ಮಗದೊಮ್ಮೆ ಇರುಳು ಕವಿದರೆ ಸಾಕು
ಮುತ್ತುವವು ಮೊಲದ ಹಿಂಡಂತೆ...,
ಹೊಸ ಬಣ್ಣ ಬಳಿದಂತಹ ಕನಸುಗಳು
ಅವಳ ಕನಸಿಗೆ ನಾನು ಲಗ್ಗೆ-
ಯಿಡುತ್ತೇನೋ ಇಲ್ಲವೋ ಗೊತ್ತಿಲ್ಲ
ಅವಳು ಮಾತ್ರ ಕಾಡಿಬಿಡುವಳು
ನನ್ನೆಲ್ಲ ಕನಸುಗಳಲ್ಲೂ....!
ಕಣ್ಣರೆಪ್ಪೆಯ ಹಿಂದಿನ ಹಾಡಾಗುವಳು
ಇವಳು...., ನಾ ಬಯಸಿದಾಗಲೆಲ್ಲ
ಗುನುಗುನುಗಿ ಮಾಯವಾಗುವ
ಜಿಂಕೆಯಂತವಳು...., ನಾ
ಕಣ್ಣುಬಿಟ್ಟೊಡನೆ ಎದಿರಲ್ಲೇ
ಹಾಜರಾಗುವಳು.....!
ಮುಂಗುರಳನು ಹಿಂದಕ್ಕೆ ತಳ್ಳಿ
ಹಣೆಯ ಮೇಲೊಂದು ಹೂ ಮುತ್ತನ್ನಿತ್ತು
ಬಿಸಿ ಬಿಸಿ ಸುವಾಸನೆಯ ಕಾಫಿ-
ಯೊಂದಿಗೆ ಬೆಳಗಾಗುವಳು
ಆ ದಿನವೆಲ್ಲ ಬೆಳಕಾಗುವಳು
ಇವಳು ನನ್ನವಳು....,
ಭಾವಾನುಭೂತಿಯಲ್ಲಿ ಪದಗಳ ಮೇಲೈಸುವಿಕೆ ಕಂಡು ಖುಷಿ ಪಡುತ್ತೇನೆ ನಿಮ್ಮ ಕವನಗಳನ್ನು ಓದಿದಾಗ. ಅಲ್ಲಲ್ಲಿ ಅಲಂಕಾರಗಳು ನಿಮ್ಮ ಕವನದ ಅಂದವನ್ನು ಹೆಚ್ಚಿಸುತ್ತದೆ. ಉತ್ಕೃಷ್ಟ ಭಾವ ದುಂಧುಭಿ.
ReplyDelete