ದ ಗೇಟಿನ ಬಳಿಗೆ ಹೊರಟಳು ರಮ್ಯ.   ಅಲ್ಲಿ ಸರಿ ಸುಮಾರು ಒಂದು ಗಂಟೆ ಸಮಯ,  ಗೇಟಿನ ಒಳಗಿನಿಂದ ಹೊರ  ಬರುವವರನ್ನು  ಗಮನಿಸುತಿದ್ದರು ಆದರೆ ಸುಂದರ ಮಾತ್ರ ಬರಲೇ  ಇಲ್ಲಾ.     ಸ್ನೇಹಾಳ ಮುಖವಂತೂ  ತುಂಬಾ ಕಂಗೆಟ್ಟಿತ್ತು.  ''ಸ್ನೇಹ, ನಿನಗೆ ಹೇಗಿದ್ದರೂ ಸುಂದರ್ ರವರ ಮನೆಯ ವಿಳಾಸ ನೆನಪಿದೆ ಅಲ್ಲವೇ..?  ನಾಳೆಯೇ  ಅವರ ಊರಿಗೆ ಹೋಗಿ ಬರೋಣ.   ನಡೆದಿರುವ ಅಹಿತಕರ ಘಟನೆಗಾಗಿ ಅವರನ್ನು ನಾನೇ ಕ್ಷಮೆ ಕೋರುತ್ತೇನೆ.   ಅವರು ಕಂಡಿತ ನನ್ನನ್ನು ಕ್ಷಮಿಸುತ್ತಾರೆಂಬ ಭರವಸೆಯಿದೆ.  ಈಗ ಬಹಳಷ್ಟು ಸಮಯವಾಗಿದೆ,   ಮನೆಯಲ್ಲಿ ಎಲ್ಲರು ಗಾಬರಿಪಟ್ಟುಕೊಳ್ಳುತ್ತಾರೆ.   ಬಾ ಹೊರಡೋಣ'' ಎಂದು  ಸ್ನೇಹಾಳನ್ನು ಸಮಾಧಾನಪಡಿಸಿ ಅಲ್ಲಿಂದ ಮನೆಯತ್ತಾ ಕರೆದುಕೊಂಡು  ಹೊರಟಳು ರಮ್ಯ.  

ನನಗೆ   ಮತ್ತೆ ಎಚ್ಚರವಾಗುವಷ್ಟರಲ್ಲಿ,  ವೈದ್ಯರು  ಸುಂದರನನ್ನು  ಒಳಗಡೆಗೆ ಕರೆದುಕೊಂಡು ಹೋಗಿ ಬೇರೆ ಬೇರೆ ಪರೀಕ್ಷೆ ಮಾಡುತಿದ್ದರು.  ಆತಂಕದಿಂದ ನಾನು ಹೊರಗಡೆಯೇ ಕಾಯುತ್ತಾ  ಕುಳಿತುಕೊಂಡಿದ್ದೆ.      ಸ್ವಲ್ಪ ಸಮಯದ ನಂತರ ಹೊರಗೆ ಬಂದ ವೈದ್ಯರು,    ''  ನೋಡಿ... ಅವರ ತಲೆ  ಚೂಪಾದ ಕಲ್ಲಿಗೆ ಬಡಿದಿರುವುದರಿಂದ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ.  ಹೆಚ್ಚು ತೊಂದರೆಯಿಲ್ಲ ಅದನ್ನು ನಿವಾರಿಸಬಹುದು.  ಆದರೆ ಈಗ   ತಾತ್ಕಾಲಿಕವಾದ ಮರೆವು ಅವರನ್ನು ಆವರಿಸಿಕೊಂಡಿದೆ.  ಇದನ್ನು sub conscious memory ಎನ್ನುತ್ತಾರೆ.    ಜೊತೆಗೆ ಅವರು ತುಂಬಾ ಸೂಕ್ಷ್ಮ ಮನಸ್ಥಿತಿಯುಳ್ಳವರು ಅಂತ ಕಾಣಿಸುತ್ತದೆ.    ತುಂಬಾ depress ಆಗಿದ್ದಾರೆ.     treatment ಗೆ ಸರಿಯಾಗಿ ಸ್ಪಂದಿಸುತ್ತಿಲ್ಲ.    ಇನ್ನು ಹೆಚ್ಚಿನ ಪರೀಕ್ಷೆ  ಮಾಡಬೇಕಾಗುತ್ತದೆ.  ಇಷ್ಟೇ ದಿನಗಳು ಅಂತ ಹೇಳುವುದಕ್ಕೆ ಆಗುವುದಿಲ್ಲ.  ಸ್ವಲ್ಪ ದಿನಗಳ ಕಾಲ ಒಳರೋಗಿಯಾಗಿ  ಚಿಕಿತ್ಸೆ ಪಡಯಬೇಕಾಗುತ್ತದೆ.      ನೋಡೋಣಾ ಬೇಗ ಗುಣಮುಖರಾಗಬಹುದು''ಎಂದು ಹೇಳಿ ಹೊರಟುಹೋದರು.   ಸುಂದರನ  ಈಗಿನ ಸ್ಥಿತಿಗೆ ಮರುಗುವುದನ್ನು ಬಿಟ್ಟು,  ಏನು  ಮಾಡಬೇಕೆಂದು ತಿಳಿಯದ ಸ್ಥಿತಿಯಲ್ಲಿ ನಾನಿದ್ದೆ.   ಹಾಗೆಂದು ಸುಮ್ಮನೆ ಕೂರುವ ಹಾಗೂ ಇರಲಿಲ್ಲ.  ಸುಂದರನ ತಾಯಿಗೆ ವಿಷಯ ತಿಳಿಸಬೇಕಿತ್ತು.   ಆದರೆ ಅವರಿಗೆ ಗಾಬರಿಯಾಗದಂತೆ ವಿಷಯ ತಿಳಿಸಬೇಕಾಗಿತ್ತು.  ಸ್ವಲ್ಪ ಸಮಯ ಯೋಚಿಸಿ, ಆಸ್ಪತ್ರೆಯ ಹೊರಗಡೆಯಿರುವ STD ಬೂತಿನಿಂದ ಸುಂದರನ  ತಾಯಿಗೆ  ಸೂಚ್ಯವಾಗಿ ವಿಷಯ ತಿಳಿಸಿದೆ.   ಕೆಲದಿನಗಳು ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ.  ಆದ ಕಾರಣ ಹಾಗೆ ಸುಂದರನ ಬಟ್ಟೆಗಳನ್ನು ಜೊತೆಯಲ್ಲಿ ತನ್ನಿ ಎಂದು ವಿಷಯ ತಿಳಿಸಿ.   ಆಸ್ಪತ್ರೆಗೆ ರುವಂತೆ ಫೋನ್ ಮಾಡಿದೆ.    

ಚಿಕ್ಕಂದಿನಿಂದಲೂ ಮನೆಯ ಜವಾಬ್ದಾರಿಯನ್ನು ಹೊತ್ತು,  ಕಷ್ಟ ಕಾರ್ಪಣ್ಯಗಳ  ಬಗ್ಗೆ,   ಚನ್ನಾಗಿ  ಅರಿವಿದ್ದ ಸುಂದರನ ತಾಯಿ  ನನ್ನ ಮಾತಿನಿಂದ  ಧೃತಿಗೆಡಲಿಲ್ಲ.    ಆದರೆ ಆಸ್ಪತ್ರೆಯ ಬೆಡ್ಡಿನ ಮೇಲೆ ನಿಸ್ಸಹಾಯಕನಂತೆ ಮಲಗಿರುವ ಮಗನ ಚಿತ್ರ ಕಣ್ಣ ಮುಂದೆ ಬಂದಾಗ, ಅವರ  ಕಣ್ಣ ಕೊನೆಯಿಂದ ಹನಿಗಳೆರಡು ಸದ್ದಿಲ್ಲದಂತೆ ಜಾರಿಹೊದವು.     ಆ ತಕ್ಷಣವೇ  ಅಗತ್ಯಕ್ಕೆ ಬೇಕಾದ ಬಟ್ಟೆಗಳನ್ನು ತೆಗೆದುಕೊಂಡು,   ಹುಷಾರಿಲ್ಲದೆ ನನ್ನ ಮಗ   ನಿಮಾಹನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ ಎಂದರೆ,    ಯಾರಾದರು ತಪ್ಪು ತಿಳಿದುಕೊಳ್ಳಬಹುದೆಂದು  ಯೋಚಿಸಿ..... ಸ್ವಲ್ಪ ದಿನಗಳ ಕಾಲ ನನ್ನ ತವರು ಮನೆಗೆ ಹೋಗಿಬರುತ್ತೇನೆಂದು ಅಕ್ಕಪಕ್ಕದ ಮನೆಯವರಿಗೆ  ಸುಳ್ಳನ್ನು  ಹೇಳಿ,   ಬಸ್ ನಿಲ್ದಾಣಕ್ಕೆ ಹೋಗಲು  ಆಟೋ ಹತ್ತಿದರು.  
          
 ಇತ್ತಾ,   ಸ್ನೇಹ  ಮಾರನೆಯ  ದಿನ ಬೆಳಿಗ್ಗೆಯೇ ತನ್ನ ಗೆಳತಿ ರಮ್ಯಾಳೋಡನೆ   ರಾಮನಗರಕ್ಕೆ ಬಂದಳು.   ಇಬ್ಬರೂ ಬಸ್ಸನ್ನಿಳಿದು    ಅಲ್ಲಿಯೇ ಇದ್ದ  ಆಟೋ ಸ್ಟ್ಯಾಂಡಿ ಬಳಿ ಹೋಗಿ ಆಟೋ ಹತ್ತಿ ಕುಳಿತು  ಸುಂದರನ ಮನೆಯ ವಿಳಾಸ ಹೇಳಿದರು.    ಅದೇ ಸಮಯಕ್ಕೆ ಸುಂದರನ ತಾಯಿ,  ಆಟೋ ನಿಲ್ದಾಣದಲ್ಲಿ ಆವರ ಸನಿಹವೇ ಆಟೋದಿಂದ ಇಳಿದು,     ಬೆಂಗಳೂರಿನ ಕಡೆ ಹೋಗುವ ಬಸ್ಸನ್ನು ಏರಿದರು.       ಇತ್ತಾ....ಸ್ನೇಹಾ ಕುಳಿತಿದ್ದ ಆಟೋ ಸುಂದರನ ನೆಯ ವಿಳಾಸದತ್ತ   ಹೊರಟಿತು.
                                                      
 ಸುಂದರನ  ಮನೆಯ ವಿಳಾಸ ಸುಲಭದಲ್ಲೇ ಸಿಕ್ಕಿತು.      ಸ್ನೇಹಾ ಹಾಗೂ ರಮ್ಯಾ ಆಟೋದಿಂದ ಇಳಿದು ಮನೆಯ ಬಳಿ ಹೋದರೆ......ಮನೆಗೆ ಬೀಗ ಹಾಕಿತ್ತು.      ಅದನ್ನು ನೋಡಿದ ಸ್ನೇಹಾ ''  ರಮ್ಯಾ ಈಗ ಏನೇ ಮಾಡೋದು..? ಎಲ್ಲಿಗೋ ಹೋಗಿದ್ದಾರೆ ಅನ್ಸುತ್ತೆ.      ಏಕೋ ಸುಂದರ್  ನನಗೆ ನಿಲುಕದ ನಕ್ಷತ್ರವಾಗಿಬಿಟ್ಟಿದ್ದಾರೆ.     ಮರೀಚಿಕೆ ಅಂದರೆ ಇದೇ   ಇರಬೇಕು ಕಣೆ '' ಎಂದು ನೊಂದ ಮನಸ್ಸಿನಿಂದ ಹೇಳಿದಳು.     ರಮ್ಯ,   ಸ್ನೇಹಾಳನ್ನು ಸಮಾಧಾನ ಪಡಿಸುತ್ತಾ....... '' ಬೇಸರ ಮಾಡ್ಕೋಬೇಡ ಸ್ನೇಹ.     ಇಲ್ಲೇ ಎಲ್ಲೋ ಹೋಗಿರಬೇಕು.     ಪಕ್ಕದಲ್ಲಿ ಯಾರನ್ನಾದರು ವಿಚಾರಿಸೋಣ ನಡಿ '' ಎಂದು ಹೇಳಿ ಸನಿಹದಲ್ಲಿಯೇ  ಇದ್ದ ಮನೆಯ ಬಾಗಿಲನ್ನು ತಟ್ಟಿದಳು.    ಯಾರು ಎನ್ನುತ್ತಾ..... ವಯಸ್ಕ ಹೆಂಗಸೊಬ್ಬರು ಬಂದು  ಬಾಗಿಲು ತೆರೆದರು.     ಅವರನ್ನು ನೋಡಿದ ರಮ್ಯಾ...ವಿನಯದಿಂದ ''  ಅಮ್ಮಾ ಈ ಪಕ್ಕದ ಮನೆ......ಸುಂದರ್ ಅವರದೇ ತಾನೆ ''  ಎಂದಳು.     ಆಕೆ ಹೌದೆಂಬಂತೆ ತಲೆಯಾಡಿಸಿದರು. 
           '' ಮತ್ತೆ ಅವರ ಮನೆಗೆ  ಬೀಗ ಹಾಕಿದೆ.    ಎಲ್ಲಿಗೆ ಹೋಗಿದ್ದಾರೆ ಎಂದು ನಿಮಗೇನಾದರೂ ತಿಳಿದಿದಿಯೇ ....''  ಕೇಳಿದಳು  ಸ್ನೇಹ.      ಅದಕ್ಕೆ    ಆಕೆ  '' ಸುಂದರನನ್ನು  ನಿನ್ನೆ ಬೆಳಿಗ್ಗೆ ನೋಡಿದ್ದು.    ಮತ್ತೆ ಈ ದಿನ ಅವನನ್ನು ನೋಡಿದ ನೆನಪಿಲ್ಲ.     ಅವನ ತಾಯಿ....ಏಕೋ ಆತುರಾತುರವಾಗಿ,    ತಮ್ಮ ತವರು ಮನೆಗೆ ಹೋಗಿಬರುತ್ತೇನೆ ಎಂದು ಹೇಳಿ,  ಈಗ ಸ್ವಲ್ಪ ಸಮಯದ ಹಿಂದೆ ಬಸ್ ಸ್ಟ್ಯಾಂಡಿಗೆ ಹೋದರು '' ಎಂದು ತಿಳಿಸಿದರು. 
       '' ಅಮ್ಮಾ....ತಾವು ತಪ್ಪು ತಿಳಿದುಕೊಳ್ಳುವುದಿಲ್ಲ   ಅಂದರೇ,  ದಯವಿಟ್ಟು ಸುಂದರ್ ರವರು ಕೆಲಸ ಮಾಡೋ ಕಚೇರಿಯ ವಿಳಾಸ ಕೊಡ್ತೀರ ''  ಸ್ನೇಹಾ ಸಂಕೋಚದಿಂದ ಕೇಳಿದಳು.  
      '' ಹಾ....ವಿಸಿಟಿಂಗ್ ಕಾರ್ಡ್ ಇದೆ ತಂದುಕೊಡ್ತೀನಿ ಇರಿ ''  ಎಂದು ಹೇಳಿ,  ಒಳಗೆ ಹೋಗಿ  ಸ್ವಲ್ಪ ಸಮಯದ ನಂತರ  ತಂದುಕೊಟ್ಟರು.    ಇಬ್ಬರು ಆಕೆಗೆ ವಂದನೆಗಳನ್ನು ತಿಳಿಸಿ,  ಸುಂದರನ ಕಚೇರಿಯ ವಿಳಾಸವನ್ನು ಅರಸುತ್ತಾ ಹೊರಟರು.


