ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Monday, May 28, 2012

-- '' ನನ್ನೀ ಪ್ರಣತಿ '' --

ಈ ಸಂಜೆಗತ್ತಲ  ತಂಪಿಂದು
ಸುಡುಕೆಂಡ  ಈ ಹೃದಯಕೆ,
ತೆರೆಸರಿಸಿ ಹೊರಚಾಚಿ
ಸಿಹಿನೆನಕೆ ಕಣ್ಣೀರಂತೆ ಒಸರಿ
ಜಿಗುಟಾಯ್ತು ಭಾವ.

ಹಿಡಿಯಷ್ಟು ಪ್ರೀತಿ
ಹೊರಲಾರದಷ್ಟು ಭಾರ
ಪಿಸುಮಾತಿನ ಲಹರಿ
ಬಿಸಿಯುಸಿರಲು ತಂಪೆನಿಸುವ ಪದೆಪು,
ಪ್ರಮೋದದಿ ಇದೋ ನನ್ನೀ ಪ್ರಣತಿ.

ಬಚ್ಚಿಟ್ಟ ಬಯಕೆಯ ಕಾಮವಲ್ಲ
ಬೆಚ್ಚನೆಯ ಹೊದಿಕೆಯಲಿ
ಮಡಿಚಿಟ್ಟ ಪ್ರೇಮ ನಮ್ಮದು
ಅವಳ ಕಣ್ಣೊಳಗಿನ ಬಿಂಬ ನಾನು 
ಮರೆತು ಕಣ್ಣ ಹನಿ ಜಾರಿಸಲವಳು.

ಕಾಯುವೆನು.....,
ಕಾಯುತಲೇ ಕಾಲನ 
ಅಪ್ಪಿದರು ಸರಿಯೇ....,
ಒಪ್ಪಿಸಿಕೊಂಡ ಹೃದಯವನು 
ಮತ್ತೆ ಕೇಳನೆಂದು...!!

ಹಳೆ ನೆನಪಿನ 
ಹೊಸ ಭಾಷ್ಯ 
ಬರೆದಿಡುವೆ ನಲ್ಲೆಗಾಗಿ 
ಮುಂದೊಂದು ದಿನ 
ಹೊರಬರಲಿ   ಕವಿತೆಯಾಗಿ...!!

Thursday, May 24, 2012

'' ಪ್ರತೀಕ್ಷೆ ''


ಯಮುನೆ ಹರಿಯುತಿದ್ದಾಳೆ 
ನಿಶ್ಯಬ್ದವಾಗಿ, 
ಬಳುಕಿ  ಹರಿಯುವ ಲಾಸ್ಯವಿಲ್ಲ...,
ಕಲರವ ಕೊರಗಾಗಿದೆ.

ದಡದ ಮೇಲಿನ ಕದಂಬ ಮರ 
ಕದಲದೆ ನಿಂತಿದೆ, 
ಸೂಸದೆ ಪರಿಮಳವ 
ಮೋಹನ ಕೊಟ್ಟ ಮಾತಿಗೆ ಸಾಕ್ಷಿಯಾಗಿ,


ಬೆಳದಿಂಗಳು ಮಂಕಾಗಿದೆ 
ಬೇಗೆಯಿಂದ, 
ರಾಧೆಯ ಹೃದಯದಿ ಅರಳಿದ  ಪ್ರೀತಿಗೆ
ಕಾರಣ ನಾನಾದೆನೆಂದು....!  

ಹಣತೆ ಹಚ್ಚಿಟ್ಟು ಕಾಯುತಿಹಳು ರಾಧೆ
ಮೋಹನನಿಗಾಗಿ, 
ಕಣ್ಣೀರ ಹನಿ ಹೊಳೆಯಾಗಿ ಹರಿಸಿ 
ವಿರಹದಿಂದ....,

ಅದೆಷ್ಟೋ ಹುಣ್ಣಿಮೆ ಬಂದವು 
ಕರಗಿ ಹೋದವು ಕಾರಿರುಳಲ್ಲಿ 
ಮುರಳಿ ಮೋಹನ ಮಾತುಕೊಟ್ಟಿದ್ದಾನೆ
 '' ಬಂದೇ ಬರುತ್ತೇನೆಂದು ''
ಯಾರಾದರು ಕಂಡಿರ, ಗೋಪಾಲನ....?
ರಾಧೆ ಈಗಲೂ ಕಾಯುತಿಹಳು 
ನೋಡಿರಲ್ಲಿ....,  ಕದಂಬದ ಮರಕ್ಕೊರಗಿ  ಕುಳಿತಿಹಳು.....!!

