ಯಮುನೆ ಹರಿಯುತಿದ್ದಾಳೆ
ನಿಶ್ಯಬ್ದವಾಗಿ,
ಬಳುಕಿ ಹರಿಯುವ ಲಾಸ್ಯವಿಲ್ಲ...,
ಕಲರವ ಕೊರಗಾಗಿದೆ.
ದಡದ ಮೇಲಿನ ಕದಂಬ ಮರ
ಕದಲದೆ ನಿಂತಿದೆ,
ಸೂಸದೆ ಪರಿಮಳವ
ಮೋಹನ ಕೊಟ್ಟ ಮಾತಿಗೆ ಸಾಕ್ಷಿಯಾಗಿ,
ಬೆಳದಿಂಗಳು ಮಂಕಾಗಿದೆ
ಬೇಗೆಯಿಂದ,
ರಾಧೆಯ ಹೃದಯದಿ ಅರಳಿದ ಪ್ರೀತಿಗೆ
ಕಾರಣ ನಾನಾದೆನೆಂದು....!
ಹಣತೆ ಹಚ್ಚಿಟ್ಟು ಕಾಯುತಿಹಳು ರಾಧೆ
ಮೋಹನನಿಗಾಗಿ,
ಕಣ್ಣೀರ ಹನಿ ಹೊಳೆಯಾಗಿ ಹರಿಸಿ
ವಿರಹದಿಂದ....,
ಅದೆಷ್ಟೋ ಹುಣ್ಣಿಮೆ ಬಂದವು
ಕರಗಿ ಹೋದವು ಕಾರಿರುಳಲ್ಲಿ
ಮುರಳಿ ಮೋಹನ ಮಾತುಕೊಟ್ಟಿದ್ದಾನೆ
'' ಬಂದೇ ಬರುತ್ತೇನೆಂದು ''
ಯಾರಾದರು ಕಂಡಿರ, ಗೋಪಾಲನ....?
ರಾಧೆ ಈಗಲೂ ಕಾಯುತಿಹಳು
ನೋಡಿರಲ್ಲಿ...., ಕದಂಬದ ಮರಕ್ಕೊರಗಿ ಕುಳಿತಿಹಳು.....!!
ವಿರಹ ವೇದನೆ ಮತ್ತು ಪವಿತ್ರ ಪ್ರೇಮದ ಭಾವಗನ್ನಡಿ ಈ ಕವಿತೆ.. ಬಹಳ ಸೂಕ್ಷ್ಮವಾಗಿ ಹೆಣ್ಣೊಬ್ಬಳ ಮನಸ್ಸನ್ನು ಹೊಕ್ಕು ಬರೆದಂತಿದೆ.. ಶುಭವಾಗಲಿ ಸತೀಶಣ್ಣ:)
ReplyDeleteಮಧುರಾನುಭೂತಿ ನೀಡುವ ಮನಮೋಹಕ ಆಲಾಪನೆ ಈ ಕವಿತೆ.ವಿಲಂಬಿತಗೊಂಡು ದಿವ್ಯವಾದ ಪ್ರೇಮ ಸ್ಪರ್ಷದ ಸಂವೇದನೆ ಅನುರಕ್ತಗೊಂಡಿದೆ.ಆದರೆ ' ಕಲರವ ಕೊರಗಾಗಿದೆ ' ಇಲ್ಲಿನ ಕೊರಗಾಗಿದೆ ಪದಕ್ಕೆ ಪ್ರತಿಯಾಗಿ ಬೇರೊಂದು ಮುದ್ದಾದ ಪದ ಬಳಸಿ ಸತೀಶಜೀ,ಇನ್ನಷ್ಟು ಅಂದವಾಗುವುದು.
ReplyDelete............................................
ಕಲರವ ಅಂದರೆ ಮಧುರ ದನಿ ಎಂದರ್ಥ. ನದಿಯ ಜುಳು ಜುಳು ಮಧುರ ಗಾನದಂತಿರುತ್ತದೆ. ಆದರೆ ರಾಧೆಗೆ ಈ ಜುಳು ಜುಳುಗಾನ ಕೊರಗಿನ ದನಿಯಂತಾಗಿದೆ ಎಂಬ ಭಾವಾರ್ಥದಲ್ಲಿ ಬರೆದೆ ಸೋಮಣ್ಣ. ನಿಮ್ಮ ಸಲಹೆಗೆ ಧನ್ಯವಾದಗಳು.
Deleteಗಾಢವಾದ ಒಲವ ನಿರೀಕ್ಷೆಗಳಿಗೆ ವಿರಹ ಒಂದು ಸಣ್ಣ ಎಳೆಯನ್ನು ನೇಯ್ದು ಮಧುರಾನುಭೂತಿ ನೀಡಿ ಕವಿತೆ ಬರೆದಿದ್ದೀರಿ ಸತೀಷಣ್ಣ.
ReplyDeleteರಾಧೆಯನ್ನು ಮಾತ್ರವಲ್ಲ ನಮ್ಮನ್ನೂ ಕಾಯಿಸುವ ಶಕ್ತಿ ಇದೆ ಇದರೊಳಗೆ ಎನ್ನುತ್ತೇನೆ.