                                        +++++              +++++          +++++



          ಇತ್ತಾ..... ಹನ್ನೊಂದು ಗಂಟೆಯ ವೇಳೆಗೆ,  ಸುಂದರನ ತಾಯಿ ಆತಂಕದಿಂದಲೇ ಆಸ್ಪತ್ರೆ ತಲುಪಿದರು.    ನಾನು ಅವರನ್ನು ನಿರೀಕ್ಷಿಸುತ್ತಾ ಗೇಟಿನ ಬಳಿಯೇ ಕಾಯುತಿದ್ದೆ.    ಅವರನ್ನು....ಸುಂದರನು ಚಿಕಿತ್ಸೆ ಪಡೆಯುತಿದ್ದ  ವಾರ್ಡಿಗೆ ಕರೆದುಕೊಂಡು ಹೋದೆ.     ಅಲ್ಲಿಯವರೆಗೂ ಸಮಾದಾನದಿಂದಲೇ ಇದ್ದ ಅವರು,   ಮಗನನ್ನು ನೋಡುತಿದ್ದ ಹಾಗೆ ಜೋರಾಗಿ ಆಳಲಾರಂಭಿಸಿದರು.    ಅವರನ್ನು ಸಮಾಧಾನ  ಮಾಡಲು   ಸಾಕಾಗಿ  ಹೋಯ್ತು.  ಇದಾವುದರ ಪರಿವೇ ಇಲ್ಲದ  ಸುಂದರ ಇನ್ನು ನಿದ್ರಿಸುತಿದ್ದ.      ತಾಯಿಯನ್ನು ನೋಡಿಯಾದರೂ ಎಲ್ಲವು ಜ್ಞಾಪಕಕ್ಕೆ ಬರಬಹುದೆಂಬ ಸಣ್ಣ ಆಸೆಯಿಂದ..... ಸುಂದರನನ್ನು ಅಲುಗಾಡಿಸಿ '' ಸುಂದರ... ಯಾರು ಬಂದಿದ್ದಾರೆ ನೋಡೋ ''  ಎಂದೆ.    ಎಚ್ಚರಗೊಂಡ ಸುಂದರನು ಒಮ್ಮೆ ಅವನ ತಾಯಿಯನ್ನು ನೋಡಿ,    ಮಲಗಿದ್ದವನನ್ನು ಏಕೆ ಎಬ್ಬಿಸಿದೆ ಎಂಬಂತೆ ನನ್ನ ಕಡೆ ಅಸಹನೆಯಿಂದ ನೋಡಿದವನೇ.. ಶೂನ್ಯವನ್ನು   ದಿಟ್ಟಿಸುತ್ತಾ ಕುಳಿತುಬಿಟ್ಟ.  

ಸುಂದರನ ಸ್ಥಿತಿಯನ್ನು ನೋಡಿ,  ಆತನ ತಾಯಿ ಬಸವಳಿದುಹೋದರು.     ಕಣ್ಣೀರನ್ನು ಸುರಿಸುತ್ತಾ....'' ಸುಂದ್ರು, ನೋಡೋ ನಾನು ನಿನ್ನ ಅಮ್ಮ ಬಂದಿದ್ದೀನಿ ಕಣೋ... ಕಂದಾ,  ಒಂದ್ಸಾರಿ ಮಾತಾಡಪ್ಪ '' ಎಂದರು.      ಸುಂದರನು ಯಾವುದೇ ಪ್ರತಿಕ್ರಿಯೆ ನೀಡದೆ,    ತನಗೂ ಅವರಿಗೂ ಯಾವುದೇ ಸಂಬಂಧವಿಲ್ಲವೆನ್ನುವಂತೆ ಕುಳಿತಿದ್ದನು.     ಸುಂದರನ ಕೈಯನ್ನು ಹಿಡಿದುಕೊಂಡು ''  ಸುಂದ್ರು.... ನೀನು ಹೀಗಿದ್ದರೆ ಕಂಡಿತ ನನ್ನಿಂದ ಬದುಕಿರಲು ಸಾಧ್ಯವಿಲ್ಲಪ್ಪಾ.  ಮಗನೆ ನೆನಪು ಮಾಡ್ಕೊಳೋ '' ಎಂದು ಕಲ್ಲು ಕರಗುವಂತೆ ಹೇಳುತಿದ್ದರೂ....ಸಹ ಸುಂದರನ  ಪ್ರತಿಕ್ರಿಯೆ ಸೊನ್ನೆಯೇ ಆಗಿತ್ತು.   ನಾನು   ಅವರನ್ನು ಸಮಾಧಾನ ಪಡಿಸುತ್ತಾ...''  ಅಮ್ಮಾ.... ಇನ್ನು ಸ್ವಲ್ಪ ದಿನಗಳ ಕಾಲವಷ್ಟೇ,     ಆಮೇಲಾಮೇಲೆ ಸ್ವಲ್ಪ ಸ್ವಲ್ಪ  ನೆನಪು ಬರುತ್ತದೆಂದು  ಡಾಕ್ಟ್ರು  ಹೇಳಿದ್ದಾರೆ.    ನೀವು ಹೆಚ್ಚು ಗಾಬರಿಯಾಗಬೇಡಿ.     ನೀವು ಇಲ್ಲೇ ಇದ್ದು ನೋಡಿಕೊಳ್ತಾಯಿರಿ.    ನನಗಿಂತ ನಿಮ್ಮ ಅವಶ್ಯಕತೆ ಅವನಿಗೆ ಬಹಳವಿದೆ.     ನಾನು ಆಗಾಗ ಬಂದು ನೋಡಿಕೊಂಡು ಹೋಗುತ್ತೇನೆ''   ಎಂದು ಧೈರ್ಯ ಹೇಳಿ,   ನನ್ನ ಬಳಿ ಇದ್ದ ಸ್ವಲ್ಪ ಹಣವನ್ನು  ನೀಡಿ,   ದುಃಖತಪ್ತ  ಮನಸ್ಸಿನಿಂದ  ಅಲ್ಲಿಂದ ಹೊರಟೆ.
     ++++                                     ++++                                            ++++                                     ++++ 
ಇಬ್ಬರೂ ಸುಂದರನು ಕೆಲಸ ಮಾಡುತಿದ್ದ ಕಚೇರಿಯ ವಿಳಾಸವನ್ನು ಪತ್ತೆ ಮಾಡಿ ಸುಂದರನ ಬಗ್ಗೆ  ವಿಚಾರಿಸಿದರು.   ಅಲ್ಲಿಯು ಅವನ   ಸುಳಿವಿರಲಿಲ್ಲ.    ಅವನು ಬರಬಹುದೆಂಬ ದೂರದ ಆಸೆಯಿಂದ ಊಟದ ಸಮಯದವರೆಗೂ ಕಾಯುತ್ತಾ ಕುಳಿತುಕೊಂಡಿದ್ದರು.    ಆದರೆ  ಸುಂದರನ ಸುಳಿವೇ ಇರಲಿಲ್ಲ.     ಸ್ನೇಹಾಳ  ತಾಳ್ಮೆ ಮುಗಿಯುತ್ತಾ ಬಂದು ಅಸಹನೆ ಅಳುವಾಗಿ ಬದಲಾಯಿತು.    ದಾರಿಯಲ್ಲಿಯೇ ಮರದ ಕೆಳಗಡೆ ಕುಳಿತುಕೊಂಡು ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದಳು.      ಅಳುತ್ತಾ ಕುಳಿತಿದ್ದ ಸ್ನೇಹಾಳ   ಇಂದಿನ ಸ್ಥಿತಿಗೆ ನಾನೇ ಕಾರಣ  ಎಂಬ ನೋವು,    ರಮ್ಯಾಳ ಕಣ್ಣನ್ನು ತೇವ ಮಾಡಿತು.    ಮತ್ತೊಂದು ದಿನ ಬಂದು ಹೋಗೋಣ.  ಆಗ ಕಂಡಿತ ಅವರು ಸಿಗಬಹುದು ಈಗ   ಸಮಾಧಾನ ಮಾಡಿಕೊ ಪ್ಲೀಸ್.     ನೋಡು ರಸ್ತೆಯಲ್ಲಿ ಹೋಗುವವರೆಲ್ಲ ನಮ್ಮನ್ನೇ ನೋಡುತಿದ್ದಾರೆ ಬಾ ಹೋಗೋಣವೆಂದು ಸಮಾಧಾನಿಸಿ,     ರಮ್ಯ ಅವಳನ್ನು  ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದಳು. ಬಸ್ಸನ್ನು ಹತ್ತಿ ಕುಳಿತುಕೊಂಡರು ಸ್ನೇಹ  ಇನ್ನು ಬಿಕ್ಕುತ್ತಲೇ ಇದ್ದಳು.  
                          