Tuesday, May 22, 2012

ಮೇಘ ಸಂದೇಶ......


ದೂರ ದೂರಕೆ ತೇಲಿ ಸಾಗುತಿರುವ ಮೋಡಗಳೇ....,
ನನ್ನ ವಿನಂತಿಯನ್ನೊಮ್ಮೆ ಆಲಿಸಿ ಮುಂದೆ ಸಾಗಲಾರಿರ....?
ತಡೆದು ನಿಲ್ಲಿಸಿದ್ದಕ್ಕೆ ಕ್ಷಮೆಯಿರಲಿ.....,

ನನ್ನವಳು, 
ಬಾನಲ್ಲಿ ಹೊಳೆವ ನಕ್ಷತ್ರವಾಗಿದ್ದಳು 
ಅದೇಕೊ...! ಈ ನಡುವೆ ಮಿನುಗಲು ಮರೆತಂತಿಹಳು 
ಕರಿಮುಗಿಲಲ್ಲಿ  ಮಿಂಚುವ ಮಿಸುನಿಯಂತಿದ್ದಳು 
ಆದರೀಗ  ಕನಸಿಗೂ ಬರಲಾರದಷ್ಟು ಬದಲಾಗಿಹಳು 

ಈ ನನ್ನ ಮನಸನ್ನು ಮರೆತು ಇರುಳಲ್ಲಿ  ಕಳೆ-
ದು ಹೋದ ಬೆಳದಿಂಗಳ ಬಾಲೆ...., ಅವಳು...!
ನನ್ನೀ ದೇಹವೆಂಬ ಕೊರಡು ಇಲ್ಲಿದೆ 
ಹೃದಯ ಮಾತ್ರ ಅವಳಲ್ಲಿದೆ...! 
ಇನ್ನು ಕಾಯುವ ತಾಳ್ಮೆ  ನನಗಿಲ್ಲ...,

ನೀವು ಸಾಗುವ ಹಾದಿಯಲ್ಲಿ ನನ್ನ 
ತಾರೆಯನ್ನೇನಾದರು ಕಂಡರೆ...
ಕನಿಕರಿಸಿ ಅರುಹಿಬಿಡಿ,
'' ಅಲ್ಲಿ ಕನಸೊಂದು ಕಾಯುತಿದೆ ನಿನಗಾಗಿ 
  ನೀ ಇನ್ನೂ   ಕಾಣದಾದರೆ ಅವನ ಸಾವು ನಿನಗಾಗಿ '' 
ಎನ್ನುತ ಮುಂದೆ ಸಾಗಿ ಹೋಗಿ ಬಂಧುಗಳೇ.....





Monday, May 21, 2012

ನನ್ನವಳು....

ಒಮ್ಮೊಮ್ಮೆ ಬೆಳ್ಳಂ ಬೆಳಿಗ್ಗೆ 
ಮಗದೊಮ್ಮೆ  ಇರುಳು ಕವಿದರೆ ಸಾಕು 
ಮುತ್ತುವವು ಮೊಲದ ಹಿಂಡಂತೆ...,
ಹೊಸ ಬಣ್ಣ ಬಳಿದಂತಹ ಕನಸುಗಳು 

ಅವಳ ಕನಸಿಗೆ ನಾನು ಲಗ್ಗೆ-
ಯಿಡುತ್ತೇನೋ ಇಲ್ಲವೋ ಗೊತ್ತಿಲ್ಲ 
ಅವಳು ಮಾತ್ರ ಕಾಡಿಬಿಡುವಳು
ನನ್ನೆಲ್ಲ ಕನಸುಗಳಲ್ಲೂ....!

ಕಣ್ಣರೆಪ್ಪೆಯ ಹಿಂದಿನ ಹಾಡಾಗುವಳು
ಇವಳು...., ನಾ ಬಯಸಿದಾಗಲೆಲ್ಲ 
ಗುನುಗುನುಗಿ ಮಾಯವಾಗುವ
ಜಿಂಕೆಯಂತವಳು...., ನಾ 
ಕಣ್ಣುಬಿಟ್ಟೊಡನೆ ಎದಿರಲ್ಲೇ 
ಹಾಜರಾಗುವಳು.....!

ಮುಂಗುರಳನು ಹಿಂದಕ್ಕೆ ತಳ್ಳಿ 
ಹಣೆಯ ಮೇಲೊಂದು ಹೂ ಮುತ್ತನ್ನಿತ್ತು 
ಬಿಸಿ ಬಿಸಿ ಸುವಾಸನೆಯ ಕಾಫಿ-
ಯೊಂದಿಗೆ ಬೆಳಗಾಗುವಳು 
ಆ ದಿನವೆಲ್ಲ ಬೆಳಕಾಗುವಳು 
ಇವಳು ನನ್ನವಳು....,

Sunday, May 20, 2012

-------ಅರ್ಪಣೆ------


ತನುವನ್ನೇ ಬಸಿದು
ಶೇಖರಿಸಿಟ್ಟ ಮಕರಂದವನು....!

ಬಂದ ದುಂಬಿಯೊಂದು
ಹನಿ ಬಿಡದೆ ಹೀರಿದರೂ....!

ತನ್ನೊಲವು ಅರ್ಪಿತವಾಯ್ತೆಂದು
ಧನ್ಯವಾಯ್ತು
ಹೂ
ಅರ್ಪಣೆಯಲ್ಲಿ...!! 
( ಹಿಂದೊಮ್ಮೆ ಬರೆದಿದ್ದೆ ಅದನ್ನೇ ತಿದ್ದಿ ಬರೆದಿದ್ದೇನೆ.)

Sunday, May 13, 2012

==== ಭಾವತೀರಯಾನ===



ನಸುನಾಚಿ ಭಾವ 
ಮುಖದಲ್ಲಿ ಹರಡಿ 
ಕೋಲ್ಮಿಂಚು ತುಟಿಯಂಚಲಿ...,
ಇಬ್ಬನಿಯಲಿ ತೋಯ್ದು 
ಬೆಳಗಿನಲಿ ಅರಳಿದ 
ನಗೆ ಮೊಲ್ಲೆ ನೀನು. 

ಎಸಳಿನ ಮೇಲೆ ಬಿದ್ದ 
ಹಿಮ ಬಿಂದು ನೀನೆಂದು 
ಚಪ್ಪರಿಸೆ  ನಾನು...!
ಹನಿಯಾಯ್ತು ಸ್ವಾತಿ ಮುತ್ತು...!!
ಪ್ರತಿ ಜಿನುಗು ಸವಿ ಒರೆತ 
ಪ್ರೇಮದದ್ಭುತ ಭಾವ...!
ತನುವಾಯ್ತು ಪ್ರೀತಿ ಹೀರಿ 
ಸಮ್ಮೋಹದಾನಂದ ಚಂದ..,

ಬೆಳಕಿನೊಳಗಿನ ತೇಜ 
ಬೀರದಿರಲಿಂದು ಉರಿಗಣ್ಣ...! 
ಬೆಳಕ ಹೀರಿ ತಂಪ ಪ್ರತಿಪಲಿಸೋ 
ಚಂದಿರ ನನಗಿಂದು ಅಣ್ಣ...!
ನಲುಗದಿರಲಿ ನಗುವು 
ಮುಡಿಪಾಗಿರಲಿ ಒಲವು 
ಒಪ್ಪಿಕೊಂಡ ಮೇಲೆ 
ಅಪ್ಪಿಕೊಂಡ ಹೃದಯವ 
ಬಿಡಲಾರೆನೆಂದೆಂದು ನಂಬು ನನ್ನೊಲವೇ......
( ಪ್ರೀತಿಯಿಂದ  ಸತೀಶ್ ರಾಮನಗರ )