ನಾನು ಜಯನಗರದಲ್ಲಿದ್ದ  ನಮ್ಮ ಅತ್ತೆಯವರ ಮನೆಗೆ ಹೋಗಿ   ಆನಂತರ ರಾಮನಗರ  ತಲುಪುವಷ್ಟರಲ್ಲಿ    ಮಧ್ಯಾನ  ಮೂರು ಗಂಟೆಯಾಗಿತ್ತು.     ಬಸ್ಸಿನಿಂದ ಇಳಿದವನೇ ನೇರವಾಗಿ  ಸುಂದರನ ಆಫೀಸಿಗೆ ಹೋದೆ.     ಅಲ್ಲಿ ಕೆಲಸ ನಿರ್ವಹಿಸುತಿದ್ದ ಎಲ್ಲರು ನನಗೆ ಪರಿಚಿತರಾಗಿದ್ದರು.     ಮೇನೇಜರ್ ರವರ ಬಳಿ ಹೋಗಿ ಸುಂದರನ ಸ್ಥಿತಿಯ ಬಗ್ಗೆ  ಹೇಳಿದೆ.     ಆದರೆ ಅವನು ತನ್ನ ನೆನಪಿನ ಶಕ್ತಿಯನ್ನು  ಕಳೆದುಕೊಂಡಿದ್ದಾನೆ ಎಂಬ ಅಂಶವನ್ನು ಮರೆಮಾಚಿದ್ದೆ.      ಮೇನೇಜರ್ ರವರು  ಸುಂದರನ ಆರೋಗ್ಯದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿ,    ಒಂದು ತಿಂಗಳವರೆಗೆ  ರಜೆ ಮಂಜೂರು ಮಾಡುವ ಭರವಸೆಯನ್ನು  ನೀಡಿದರು.      ಅವರಿಗೆ ಕೃತಜ್ಞತೆಯನ್ನು  ತಿಳಿಸಿ  ಹೊರಬರುವಾಗ  ಅಲ್ಲಿಯೇ ಬಾಗಿಲ ಬಳಿ ನಿಂತಿದ್ದ ಅಟೆಂಡರ್  ನನ್ನ ಬಳಿಗೆ ಬಂದು,   ಬೆಳಿಗ್ಗೆ ಸುಂದರನನ್ನು ವಿಚಾರಿಸಿಕೊಂಡು ಇಬ್ಬರೂ ಹುಡುಗಿಯರು  ಬಂದಿದ್ದ ವಿಷಯವನ್ನು    ತಿಳಿಸಿದ.     ಅವನ ಮಾತುಗಳನ್ನೂ ಕೇಳಿದ ಮೇಲೆ   ಸ್ನೇಹ ಹಾಗೂ ಅವಳ ಗೆಳತಿ ಬಂದಿರಬೇಕೆಂದು ನನಗೆ ಅರಿವಾಯಿತು.      ಏಕೆಂದರೆ ನನಗೆ ತಿಳಿದಂತೆ ಅವನಿಗೆ ಬೇರೆ ಯಾವ ಹುಡುಗಿಯರ ಪರಿಚಯವಿರಲಿಲ್ಲ.       ಅವನಿಗೆ ವಂದಿಸಿ ಹೊರಗಡೆ ಬರುವಾಗ ಯೋಚನೆಗೆ ಒಳಗಾದೆ.       ಆ ದಿನ ಲಾಲ್ ಬಾಗಿನಲ್ಲಿ ಇವರುಗಳ ಮಧ್ಯೆ ಏನಾಯಿತು...?   ಸುಂದರ ಏಕೆ  ದೂರದಲ್ಲಿ ಹೋಗಿ ಕಲ್ಲಿನ ಮೇಲೆ ಬಿದ್ದಿದ್ದ...?     ಹಾಗಾದರೆ ಆ ದಿನ ರಾತ್ರಿ ಆ ಗೇಟಿನ ಬಳಿ ಸ್ನೇಹ ಆತಂಕದಿಂದ ಯಾರನ್ನು ಹುಡುಕುತಿದ್ದಳು...?      ಸುಂದರನ್ನು ಹುಡುಕಿಕೊಂಡು ಇಲ್ಲಿಗೆ ಬರಲು ಕಾರಣವೇನು...?   ನನ್ನ ಮನಸ್ಸು ಗೊಂದಲದ ಗೂಡಾಯಿತು.      

ಒಂದು ವಾರಗಳ ಕಾಲ ಇದ್ದು ಹೋಗೋಣ ಎಂದು ಆಸೆಯಿಂದ ಬಂದಿದ್ದ  ಸ್ನೇಹ   ಎರಡೇ ದಿನಕ್ಕೆ ಊರಿಗೆ ಹೊರಟುನಿಂತಳು.      ರಮ್ಯಾ ಏನೆಲ್ಲಾ ಕೇಳಿಕೊಂಡರು,    ತನ್ನ ಹೊರಡುವ ನಿರ್ಧಾರವನ್ನು ಬದಲಾಯಿಸಲಿಲ್ಲ.    ಸ್ನೇಹಾಳ   ಮನಸ್ಸು ಮುರಿದುಹೋಗಿತ್ತು.      ಅವಳು ಕಂಡ ಕನಸುಗಳೆಲ್ಲ   ಕದವಿಕ್ಕಿ ಕುಳಿತುಬಿಟ್ಟಿದ್ದವು.   ಮಂದಸ್ಮಿತ ನಗುವಿನೊಂದಿಗೆ ನಲ್ಮೆಯನು  ಬೆರೆಸಿ ಮಾತನಾಡುತಿದ್ದ   ಹುಡುಗಿ....ವೇದನೆಯ ಕಡಲೊಳಗೆ ಬಿದ್ದ ಮಲ್ಲಿಗೆಯ ಹೂವಿನಂತೆ    ಭಾವನೆಗಳ ತಾಕಲಾಟದಲ್ಲಿ ಬಾಡಿ ಹೋಗಿದ್ದಳು .     ತೀರ್ಥಹಳ್ಳಿಯಿಂದ ಬರುವಾಗ ತನ್ನ ಜೊತೆಯಲ್ಲಿ ಹೊತ್ತು ತಂದಿದ್ದ   ಕನಸಿನ ಗೋಪುರ  ತನ್ನ ಕಣ್ಣ ಮುಂದೆಯೇ ಗಾಳಿಗೋಪುರವಾಗಿ ಕರಗಿಹೋದ ಕ್ಷಣಗಳನ್ನು ಅವಳಿಂದ ಮರೆಯಲಾಗುತ್ತಿಲ್ಲ.     ನಿರಾಸೆಯ ಬೇಗೆಯಿಂದಲೇ   ತೀರ್ಥಹಳ್ಳಿಯ ಕಡೆ ಹೊರಡುವ ಬಸ್ಸನ್ನು ಹತ್ತಿ ಕುಳಿತಾಗ..... ರಮ್ಯಾಳನ್ನು ಕೊನೆಯಬಾರಿ ನೋಡುವವಳಂತೆ ನೋಡುತಿದ್ದಳು.   ಸ್ನೇಹಾಳ  ಕೆನ್ನೆಯ ಮೇಲೆ ಜಾರಿದ  ಕಣ್ಣ ಹನಿಗಳು,    ಇದಕ್ಕೆಲ್ಲ ನೀನೆ ಕಾರಣವೆಂಬಂತೆ,  ದುಮುಕದೆ ಮಡುವಾಗಿ ಮೌನದಿಂದ ರೋದಿಸುವಂತಿತ್ತು.     ಕಂಡೆಕ್ಟರ್ ಬಸ್ಸನ್ನೇರಿ ರೈಟ್... ರೈಟ್  ಎಂದಾಗ,    ಬಸ್ಸು ಹೊರಟಿತು.     ಅಲ್ಲಿಯವರೆಗೂ ಅವಳ ಗಂಟಲ್ಲಲ್ಲೆ ಸಿಕ್ಕಿ ಹಾಕಿಕೊಂಡಿದ್ದ  ಬಿಕ್ಕುಗಳು ..... ಬಸ್ಸಿನ ಶಬ್ಧದೊಂದಿಗೆ ಕರಗತೊಡಗಿದವು.......,   

ನಾನು ಸಮಯ ಸಿಕ್ಕರೆ  ವಾರಕ್ಕೆ  ಎರಡು ಬಾರಿ  ಹಾಸ್ಪತ್ರೆಗೆ ಹೋಗಿ ಸುಂದರನನ್ನು    ನೋಡಿ ಕೊಂಡು ಬರುತಿದ್ದೆ.     ಸ್ವಲ್ಪ ಸ್ವಲ್ಪವೇ ಸುಂದರನ ಆರೋಗ್ಯದಲ್ಲಿ ಚೇತರಿಕೆ    ಕಂಡು ಬರುತ್ತಿತ್ತು.      ನನ್ನನ್ನು ಗುರುತು ಹಿಡಿಯುತಿದ್ದ.  ಆದರೆ ಏನು ಮಾತನಾಡದೆ  ಮೌನವಾಗಿರುತಿದ್ದ.    ಹೀಗೆಯೇ   ಸುಮಾರು ಇಪ್ಪತ್ತು ದಿನಗಳು   ನೋಡು ನೋಡುತ್ತಿದ್ದಂತೆ ಕಳೆದೇ ಹೋದವು.      ಆದರೆ ಅವನ ಮುಖದಲ್ಲಿ ಲವಲವಿಕೆ ಮಾತ್ರ ಕಾಣಲಿಲ್ಲ.     ಒಂದು ದಿನ,   ನಾನು ಹಿಂದಿನ ವಿಚಾರಗಳನ್ನು ನೆನಪಿಸುತ್ತಾ..... ಸುಂದ್ರು,  ಆ ದಿನ ಲಾಲ್ ಬಾಗಿನಲ್ಲಿ ಏನು ನಡೆಯಿತೋ  ಎಂದು ಕೇಳಿದೆ.   ಆ ವಿಷಯದ ಬಗ್ಗೆ ಮಾತನಾಡಲು ಇಷ್ಟವಿಲ್ಲದವನಂತೆ    ಅಸಹನೆಯಿಂದ  ನರಳುತಿದ್ದನು.      ಅಂದಿನಿಂದ ನಾನು ಆ ವಿಚಾರದ ಬಗ್ಗೆ  ಪ್ರಸ್ತಾಪ  ಮಾಡುವುದನ್ನು ಬಿಟ್ಟು ಬಿಟ್ಟೆ.   


ಒಂದು ವಾರಗಳ ಕಾಲ ಗೆಳತಿಯ ಮನೆಯಲ್ಲಿ ಇದ್ದು ಬರುತ್ತೇನೆಂದು ಹೇಳಿ  ಎರಡೇ ದಿನಕ್ಕೆ ವಾಪಸ್ಸು  ಬಂದ ಮಗಳನ್ನು  ಕಂಡೊಡನೆಯೇ,     ಮಗಳು ಈ ಮೊದಲಿನಂತಿಲ್ಲ ಎಂದು  ತಂದೆಗೆ ಅರಿವಾಯಿತು.     ಲವಲವಿಕೆಯಿಂದ ಖುಷಿಯಾಗಿ ಹೋದ ಮಗಳು,  ಬೇಸರದ ಮುಖಭಾವ ಹೊತ್ತು  ಹಿಂದಿರುಗಿರುವುದನ್ನು ನೋಡಿ ಮನಸ್ಸಿಗೆ ಆತಂಕವಾದರು ಅದನ್ನು ತೋರಗೊಡದೆ,   ಅದರ ಬಗ್ಗೆ ನಿಧಾನಕ್ಕೆ ವಿಚಾರಿಸಿದರಾಯ್ತು  ಎಂದು ಯೋಚಿಸಿ,   ಬೆಂಗಳೂರಿನಿಂದ ಬಸ್ಸಿನಲ್ಲಿ  ಬಂದು ದಣಿದಿದ್ದೀಯ,  ಸ್ನಾನ ಮಾಡಿ ಸ್ವಲ್ಪ ರೆಸ್ಟ್ ತಗೋಳಮ್ಮ   ಎಂದು   ಹೇಳಿದವರೇ ಹೊರಗಡೆ ಹೋದರು ಸ್ನೇಹಾಳ  ತಂದೆ.    
        
ಆದರೆ ನಾಲ್ಕೈದು ದಿನಗಳು ಕಳೆದರು ಸ್ನೇಹಾಳ ಮುಖದಲ್ಲಿ  ನಗು ಅರಳಿರಲಿಲ್ಲ.     ಮಾತನಾಡುವಾಗ ಕೃತಕತೆ ಹೆಚ್ಚಾಗಿ ಕಂಡು ಬರುತಿತ್ತು.    ಯಾವಾಗಲು ಅನ್ಯಮನಸ್ಕಳಾಗಿರುತಿದ್ದಳು.    ಉತ್ಸಾಹದಿಂದ ಮಾಡುತಿದ್ದ ಪ್ರತಿಯೊಂದು ಕೆಲಸಕಾರ್ಯಗಳಲ್ಲು   ನಿರಾಸಕ್ತಿ ತೋರಿಸುತ್ತಿದ್ದ ಸ್ನೇಹಾಳ ಮನಸ್ಥಿತಿಯನ್ನು  ಸೂಕ್ಷ್ಮವಾಗಿ ಗಮನಿಸುತಿದ್ದರು ಆಕೆಯ ತಂದೆ.     ಮನಸ್ಸಿನಲ್ಲಿಯೇ ಒಂದು ನಿರ್ಧಾರಕ್ಕೆ ಬಂದವರೇ ಮಗಳ ಮುಂದೆ ಏನನ್ನು ತೋರಗೊಡದೆ   ಹೊರಗಡೆ  ಬಂದರು.     ಮನೆಯಲ್ಲಿ ಮಾತನಾಡಿದರೆ ಮಗಳು ಕೇಳಿಸಿಕೊಳ್ಳಬಹುದೆಂದು    ಸ್ವಲ್ಪ ದೂರದಲ್ಲಿದ್ದ  ಎಸ್ ಟಿ ಡಿ  ಬೂತ್ ಬಳಿ ಬಂದವರೇ..... ರಮ್ಯಾಳ ಮನೆಗೆ ಫೋನ್ ಹಚ್ಚಿದರು.     ಮೊದಲಿಗೆ ರಮ್ಯಾಳೇ  ಫೋನ್ ರಿಸೀವ್ ಮಾಡಿದಳು.   '' ಒಹ್ ಅಂಕಲ್.  ನೀವಾ...ಏನ್ ಸಮಾಚಾರ ಚನ್ನಾಗಿದ್ದೀರ.    ಸ್ನೇಹ ಹೇಗಿದ್ದಾಳೆ'' ಎಂದು ಸಲುಗೆಯಿಂದ ವಿಚಾರಿಸಿದಳು.    ಸ್ನೇಹಾಳ  ಬಗ್ಗೆಯೇ ನಿನ್ನಲ್ಲಿ ಮಾತನಾಡೋಣವೆಂದು ಫೋನ್ ಮಾಡಿದೆ  ಮಗು ಎಂದರು.     '' ಹೇಳಿ ಅಂಕಲ್.  ಸ್ನೇಹಾ ಚನ್ನಾಗಿದ್ದಾಳೆ ತಾನೆ...?  ಏನಾಯ್ತು...?'' ಎಂದಳು ಗಾಬಾರಿಯಿಂದ.     '' ಗಾಬರಿಪಡುವ ವಿಷಯವಲ್ಲ   ಮಗು.    ಆದರೆ ಸ್ನೇಹ ಬೆಂಗಳೂರಿನಿಂದ ಬಂದಾದಮೇಲೆ ತುಂಬಾ ಮಂಕಾಗಿದ್ದಾಳೆ.    ಯಾವುದರಲ್ಲೂ ಆಸಕ್ತಿಯಿಲ್ಲದವಳಂತೆ ಮೌನವಾಗಿರುತ್ತಾಳೆ.   ಈ ವಿಷಯವಾಗಿ ನಾನು ಅವಳನ್ನು ಏನನ್ನು ಕೇಳಲು ಹೋಗಲಿಲ್ಲ.    ನಿನಗೇನಾದರೂ   ವಿಷಯ ಗೊತ್ತಿರಬಹುದೆಂದು ಫೋನ್ ಮಾಡಿದೆ.    ನಿಜ ಹೇಳಮ್ಮ''  ಎಂದರು.   ಅದಕ್ಕೆ ರಮ್ಯಾ...'' ನನಗೇನು ಗೊತ್ತಿಲ್ಲ ಅಂಕಲ್.     ಇಲ್ಲಿಂದ ಚನ್ನಾಗಿಯೇ ಹೋದಳಲ್ಲ.....!'' ಎಂದಳು''.
      
 ''  ನೋಡಮ್ಮಾ ರಮ್ಯಾ....ನೀನು ನನ್ನ ಮಗಳಂತೆಯೇ..!   ಸ್ನೇಹಾ ತುಂಬಾ ಸೂಕ್ಷ್ಮ ಮನಸ್ಸಿನ ಹುಡುಗಿ,    ಅವಳ ಬಗ್ಗೆ ನನಗೆ ಎಷ್ಟೊಂದು ಆಸೆ,  ಅಕ್ಕರೆ,  ಪ್ರೀತಿಯಿದೆಯೆಂದು ನಿನಗೆ ಚನ್ನಾಗಿ ಗೊತ್ತು.    ನನಗೆ ಏನಾದರಾಗಲಿ ತಾಳಿಕೊಳ್ಳುತ್ತೇನೆ.     ಆದರೆ ನನ್ನ ಮಗಳ ಮುಖದಲ್ಲಿ   ಚಿಂತೆಯ ಗೆರೆಗಳನ್ನು ಕಂಡರೆ,  ನನ್ನಿಂದ ಸಹಿಸಲು ಸಾಧ್ಯವಾಗುವುದಿಲ್ಲ.   ನನ್ನ ಮಗಳು ಯಾವಾಗಲು ನಗು ನಗುತ್ತಾ ಇರಬೇಕೆಂದು ಬಯಸುತ್ತೇನೆ.     ಅದು ಎಂಥಹ ವಿಚಾರವಾದರೂ ಸರಿಯೇ ಮುಚ್ಚುಮರೆಯಿಲ್ಲದೆ ನನ್ನ ಬಳಿ ಹೇಳಮ್ಮ ''  ಎಂದರು.   ಅವರ ಮಾತುಗಳನ್ನೂ ಕೇಳಿದ ರಮ್ಯಾಳಿಗೆ   ಮತ್ತೆ ಸುಳ್ಳು ಹೇಳಬೇಕೆನಿಸಲಿಲ್ಲ.     ಸುಂದರ ಹಾಗೂ ಸ್ನೇಹಾ ಪ್ರೀತಿಸುತಿದ್ದ ವಿಷಯ,  ಹಾಗೂ ಅವರಿಬ್ಬರೂ ಲಾಲ್ ಬಾಗಿನಲ್ಲಿ  ಸಂಧಿಸಲು ಬಂದಾಗ ತನ್ನಿಂದ ಆದ ಪ್ರಮಾದದ ಬಗ್ಗೆ ಏನನ್ನು ಮುಚ್ಚಿಡದೆ ಎಲ್ಲವನ್ನು  ಹೇಳಿದಳು.     ಅದನ್ನೆಲ್ಲಾ ಕೇಳಿದ ಸ್ನೇಹಾಳ  ತಂದೆ,   ಒಂದು ಕ್ಷಣ  ಮೌನ ವಹಿಸಿ ಆನಂತರ  ''  ನೋಡಮ್ಮ,  ನಾನು ನಿನಗೆ ಫೋನ್ ಮಾಡಿದ ವಿಷಯವಾಗಲಿ....ಈಗ ನೀನು ನನ್ನ ಜೊತೆ ಮಾತನಾಡಿದ ವಿಷಯಗಳನ್ನಾಗಲೀ.... ಸ್ನೇಹಾಳಿಗೆ ಯಾವುದೇ ಕಾರಣಕ್ಕೂ ತಿಳಿಸ ಬೇಡ.    ಸ್ವಲ್ಪ ದಿನಗಳ ಕಾಲ ನೀನು ಅವಳಿಗೆ ಫೋನ್ ಮಾಡಲೇಬೇಡ''  ಎಂದು ಹೇಳಿ ಫೋನ್ ಇಟ್ಟರು.      ಫೋನ್ ಇಡುತಿದ್ದ  ಹಾಗೆ ಅವರಾಗಲೇ ಒಂದು ನಿಶ್ಚಯಕ್ಕೆ ಬಂದಾಗಿತ್ತು.
                                ++++++               +++++             ++++++
                                                                                                                                                                                     ಸುಂದರನನ್ನು  ಆಸ್ಪತ್ರೆ ಸೇರಿಸಿ  ಸುಮಾರು ಒಂದು  ತಿಂಗಳಾಗಿತ್ತು.     ಆ ದಿನ ಭಾನುವಾರವಾಗಿತ್ತು.    ನನಗೆ ಯಾವುದೇ ಕೆಲಸ ಕಾರ್ಯಗಳು ಇರಲಿಲ್ಲ.   ಸುಂದರನನ್ನು ನೋಡಿಕೊಂಡು ಬರೋಣವೆಂದು ಆಸ್ಪತ್ರೆಗೆ ಬಂದೆ.      ನಾನು ವಾರ್ಡಿಗೆ ಬಂದಾಗ ಸುಂದರ ನಿದ್ದೆ ಮಾಡುತಿದ್ದ.    ಅವನ ತಾಯಿ ಹೊರಗಡೆ ಹೋಗಿದ್ದರೇನೋ ಕಾಣಿಸಲಿಲ್ಲ.   ಅಲ್ಲಿಯೇ ಸುಂದರ ಎದಿರು ಕುಳಿತಿದ್ದೆ.        ಹೊರಗಡೆ ಹೋಗಿದ್ದ ಸುಂದರನ ತಾಯಿ ಔಷಧಿ ಚೀಲವನ್ನು ಹಿಡಿದುಕೊಂಡು ಒಳ ಬಂದರು.      ನನ್ನನ್ನು ನೋಡುತಿದ್ದ ಹಾಗೆ...''   ಸತ್ಯಾ ಯಾವಾಗ ಬಂದ್ಯಪ್ಪಾ,  ಚನ್ನಾಗಿದ್ದೀಯ '' ಎಂದು ಅಕ್ಕರೆಯಿಂದ ಕೇಳಿದರು.   ನಾನು ಚನ್ನಾಗಿದ್ದೀನಮ್ಮ... ಡಾಕ್ಟರ್  ಏನ್ ಹೇಳಿದ್ದ್ರು ಕೇಳಿದೆ.    

''ಒಂದೆರಡು ವಾರದಲ್ಲಿ ಸಂಪೂರ್ಣ ಗುಣ ಆಗುತ್ತಾನೆ ಎಂದು ಹೇಳಿದ್ದಾರೆ.    ಆದ್ರು  ಒಂದೊಂದು ಸಾರಿ ತಲೆ ಹಿಡಿದುಕೊಂಡು ನರಳುತ್ತಿರುತ್ತಾನೆ.   ನನಗೋ.....  ಎಷ್ಟೊತ್ತಿಗೆ ನನ್ನ ಮಗ ಮೊದಲಿನಂತೆ ನಗು ನಗುತ್ತಾ ಮಾತನಾಡುತ್ತಾನೋ ಎಂದು  ಅನ್ನಿಸಿಬಿಟ್ಟಿದೆ.      ಕೆಲವು ಸಾರಿ ರಾತ್ರಿಯಲ್ಲ ಕನವರಿಸುತ್ತಲೇ ಇರುತ್ತಾನೆ.     ಅವನ ಕಷ್ಟ ನೋಡೋಕ್ಕೆ ಆಗುತ್ತಿಲ್ಲ ಕಣಪ್ಪಾ..., ನನಗಂತೂ ಏನು ತಿಳಿಯುತ್ತಿಲ್ಲ''  ಎಂದು ಕಣ್ಣೀರು ಹಾಕುತ್ತಾ  ಹೇಳಿದರು.    ನಾನು ಸಮಾಧಾನ ಪಡಿಸುತ್ತಾ...... '' ಅಮ್ಮ,  ನಾನು ಸಂಜೆ ತನಕ ಇಲ್ಲೇ ಇರುತ್ತೇನೆ.  ನೀವು ಮನೆಗೆ ಹೋಗಿ ಬನ್ನಿ,  ಸ್ವಲ್ಪ ನಿಮ್ಮ ಮನಸ್ಸಿಗೂ ಸಮಾಧಾನ ಸಿಕ್ಕಂತೆ ಆಗುತ್ತದೆ''  ಎಂದು ಹೇಳಿದೆ.   
        
 ''ನಾನು ಅದನ್ನೇ ಹೇಳೋಣ ಅಂದ್ಕೊಂಡಿದ್ದೆ,   ಸರಿಯಪ್ಪಾ....   ತಿಂಗಳಾಯ್ತು  ಮನೆ ಹೇಗಿದೆಯೋ ನೋಡಿಕೊಂಡು ಬರ್ತೀನಿ''  ಎಂದು ಹೇಳಿ ಕೆಲವು ಬಟ್ಟೆಗಳನ್ನು ಬ್ಯಾಗಿಗೆ ಹಾಕಿಕೊಂಡರು.    ನಾನು ಮೆಜೆಸ್ಟಿಕ್ ನತ್ತಾ   ಹೋಗುವ ಬಸ್ಸನ್ನು ಹತ್ತಿಸಿ ಬಂದೆ.    ಕೆಲ ಸಮಯದ ಬಳಿಕ ಸುಂದರ ಎಚ್ಚರಗೊಂಡ.  ಕಣ್ಣನ್ನು  ಉಜ್ಜಿಕೊಂಡು ನನ್ನನ್ನು ನೋಡಿದವನೇ....    ''  ಸತ್ಯಾ, ಯಾವಾಗ ಬಂದ್ಯೋ ''   ಕ್ಷೀಣ ದನಿಯಲ್ಲಿ ಕೇಳಿದ.     ಸುಂದರ ಮಾತನಾಡುವುದನ್ನು  ಕೇಳಿ,   ನನ್ನ ಕಣ್ಣು ವದ್ದೆಯಾಯಿತು.  '' ಸುಂದ್ರು....    ಆ ದಿನ ಏನಾಯ್ತು ಅಂತ ನನಗೆ ಗೊತ್ತಿಲ್ಲ.    ನೀನು ಯಾವುದೋ ವಿಷಯವನ್ನು  ಮನಸ್ಸಿಗೆ  ಹಚ್ಚಿಕೊಂಡು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲವೆಂದು ಡಾಕ್ಟರ್  ಹೇಳಿದರು.      ಆ ದಿನ ಏನೋ ಅಚಾತುರ್ಯ ನಡೆದಿದೆ ಎಂದು ಈಗ ನನಗೆ ತಿಳಿಯುತ್ತಿದೆ.     ಆದರೆ ಈ ರೀತಿ ಒಬ್ಬನೇ ನೊಂದುಕೊಳ್ಳ ಬೇಡ ಕಣೋ.    ನಿಮ್ಮ ತಾಯಿ ಮುಖಾ ನೋಡೋ,  ಅವರು ನಿನ್ನ ಬಗ್ಗೆ ಏನೆಲ್ಲಾ ಆಸೆ,  ಕನಸುಗಳನ್ನು ಕಟ್ಟಿಕೊಂಡಿದ್ದಾರೆ.  ನಿನ್ನನ್ನು ಬಿಟ್ಟರೆ ಅವರಿಗೆ ಬೇರೆ ಯಾರಿದ್ದಾರೆ,  ನೀನೆ ಹೇಳು.    ಬೇಗ ಗುಣವಾಗು, ಮೊದಲಿನಂತೆ ನಗು ನಗುತ್ತಾ ಇರು ''  ಎಂದು ಅವನ ಕೈಯನ್ನು ಪ್ರೀತಿಯಿಂದ ಹಿಡಿದುಕೊಂಡು  ಹೇಳಿದೆ.  