Wednesday, May 9, 2012

ಹಾಗೆ ಸುಮ್ಮನೆ....(ನಗೆ ಮಲ್ಲಿಗೆ)


ಹೆಂಡತಿ---
ಏನ್ರೀ...., ಪಕ್ಕದ್ದ್ ಮನೆ ಪದ್ದುನ ಹಾಗ್ 
ನೋಡ್ತಾಯಿದ್ದೀರ ....?


ಗಂಡ---
ನೆನ್ನೆ ರಾತ್ರಿ ಆಕೆ ನನ್ನ ಕನಸಲ್ಲಿ ಬಂದಂಗಿತ್ತು. 
ಅದು ಪದ್ದುನ ಇಲ್ಲಾ ಆಚೆ ಮನೆ ನೀಲುನಾ
ಎಂದು ನೋಡ್ತಿದ್ದೆ ಕಣೆ.  

ಹೆಂಡತಿ---
ಹಾಗಾ......!!!
ನನಗೂ ನೆನ್ನೆ ರಾತ್ರಿ ಒಂದು ಕನಸು ಬಿತ್ತು ಕಣ್ರೀ,  ಅದ್ರಲ್ಲಿ ಪದ್ದು ಗಂಡ ಬಂದಿದ್ದ್ರು.....!!!
ಬಂದು ಏನ್ ಮಾಡಿದ್ರು ಗೊತ್ತಾ......?

ಗಂಡ---
ಆ.... ಹೌದೇನೆ....!!
ಬಂದು ಏನೇ ಮಾಡಿದ...!!

ಹೆಂಡತಿ--- 
ನಿನ್ನ ಗಂಡ ಇತ್ತೀಚೆಗೆ ನನ್ನ ಮನೆ ಕಡೇನೆ ನೋಡ್ತಿರ್ತಾನೆ 
ಹುಷಾರಾಗಿರೋಕೆ ಹೇಳು.  
ಇಲ್ಲಾ ಅಂದ್ರೆ ಅವನ್ ಕಣ್ಣ ಕಿತ್ತಾಕ್ ಬಿಡ್ತೀನಿ  ಅಂದ್ರು ಕಣ್ರೀ...:)))))

Sunday, May 6, 2012

---- ಮಧುಮೇಹ -----



ನಲ್ಲೆ..., ನಿನ್ನ 
ಬಿಗಿದಪ್ಪಿದೊಡೆನೆ ಸಿಹಿಮುತ್ತುಗಳ 
ರಾಶಿಯನ್ನೇ ನೀಡುತ್ತಿದೆ ನೀನು.
ಅದೆಷ್ಟೊಂದು  ಸಿಹಿ ಅಡಗಿರುತ್ತಿತ್ತು
ನಿನ್ನ ಮುತ್ತಿನಲಿ.....!!

ಆದರೀಗ ಕೊಡುವ ಮುತ್ತುಗಳಿಗೂ 
ಲೆಕ್ಕವಿಡುತ್ತೀಯಲ್ಲ,
ಜೀನಳಾಗಬೇಡ
ಮತ್ತಷ್ಟು ಕರುಣಿಸಲಾರೆಯ.....?

ನಾನೇನು ಮಾಡಲಿ ನಲ್ಲ
ಹೆಚ್ಚು ಸಿಹಿ ತಿನಿಸಬೇಡಿರೆಂದು
ವೈದ್ಯರು ತಿಳಿಸಿದ್ದಾರಲ್ಲ.....!!!