ನನ್ನ ಮಾತನ್ನು ಕೇಳಿದ ಸುಂದರ,  ''  ಸತ್ಯಾ.... ಅಂಬರವನ್ನು ಚುಂಬಿಸುತ್ತೇನೆ ಅಂತ ಬಾಯಿ ಮಾತಿಗೆ ಹೇಳೋದಲ್ಲ...,..,  ಕನಸನ್ನು   ಕಾಣುವುದಕ್ಕೂ ಹೋಗಬಾರದು.   ಪ್ರೀತಿಸಲ್ಪಡುವುದಕ್ಕೆ ಬೇಕಾದ ಕ್ಷಮತೆ,  ಅಂದರೆ ಯೋಗ್ಯತೆ  ಇಲ್ಲದಿರುವ ನನ್ನಂತಹವರು  ಪ್ರೀತಿಸುವುದಕ್ಕೆ  ನಾಲಾಯಕ್ಕು.     ನನಗೆ ಯಾವ ಯೋಗ್ಯತೆ ಇದೆ....!  ಅಂದ ಚೆಂದವಿಲ್ಲ. ಮರಳು ಮಾಡೋ ಕಲೆಯಿಲ್ಲ.    ಆಸ್ತಿ ಅಂತಸ್ತುಗಳು ನನ್ನಿಂದ ಬಹುದೂರ.      ಒಳ್ಳೆಯತನ ಒಂದೇ ಉಪಯೋಗಕ್ಕೆ ಬರುವುದಿಲ್ಲ.    ಪ್ರೀತಿಯನ್ನು ಗಳಿಸುವುದು  ಎಷ್ಟು ಮುಖ್ಯವೋ ಅದೇ ರೀತಿ  ಪ್ರೀತಿಯನ್ನು ಧಕ್ಕಿಸಿಕೊಳ್ಳುವುದು  ಅಷ್ಟೇ ಮುಖ್ಯ ಕಣೋ.... ಸತ್ಯಾ.     ಕಣ್ಣಿಗೆ ಕಾಣಿಸದ  ವಿಧಿಯನ್ನು ಜರಿಯುವ  ಬದಲು,  ನನಗೆ ಆ ಅರ್ಹತೆ ಇಲ್ಲ ಅನ್ನುವುದೇ  ಸರಿ.  ಆದರೂ  ಈ ಪ್ರೀತಿಯ ಹೊಡೆತ ಇರುತ್ತದೆ  ನೋಡು...!  ಅದನ್ನು  ತಡೆದುಕೊಳ್ಳುವ   ಶಕ್ತಿ  ನನಗೆ ಇಲ್ಲಾ ಕಣೋ.     ನನ್ನ ತಲೆಯ ಮೇಲೆ ಆಗಿರುವ  ಘಾಯವನ್ನು ಡಾಕ್ಟರ್ ವಾಸಿಮಾಡಿದರು.    ಆದರೆ  ನನ್ನ ಹೃದಯದ  ಮೇಲೆ ಆಗಿರುವ ಘಾಯ ಯಾವ ಎಕ್ಷರೇ ಕಣ್ಣಿಗೂ ಕಾಣುವುದಿಲ್ಲ.    ಪಾಪ.....ಡಾಕ್ಟರ್   ಅದನ್ನು   ಹೇಗೆ ವಾಸಿಮಾಡುತ್ತಾರೆ  ನೀನೆ  ಹೇಳು.     ನಾನು ಸಾಯುವವರೆಗೂ ಅದು ಹಸಿ ಹಸಿಯಾಗೆ ಇರುತ್ತದೆ.   ಇದೊಂಥರಾ....ಆರದ ಘಾಯವಿದ್ದಂತೆ.      ಆದರೆ  ಸ್ನೇಹಾ ಈ ರೀತಿ ನನ್ನನ್ನು ಆಟವಾಡಿಸಬಾರದಿತ್ತು.   ಅವಳ ಮೇಲೆ ಈಗಲೂ ನನಗೆ ನಂಬಿಕೆ ಇದೆ.   ಆದ್ರೂ ......ಛೇ  ಎಲ್ಲಾ ಮೋಸ.  ಪ್ರೀತಿನೇ  ಮೋಸ.    ಪ್ರೇಮಿಸುವುದು  ಬರೀ    ಬೂಟಾಟಿಕೆ.    ಕಾಲ ಕಳೆಯಲು ಈ ರೀತಿಯಲ್ಲ ನಾಟಕ ವಾಡುತ್ತಾರೆ.    ನಮ್ಮಂಥವರ ಬದುಕನ್ನು ಚಿಂದಿ ಚಿಂದಿ ಮಾಡಿ ನೋಡಿ ನಗುತ್ತಾ ಇರುತ್ತಾರೆ.    ಪ್ರೀತಿ ಸಾಯಬೇಕು.    ಪ್ರೀತಿಮಾಡುವವರೆಲ್ಲ  ಸಾಯಬೇಕು.   ನಾನು ಪ್ರಿತಿಸುತ್ತಲೇ ಸಾಯಬೇಕು.   ಆದರೂ  ಅವಳು ಚನ್ನಾಗಿರಬೇಕು''.     ಎಂದು  ಕಣ್ಣನ್ನು ಒಂದು ರೀತಿ  ವಿಚಿತ್ರವಾಗಿ ತೇಲಿಸುತ್ತಾ  ಮಾತನಾಡುತಿದ್ದ .     ಆ ರೀತಿ ಹೇಳುತ್ತಿರುವಾಗಲೇ ಅವನ  ಮೈ ನಡುಗುವುದಕ್ಕೆ ಶುರುವಾಯಿತು.     ನಾನು ಗಾಬರಿಯಿಂದ ಓಡಿ ಹೋಗಿ,  ಸಿಸ್ಟರನ್ನು  ಕರೆದುಕೊಂಡು ಬಂದು  ತೋರಿಸಿದೆ.     ಆಕೆ  ಸುಂದರನಿಗೆ ಚುಚ್ಚು ಮದ್ದು ನೀಡಿ,   ಇವರು ವಿಪರೀತಿ ಎಗ್ಸೈಟ್ ಆಗಿದ್ದಾರೆ.     ಹೆಚ್ಚು ಮಾತನಾಡಿಸಬೇಡಿ,   ಡಿಸ್ಟರ್ಬ್ ಆಗುತ್ತಾರೆ.     ಹುಷಾರಾಗಿ ನೋಡಿಕೊಳ್ಳಿ,    ನಾಳೆ ಡಾಕ್ಟರ್ ಬಂದು ನೋಡುತ್ತಾರೆ ಎಂದು ಹೇಳಿ ಹೋದರು.   ಸ್ವಲ್ಪ ಸಮಯಕ್ಕೆಲ್ಲ  ಸುಂದರನು ನಿದ್ದೆಗೆ ಜಾರಿದನು.    ನಾನು ಸುಂದರನು ಹೇಳಿದ ವಿಚಾರವನ್ನು ಯೋಚಿಸುತ್ತಾ ಕುಳಿತುಕೊಂಡೆ.      
                                                                                                              
ಸುಂದರನ ತಾಯಿ ಲಗುಬಗೆಯಿಂದ ಮನೆಗೆ ಹೋದರು.    ಬಾಗಿಲ ಬಳಿ  ಒಂದು ದಪ್ಪ ಲಕೋಟೆ ಬಿದ್ದಿತ್ತು.     ಅದು ಸುಂದರನ ಹೆಸರಿಗೆ ಬಂದಂತಹ  ಪತ್ರವಾಗಿತ್ತು.   ಫ್ರಂ ಅಡ್ರೆಸ್ಸ್ ನೋಡಿದರು.    ಸ್ನೇಹ ತೀರ್ಥಹಳ್ಳಿ ಎಂದಿತ್ತು.


 ಆ ಪತ್ರವನ್ನು ನೋಡಿ ಸುಂದರನ ತಾಯಿ ಗೌರಮ್ಮನವರಿಗೆ ಆಶ್ಚರ್ಯವೇನು ಆಗಲಿಲ್ಲ.    ಏಕೆಂದರೆ  ಆ ವಿಳಾಸದಿಂದ ಈ ಹಿಂದೆ  ಪತ್ರಗಳು ಬರುತಿದ್ದವು.   ಸುಂದರನಿಲ್ಲದಿದ್ದಾಗ  ಅವನ ಹೆಸರಿಗೆ ಬಂದ ಪತ್ರಗಳನ್ನು   ತಾವು ಜೋಪಾನವಾಗಿ ಒಂದೆಡೆ ಇಟ್ಟು  ಅವನು ಬಂದಾಗ ನೀಡುತಿದ್ದರು.    ಹಾಗಾಗಿ    ಹೆಸರು ಹಾಗೂ ವಿಳಾಸ ಅವರ ನೆನಪಿನಲ್ಲಿತ್ತು.      ಆಸ್ಪತ್ರೆಗೆ ಹೋದಾಗ ಸುಂದರನಿಗೆ ಕೊಡೋಣವೆಂದು ಪತ್ರವನ್ನು ತಮ್ಮ  ಬ್ಯಾಗಿಗೆ ಹಾಕಿಕೊಂಡರು.     ಬಾಗಿಲು ತೆರೆದು ಬೇಗ ಬೇಗ ಮನೆಯನ್ನು ಶುಚಿಗೊಳಿಸಿ,    ಒಂದಷ್ಟು ಮಡಿ ಬಟ್ಟೆಗಳನ್ನು ತೆಗೆದುಕೊಂಡು,  ಹಾಗೆಯೇ ಬೀರುವಿನಲ್ಲಿದ್ದ ಸ್ವಲ್ಪ ಹಣವನ್ನು ತೆಗೆದುಕೊಂಡು    ಗೌರಮ್ಮನವರು   ಆಸ್ಪತ್ರೆಗೆ ಬರುವುದರಲ್ಲಿ ಸಂಜೆಯಾಗಿತ್ತು.    

ಸಿಸ್ಟರ್ ಕೊಟ್ಟ ಚುಚ್ಚುಮದ್ದಿಗೆ ದೀರ್ಘವಾಗಿ ನಿದ್ದೆ ಹೋಗಿದ್ದ ಸುಂದರ ಐದರ  ಸುಮಾರಿಗೆ ಎದ್ದು ಕುಳಿತು ನನ್ನನು ನೋಡಿ '' ಹಸಿವು ಕಣೋ'' ಎಂದನು.   ಈ ಹಿಂದೆ ಉದ್ವೇಗದಿಂದ ಕಿರುಚುತ್ತಾ ಪ್ರಜ್ಞೆ ಕಳೆದುಕೊಂಡಿದ್ದ ವಿಷಯ ಅವನಿಗೆ ಗೊತ್ತಿರಲಿಲ್ಲ   ಎಂಬುದು ಅವನ ಮಾತಿನಿಂದಲೇ  ತಿಳಿಯಿತು.      ನಾನು ಕ್ಯಾಂಟೀನ್ನಿಂದ ಇಡ್ಲಿ ತಂದು ಕೊಟ್ಟಿದ್ದೆ.    ಅದನ್ನು ತಿನ್ನುತ್ತಾ ಕುಳಿತಿದ್ದ.    ಅಷ್ಟರಲ್ಲಿ ಸುಂದರನ ತಾಯಿ ಬಂದವರೇ.....  ಕುಳಿತುಕೊಳ್ಳುತ್ತಾ  '' ಸತ್ಯಾ... ನಿನಗೆ ನಮ್ಮಿಂದ ತುಂಬಾ ತೊಂದರೆನಪ್ಪಾ''  ಎಂದರು.    ಹಾಗೆಲ್ಲ ಹೇಳಬೇಡಿ ಅಮ್ಮ,   ನಾನು ಸಹ ನಿಮ್ಮ ಮಗನಿದ್ದ ಹಾಗೆ ಅಲ್ಲವೇ... ಅದರಲ್ಲಿ ತೊಂದರೆ ಏನ್ ಬಂತು   ಬಿಡಿ ಎಂದೆ.     ಅದಕ್ಕವರು....'' ನಿನ್ನ ಉಪಕಾರವನ್ನು ಹೇಗೆ ತೀರಿಸಬೇಕೋ ಗೊತ್ತಿಲ್ಲಪ್ಪ''  ಎನ್ನುತ್ತಲೇ....ಮನೆಯಿಂದ ತಂದಿದ್ದ ಬಟ್ಟೆ ಹಾಗೂ ಇನ್ನಿತರ ಸಾಮಾನುಗಳನ್ನು  ಬ್ಯಾಗಿನಿಂದ ಹೊರತೆಗೆದು  ಬಾಕ್ಸಿನಲ್ಲಿ  ಹಾಕುತಿದ್ದರು.    ಅವುಗಳ  ಜೊತೆಯಲ್ಲಿಯೇ ಇದ್ದ ಪತ್ರವನ್ನು ''  ಸುಂದರ,  ನಿನ್ನ ಹೆಸರಿಗೆ ಈ ಪತ್ರ  ಬಂದಿತ್ತು ತಗೋಪ್ಪಾ'' .    ಎಂದು ಹೇಳಿ,  ಒಂದು ದಪ್ಪನೆ ಪೋಸ್ಟ್ ಕವರ್ ನೀಡಿದರು.    ತಕ್ಷಣ  ಆ ಪತ್ರವನ್ನು  ನಾನು ಕಿತ್ತುಕೊಂಡು ನೋಡಿದೆ.    ಅದು ಸ್ನೇಹ ಬರೆದ ಪತ್ರವಾಗಿತ್ತು.      ಆ ಪತ್ರದ ಮೇಲಿನ ಮುದ್ದು ಅಕ್ಷರಗಳು ಸುಂದರನಿಗೆ ಚಿರಪರಿಚಿತವಾಗಿದ್ದವು.   ಒಂದು ಕ್ಷಣ ಆ ಪತ್ರವನ್ನೇ ದಿಟ್ಟಿಸಿ ನೋಡತೊಡಗಿದ.  ಅವನು ನೋಡುತ್ತಿದ್ದ ರೀತಿಯನ್ನು ಕಂಡ ನನಗೆ ಗಾಬರಿಯಾಗತೊಡಗಿತು.  ಆದರೆ ಸುಂದರನು ಸಮಾಧಾನದಿಂದಲೇ ನನ್ನ ಕೈಯಲ್ಲಿದ್ದ ಪತ್ರವನ್ನು ಕಿತ್ತುಕೊಂಡು ನಿಧಾನಕ್ಕೆ ತೆರೆದನು.  ಅದೇ ಮುದ್ದು ಮುದ್ದು ಅಕ್ಷರಗಳು.  ಪತ್ರವನ್ನು ಬರೆದು ಸುಮಾರು ಒಂದು ವಾರವಗಿತ್ತೆಂಬುದು ಪತ್ರದ ಮೇಲಿನ ದಿನಾಂಕದಿಂದ ತಿಳಿಯುತ್ತಿತ್ತು.  
                                      +++++        +++++       +++++
            ನನ್ನೊಲವಿನ ಪ್ರೀತಿಯ ಗೆಳೆಯ ಸುಂದರ್.......
ಈ ಪತ್ರವನ್ನು ನೋಡುತಿದ್ದಂತೆ ನಿಮಗೆ ನನ್ನ ಮೇಲೆ ಅಸಹ್ಯ ಜಿಗುಪ್ಸೆ ಏಕಕಾಲದಲ್ಲಿ ಉಂಟಾಗಿರುತ್ತದೆಂದು ಬಲ್ಲೆ.  ಕನಿಕರಿಸಿ  ಒಮ್ಮೆ ಸಂಪೂರ್ಣವಾಗಿ ಈ ಪತ್ರವನ್ನು ಓದಿ ಕ್ಷಣ ಕಣ್ಣೀರಾಗಿ ಬಿಡಿ ಸಾಕು,   ಪಶ್ಚಾತಾಪದ ಬೆಂಕಿಯಲ್ಲಿ ಬೇಯ್ಯುತ್ತಿರುವ ನನ್ನ ಮನಸ್ಸಿಗೆ  ಸ್ವಲ್ಪವಾದರೂ  ಸಮಾಧಾನವಾಗಲಿ.     ನನ್ನ ಸ್ನೇಹಿತೆ ರಮ್ಯಾಳ ದುಡುಕು ಮಾತುಗಳಿಂದ  ನಿಮ್ಮ ಮನಸ್ಸಿನ ಮೇಲೆ ಆಗಿರುವ ಘಾಯವನ್ನು ಊಹಿಸಬಲ್ಲೆ.    ಆ  ತಕ್ಷಣಕ್ಕೆ ನಿಮ್ಮ ಹೃದಯ 
                                        
ಎಷ್ಟೊಂದು ವೇದನೆಯನ್ನು   ಅನುಭವಿಸಿರಬಹುದೆಂದು   ನಿಮ್ಮ ಪತ್ರಗಳ ಸಾಂಗತ್ಯದಿಂದ ಊಹಿಸಬಲ್ಲವಳಾಗಿದ್ದೇನೆ.        ಅವಳಿಂದ ವಿಷಯ ತಿಳಿದು  ನಿಮಗಾಗಿ ಉದ್ಯಾನವವನ್ನೆಲ್ಲ  ಹುಡುಕಾಡಿದೆ ನಿಮ್ಮ ಸುಳಿವು ಸಿಗಲಿಲ್ಲ.     ಮನಸ್ಸು ತಡೆಯದೆ,  ಮಾರನೇಯ  ದಿನ ಬೆಳಿಗ್ಗೆ  ನಿಮ್ಮ ಮನೆಯ ಬಳಿ ಹೋದರೆ... ಮನೆಗೆ ಬೀಗ ಹಾಕಿತ್ತು.    ನಿಮ್ಮನ್ನು ಅರಸಿಕೊಂಡು ಆಫೀಸಿನ ಬಳಿ ಹೋದರೆ,  ಅಲ್ಲಿಯು ನೀವು  ಕಾಣಸಿಗಲಿಲ್ಲ.   ನಿರಾಶೆಯಿಂದ ಅಲ್ಲಿಂದ ಹೊರಟೆ.    ಇನ್ನು ನಾನು   ಬೆಂಗಳೂರಿನಲ್ಲಿ ಇರಲಾಗಲಿಲ್ಲ.    ಆ ದಿನವೇ ಊರಿಗೆ ಹಿಂದಿರುಗಿದೆ.   ಈ ಪತ್ರ ಬರೆಯುವ ಹಿಂದಿನ ದಿನದವರೆಗೂ...ಪ್ರತಿ ದಿನವು ನಿಮ್ಮ ಮನೆಗೆ ಫೋನ್ ಮಾಡುತ್ತಿದ್ದೆ.  ಆದರೆ ಅತ್ತ ಕಡೆಯಿಂದ ರಿಂಗಣಿಸುವ ಶಬ್ದ ಮಾತ್ರ ಬರುತ್ತಿತ್ತು.    ಅಲ್ಲಿ ನಿಮ್ಮ ಸಿಹಿ ದನಿಯ ಹಾಡಿರಲಿಲ್ಲ. ನಿಮ್ಮಿಂದ ಯಾವ ಕ್ಷಣದಲ್ಲಾದರೂ ಫೋನ್ ಬರಬಹುದೆಂದು ಜಾತಕ ಪಕ್ಷಿಯಂತೆ ಫೋನ್ ಬಳಿಯೇ ಕುಳಿತುಕೊಂಡಿರುತ್ತಿದ್ದೆ.  
ಆದರೆ ನಿಮ್ಮ ಕರೆಯು ನನಗೆ ತಲುಪಲೇ ಇಲ್ಲ.    ನನ್ನ ಕೂಗು ನಿಮಗೆ ಕೇಳಿಸಲೇ ಇಲ್ಲ.    ನನ್ನ ಕೂಗು ನಿಮಗೆ

ಕೇಳಿಸಲೇ ಇಲ್ಲ. 

ನಿಮ್ಮಿಂದ ಪತ್ರವಾದರೂ ಬರಬಹುದೆಂಬ ನನ್ನ  ನಿರೀಕ್ಷೆ ಸುಳ್ಳಾಯಿತು.   ಈ ಒಂದು  ತಿಂಗಳಿನಿಂದಲೂ  ನಾನು ಅನುಭವಿಸಿದ ವೇದನೆಯನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ.    ಇದುವರೆವಿಗೂ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದನ್ನು ನೆನೆದಾಗ,    ನೀವು ನನ್ನ ಬದುಕಿನಿಂದ ಎಷ್ಟು ದೂರ ಜಾರಿಹೊಗಿದ್ದೀರೆಂಬ ಅರಿವಾಗುತ್ತಿದೆ. ನೀವು ನನ್ನ  ಬಗ್ಗೆ ಎಷ್ಟೊಂದು ಅಸಹ್ಯದ ಭಾವನೆಯನ್ನು ಹೊಂದಿರಬಹುದೆಂಬ ಕಲ್ಪನೆಯು  ನನ್ನನ್ನು ಜರ್ಜರಿತಗೊಳಿಸುತ್ತಿದೆ.    ಆದರೆ ನಿಮ್ಮ ಮೇಲೆ  ನನಗೀಗಲೂ  ಅದೇ  ಪ್ರೀತಿ.    ಅದು  ಸ್ವಲ್ಪವೂ ಮುಕ್ಕಾಗಿಲ್ಲ.   ಒಂದಿನಿತು ಬೇರೆಯಾಗಿಲ್ಲ.    ನಿದ್ದೆಯಿಲ್ಲದ ರಾತ್ರಿಗಳು ಅಂದಿನಿಂದಲೂ ನನ್ನ ಜೋತೆಗಾರರಾಗಿದ್ದಾರೆ.    ಬೇಸರ ಒಂಟಿತನಗಳು  ನನ್ನ ಪಾಲುದಾರರಂತಾಗಿ ಹೋಗಿವೆ.    ಹಗಲು ರಾತ್ರಿಗಳಲ್ಲಿನ  ವ್ಯತ್ಯಾಸ ತಿಳಿಯುವುದು.....ಬೆಳಕು ಹಾಗೂ ಕತ್ತಲಿನಿಂದ.    ಆದರೆ ನನಗೀಗ ಬೆಳಕು ಹಾಗೂ ಕತ್ತಲ ನಡುವಿನ ವ್ಯತ್ಯಾಸವೇ ತಿಳಿಯದಂತಾಗಿ ಹೋಗಿದೆ.   ಸುಂದರ್ ನಿಮಗೆ ನಗು ಬರಬಹುದು,    ನಿಮ್ಮ ಪ್ರೀತಿಯ ಕುರುಹಾಗಿ    ನೀವು ಈ ಹಿಂದೆ ನನಗೆ  ಬರೆದ ಪತ್ರಗಳು   ಈಗ ಸರಿ ರಾತ್ರಿಯಲ್ಲಿ ನನ್ನ ಸಂಗಾತಿಯಾಗುವುದುಂಟು,   ಪ್ರತಿ ಸಾರಿ ಓದುವಾಗಲು  ನನ್ನನ್ನು  ಕಾಡುವುದುಂಟು,   ಮತ್ತೆ ಮತ್ತೆ  ಕಣ್ಣೀರಾಗುವುದೂ ಉಂಟು.      ಪತ್ರಗಳಲ್ಲಿನ ಪ್ರತಿ ವಾಕ್ಯದ,  ಪ್ರತಿ ಪದಗಳು,  ಮರೆಯದ ನೆನಪುಗಳಾಗಿ ನನ್ನ ಹೃದಯದಲ್ಲಿ ಅಡಗಿಹೋಗಿವೆ.   


ಬದಲಾಗಿಹೊಗಿದ್ದೇನೆ  ಸುಂದರ್......!   ಬಸವಳಿದು ಹೋಗಿದ್ದೇನೆ.     ನಿಮ್ಮ ನೆನಪಲ್ಲಿ ಒಂದೊಂದು ಕ್ಷಣವನ್ನು  ಯುಗದಂತೆ ಕಳೆಯುತಿದ್ದೇನೆ.    ಇಲ್ಲಿ ಕೇಳಿ.....,  ನನ್ನ ಮುಖದ ಮೇಲಿನ ನೋವಿನ ನೆರಿಗೆಗಳು  ನನ್ನ ಅಪ್ಪನಿಗೆ ಸದ್ದಿಲ್ಲದೇ ತಿಳಿದುಹೋಗಿವೆ.     ನನ್ನ ಹೃದಯದಲ್ಲಿನ ಬೇಗೆ  ಅಪ್ಪನನ್ನು ತಾಕುತ್ತಿದೆ.   ಆದರೂ,   ನನ್ನ ತಂದೆ ನನ್ನನ್ನು ಪ್ರಶ್ನಿಸಲಾರರು.     ಏಕೆಂದರೆ..... ನನ್ನನು ಅವರು ತಾಯಿಯಂತೆ ಪ್ರೀತಿಸುತ್ತಾರೆ.   ನನ್ನ ಬೇಕು ಬೇಡಗಳಿಗಾಗಿ.....,  ನನ್ನ ಒಂದು ಮಾತಿಗಾಗಿ ಕಾದು ಕುಳಿತಿದ್ದಾರೆ.    ನಾನು ಇಷ್ಟಪಟ್ಟಿದ್ದನ್ನು ಅಪ್ಪ  ಯಾವತ್ತು ಇಲ್ಲಾ  ಅಂದವರಲ್ಲ.      ನನ್ನ ನಿಮ್ಮ  ಪ್ರೀತಿಯ ಬಗ್ಗೆ ರಮ್ಯಾಳಿಂದ ಎಲ್ಲವನ್ನು ಕೇಳಿ  ತಿಳಿದುಕೊಂಡಿದ್ದಾರೆ.    ಅಪ್ಪ,  ಅಮ್ಮನ ಬಳಿ ರಮ್ಯ  ಹೇಳಿದ ವಿಷಯವನ್ನು ಚರ್ಚಿಸುತಿದ್ದಾಗ ಕೇಳಿಸಿಕೊಂಡಿದ್ದೇನೆ.   ಸ್ನೇಹ ಇಷ್ಟ ಪಟ್ಟಿರುವ ಹುಡುಗನೊಂದಿಗೆ ಮದುವೆ ಮಾಡೋಣ,    ಮಗಳ  ಮನಸ್ಸನ್ನು ಯಾವುದೇ ಕಾರಣಕ್ಕೂ ನೋಯಿಸಬಾರದು ಎಂಬ ಅಪ್ಪನ ವಾತ್ಸಲ್ಯ ತುಂಬಿದ ಮಾತುಗಳನ್ನು ಕೇಳಿ  ಕರಗಿಹೋಗಿದ್ದೇನೆ.     ನಮ್ಮ  ಮದುವೆಯ   ಸಂಬಂಧ ಮಾತನಾಡಲು ನಿಮ್ಮ  ಮನೆಗೆ  ಹೋಗಿಬರೋಣ ಎಂದು ಹೇಳಿದ  ಅಪ್ಪನನ್ನು ತಡೆಹಿಡಿದಿದ್ದೇನೆ. ಏಕೆಂದರೆ....ನನ್ನೀ ಮುಖವನ್ನು ನಿಮಗೆ ಎಂದಿಗೂ ತೋರಿಸಬಾರದೆಂಬ ನಿರ್ಧಾರಕ್ಕೆ ಬಂದಿದ್ದೇನೆ.  ಅದೇನೆಂದರೆ....?    ನನ್ನನ್ನು ನಾನೇ ಕೊಂದುಕೊಳ್ಳುವುದು.........!!!,   ಹೌದು  ಸುಂದರ್,