Thursday, May 3, 2012

ಹಾಗೆ ಸುಮ್ಮನೆ...... ಟೈಮ್ ಪಾಸ್ -----




ಶಿವೂ  =  ಏನೋ ರಾಮ, ಅಲ್ಲಿ ಹೋಗ್ತಿದ್ದಾಳಲ್ಲ ಮೇನಕ ಅವಳು ನಿನಗೆ  
             ಪರಿಚಯನಾ....!!
ರಾಮ =  ಹೌದು ಕಣೋ ಶಿವೂ.  ಅವಳನ್ನು ನಾನು ತುಂಬಾ ಪ್ರಿತಿಸ್ತಿದ್ದೀನಿ 
             ಅವಳು ಅಷ್ಟೇ ನನ್ನ ತುಂಬಾ ಪ್ರೀತಿಸ್ತಿದ್ದಾಳೆ.  
ಶಿವೂ =   ಮತ್ತೆ, ರವಿಗೂ - ಗಿರಿಗೂ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿದ್ದೀನಿ 
             ಅಂತ ಹೇಳಿದ್ಲಲ್ಲೋ....!
ರಾಮ =  ಛೇ....!  ಹಾಗಾದ್ರೆ ಈಗ ರವಿಯಲ್ಲಿದ್ದನೋ..?
ಶಿವೂ  =  ಹುಚ್ಚಾಸ್ಪತ್ರೆಲೀ .....!!
ರಾಮ =  ಏನಾಗಿತ್ತೋ...?
ಶಿವೂ  =  '' ಆಘಾತ ''..
ರಾಮ =  ಹಾಗಾದ್ರೆ, ಈಗ ಗಿರಿ ಎಲ್ಲಿದ್ದಾನೋ...?
ಶಿವೂ  =  ''  ಬಾರಲ್ಲಿ '' 
ರಾಮ =  ಏನಾಗಿತ್ತೋ...?  
ಶಿವೂ  =  '' ಮರ್ಮಾಘಾತ '' 
ರಾಮ =  ಅಯ್ಯೋ..! ಹಾಗಾದ್ರೆ ನನಗೇನಾಗುತ್ತೋ...?
ಶಿವೂ  =  '' ಹೃದಯಾಘಾತ'' 
ರಾಮ =  ಅಹ್......

--- ಕನಸು ---

ಬೆಳದಿಂಗಳ 
ಬಾನಲ್ಲಿ 
ನಕ್ಷತ್ರದಂತೆ
ಹೊಳೆಯುತ್ತಿದ್ದ 
ನಿನ್ನ 
ಮುತ್ತಿಡಲು 
ಬಂದೆ...

ಆದರೆ 
ನಕ್ಷತ್ರಿಕನಂತೆ
ಅಡ್ಡ 
ಬರಬೇಕೆ..?
ನಿನ್ನ 
ಅಪ್ಪಾ..!!!

-- ಮನವಿ --


ನನ್ನೀ 
ಹೃದಯದಲ್ಲಿ 
ಉಕ್ಕಿ ಹರಿಯುತ್ತಿರುವ 
ನಿನ್ನೀ ಪ್ರೀತಿಯ 
ಜಲಪಾತಕ್ಕೆ 
ಅಣೆಕಟ್ಟು
ಕಟ್ಟಲು....

ನೀ 
ಕೊಟ್ಟ ಅಷ್ಟೂ
ಮುತ್ತುಗಳನ್ನು 
ಬಳಸಿದ್ದೇನೆ 
ಸಾಲದಾಗಿವೆ 
ಮತ್ತಷ್ಟು 
ಕರುಣಿಸಲಾರೆಯ
ಗೆಳತಿ....

--- ಹೊಂಬೆಳಕು ---


ಭರವಸೆಯಲಿ 
ಬಾಗಿಲು 
ತೆರೆದಿದೆ 
ನನ್ನೀಹೃದಯ
ನೋಡು 
ಗೆಳತಿ  

ಒಳಹೊಕ್ಕು 
ಸ್ಥಾಪಿತವಾಗಿ 
ಧಮನಿ ಧಮನಿಯಲ್ಲಿ 
ಒಂದಾಗಿ 
ಬೆರೆತುಬಿಡು

ಎದೆ 
ಬಡಿತದ 
ಪ್ರತಿ ಮಿಡಿತವು 
ನೀನಾಗಿ 
ಬೆಳಕಾಗಿ 
ಕಣ್ಣಾಗು ಬಾ...