ನಿಮ್ಮ ಮನಸ್ಸಿಗೆ ವಿನಾಕಾರಣ ನೋವನ್ನುಂಟು ಮಾಡಿದ ನನಗೆ ಶಿಕ್ಷೆ ಆಗಲೇಬೇಕು.        ಒಹ್..!  ಸುಂದರ್,  ನಾನು ಕಂಡ ಕನಸುಗಳಷ್ಟನ್ನು   ನಿಮ್ಮ ಮುಂದೆ ಚೆಲ್ಲಿ ಕುಳಿತುಬಿಟ್ಟಿದ್ದರೆ,    ಅವುಗಳನ್ನು ಆರಿಸಿಕೊಳ್ಳಲು  ನಿಮಗೆ ಸಮಯ ಸಿಗುತ್ತಿರಲಿಲ್ಲವೇನೋ.     ಕೈಗೆ ಎಟುಕದ ಕನಸುಗಳಲ್ಲ ಅವುಗಳು.    ನಿಮ್ಮ  ನಗುವಲ್ಲಿ ಅರಳಿ ಹೃದಯದಲ್ಲಿ ನೆಲೆ ನಿಲ್ಲುವಂತವುಗಳು.   ನಿಮಗೆ ಅರ್ಥವಾಗಲಿಲ್ಲ    ಅಲ್ಲವೇ.......?      ಕೇಳಿ......,   ನಿಮ್ಮ ಮಡಿಲಲ್ಲಿ ತಲೆಯನಿಸಿ  ಮಗುವಂತೆ ಮಲಗಿದ   ನನ್ನ.... ಮುಂಗುರುಳನ್ನು  ತೀಡುತ್ತಾ..,   ಹಣೆಗೊಂದು ಮುತ್ತನಿಟ್ಟು ಸವಿ ಮಾತುಗಳನ್ನಾಡುವ  ನಿಮಗೆ ಪರವಶಳಾಗುವ  ನನ್ನ  ಕನಸುಗಳು ಅದೆಷ್ಟೊಂದು ಚಂದವಿತ್ತು.     ಅದು  ನನ್ನಂತಹ  ಭಾವುಕ ಮನಸ್ಸಿನ ಹುಡುಗಿಯೊಬ್ಬಳ    ಸುಪ್ತ ಮನದಾಳದ ಆಸೆಯಾಗಿರುತ್ತದೆ ಅಂದರೆ ತಪ್ಪಲ್ಲ.     ನಾನು  ಕಂಡ ಕನಸುಗಳು ನನಸಾಗಬಹುದಾದ ಚಿಕ್ಕ ಚಿಕ್ಕ ಆಸೆಗಳಷ್ಟೇ.      ನಿಮ್ಮ ತೋಳನ್ನು  ಬಳಸಿ,  ನಿಮ್ಮ ಹೆಗಲ ಮೇಲೆ ನನ್ನ ತಲೆಯನಿಸಿ,  ಮುಸ್ಸಂಜೆಯ ತಂಪು ಹೊತ್ತಿನಲ್ಲಿ  ನಿಮ್ಮ ಜೊತೆ ಜೊತೆಯಾಗಿ ಹೆಜ್ಜೆ ಹಾಕುತ್ತಾ,  ನಮ್ಮ ಮುಂದಿನ ಜೀವನದ ಮಧುರ ಕ್ಷಣಗಳ ಬಗ್ಗೆ  ಮಾತನಾಡಿಕೊಂಡು ಸುತ್ತಾಡುವ ಕನಸೊಂದಿತ್ತು.  ಆದರೆ.....,  ಅದು ನನಸಾಗದೆ  ಕರಗಿಹೋಯಿತು.    

ಈಗ ನಾನು ಹೇಳುವ ವಿಷಯವನ್ನು ಕೇಳಿ  ನೀವು ನನ್ನನ್ನು ಹುಚ್ಚಿ  ಎಂದುಕೊಳ್ಳುತ್ತೀರೇನೋ,  ಆದರೂ ಹೇಳುತ್ತೇನೆ ಕೇಳಿ.    ನಾವು ಮದುವೆಯಾದ ಮೇಲೆ   ನಮಗೆ ಮಕ್ಕಳೇ ಬೇಡವೆಂಬ  ಹುಚ್ಚು ನಿರ್ಧಾರ....!   ಮಾಡಿದ್ದೆ.       ಏಕೆಂದರೆ....ನಮಗೆ ಮಕ್ಕಳಾದರೆ ನನ್ನ  ಪ್ರೀತಿ- ವಾತ್ಸಲ್ಯವನ್ನು,  ಮಕ್ಕಳೊಂದಿಗೂ  ಹಂಚಿಕೊಳ್ಳಬೇಕಾಗುತ್ತದೆ.     ಆದರೆ ನನ್ನೆಲ್ಲ ಪ್ರೀತಿ-ವಾತ್ಸಲ್ಯ ಅನುರಾಗ ನಿಮಗೆ ಮಾತ್ರ ಮೀಸಲಾಗಿರಬೇಕು.   ಒಂದು ವೇಳೆ ನಮಗೆ ಮಕ್ಕಳಾದರೆ    ಆಗ ನನ್ನ ಸಂಪೂರ್ಣವಾದ  ಪ್ರೀತಿಯಲ್ಲಿ ನಿಮಗೆ ಕೊರತೆಯಾಗುತ್ತದೆ.       ನನ್ನನ್ನು  ನೀವು ಸ್ವಾರ್ಥಿ ಅಂದುಕೊಳ್ಳಬಹುದು, ತೊಂದರೆ ಇಲ್ಲಾ.       ನಮ್ಮ ಬಾಳ  ಸಂಜೆಯವರೆಗೂ  ನನಗೆ ನೀವು ಮಗು,   ನಿಮಗೆ ನಾನು ಮಗುವಾಗಿರಬೇಕೆಂಬ ಸಣ್ಣ ಸ್ವಾರ್ಥ.       ಈಗ ಆ ಪ್ರಶ್ನೇನೆ ಇಲ್ಲ ನೋಡಿ ಎಂಥ ವಿಪರ್ಯಾಸ.   
  
 ಸುಂದರ್.... ಈ ಪ್ರೀತಿನೆ ಹಾಗೆ ನೋಡಿ.    

ಒಹ್ ....ಕ್ಷಮಿಸಿ, ನಾನು ಹೇಳಬೇಕಾದ ಮುಖ್ಯ ವಿಷಯವನ್ನು ಬಿಟ್ಟು  ಮತ್ತೆಲ್ಲಿಗೋ ಹೋಗಿದ್ದೆ.      ನನ್ನನ್ನು ನಾನೇ ಕೊಂದುಕೊಳ್ಳುವುದು  ಅಂದರೆ...., ದಿನವೂ ಮಾನಸಿಕವಾಗಿ ನಿಮ್ಮ ನೆನಪಲ್ಲೇ ನರಳಿ  ನರಳಿ ಸಾಯುವುದು.     ನನ್ನ ತಪ್ಪಿಗೆ ಪ್ರಾಯಶ್ಚಿತ್ತವಾಗಬೇಕು.     ಅಂದರೆ ನಾನು ಮದುವೆಯಾಗಬೇಕು.     ಆದರೆ ನನ್ನ ಮದುವೆ ನಿಮ್ಮೊಂದಿಗಲ್ಲ  ನನ್ನ ಅತ್ತೆಯ ಮಗನೊಂದಿಗೆ.  ಅವನಿಗೆ ನನ್ನ ಮೇಲೆ ತುಂಬಾನೇ ಆಸೆಯಿದೆ.     ಅವನ ಆ ಆಸೆಯ ಹಿಂದೆ ಸಾಕಷ್ಟು ಕನಸುಗಳಿವೆ.     ನನ್ನನ್ನು ಮದುವೆಯಾಗುವುದರಿಂದ  ನನ್ನ  ಜೊತೆ ಜೊತೆಯಲ್ಲಿ  ಬರುವ ಆಸ್ತಿಯ ಮೇಲೆ ಅವನಿಗೆ ತುಂಬಾನೇ ವ್ಯಾಮೋಹವಿದೆ.     ಅವನಿಗೆ ಈ ಪ್ರೀತಿ ಪ್ರೇಮಕ್ಕಿಂತ  ಹಣವೇ ಮುಖ್ಯವಾಗಿದೆ.      ನನಗೆ ವರನಾಗಲು  ಅವನೇ ಸೂಕ್ತವಾದ ವ್ಯಕ್ತಿ  ಎಂದು ತೀರ್ಮಾನಿಸಿದೆ.     ಅವನ ಬಳಿ ನನ್ನ ನಿಮ್ಮ ನಡುವಿನ ಪ್ರೀತಿಯ ವಿಷಯವನ್ನು ಬಚ್ಚಿಟ್ಟುಕೊಳ್ಳದೆ ಎಲ್ಲವನ್ನು   ಬಿಚ್ಚಿಟ್ಟಿದ್ದೇನೆ.     ಅದನ್ನು ಕೇಳಿ ಅವನೊಮ್ಮೆ  ನಕ್ಕಿದ್ದಾನೆ.     ಹಾಗೆಯೇ...., ನಾನು  ಎಂದಿಗೂ ನಿನ್ನನ್ನು ಪ್ರೀತಿಸುವುದಕ್ಕೆ ಸಾಧ್ಯವಾಗುವುದಿಲ್ಲ ಅಂದಾಗ,   ನನ್ನ    ಹೆಂಡತಿಯಾಗಿರು ಸಾಕು  ಎಂದೂ ಹೇಳಿದ್ದಾನೆ.     ಮಕ್ಕಳು ಬೇಡವೆಂಬ ನನ್ನ ಮಾತಿಗೆ, ನಾನೇ ಹೇಳಬೇಕೆಂದುಕೊಂಡಿದ್ದೆ ಎಂದು ಆಶ್ಚರ್ಯ ಹುಟ್ಟಿಸಿದ್ದಾನೆ.    ಅದಕ್ಕೆ ನನ್ನ ಸಮ್ಮತಿಯನ್ನು ಈಗಾಗಲೇ ಅವನಿಗೆ ನೀಡಿದ್ದೇನೆ.         ನನ್ನ ಮಾತನ್ನು ಕೇಳಿ ಅವನಾಗಲೇ,    ಮದುವೆಯಾದ ಬಳಿಕ ನನ್ನೊಂದಿಗೆ ಬರುವ  ವರೋಪಚಾರದ ಲೆಕ್ಕಾಚಾರದಲ್ಲಿ ನಿರತನಾಗಿದ್ದಾನೆ.   ಕಾಮನೆಗಳೇ ಇಲ್ಲದ ಈ ದೇಹದ ಬಗ್ಗೆ ಈಗ ನನಗೆ ಯಾವುದೇ  ರೀತಿಯ ಮೋಹ  ಉಳಿದಿಲ್ಲ.  
 ಈ ಮದುವೆಗೆ ನನ್ನ ತಂದೆಯನ್ನು ಕಾಡಿ ಬೇಡಿ ಒಪ್ಪಿಸಿದ್ದೇನೆ.     ಮದುವೆಯಾದ ಮೇಲೆ ನನ್ನ ಈ ದೇಹ ಅವನಿಗೆ ಅರ್ಪಿತವಾಗುವುದರಿಂದ ನನಗೆ ಯಾವುದೇ ನೋವು ಕಾಡುವುದಿಲ್ಲ.   ಏಕೆಂದರೆ    ಕೊನೆಗೂ ಒಬ್ಬರನೊಬ್ಬರು ನೋಡದೆ,  ಸಂಧಿಸಲಾರದೆ  ಒಬ್ಬರನೊಬ್ಬರು ಅಗಲುತಿದ್ದೇವೆ.   ಎಂಥಹ  ವಿಚಿತ್ರ ಪ್ರೇಮಿಗಳು ನಾವು.    ಈ ಪತ್ರವನ್ನು ನೀವು ಓದುವ ವೇಳೆಗಾಗಲೇ ನನ್ನ ಮದುವೆಯಾಗಿ  ಹೋಗಿರುತ್ತದೆ.  
    
ಆದರೆ ನನ್ನೀಹೃದಯ ಕೊನೆಯವರೆಗೂ ನಿಮಗೇ ಮೀಸಲು.       ನಾನು ಆತ್ಮವಂಚನೆ ಮಾಡಿಕೊಳ್ಳುತಿದ್ದೇನೆ,  ಮದುವೆಯಾಗುವವನಿಗೆ  ಮೋಸ ಮಾಡುತಿದ್ದೇನೆ  ಎಂಬ  ದ್ವಂದ್ವ ನಿಲುವಿನಿಂದ ಹೊರಬಂದಿದ್ದೇನೆ.    ನನ್ನ ನಿರ್ಧಾರ ದೃಢವಾಗಿದೆ.      ಆದ್ದರಿಂದ,  ನಿಮಗೆ ಮೀಸಲಿಟ್ಟಿರುವ  ನನ್ನ ಪ್ರೀತಿಯನ್ನು  ಯಾರೊಂದಿಗೂ ಹಂಚಿಕೊಳ್ಳಲು ಸಿದ್ಧಳಿಲ್ಲ.      ಆದ್ದರಿಂದಲೇ..... ನಾನು,   ಹಣದ ಹಿಂದೆ ಹುಚ್ಚು ಕುದುರೆಯಂತೆ ಓಡುವ ನನ್ನತ್ತೆಯ ಮಗನನ್ನು ವರಿಸಲು ನಿರ್ಧಾರ  ಮಾಡಿದ್ದು.     ಮನಸ್ಸೋಬ್ಬರಿಗೆ....,   ಈ  ನನ್ನ ದೇಹವನ್ನು  ಮತ್ತೊಬ್ಬರೊಂದಿಗೆ  ಹಂಚಿಕೊಳ್ಳುವ   ನನ್ನೀ   ಹುಚ್ಚುತನದ   ಬಗ್ಗೆ ನಿಮಗೆ ಈಗ ಅಸಹ್ಯ ಬರುತ್ತಿದೆಯಲ್ಲವೇ .....?      ಹೌದು,  ನಿಮಗೆ ನನ್ನ ಮೇಲೆ  ಅಸಹ್ಯ ಬರಲೇ ಬೇಕು.    ನನ್ನ ಬಗ್ಗೆ ನಿಮಗೆ ದ್ವೇಷ ತಿರಸ್ಕಾರ ಹುಟ್ಟಲೇ ಬೇಕು.  
  
ಸುಂದರ್....    ನೀವು ಇಷ್ಟು ದಿನಗಳಿಂದಲೂ  ನನ್ನ ಸಂಧಿಸಲು ಪ್ರಯತ್ನಿಸದಿರುವುದರಿಂದಲೇ ತಿಳಿಯುತ್ತಿದೆ.     ನಿಮ್ಮ ಹೃದಯಕ್ಕೆ   ನನ್ನಿಂದಾಗಿ ಯಾವ ಪರಿಯ ನೋವು  ವುಂಟಾಗಿರಬಹುದೆಂದು...!!     ಆದುದರಿಂದ  ನಿಮಗಾದ ನೋವಿಗೆ,  ನನ್ನ ಮೇಲೆ ನಾನೇ ತೆಗೆದುಕೊಳ್ಳುತ್ತಿರುವ ಪ್ರತಿಕಾರವಿದು.      ಇದು  ಸಾಕಾರವಾಗಬೇಕಾದರೆ  ನಾನು ಮದುವೆಯಾಗಲೇ ಬೇಕು.     ನೋಡಿ, ಇಬ್ಬರೂ ಬಹುವಾಗಿ ಪ್ರೀತಿಸಿ  
ಕೊನೆಗೂ ಒಬ್ಬರನೊಬ್ಬರು ನೋಡದೆ,  ಸಂಧಿಸಲಾರದೆ  ಒಬ್ಬರನೊಬ್ಬರು ಅಗಲುತಿದ್ದೇವೆ.   ಎಂಥಹ  ವಿಚಿತ್ರ ಪ್ರೇಮಿಗಳು ನಾವು.    ಈ ಪತ್ರವನ್ನು ನೀವು ಓದುವ ವೇಳೆಗಾಗಲೇ ನನ್ನ ಮದುವೆಯಾಗಿ  ಹೋಗಿರುತ್ತದೆ.  

 
ಲಾಲ್ ಬಾಗಿನಲ್ಲಿ ನಡೆದ ಘಟನೆ ಮಾತ್ರದಿಂದ ವಿಚಲಿಳಿತಳಾಗಿ,  ನಾನು ಈ ನಿರ್ಧಾರಕ್ಕೆ ಬಂದುದಲ್ಲ.     ಅಲ್ಲಿಂದ ಬಂದ ಮೇಲೆ  ಈ ಒಂದು  ತಿಂಗಳು ನಾನು ಅನುಭವಿಸಿದ ಮಾನಸಿಕ ವೇದನೆ ಇದೆಯೆಲ್ಲ,    ಅದು ನನ್ನ ಎಲ್ಲಾ ಅಸೆ ಆಕಾಂಕ್ಷೆಗಳನ್ನು,    ಪ್ರೀತಿ ವಿಶ್ವಾಸಗಳನ್ನು ಸುಟ್ಟುಹಾಕಿದೆ.      ನನ್ನ ಬಚ್ಚಿಟ್ಟ ಕನಸುಗಳಿಗೆ ಕಿಚ್ಚಿಟ್ಟು ನಗುವ ವಿಧಿಯೊಂದೆಡೆಯಾದರೆ..... ನಿಮ್ಮ  ಪ್ರತಿ ಕ್ಷಣದ ನೆನಪು,   ನನ್ನನ್ನು ಹಿಂಡುತ್ತಿದೆ.    ಇಷ್ಟು ದಿನಗಳಲ್ಲಿ ನಿಮ್ಮಿಂದ ಒಂದೇ ಒಂದು ಸಂದೇಶ ಬಂದಿದ್ದರು ನನ್ನ ನಿರ್ಧಾರವನ್ನು ಬದಲಾಯಿಸಿಕೊಳ್ಳುತಿದ್ದೆನೇನೋ.    ನಾನು ನಿಮಗೆ ವಂಚಿಸಿದ್ದೇನೆಂಬ ಭಾವನೆ ನಿಮ್ಮ ಮನದ ತಳದಲ್ಲಿ ಕುಳಿತುಬಿಟ್ಟಿದೆ.   ಆದ್ದರಿಂದಲೇ  ನೀವು ನನ್ನನು ದ್ವೇಷಿಸುತಿದ್ದೀರಿ.    ನಿಮ್ಮ ಸ್ಥಳದಲ್ಲಿ ಬೇರಾವುದೇ ಸ್ವಾಭಿಮಾನದ ಗಂಡುಸರು ಇದ್ದಿದ್ದರೆ ಅದನ್ನೇ ಮಾಡುತಿದ್ದರು.  
  
ಆದರೂ....ನಿಮ್ಮ ಬಗ್ಗೆ  ನನಗಿದ್ದ ಪ್ರೀತಿ ಒಂದಿನಿತು ಕರಗಿಲ್ಲ.     ಕರಗಲಾರದು.    ಎಲ್ಲರಂತಲ್ಲ ನಾನು.   ಅದೇ ನೀವು ಫೋನಿನಲ್ಲಿ ಪ್ರೀತಿಯಿಂದ ಹೇಳುತಿದ್ದರಲ್ಲ....., ಮುದ್ದುಮನಸ್ಸಿನ ಪೆದ್ದು ಹುಡುಗಿ ಎಂದು,   ಅದೇ ಪೆದ್ದು ಹುಡುಗಿ ನಾನು.      ಆದ್ದರಿಂದ  ಇನ್ನು ಮುಂದೆ ನಿಮಗೆ ನನ್ನೀ ಮುಖವನ್ನು ತೋರಿಸುವ  ಹಂಬಲವಿಲ್ಲ.   ಜನುಮಾಂತರವೇನಾದರು ಇದ್ದಲ್ಲಿ  ಮರುಜನ್ಮದಲ್ಲಿ ನಿಮ್ಮ ಸತಿಯಾಗುವ ನನ್ನ  ಆಸೆಗೆ,  ಕಂಡಿತ ನೀವು  ಸಮ್ಮತಿಸುತ್ತೀರಲ್ಲಾ.....?    
  
ಈ ಪತ್ರವನ್ನು ಮುಗಿಸಲೇ ಗೆಳೆಯಾ.....,  ನನ್ನೀ ಹೃದಯದ ಬೇಗೆಯಿಂದ ಕಣ್ಣ ಹನಿಗಳು ಜಾರಿ,     ಮರುಗಿ  ಮಸುಕಾಗುತಿವೆ ಅಕ್ಷರಗಳು.    ಇನ್ನು ಬರೆಯಲಾರೆನೆಂದು ಸೋಲುತ್ತಿವೆ ನನ್ನ ಬೆರಳುಗಳು.    ಹುಡಕದಿರಿ ನನ್ನ. ಹುಡುಕಿದರೆ ನನ್ನಾಣೆ.   ನಿಮ್ಮ ಬಾಳಲ್ಲಿ ಕವಿತೆಯಾಗಿ ಬಂದು ಕತೆಯಾಗಿ ಹೋದೆ ಗೆಳೆಯನೇ.  
   

ನಾನು ಬದುಕಿರುವಷ್ಟು ದಿನ,  ಬದುಕಿರುವಷ್ಟು ಕ್ಷಣಗಳನ್ನು ನಿಮ್ಮ  ನೆನಪಲ್ಲೇ ಕಳೆದುಬಿಡುತ್ತೇನೆ.  ಆದರೆ.... ಆದರೆ ....ನನಗಾಗಿ ಕನಿಕರಿಸಿ  ಕಣ್ಣ ಹನಿಯೊಂದನ್ನು ಜಾರಿಸಿ ಬಿಡಿ ಸಾಕು.     ನನ್ನ ಪಾಪವೆಲ್ಲಾವು  ಕರಗಿ ಹೋಗಲಿ.     ವಿದಾಯ ಗೆಳೆಯನೇ........
  
                         ನಿಮ್ಮ  ಪ್ರೀತಿಯ ಮುದ್ದು  ಮನಸ್ಸಿನ ಪೆದ್ದು ಹುಡುಗಿ  ಸ್ನೇಹಾ,,,,,

     

ಪತ್ರವನ್ನು ಓದುತಿದ್ದಂತೆ  ಸುಂದರನ ಕಣ್ಣಿಂದ ನೀರು  ಧಾರಾಕಾರವಾಗಿ  ಹರಿಯತೊಡಗಿತು.   ಓದುತ್ತಾ ಓದುತ್ತಾ ಕಲ್ಲು ಕರಗುವಂತೆ ರೋದಿಸತೊಡಗಿದ.      ನನ್ನ ಪ್ರೀತಿಗೆ ವಿಧಿಯೇ ವಿಲ್ಲನ್.   ಸ್ನೇಹಾ.....ಸ್ನೇಹಾ ಎಂದು ಕೂಗುತ್ತಾ  ಹಾಗೆ ಕೆಳಗೆ ಬಿದ್ದುಹೋದ ಸುಂದರನನ್ನು   ಮಂಚದ ಮೇಲೆತ್ತಿ  ಮಲಗಿಸಿದೆವು.   
              
ಅಂದಿನಿಂದಲೂ ಈ ವರೆಗೂ ಸುಂದರನಿಂದ ಮಾತಿಲ್ಲ ಕಥೆಯಿಲ್ಲ.    ಈಗಲೂ ಸ್ನೇಹಾಳನ್ನು ಪ್ರೀತಿಸುತ್ತಲೇ ಇದ್ದಾನೆ.     ಅವಳನ್ನು ಮತ್ತೆ ಕಾಣಬೇಕೆಂಬ ಬಯಕೆ ಅವನಿಗೆಂದು ಬರಲೇ ಇಲ್ಲ. ಏಕೆಂದರೆ....ಮೊದಲಿಗಿಂತ ಹೆಚ್ಚಿನ ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದಾನೆ.     ಆಸ್ಪತ್ರೆಯ ಬೆಡ್ಡಿನ ಮೇಲೆ ಮೌನವಾಗಿ ಬಿಕ್ಕುತಿದ್ದಾನೆ.  ಆ ಬಿಕ್ಕುಗಳ  ಹಿಂದಿನ ಸತ್ಯ ನನಗಲ್ಲದೆ ಮತ್ತಾರಿಗೂ ತಿಳಿದಿಲ್ಲ.    ಶ್.....!   ಅವನ ಬಗ್ಗೆ ಮರುಕಪಡದಿರಿ...,   ತನ್ನ ಬಗ್ಗೆ ಬೇರೆಯವರು ಕನಿಕರ ತೋರಲು ಬಂದರೆ ಮತ್ತೂ  ನೊಂದುಕೊಳ್ಳುತ್ತಾನೆ.    ನಿಮಗೂ ಕೇಳಿಸುತ್ತಿದೆಯಲ್ಲವೇ, ಅವನ ಬಿಕ್ಕಳಿಕೆಯ ನಡುವೆ ನುಸುಳಿ ಬರುತ್ತಿರುವ    ಒಂದೇ ಶಬ್ದ  ಅದು ಸ್ನೇಹಾ..... ಸ್ನೇಹಾ  ... ಸ್ನೇಹಾ ಎಂಬ ಎರಡಕ್ಷರ.......?
 ಪ್ರೀತಿಯಿಂದ ಸತೀಶ್ ರಾಮನಗರ.